ಚಿಕ್ಕಮಗಳೂರಿನಲ್ಲಿ ವಕೀಲರೊಬ್ಬರು ಚಿನ್ನದ ಸಾಲ ಪಡೆದ ಕೆಲವೇ ಕ್ಷಣಗಳಲ್ಲಿ, ಅವರ ಬ್ಯಾಂಕ್ ಖಾತೆಯಿಂದ ಸುಮಾರು ಒಂದು ಲಕ್ಷ ರೂಪಾಯಿ ಸೈಬರ್ ವಂಚಕರಿಂದ ಕಳುವಾಗಿದೆ. ಯಾವುದೇ ಓಟಿಪಿ ಅಥವಾ ಲಿಂಕ್ ಇಲ್ಲದೆ ಹಣ ವರ್ಗಾವಣೆಯಾಗಿರುವುದು ಆತಂಕಕ್ಕೆ ಕಾರಣವಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಚಿಕ್ಕಮಗಳೂರು: ನಗರದೊಳಗೆ ಮತ್ತೊಂದು ಬೆಚ್ಚಿಬೀಳಿಸುವ ಸೈಬರ್ ವಂಚನೆ ಬೆಳಕಿಗೆ ಬಂದಿದೆ. ಚಿನ್ನ ಅಡವಿಟ್ಟು ಬ್ಯಾಂಕ್ ಖಾತೆಗೆ ಹಣ ಜಮೆಯಾದ ಕೆಲವೇ ಕ್ಷಣಗಳಲ್ಲಿ, ಸುಮಾರು ಒಂದು ಲಕ್ಷ ರೂಪಾಯಿ ಸೈಬರ್ ವಂಚಕರ ಕೈಗೆ ಸಿಕ್ಕಿರುವುದು ಆತಂಕ ಮೂಡಿಸಿದೆ. ಓಟಿಪಿ ಅಥವಾ ಯಾವುದೇ ಅನುಮಾನಾಸ್ಪದ ಲಿಂಕ್ ಬಂದಿಲ್ಲದಿದ್ದರೂ ಹಣ ಕಳೆದುಕೊಂಡಿರುವ ಪ್ರಕರಣ ಆಶ್ಚರ್ಯವಾಗಿದೆ.

Add Asianetnews Kannada as a Preferred SourcegooglePreferred

ಗೋಲ್ಡ್‌ ಲೋನ್ ನಿಂದ ಕಳೆದುಕೊಂಡ ಹಣ

ಚಿಕ್ಕಮಗಳೂರು ಮೂಲದ ವಕೀಲರೊಬ್ಬರು ಚಿನ್ನವನ್ನು ಅಡವಿಟ್ಟು 4.14 ಲಕ್ಷ ರೂಪಾಯಿಗಳ ಗೋಲ್ಡ್ ಲೋನ್ ಪಡೆದಿದ್ದರು. ಈ ಮೊತ್ತ ಅವರ ಬ್ಯಾಂಕ್ ಖಾತೆಗೆ ಜಮೆಯಾದ ತಕ್ಷಣವೇ, ಇನ್ನೂ ಬ್ಯಾಂಕ್ ಆವರಣದಲ್ಲಿದ್ದಾಗಲೇ ಖಾತೆಯಿಂದ ಹಣ ವಾಪಸು ತೆಗೆದುಕೊಳ್ಳಲಾಗಿದೆ. ಕ್ಷಣಾರ್ಧದಲ್ಲೇ ನಡೆದ ಈ ಘಟನೆಯಿಂದ ವಕೀಲರು ಬೆಚ್ಚಿಬಿದ್ದಿದ್ದಾರೆ.

ಸೈಬರ್ ಅಪರಾಧಿಗಳು ಸುಮಾರು 99,584 ರೂಪಾಯಿಗಳನ್ನು ಅಮೆಜಾನ್ ಪೇ ಮೂಲಕ ಎಗರಿಸಿರುವುದು ಬೆಳಕಿಗೆ ಬಂದಿದೆ. ಯಾವುದೇ ಓಟಿಪಿ ಸಂದೇಶ ಬಂದಿಲ್ಲ, ಅಥವಾ ಎಪಿಕೆ ಲಿಂಕ್‌ಗಳ ಮೂಲಕ ಮೋಸ ನಡೆದಿದೆ ಎಂಬ ಸುಳಿವೂ ಇಲ್ಲದಿರುವುದು ಪ್ರಕರಣದ ತನಿಖೆಯನ್ನು ಮತ್ತಷ್ಟು ಗಂಭೀರವಾಗಿಸಿದೆ.

ತನಿಖೆ ಆರಂಭ

ಘಟನೆ ತಿಳಿದ ಕೂಡಲೇ ವಕೀಲರು ಚಿಕ್ಕಮಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹಣ ವರ್ಗಾವಣೆಯ ರೀತಿಯನ್ನು ಪತ್ತೆಹಚ್ಚಲು ಹಾಗೂ ಅಪರಾಧಿಗಳನ್ನು ಬಂಧಿಸಲು ತನಿಖೆ ಆರಂಭಿಸಿದ್ದಾರೆ.

ಈ ಘಟನೆ ಸೈಬರ್ ಭದ್ರತೆ ಬಗ್ಗೆ ಮತ್ತೊಮ್ಮೆ ಎಚ್ಚರಿಕೆ ಕರೆಗಂಟೆ ಮೂಳಗಿಸಿದೆ. ಬ್ಯಾಂಕ್ ಖಾತೆಗಳಲ್ಲಿ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದ ತಕ್ಷಣವೇ ಬ್ಯಾಂಕ್ ಹಾಗೂ ಪೊಲೀಸರಿಗೆ ಮಾಹಿತಿ ನೀಡುವುದು ಅಗತ್ಯವೆಂದು ತಜ್ಞರು ಸಲಹೆ ನೀಡಿದ್ದಾರೆ. ಸಾರ್ವಜನಿಕರು ತಮ್ಮ ಬ್ಯಾಂಕ್ ವಿವರಗಳನ್ನು ಸುರಕ್ಷಿತವಾಗಿಟ್ಟುಕೊಳ್ಳುವಂತೆ ಮತ್ತು ಅಪರಿಚಿತ ವ್ಯವಹಾರಗಳ ಬಗ್ಗೆ ಎಚ್ಚರಿಕೆಯಿಂದಿರುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.