ಭಾರತದ FTPಗೆ ಏಪ್ರಿಲ್ ನಲ್ಲಿ ಹೊಸ ರೂಪ; ಲಾಜಿಸ್ಟಿಕ್, ಇ-ಕಾಮರ್ಸ್ ವಲಯಕ್ಕೆ ಬೇಕಿದೆ ಉತ್ತೇಜನ
*ಭಾರತದ ಆರ್ಥಿಕಾಭಿವೃದ್ಧಿ ವೇಗ ಹೆಚ್ಚಿಸಲು ಲಾಜಿಸ್ಟಿಕ್, ಇ-ಕಾಮರ್ಸ್ ನೆರವು
*ಲಾಜಿಸ್ಟಿಕ್, ಇ-ಕಾಮರ್ಸ್ ಸೇವೆಗಳ ದಕ್ಷತೆ ಹೆಚ್ಚಳಕ್ಕೆ ಆದ್ಯತೆ ನೀಡಬೇಕಾದ ಅಗತ್ಯ
*ಉಭಯ ಕ್ಷೇತ್ರಗಳಲ್ಲಿ ವಿದೇಶಿ ಹೂಡಿಕೆ ಹೆಚ್ಚಳಕ್ಕೆ ಕ್ರಮದ ಅವಶ್ಯಕತೆ
Business Desk:ಭಾರತದ ವಿದೇಶಿ ವ್ಯಾಪಾರ ನೀತಿ (FTP) ಏಪ್ರಿಲ್ ನಲ್ಲಿ ನವೀಕರಣಗೊಳ್ಳಲಿದೆ. ಈ ಸಂದರ್ಭದಲ್ಲಿ ಕೊರೋನೋತ್ತರ ಜಗತ್ತಿನಲ್ಲಿ ಭಾರತದ ರಫ್ತನ್ನು ಉತ್ತೇಜಿಸಲು ಕೆಲವು ಮಹತ್ವದ ಸಂಗತಿಗಳಿಗೆ ಒತ್ತು ನೀಡಬೇಕಾದ ಅಗತ್ಯವಿದೆ. ಇಂಥ ಸಂದರ್ಭದಲ್ಲಿ ಭಾರತದ ಆರ್ಥಿಕತೆಯ ವೇಗ ಹೆಚ್ಚಿಸಬಲ್ಲ ಲಾಜಿಸ್ಟಿಕ್ಸ್ (logistics) ಹಾಗೂ ಇ-ಕಾಮರ್ಸ್ ವಲಯಗಳಿಗೆ ಹೆಚ್ಚಿನ ಒತ್ತೇಜನ ನೀಡಬೇಕು ಎಂಬುದು ತಜ್ಞರ ಸಲಹೆಯಾಗಿದೆ.
ನವೀಕರಣಗೊಂಡ ನೀತಿ ಜಾಗತಿಕ ಮಟ್ಟದಲ್ಲಿ ತೀವ್ರ ಸ್ಪರ್ಧೆಯನ್ನು ಎದುರಿಸಲು ಸಶಕ್ತವಾಗಿರೋ ಜೊತೆಗೆ ವಿಸ್ತಾರಗೊಳ್ಳುತ್ತಿರೋ ಡಿಜಿಟಲೀಕರಣ ಹಾಗೂ ಹೊಸ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಬೇಕಾದ ಅಗತ್ಯವಿದೆ. ಅಲ್ಲದೆ, ವಿಶ್ವ ವ್ಯಾಪಾರ ಸಂಸ್ಥೆ (WTO) ಹೆಚ್ಚುತ್ತಿರೋ ನಿರ್ಬಂಧಗಳನ್ನು ಎದುರಿಸಲು ಸಮರ್ಥವಾಗಿರೋದು ಕೂಡ ಮುಖ್ಯ. ವೆಚ್ಚ ಹಾಗೂ ಸಮಯದಲ್ಲಿ ದಕ್ಷತೆ ಹೆಚ್ಚಿಸೋ ಜೊತೆಗೆ ಉತ್ಪಾದನೆ, ವಾಣಿಜ್ಯ ಚಟುವಟಿಕೆಗಳು ಹಾಗೂ ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಬೆಂಬಲ ನೀಡುವಲ್ಲಿ ಭಾರತದ ಲಾಜಿಸ್ಟಿಕ್ಸ್ ಸೇವೆಗಳು ನಿರ್ಣಾಯಕ ಪಾತ್ರ ವಹಿಸುತ್ತವೆ.
ಭಾರತದ ಲಾಜಿಸ್ಟಿಕ್ಸ್ ವಲಯ 2020ರ ಪ್ರಾರಂಭದಲ್ಲಿ 200 ಬಿಲಿಯನ್ ಡಾಲರ್ ಇದ್ದು, 2025ರ ವೇಳೆಗೆ ಶೇ.10ಷ್ಟು ಬೆಳವಣಿಗೆ ದರ ದಾಖಲಿಸಿ 320 ಬಿಲಿಯನ್ ಡಾಲರ್ ತಲುಪಬಹುದೆಂದು ಅಂದಾಜಿಸಲಾಗಿದೆ.ಇನ್ನು ಇ-ಕಾಮರ್ಸ್ ಕೂಡ ಉತ್ಪನ್ನ ಹಾಗೂ ಸೇವೆಗಳ ಜಾಗತಿಕ ಲಭ್ಯತೆಗೆ ದೇಶಾದ್ಯಂತ ಅವಕಾಶ ಕಲ್ಪಿಸಿವೆ. ಹೀಗಾಗಿ ವಿದೇಶಿ ವ್ಯಾಪಾರ ನೀತಿಯಲ್ಲಿ ಇ-ಕಾಮರ್ಸ್ ಗೆ ಹೆಚ್ಚಿನ ಮಹತ್ವ ನೀಡಬೇಕಾದ ಅಗತ್ಯವಿದೆ.
India Russia Oil Deal: ರಷ್ಯಾದಿಂದ ತೈಲ ಖರೀದಿಗೆ ಟೀಕೆ: ಭಾರತ ತಿರುಗೇಟು
ಏನೆಲ್ಲ ಸಮಸ್ಯೆಗಳಿವೆ?
ಜಾಗತಿಕ ವ್ಯಾಪಾರದ ಬೆಳವಣಿಗೆ ವ್ಯಾಪಾರ ಬೆಂಬಲ ವ್ಯವಸ್ಥೆಗಳಾದ ಲಾಜಿಸ್ಟಿಕ್ಸ್ ಸೇವೆಗಳ ದಕ್ಷತೆ ಮೇಲೆ ಅವಲಂಬಿತವಾಗಿದೆ. 2018ರ ಲಾಜಿಸ್ಟಿಕ್ಸ್ ಕಾರ್ಯನಿರ್ವಹಣಾ ಸೂಚ್ಯಂಕದಲ್ಲಿ ಭಾರತ 44ನೇ ಸ್ಥಾನ ಗಳಿಸಿತ್ತು. ಭಾರತದ ಲಾಜಿಸ್ಟಿಕ್ಸ್ ವಲಯ ಶಿಪ್ಪಿಂಗ್ ಹಾಗೂ ಬಂದರು ವ್ಯವಸ್ಥೆಗಳಿಗೆ ಸಂಬಂಧಿಸಿ ಸಾಕಷ್ಟು ಅಡೆತಡೆಗಳನ್ನು ಹೊಂದಿವೆ. ಸಮಯಕ್ಕೆ ಸರಿಯಾಗಿ ಲೋಡಿಂಗ್, ಅನ್ ಲೋಡಿಂಗ್, ಗುಣಮಟ್ಟ ಪರೀಕ್ಷೆ ಹಾಗೂ ಪ್ರಮಾಣೀಕರಣ ವ್ಯವಸ್ಥೆಗಳು ಕೂಡ ಸಮರ್ಪಕವಾಗಿಲ್ಲ. ಇನ್ನು ಕೆಲವೇ ಕೆಲವು ಸಂಖ್ಯೆಯ ಸಾರಿಗೆ ಸಂಸ್ಥೆಗಳು ದಕ್ಷ ತಂತ್ರಜ್ಞಾನಗಳನ್ನು ಬಳಸುತ್ತಿರೋ ಜೊತೆಗೆ ಸೂಕ್ತ ಸ್ಥಳಗಳಲ್ಲಿ ದಾಸ್ತಾನು ಹಾಗೂ ಉಗ್ರಾಣ ವ್ಯವಸ್ಥೆಗಳನ್ನು ಹೊಂದಿವೆ. ಪ್ಯಾಕೇಜಿಂಗ್ ವ್ಯವಸ್ಥೆ ಗುಣಮಟ್ಟ ಕೂಡ ಕಡಿಮೆಯಿದೆ. ಇದರ ಜೊತೆಗೆ ಜಾಗತಿಕ ಮಟ್ಟದಲ್ಲಿ ಅನೇಕ ನಿರ್ಬಂಧಗಳು, ತೆರಿಗೆ, ಸುಂಕಗಳು ಕೂಡ ಲಾಜಿಸ್ಟಿಕ್ ವಲಯದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತಿವೆ. ಕೋವಿಡ್-19 ಕಾರಣದಿಂದ ಭಾರತ ಮಾತ್ರವಲ್ಲ, ಜಾಗತಿಕ ಲಾಜಿಸ್ಟಿಕ್ ವಲಯ ಸಾಕಷ್ಟು ಸಂಕಷ್ಟಕ್ಕೆ ತುತ್ತಾಗಿದೆ.
FTPಯಲ್ಲಿ ಯಾವುದಕ್ಕೆ ಮಹತ್ವ ನೀಡಬೇಕು?
ಭಾರತ ತನ್ನ ವಿದೇಶಿ ವ್ಯಾಪಾರ ನೀತಿಯಲ್ಲಿ ಜಾಗತಿಕ ಮಟ್ಟದಲ್ಲಿನ ಸ್ಪರ್ಧೆಯನ್ನು ಎದುರಿಸಲು ಸಶಕ್ತವಾಗುವಂತೆ ಲಾಜಿಸ್ಟಿಕ್ ಕ್ಷೇತ್ರದಲ್ಲಿ ತಂತ್ರಜ್ಞಾನ ಅಭಿವೃದ್ಧಿಗೆ ಒತ್ತು ನೀಡಬೇಕು. ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತು ನೀಡೋ ಜೊತೆಗೆ ವೆಚ್ಚ ತಗ್ಗಿಸಲು ಹೆಚ್ಚಿನ ಮಹತ್ವ ನೀಡಬೇಕಾದ ಅಗತ್ಯವಿದೆ. ಹೂಡಿಕೆಗೆ ಪೂರಕ ವಾತಾವರಣ ಸೃಷ್ಟಿಸೋದ್ರಿಂದ ಪರೋಕ್ಷ ಲಾಜಿಸ್ಟಿಕ್ ವೆಚ್ಚ ಶೇ.10ರಷ್ಟು ತಗ್ಗಲಿದೆ. ಭಾರತದ ರಫ್ತಿನಲ್ಲಿ ಶೇ.5-ಶೇ.8ರಷ್ಟು ಪ್ರಗತಿ ಕೂಡ ಕಂಡುಬರಲಿದೆ. ಇನ್ನು ಭಾರತದ ಲಾಜಿಸ್ಟಿಕ್ ವಲಯದಲ್ಲಿ 22 ಮಿಲಿಯನ್ ಗಿಂತಲೂ ಹೆಚ್ಚಿನ ಜನರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸಲು ವಿಫುಲ ಅವಕಾಶವಿದ್ದು, ಈ ನಿಟ್ಟಿನಲ್ಲೂ ಯೋಜನೆ ರೂಪಿಸಬೇಕಾದ ಅಗತ್ಯವಿದೆ. ಜೊತೆಗೆ ಈ ಕ್ಷೇತ್ರದಲ್ಲಿ ತೊಡಗಿರೋ ಉದ್ಯೋಗಿಗಳ ಕೌಶಲಾಭಿವೃದ್ಧಿಗೂ ಮಹತ್ವ ನೀಡಬೇಕಾದ ಅಗತ್ಯವಿದೆ.
India Russia Oil Deal: ಮಂಗಳೂರಿಗೂ ಬರಲಿದೆ ರಷ್ಯಾದ ಅಗ್ಗದ ಕಚ್ಚಾ ತೈಲ
ಇ-ಕಾಮರ್ಸ್ ಕೂಡ ಭಾರತದ ಆರ್ಥಿಕಾಭಿವೃದ್ಧಿಗೆ ಮಹತ್ವದ ಕೊಡುಗೆ ನೀಡೋ ಜೊತೆಗೆ ಅಭಿವೃದ್ಧಿ ವೇಗ ಹೆಚ್ಚಿಸಲು ಸಮರ್ಥವಾಗಿದೆ. ದೇಶಾದ್ಯಂತ ಪ್ಯಾಕೇಜಿಂಗ್, ಸಾಗಣೆ, ಲಾಜಿಸ್ಟಿಕ್ಸ್ ಹಾಗೂ ಹಾಸ್ಪಿಟಲಿಟಿ ಉದ್ಯಮಗಳ ಬೆಳವಣಿಗೆಗೆ ಇ-ಕಾಮರ್ಸ್ ಮಹತ್ವದ ಕೊಡುಗೆ ನೀಡಿದೆ. ಸಣ್ಣ ಲಾಜಿಸ್ಟಿಕ್ ಉದ್ಯಮಗಳಿಗೆ ಉತ್ತೇಜನ ನೀಡೋ ಜೊತೆಗೆ ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ ಹಾಗೂ ಸ್ಕಿಲ್ ಇಂಡಿಯಾದ ಮೂಲಕ ಲಾಜಿಸ್ಟಿಕ್ ಹಾಗೂ ಇ-ಕಾಮರ್ಸ್ ಕ್ಷೇತ್ರದ ಬೆಳವಣಿಗೆ ವೇಗ ಹೆಚ್ಚಿಸಲು ನೀತಿ ರೂಪಿಸಬೇಕು. ಲಾಜಿಸ್ಟಿಕ್ ಹಾಗೂ ಇ-ಕಾಮರ್ಸ್ ಕ್ಷೇತ್ರಗಳಲ್ಲಿ ವಿದೇಶಿ ಹೂಡಿಕೆಗೆ ಪೂರಕ ವಾತಾವರಣ ಸೃಷ್ಟಿಸೋ ಜೊತೆಗೆ ಭಾರತವನ್ನು ಸ್ಪರ್ಧಾತ್ಮಕ ರಫ್ತು ರಾಷ್ಟ್ರವಾಗಿ ರೂಪಿಸೋ ನಿಟ್ಟಿನಲ್ಲಿ ಎಫ್ ಟಿಪಿಯಲ್ಲಿ ಮಹತ್ವ ನೀಡಬೇಕಾದ ಅಗತ್ಯವಿದೆ.