Asianet Suvarna News Asianet Suvarna News

ಲಾಜಿಸ್ಟಿಕ್ಸ್‌ ನೀತಿಯಿಂದ ಅಭಿವೃದ್ಧಿಗೆ ಚೀತಾ ವೇಗ: Piyush Goyal

ಚೀತಾಗಳು ಭಾರತದ ಮಣ್ಣಿಗೆ ಮರಳಿದ ದಿನವೇ ಹೊಸ ಲಾಜಿಸ್ಟಿಕ್ಸ್‌ ನೀತಿ ಘೋಷಿಸಲಾಯಿತು. ಈ ಮೂಲಕ ಪ್ರಧಾನಿಯವರು ‘ನೀವು ಚೀತಾ ವೇಗದಲ್ಲಿ ಸರಕುಗಳನ್ನು ಸಾಗಿಸುತ್ತೀರಿ ಎಂದು ನಿರೀಕ್ಷಿಸುತ್ತೇನೆ’ ಎಂದು ಲಾಜಿಸ್ಟಿಕ್ಸ್‌ ಕ್ಷೇತ್ರಕ್ಕೆ ಸಂದೇಶ ನೀಡಿದರು. ಹೊಸ ನೀತಿಯೊಂದಿಗೆ ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಲು ಖಂಡಿತ ಚೀತಾದಂತೆ ರಭಸವಾಗಿ ಮುನ್ನುಗ್ಗಲಿದೆ.

new logistics policy can give india 150 billion dollars boost piyush goyal ash
Author
First Published Oct 10, 2022, 12:16 PM IST

-  ಪಿಯೂಶ್‌ ಗೋಯಲ್ ಅವರ ಲೇಖನ

25 ವರ್ಷಗಳಲ್ಲಿ ಭಾರತವನ್ನು ಸಮೃದ್ಧ, ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಕನಸನ್ನು ನನಸಾಗಿಸಲು ಮೋದಿ ಸರ್ಕಾರವು ಹಲವಾರು ಮಹತ್ವದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರಿಂದಾಗಿ ತ್ವರಿತ, ಸಮಾನ ಬೆಳವಣಿಗೆಯೊಂದಿಗೆ ದೇಶವನ್ನು ಸಂಪೂರ್ಣವಾಗಿ ಪರಿವರ್ತಿಸುವ ಗುರಿಯನ್ನು ಸಾಧಿಸಬಹುದಾಗಿದೆ ಮತ್ತು ಅದನ್ನು ಸಾಧಿಸಲಾಗುವುದು.

ಈ ಪರಿವರ್ತನೆಯು ಎಂಟು ವರ್ಷಗಳ ಹಿಂದೆ ಆಡಳಿತದಲ್ಲಿನ ಮೂಲಭೂತ ಬದಲಾವಣೆಗಳೊಂದಿಗೆ ಪ್ರಾರಂಭವಾಯಿತು. ಅದು ಇಂದು ಜನಸಾಮಾನ್ಯರನ್ನು ಸಶಕ್ತಗೊಳಿಸಿದೆ. ಪ್ರತಿ ದೇಶವು ಬಯಸುವ ವಿಶ್ವಾಸಾರ್ಹ ಪಾಲುದಾರನಾಗಿ ಭಾರತ ಜಾಗತಿಕ ಗಮನವನ್ನು ಸೆಳೆದಿದೆ. ಭಾರತದ ಅಭ್ಯುದಯವನ್ನು ವೇಗಗೊಳಿಸಲು ತೆಗೆದುಕೊಂಡ ಇತ್ತೀಚಿನ ಕ್ರಮವೆಂದರೆ ಹೊಸ ಲಾಜಿಸ್ಟಿಕ್ಸ್‌ ನೀತಿ. ಸೂಕ್ತ ಉತ್ಪನ್ನವನ್ನು, ಸೂಕ್ತ ಸ್ಥಿತಿಯಲ್ಲಿ, ಸೂಕ್ತ ಸ್ಥಳದಲ್ಲಿ, ಸೂಕ್ತ ಸಮಯದಲ್ಲಿ, ಸೂಕ್ತ ಗ್ರಾಹಕರಿಗೆ ತಲುಪಿಸುವುದು ಇದರ ಉದ್ದೇಶ.

ಇದನ್ನು ಓದಿ: All cargo Logistics Park: 5,500 ಜನ ಕನ್ನಡಿಗರಿಗೆ ಉದ್ಯೋಗ ನೀಡುವ ಗುರಿ : ಉದ್ಯಮಿ ಶಶಿಕಿರಣ್ ಶೆಟ್ಟಿ

ಈ ಹೊಸ ನೀತಿಯು ಸಣ್ಣ ರೈತರು, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು, ದೊಡ್ಡ ಕಾರ್ಖಾನೆಗಳು ಮತ್ತು ಜನಸಾಮಾನ್ಯರಿಗೆ ಸಹಾಯ ಮಾಡುತ್ತದೆ. ಇದು ಕೋಟ್ಯಂತರ ಉದ್ಯೋಗಗಳನ್ನು ಸೃಷ್ಟಿಸುವುದರಿಂದ ಆರ್ಥಿಕತೆಯ ಎಂಜಿನ್‌ ಅನ್ನು ವೇಗಗೊಳಿಸುತ್ತದೆ ಮತ್ತು ಪುನಶ್ಚೇತನಗೊಳಿಸುತ್ತದೆ. ಶ್ರೀಮಂತ ಮೆಟ್ರೋಪಾಲಿಟನ್‌ ಪ್ರದೇಶಗಳು ಮತ್ತು ಗ್ರಾಮೀಣ ಪ್ರದೇಶಗಳ ನಡುವಿನ ಅಸಮಾನತೆಗಳನ್ನು ನಿವಾರಿಸುತ್ತದೆ. ಸರಕು ಮತ್ತು ಜನರ ಚಲನೆಯನ್ನು ವೇಗಗೊಳಿಸುತ್ತದೆ ಹಾಗೂ ದಕ್ಷತೆಯಿಂದಾಗಿ ಭಾರಿ ಉಳಿತಾಯವನ್ನು ಸೃಷ್ಟಿಸುತ್ತದೆ. ಹೊಸ ನೀತಿಯು ಲಾಜಿಸ್ಟಿಕ್ಸ್‌ ವೆಚ್ಚವನ್ನು ಜಿಡಿಪಿಯ ಅಂದಾಜು ಶೇ.13-14ರಿಂದ ಒಂದಂಕಿಯ ಮಟ್ಟಕ್ಕೆ ಕಡಿಮೆ ಮಾಡುತ್ತದೆ. ಇದರಿಂದ ಅಗಾಧ ಪ್ರಮಾಣದಲ್ಲಿ ಉಳಿತಾಯವಾಗುತ್ತದೆ. 3 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯಲ್ಲಿ ಶೇ.5 ರಷ್ಟು ಉಳಿತಾಯವು 150 ಬಿಲಿಯನ್‌ ಡಾಲರ್‌ನಷ್ಟು ಲಾಭ ತರುತ್ತದೆ. ಇದು ಭಾರತದ ಸಂಪೂರ್ಣ ಹೊರಗುತ್ತಿಗೆ ಉದ್ಯಮದ ಅಂದಾಜು ಮೌಲ್ಯಕ್ಕೆ ಸಮಾನವಾಗಿದೆ.

ರೈತರಿಗೆ ಗಣನೀಯ ಲಾಭ
ವಿಮಾನದ ಮೂಲಕ ಸಾಗಿಸಿದರೂ ಲಾಭದಾಯಕವಾಗಿರುವ ರತ್ನಗಳು ಮತ್ತು ಆಭರಣಗಳಂತಹ ಬೆಲೆಬಾಳುವ ಸರಕುಗಳಿಗೆ ಹೋಲಿಸಿದರೆ, ಸಾರಿಗೆ ವೆಚ್ಚವು ಕಡಿಮೆ-ಮೌಲ್ಯದ ಸರಕುಗಳ ಮೇಲೆ ಅತಿಯಾದ ಹೊರೆಯಾಗಿರುವುದರಿಂದ ಇದರ ದೊಡ್ಡ ಲಾಭವು ಸಣ್ಣ ರೈತರು ಮತ್ತು ಅಸಂಖ್ಯಾತ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಆಗುತ್ತದೆ.
ಸಾಂಪ್ರದಾಯಿಕವಾಗಿ, ಸಣ್ಣ ರೈತರು ಸಾಮಾನ್ಯವಾಗಿ ಹಣ್ಣು ಮತ್ತು ತರಕಾರಿಗಳನ್ನು ಅತಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ. ಏಕೆಂದರೆ ಬೇಗನೆ ಹಾಳಾಗುವ ಈ ಸರಕುಗಳು ಕೊಳೆಯಲು ಪ್ರಾರಂಭಿಸುವ ಮೊದಲು ಖರೀದಿದಾರರನ್ನು ತಲುಪಬೇಕಾಗುತ್ತದೆ. ಉತ್ತಮ ಲಾಜಿಸ್ಟಿಕ್ಸ್‌ ವ್ಯವಸ್ಥೆಯೊಂದಿಗೆ, ಈ ಸರಕುಗಳು ಬಹುದೂರಕ್ಕೆ ಮತ್ತು ಬಹುಬೇಗನೆ ಸಂಚರಿಸಬಹುದು. ಆದ್ದರಿಂದ ಹೆಚ್ಚು ಮತ್ತು ಹೊಸ ಮಾರುಕಟ್ಟೆಗಳನ್ನು ತಲುಪಬಹುದು.

ಉತ್ತಮ ಲಾಜಿಸ್ಟಿಕ್ಸ್‌ ವ್ಯವಸ್ಥೆಯು ಪೂರೈಕೆಯನ್ನು ಗಣನೀಯವಾಗಿ ಸುಧಾರಿಸುತ್ತದೆ ಮತ್ತು ವೆಚ್ಚವನ್ನು ಕಡಿಮೆ ಮಾಡುತ್ತದೆ. ಇದರರ್ಥ ಕೃಷಿ ಉತ್ಪನ್ನಗಳ ಸಾಗಾಟದಲ್ಲಿ, ರೈತರು ಹೆಚ್ಚು ಲಾಭವನ್ನು ಪಡೆಯುತ್ತಾರೆ ಮತ್ತು ಗ್ರಾಹಕರು ಅಗ್ಗದ ಬೆಲೆಯಲ್ಲಿ ಆಹಾರವನ್ನು ಪಡೆಯುತ್ತಾರೆ. ಲಾಜಿಸ್ಟಿಕ್ಸ್‌ ವೆಚ್ಚವು ಗ್ರಾಹಕರು ಖರೀದಿಸುವ ವಸ್ತುಗಳ ಬೆಲೆಯಲ್ಲಿ ಸೇರಿಕೊಂಡಿರುತ್ತದೆ. ಹೀಗಾಗಿ ಆರ್ಥಿಕತೆಯು ಸಂತೋಷಕರ ರೀತಿಯಲ್ಲಿ ಬದಲಾಗುತ್ತದೆ.

ಇದನ್ನೂ ಓದಿ: ಪ್ರಧಾನಿ ಅನಾವರಣಗೊಳಿಸಿದ ನೂತನ ರಾಷ್ಟ್ರೀಯ ಸರಕು ಸಾಗಣೆ ನೀತಿಯಲ್ಲೇನಿದೆ?

ಡಿಜಿಟಲ್‌ ಆಧಾರಿತ ವ್ಯವಸ್ಥೆ
ಹೊಸ ಲಾಜಿಸ್ಟಿಕ್ಸ್‌ ನೀತಿಯು ಪ್ರಧಾನ ಮಂತ್ರಿ ಗತಿಶಕ್ತಿಯೊಂದಿಗೆ ಬದಲಾವಣೆಗೆ ಕಾರಣವಾಗುವ ಉಪಕ್ರಮವಾಗಿದೆ. ಇದು ಮೂಲಸೌಕರ್ಯ ನಿರ್ಮಾಣಕ್ಕೆ ಯೋಜನೆ ಕಾರ್ಯಗತ ಗೊಳಿಸುವಾಗ ಉಂಟಾಗುವ ಅಡೆತಡೆಗಳನ್ನು ನಿವಾರಿಸುವ ಮತ್ತು ಡೇಟಾ ಹಾಗೂ ಬಹುಪದರಗಳ ಮಾಹಿತಿಯನ್ನು ಒದಗಿಸುವ ಡಿಜಿಟಲ್‌ ವ್ಯವಸ್ಥೆ ಹೊಂದಿದೆ. ಅಲ್ಲದೇ ಇದು ಮೂಲಸೌಕರ್ಯ ಯೋಜನೆಯ ಯೋಜಕರು ಮತ್ತು ನಿರ್ವಾಹಕರಿಗೆ ಅರಣ್ಯ ಭೂಮಿ, ರಕ್ಷಣಾ ಭೂಮಿ, ವಿದ್ಯುತ್‌ ಮಾರ್ಗಗಳು ಮತ್ತು ಹಲವಾರು ಇತರ ವಿಷಯಗಳ ಕುರಿತು ಮಾಹಿತಿಯನ್ನು ಮುಂಚಿತವಾಗಿ ನೀಡುತ್ತದೆ. ಇದರಿಂದಾಗಿ ಅವರು ಯೋಜನೆಗಳನ್ನು ವಿಳಂಬಗೊಳಿಸುವ ಅನಿರೀಕ್ಷಿತ ಘಟನೆಗಳನ್ನು ಎದುರಿಸಬೇಕಾಗುವುದಿಲ್ಲ.

ಪ್ರಧಾನಮಂತ್ರಿ ಗತಿಶಕ್ತಿ ಮತ್ತು ಹೊಸ ಲಾಜಿಸ್ಟಿಕ್ಸ್‌ ನೀತಿಯು ಆಡಳಿತದಲ್ಲಿನ ಅಡೆತಡೆಗಳನ್ನು ತೊಡೆದುಹಾಕುವ ಪ್ರಧಾನಿ ಮೋದಿಯವರ ಸಂಪೂರ್ಣ- ಸರ್ಕಾರದ ವಿಧಾನಕ್ಕೂ ಮಾದರಿಯಾಗಿವೆ. ಈ ನೀತಿಗಳು ಉತ್ತಮ ಗುಣಮಟ್ಟದ ಗ್ರಾಮೀಣ ರಸ್ತೆಗಳು ಮತ್ತು ಎಕ್ಸ್‌ಪ್ರೆಸ್‌ ವೇಗಳನ್ನು ನಿರ್ಮಿಸುವುದು, ಕಂಟೇನರ್‌ ಟರ್ನ್‌ ಅರೌಂಡ್‌ (ಸರಕು ಸಾಗಣೆ ಪ್ರಕ್ರಿಯೆ ಮುಕ್ತಾಯ) ಸಮಯವನ್ನು ಸುಧಾರಿಸುವುದು, ವೇಗದ ಮತ್ತು ಸುರಕ್ಷಿತ ರೈಲ್ವೆಗಳು ಮತ್ತು ಮೀಸಲಾದ ಸರಕು ಸಾಗಣೆ ಕಾರಿಡಾರ್‌ಗಳಂತಹ ಉಪಕ್ರಮಗಳ ಜೊತೆಗೆ ಅಭಿವೃದ್ಧಿ ಹೊಂದಿದ ದೇಶಗಳಂತೆ ಉತ್ಪಾದಕರು, ವಿತರಕರು ಮತ್ತು ಚಿಲ್ಲರೆ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸಲು ವಿಶ್ವದರ್ಜೆಯ ಡಿಜಿಟಲ… ವ್ಯವಸ್ಥೆಗಳೊಂದಿಗೆ ವಿಶ್ವದರ್ಜೆಯ ಮೂಲಸೌಕರ್ಯವನ್ನು ಖಚಿತಪಡಿಸುತ್ತವೆ.

ಅಭಿವೃದ್ಧಿಗೆ ವ್ಯಾಪಕ ನೆರವು
ಲಾಜಿಸ್ಟಿಕ್ಸ್‌ ನೀತಿ ಉತ್ತಮ-ಗುಣಮಟ್ಟದ ಉತ್ಪನ್ನಗಳನ್ನು ಉತ್ಪಾದಿಸಲು, ರಫ್ತುಗಳನ್ನು ಗಮನಾರ್ಹವಾಗಿ ಹೆಚ್ಚಿಸಲು, ಪ್ರಪಂಚದೊಂದಿಗೆ ವ್ಯಾಪಾರ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಲು, ಜಾಗತಿಕ ಉತ್ಪಾದನಾ ಕೇಂದ್ರವಾಗಿ ಮತ್ತು ಜಾಗತಿಕ ಪೂರೈಕೆ ಸರಪಳಿಗಳಲ್ಲಿ ದೊಡ್ಡ ಪಾತ್ರವನ್ನು ವಹಿಸಲು ಪ್ರಮುಖ ಉಪಕ್ರಮಗಳನ್ನು ಬೆಂಬಲಿಸುತ್ತದೆ. ಈ ಎಲ್ಲಾ ಉಪಕ್ರಮಗಳಿಗೆ ಸಮರ್ಥವಾದ ಲಾಜಿಸ್ಟಿಕ್ಸ್‌ ಅಗತ್ಯವಿದೆ. ಸಮೃದ್ಧ ರಾಷ್ಟ್ರಗಳಲ್ಲಿ ಜಾಗತಿಕ ವ್ಯಾಪಾರ ಮತ್ತು ರಫ್ತುಗಳು ತ್ವರಿತ ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಪ್ರಮುಖ ಸಾಧನಗಳಾಗಿವೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ರತ್ನಗಳು ಮತ್ತು ಆಭರಣಗಳು, ಚರ್ಮ ಮತ್ತು ಕರಕುಶಲ ವಸ್ತುಗಳಂತಹ ಹೆಚ್ಚು ಕಾರ್ಮಿಕರನ್ನು ಹೊಂದಿರುವ ವಲಯಗಳಿಗೆ ಅಭಿವೃದ್ಧಿ ಹೊಂದಿದ ಮಾರುಕಟ್ಟೆಗಳನ್ನು ಒದಗಿಸಲು ವ್ಯಾಪಾರ ಒಪ್ಪಂದಗಳನ್ನು ಬಳಸುವ ತಂತ್ರವನ್ನು ಭಾರತ ಅಳವಡಿಸಿಕೊಂಡಿದೆ.
ರಫ್ತುದಾರರು ಉತ್ತಮ ಲಾಜಿಸ್ಟಿಕ್ಸ್‌ನಿಂದ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಏಕೆಂದರೆ ಅವರ ಸರಕುಗಳು ಹೆಚ್ಚು ಸ್ಪರ್ಧಾತ್ಮಕವಾಗುತ್ತವೆ ಮತ್ತು ಖರೀದಿದಾರರಿಗೆ ವೇಗವಾಗಿ ಮತ್ತು ಊಹಿಸಬಹುದಾದ ರೀತಿಯಲ್ಲಿ ತಲುಪುತ್ತವೆ.

ಇದನ್ನೂ ಓದಿ: ಭಾರತದ FTPಗೆ ಏಪ್ರಿಲ್ ನಲ್ಲಿ ಹೊಸ ರೂಪ; ಲಾಜಿಸ್ಟಿಕ್, ಇ-ಕಾಮರ್ಸ್ ವಲಯಕ್ಕೆ ಬೇಕಿದೆ ಉತ್ತೇಜನ

ಸರಕು ಸಾಗಣೆಗೆ ಏಕೀಕೃತ ವ್ಯವಸ್ಥೆ
ಪ್ರಧಾನಿ ಮೋದಿಯವರು ಹೇಳಿರುವಂತೆ ರಫ್ತುದಾರರು ಸರಕುಗಳ ಚಲನಶೀಲತೆಯನ್ನು ಪತ್ತೆಹಚ್ಚಲು ಅವುಗಳ ಶಿಪ್ಪಿಂಗ್‌ ಬಿಲ್‌, ಸಂಖ್ಯೆಗಳು, ರೈಲ್ವೆ ರವಾನೆ ಸಂಖ್ಯೆಗಳು, ಇ-ವೇ ಬಿಲ್‌,  ಸಂಖ್ಯೆಗಳು ಇತ್ಯಾದಿಗಳನ್ನು ಒಟ್ಟುಗೂಡಿಸಬೇಕಾಗುತ್ತದೆ. ಆದರೆ ಅವರಿಗೆ ಸಹಾಯ ಮಾಡಲು, ಏಕೀಕೃತ ಲಾಜಿಸ್ಟಿಕ್ಸ್‌ ಇಂಟರ್ಫೇಸ್‌ ಪ್ಲಾಟ್‌ಫಾರ್ಮ ಅನ್ನು ಪ್ರಾರಂಭಿಸಲಾಗಿದೆ. ಇದಲ್ಲದೆ ಲಾಜಿಸ್ಟಿಕ್ಸ್‌ ನೀತಿಯ ಅಡಿಯಲ್ಲಿ ಆರಂಭಿಸಲಾಗಿರುವ ಈಸ್‌ ಆಫ್‌ ಲಾಜಿಸ್ಟಿಕ್ಸ್‌ ಸರ್ವೀಸಸ್‌ ಹೆಸರಿನ ಡಿಜಿಟಲ್‌ ವೇದಿಕೆ ಅವರು ಎದುರಿಸುತ್ತಿರುವ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ. 

ಮೋದಿ ಸರ್ಕಾರದ ಎಂಟು ವರ್ಷಗಳಲ್ಲಿ ಭಾರತದಲ್ಲಿ ಲಾಜಿಸ್ಟಿಕ್ಸ್‌ ವ್ಯವಸ್ಥೆ ಈಗಾಗಲೇ ಗಮನಾರ್ಹವಾಗಿ ಸುಧಾರಿಸಿದೆ. ಕೋವಿಡ್‌ ಸಾಂಕ್ರಾಮಿಕದ ಉತ್ತುಂಗದಲ್ಲಿದ್ದಾಗ ದೇಶವು ಔಷಧಿಗಳು, ಆಮ್ಲಜನಕ ಮತ್ತು ಆಹಾರವನ್ನು ಸಾಗಿಸಿತು. ಡಿಜಿಟಲ್‌ ಇಂಡಿಯಾದಂತಹ ದೂರದೃಷ್ಟಿಯ ಉಪಕ್ರಮವು ಈ ಕಠಿಣ ಸಮಯದಲ್ಲಿ ಜನರಿಗೆ ಮನೆಯಿಂದ ಕೆಲಸ ಮಾಡುವ ಅವಶ್ಯಕತೆಗೆ ಹೊಂದಿಕೊಳ್ಳಲು ಸಹಾಯ ಮಾಡಿತು.

ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್‌ ಈಗ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಅಗತ್ಯವಾದ ಭಾರೀ ಜಿಗಿತಕ್ಕೆ ಸಿದ್ಧಗೊಳಿಸಿವೆ. ನೀತಿಯೊಂದೇ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಬದಲಿಗೆ ಪ್ರಧಾನಮಂತ್ರಿಯವರು ಹೇಳುವಂತೆ ನೀತಿಯೊಂದಿಗೆ ಕಾರ್ಯಕ್ಷಮತೆ ಸೇರಿದಾಗಲೇ ಪ್ರಗತಿಯಾಗುತ್ತದೆ.

ಇದನ್ನೂ ಓದಿ: ಕೊರೋನಾ ಲಸಿಕೆ ಉತ್ಪಾದನೆ; ಭಾರತದ ಮುಂದೆ ಹಲವು ಸವಾಲು!

ಚೀತಾಗಳು ಭಾರತದ ಮಣ್ಣಿಗೆ ಮರಳಿದ ದಿನವೇ ಹೊಸ ಲಾಜಿಸ್ಟಿಕ್ಸ್‌ ನೀತಿಯನ್ನು ಘೋಷಿಸಲಾಯಿತು. ಭೂಮಿಯ ಮೇಲಿನ ಅತ್ಯಂತ ವೇಗದ ಪ್ರಾಣಿಯ ಆಗಮನವು ಸಾರಿಗೆ ವ್ಯವಸ್ಥೆಗೆ ಹೊಸ ಸಂದೇಶವನ್ನು ತಂದಿತ್ತು. ಈ ಮೂಲಕ ಪ್ರಧಾನಿಯವರು ‘ನೀವು ಚೀತಾ ವೇಗದಲ್ಲಿ ಸರಕುಗಳನ್ನು ಸಾಗಿಸುತ್ತೀರಿ ಎಂದು ನಾನು ನಿರೀಕ್ಷಿಸುತ್ತೇನೆ’ ಎಂದು ಲಾಜಿಸ್ಟಿಕ್ಸ್‌ ಕ್ಷೇತ್ರಕ್ಕೆ ತಮ್ಮ ಸಂದೇಶವನ್ನು ಒತ್ತಿ ಹೇಳಿದರು. ಪ್ರಧಾನಿಯವರ ಪ್ರಶಂಸನೀಯ ಕಾರ್ಯಕ್ಷಮತೆಯನ್ನು ಗಮನಿಸಿದರೆ ಹೊಸ ಲಾಜಿಸ್ಟಿಕ್‌ ನೀತಿಯ ನೆರವಿನೊಂದಿಗೆ ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಲು ಖಂಡಿತವಾಗಿಯೂ ಚೀತಾದಂತೆ ರಭಸವಾಗಿ ಮುನ್ನುಗ್ಗುತ್ತದೆ ಎಂಬ ಭರವಸೆ ಇದೆ.

Follow Us:
Download App:
  • android
  • ios