Asianet Suvarna News Asianet Suvarna News

ವಿಮಾನ ನಿಲ್ದಾಣಗಳಿಗೆ 12 ಬಿಲಿಯನ್ ಡಾಲರ್ ಹೂಡಿಕೆ: ಚೀನಾ ಆರ್ಥಿಕತೆ ಮೀರಿಸಲು ಭಾರತದ ಮಾಸ್ಟರ್‌ಪ್ಲ್ಯಾನ್‌..!

ಭಾರತದ ಗಾತ್ರಕ್ಕೆ ಅನುಗುಣವಾಗಿ, ಈಗಾಗಲೇ ಸಾಮರ್ಥ್ಯ ಮೀರಿ ಕಾರ್ಯಾಚರಿಸುತ್ತಿರುವ, ಹಳೆಯ ವಿಮಾನ ನಿಲ್ದಾಣಗಳ ಮೇಲೆ ಅವಲಂಬಿತವಾಗಿರುವ ಬದಲಿಗೆ, ವಾಯು ಯಾನ ದಟ್ಟಣೆಯನ್ನು ಕಡಿಮೆಗೊಳಿಸಲು ದೇಶದ ವಿವಿಧ ಭಾಗಗಳಲ್ಲಿ ಹೊಸ ವಿಮಾನ ನಿಲ್ದಾಣಗಳನ್ನು ಸ್ಥಾಪಿಸುವುದು ಅವಶ್ಯಕವಾಗಿದೆ.

india to invest 12 billion dollars in airports ash
Author
First Published Mar 21, 2023, 2:25 PM IST

(ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ನವದೆಹಲಿ (ಮಾರ್ಚ್‌ 21, 2023): ಮುಂದಿನ ಎರಡು ವರ್ಷಗಳ ಅವಧಿಯಲ್ಲಿ, ಭಾರತ ವಿಮಾನ ನಿಲ್ದಾಣಗಳ ಅಭಿವೃದ್ಧಿಗಾಗಿ 980 ಬಿಲಿಯನ್ ರುಪಾಯಿಗಳು, ಅಂದರೆ 12 ಬಿಲಿಯನ್ ಡಾಲರ್‌ಗಳನ್ನು ವಿಮಾನ ನಿಲ್ದಾಣಗಳ ಅಭಿವೃದ್ಧಿಗಾಗಿ ವೆಚ್ಚ ಮಾಡಲಿದೆ. ಭಾರತದಲ್ಲಿ ವಿಮಾನ ಪ್ರಯಾಣದ ಬೇಡಿಕೆ ಹೆಚ್ಚುತ್ತಿದ್ದು, ವಿಮಾನಯಾನ ಸಂಸ್ಥೆಗಳು ನೂತನ ವಿಮಾನಗಳ ಖರೀದಿಗೆ ಮುಂದಾಗಿವೆ. ಆದ್ದರಿಂದ ಪ್ರಸ್ತುತ ಇರುವ ವಿಮಾನ ನಿಲ್ದಾಣಗಳ ಅಭಿವೃದ್ಧಿ ಮತ್ತು ಮೇಲ್ದರ್ಜೆಗೇರಿಸುವಿಕೆ ಭಾರತಕ್ಕೆ ಅನಿವಾರ್ಯವಾಗಿದೆ.

ಭಾರತ ಪ್ರಸ್ತುತ ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವೈಮಾನಿಕ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, 2025ರ ವೇಳೆಗೆ ಈಗ ಇರುವ 148 ವಿಮಾನ ನಿಲ್ದಾಣಗಳ ಸಂಖ್ಯೆಯನ್ನು 220ಕ್ಕೆ ಏರಿಸುವ ಉದ್ದೇಶ ಹೊಂದಿದೆ. ಖಾಸಗಿ ಹೂಡಿಕೆದಾರರು ನೂತನ ವಿಮಾನ ನಿಲ್ದಾಣಗಳ ಸ್ಥಾಪನೆಗೆ, ನೂತನ ಟರ್ಮಿನಲ್‌ಗಳ ನಿರ್ಮಾಣಕ್ಕೆ ಮತ್ತು ಹಳೆಯ ವಿಮಾನ ನಿಲ್ದಾಣಗಳ ವ್ಯವಸ್ಥೆಯ ಅಭಿವೃದ್ಧಿಗೆ 9 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಮುಂದಾಗಿವೆ. ಇನ್ನುಳಿದ ಹಣವನ್ನು ಸರ್ಕಾರಿ ಸ್ವಾಮ್ಯದ ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಪೂರೈಸಲಿದೆ. ಈ ಅಭಿವೃದ್ಧಿ ಯೋಜನೆಯಲ್ಲಿ ಗ್ರೀನ್ ಫೀಲ್ಡ್ ಯೋಜನೆಗಳ ಅಭಿವೃದ್ಧಿ ಹಾಗೂ ವಸಾಹತುಶಾಹಿ ಕಾಲದ ಮಿಲಿಟರಿ ಏರ್ ಫೀಲ್ಡ್‌ಗಳ ಅಭಿವೃದ್ಧಿಯೂ ಸೇರಿದೆ.

ಇದನ್ನು ಓದಿ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿರೋ ಭಿಂದ್ರನ್‌ವಾಲೆ 2.0 ಅಮೃತ್ ಪಾಲ್ ಸಿಂಗ್ ಏಳು ಬೀಳು ಹೀಗಿದೆ..

ಭಾರತ 1.42 ಬಿಲಿಯನ್ ಜನಸಂಖ್ಯೆ ಹೊಂದಿದ್ದರೂ, ಭಾರತದಲ್ಲಿ ಒಟ್ಟು ಅಂದಾಜು 700 ವಿಮಾನಗಳಷ್ಟೇ ಇವೆ. ಇದು ಯುನೈಟೆಡ್ ಏರ್‌ಲೈನ್ಸ್ ಸಂಸ್ಥೆಯ ವಿಮಾನಗಳ ಸಂಖ್ಯೆಗಿಂತಲೂ ಕಡಿಮೆಯಾಗಿದೆ. ಆದರೆ ದೆಹಲಿ ಮತ್ತು ಮುಂಬೈನಂತಹ ಪ್ರಮುಖ ನಗರಗಳ ವಿಮಾನ ನಿಲ್ದಾಣಗಳು ಇಂದಿಗೂ ವಿಮಾನಗಳ ನಿಲುಗಡೆಗೆ ಮತ್ತು ಭೂಸ್ಪರ್ಶಕ್ಕೆ ಸ್ಥಳಾವಕಾಶದ ಕೊರತೆಯನ್ನು ಎದುರಿಸುತ್ತಿವೆ.

ಭಾರತೀಯ ವೈಮಾನಿಕ ಉದ್ಯಮ ಜಾಗತಿಕವಾಗಿ ದೃಢವಾಗುತ್ತಿದ್ದು, ತನ್ನ ಬೆಳೆಯುತ್ತಿರುವ ಗ್ರಾಹಕರು ಮತ್ತು ಆರ್ಥಿಕ ಪ್ರಗತಿಯಿಂದ ಚೀನಾದ ಆರ್ಥಿಕತೆಯನ್ನು ಮೀರಿ ಬೆಳೆಯುವ ನಿರೀಕ್ಷೆಗಳಿವೆ. ಏರ್ ಇಂಡಿಯಾ ಸಂಸ್ಥೆ ಈಗಾಗಲೇ ಜಗತ್ತಿನ ವಾಣಿಜ್ಯಿಕ ವಿಮಾನ ಯಾನ ಇತಿಹಾಸದಲ್ಲೇ ಅತಿದೊಡ್ಡ ವಿಮಾನ ಖರೀದಿ ಒಪ್ಪಂದ ನಡೆಸಿಕೊಂಡಿದ್ದು, ವೈಮಾನಿಕ ಉದ್ಯಮ ಇನ್ನಷ್ಟು ಅಭಿವೃದ್ಧಿ ಹೊಂದುವ ಸಾಧ್ಯತೆಗಳಿವೆ. ಬೋಯಿಂಗ್ ಮತ್ತು ಏರ್ ಬಸ್ ಸಂಸ್ಥೆಗಳು ಭಾರತದಿಂದ ಹಲವು ವರ್ಷಗಳಿಂದ ಉಪಕರಣಗಳನ್ನು ಪಡೆದುಕೊಳ್ಳುತ್ತಿವೆ.

ಇದನ್ನೂ ಓದಿ: ಒನ್ ವೆಬ್ ಸಂಸ್ಥೆಯ 36 ಉಪಗ್ರಹಗಳನ್ನು ಉಡಾವಣೆಗೊಳಿಸಲಿರುವ ಇಸ್ರೋ: ವಿಶೇಷತೆ ಹೀಗಿದೆ..

ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಪ್ರಕಾರ, ಭಾರತ ವೈಮಾನಿಕ ಉದ್ಯಮದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಗುರಿ ಹೊಂದಿದೆ. ಮೂರು ದಿನಗಳ ಕಾಲ ನಡೆಯುವ ಸಿಎಪಿಎ ಇಂಡಿಯಾ ಏವಿಯೇಷನ್‌ ಸಮ್ಮಿಟ್ ಮಾರ್ಚ್ 20ರಿಂದ ನಡೆಯುತ್ತಿದ್ದು, ಬೋಯಿಂಗ್ ಸಂಸ್ಥೆಯ ಅಂದಾಜಿನ ಪ್ರಕಾರ ಭಾರತದ ವಿಮಾನ ಪ್ರಯಾಣಿಕರ ಸಂಖ್ಯೆ 2022ರಿಂದ 2041ರ ತನಕ ಪ್ರತಿ ವರ್ಷವೂ 7% ಹೆಚ್ಚಳ ಕಾಣಲಿದೆ. ಇದಕ್ಕೆ ಹೋಲಿಸಿದರೆ, ಚೀನಾದ ವಾರ್ಷಿಕ ಅಭಿವೃದ್ಧಿ ದರ 4.9% ಅಷ್ಟೇ ಇರಲಿದೆ.

ಇಂಟರ್‌ನ್ಯಾಷನಲ್ ಕೌನ್ಸಿಲ್ ಆಫ್ ಕ್ಲೀನ್ ಟ್ರಾನ್ಸ್‌ಪೋರ್ಟೇಶನ್ ಸಂಸ್ಥೆಯ ಸಂಶೋಧಕರಾದ ಜಯಂತ್ ಮುಖೋಪಾಧ್ಯಾಯ ಅವರ ಪ್ರಕಾರ, ಭಾರತೀಯ ವೈಮಾನಿಕ ಉದ್ಯಮದ ಅಭಿವೃದ್ಧಿಯ ಪರಿಣಾಮವಾಗಿ ಭಾರತಕ್ಕೆ ಆರ್ಥಿಕ ಲಾಭಗಳು ಸಿಗಲಿವೆ. ರಸ್ತೆ ದುರವಸ್ಥೆ ಮತ್ತು ನಿಧಾನಗತಿಯ ರೈಲುಗಳ ಕಾರಣದಿಂದ ಹಲವು ಸವಾಲುಗಳನ್ನು ಎದುರಿಸುತ್ತಿರುವವರ ಜೀವನಮಟ್ಟ ಹೆಚ್ಚಿಸಲು ಇದು ನೆರವಾಗಲಿದೆ.

ಇದನ್ನೂ ಓದಿ: ಮೈಸೂರು ಒಡೆಯರಿಂದ ರಾಜೀವ್ ಚಂದ್ರಶೇಖರ್ ತನಕ: ಡಕೋಟಾ ಡಿಸಿ 3 ಯುದ್ಧ ವಿಮಾನದ ಇತಿಹಾಸ ಹೀಗಿದೆ..

ಇನ್ನು, ಪ್ರಧಾನಿ ನರೇಂದ್ರ ಮೋದಿಯವರು ಉದ್ಯಮಿಗಳು ಮತ್ತು ಪ್ರವಾಸಿಗರಿಗೆ ಜಾಗತಿಕ ಸಂಪರ್ಕ ತಾಣವನ್ನಾಗಿ ಪರಿವರ್ತಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಅವರು ಭಾರತದ ಸಣ್ಣ ನಗರಗಳಿಗೂ ವಾಯು ಸಂಪರ್ಕ ಕಲ್ಪಿಸುವ ಗುರಿ ಹೊಂದಿದ್ದಾರೆ.

ಭಾರತದ ಅತಿದೊಡ್ಡ ಉದ್ಯಮ ಸಮೂಹವಾದ ಟಾಟಾ ಗ್ರೂಪ್ ಮಾಲಿಕತ್ವದ ಏರ್ ಇಂಡಿಯಾ ಸಂಸ್ಥೆ 470 ವಿಮಾನಗಳ ಖರೀದಿಗಾಗಿ ಆದೇಶ ಸಲ್ಲಿಸಿದೆ. ಭಾರತದ ನಂಬರ್ ವನ್ ವಿಮಾನಯಾನ ಸಂಸ್ಥೆ ಇಂಡಿಗೋ ಇದಕ್ಕಿಂತಲೂ ಹೆಚ್ಚಿನ ವಿಮಾನ ಖರೀದಿ ನಡೆಸುವ ಸಾಧ್ಯತೆಗಳಿವೆ. ಅದರೊಡನೆ, ಇತರ ವಿಮಾನಯಾನ ಸಂಸ್ಥೆಗಳೂ ತಮ್ಮ ವಿಮಾನಗಳ ಸಂಖ್ಯೆಗಳನ್ನು ಹೆಚ್ಚಿಸಲಿವೆ.

ಇದನ್ನೂ ಓದಿ: ವಿನೂತನ ಸೂಪರ್‌ಸಾನಿಕ್ ಜೆಟ್ ಟ್ರೈನರ್ ವಿನ್ಯಾಸ ಪ್ರದರ್ಶಿಸಿದ ಎಚ್‌ಎಎಲ್‌

ಭಾರತ ತನ್ನ ಇತ್ತೀಚಿನ ಖರೀದಿಗಳ ಮೂಲಕ ಚೀನಾದಂತಹ ಬೃಹತ್ ವೈಮಾನಿಕ ಮಾರುಕಟ್ಟೆಯ ಜೊತೆಗಿರುವ ಅಂತರವನ್ನು ತಗ್ಗಿಸುವ ಪ್ರಯತ್ನ ನಡೆಸುತ್ತಿದೆ. ಸಿರಿಯಂ ಸಂಸ್ಥೆಯ ಮಾಹಿತಿಯ ಪ್ರಕಾರ, ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆ ಈಗಾಗಲೇ 1,400ಕ್ಕೂ ಹೆಚ್ಚು ವಿಮಾನ ಖರೀದಿಗೆ ಆದೇಶ ಸಲ್ಲಿಸಿದ್ದು, ಅದರಲ್ಲಿ ನೇರ ಖರೀದಿಯಷ್ಟು ಸ್ಥಿರವಲ್ಲದ ಲೆಟರ್ಸ್ ಆಫ್ ಇಂಟೆಂಟ್‌ಗಳೂ ಸೇರಿವೆ. ಇದು ಚೀನಾದ ವಿಮಾನ ಖರೀದಿ ಆದೇಶದಿಂದ 2 ಪಟ್ಟು ಹೆಚ್ಚಾಗಿದೆ. ಪ್ರಸ್ತುತ ಭಾರತಕ್ಕಿಂತ ಹೆಚ್ಚಿನ ವಿಮಾನಗಳನ್ನು ಹೊಂದಿರುವ ಚೀನಾ 2035ರ ವೇಳೆಗೆ ವಿಮಾನ ನಿಲ್ದಾಣಗಳ ಸಂಖ್ಯೆಯನ್ನು 450ಕ್ಕೆ ಹೆಚ್ಚಿಸಲು ಉದ್ದೇಶಿಸಿದೆ.

ಈಗ ಅದಾನಿ ಗ್ರೂಪ್, ಜ಼ೂರಿಕ್ ಏರ್‌ಪೋರ್ಟ್ ಇಂಟರ್‌ನ್ಯಾಷನಲ್ ಎಜಿಯಂತಹ ಸಂಸ್ಥೆಗಳ ಗಮನಾರ್ಹ ಕೊಡುಗೆಗಳ ಕಾರಣದಿಂದ, ಭಾರತೀಯ ವಿಮಾನ ನಿಲ್ದಾಣಗಳ ಅಭಿವೃದ್ಧಿಯೂ ಹೆಚ್ಚುತ್ತಿದೆ. ಅದಾನಿ ಸಮೂಹದ ನವಿ ಮುಂಬೈ ವಿಮಾನ ನಿಲ್ದಾಣ 2,866 ಎಕರೆ ಪ್ರದೇಶದಲ್ಲಿ ವ್ಯಾಪಿಸಿದ್ದು, 2036ರ ವೇಳೆಗೆ 90 ಮಿಲಿಯನ್ ಪ್ರಯಾಣಿಕರಿಗೆ ಸೇವೆ ಒದಗಿಸುವ ನಿರೀಕ್ಷೆಗಳಿವೆ. ಅದೇ ರೀತಿ, ಜೂ಼ರಿಕ್ ಏರ್‌ಪೋರ್ಟ್ ಇಂಟರ್‌ನ್ಯಾಷನಲ್ ಎಜಿ ಸಂಸ್ಥೆ ರಾಜಧಾನಿ ನವದೆಹಲಿಯಲ್ಲಿ ನೂತನ ವಿಮಾನ ನಿಲ್ದಾಣ ನಿರ್ಮಿಸುತ್ತಿದ್ದು, ಈ ನಿಲ್ದಾಣ 70 ಮಿಲಿಯನ್ ಪ್ರಯಾಣಿಕರ ಸಾಮರ್ಥ್ಯ ಹೊಂದಿರುವ ನಿರೀಕ್ಷೆಗಳಿವೆ. ಅದರೊಡನೆ, ಕರ್ನಾಟಕ, ಗುಜರಾತ್, ಅಂಧ್ರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣಗಳನ್ನು ನಿರ್ಮಿಸುವ ಯೋಜನೆಗಳಿವೆ.

ಇದನ್ನೂ ಓದಿ: ಭಾರತದ ವೈಮಾನಿಕ, ರಕ್ಷಣಾ ಉದ್ಯಮಕ್ಕೆ ಕರ್ನಾಟಕವೇ ತವರು ಮನೆ..!

ಮಾಲಿನ್ಯದ ಭೀತಿ

ಹಲವು ವೃತ್ತಿಪರರ ಅಂದಾಜಿನ ಪ್ರಕಾರ, ಭಾರತದಲ್ಲಿ ನಡೆಸುವ ಬೃಹತ್ ಮೂಲಭೂತ ಅಭಿವೃದ್ಧಿ ಯೋಜನೆಗಳು ವಾಯು ಮಾಲಿನ್ಯ ಹೆಚ್ಚಾಗುವಂತೆ ಮಾಡುವ ಸಾಧ್ಯತೆಗಳಿವೆ. ಡಾಲ್‌ಬರ್ಗ್ ಅಡ್ವೈಸರ್ಸ್ ಸಂಸ್ಥೆಯ ವರದಿಯ ಪ್ರಕಾರ, ಈ ಮಾಲಿನ್ಯದ ಪರಿಣಾಮವಾಗಿ ಭಾರತದ ಜಿಡಿಪಿಯಲ್ಲಿ 95 ಬಿಲಿಯನ್ ಡಾಲರ್ ನಷ್ಟ ಉಂಟಾಗಬಹುದು. ಇದರಿಂದ ಪ್ರಧಾನಿ ನರೇಂದ್ರ ಮೋದಿಯವರ ಎರಡು ಮಹತ್ವದ ಗುರಿಗಳಾದ ಕಾಲು ಶತಮಾನದ ಅವಧಿಯಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸುವುದು ಮತ್ತು 2070ರ ವೇಳೆಗೆ ಭಾರತವನ್ನು ಶೂನ್ಯ ಮಾಲಿನ್ಯ ಹೊರಸೂಸುವಿಕೆ ರಾಷ್ಟ್ರವನ್ನಾಗಿಸುವುದರ ಮಧ್ಯ ವೈರುಧ್ಯಗಳನ್ನು ತೋರುತ್ತಿದೆ.

ವರ್ಜೀನಿಯಾ ಮೂಲದ ಐಸಿಎಫ್ ಇಂಟರ್‌ನ್ಯಾಷನಲ್ ಐಎನ್‌ಸಿ (ಐಸಿಎಫ್ಐ) ಸಂಸ್ಥೆಯ ವೈಮಾನಿಕ ನಿರ್ವಾಹಕರಾದ ಲೂಯಿಸ್ ಬರೋಸ್ ಅವರ ಪ್ರಕಾರ, ಭಾರತ ವೈಮಾನಿಕ ವಲಯದಲ್ಲಿ ಅತಿದೊಡ್ಡ ಗುರಿಗಳನ್ನು ಹಾಕಿಕೊಂಡಿದೆ. ಆದರೆ ಈ ಗುರಿಗಳನ್ನು ಸಾಧಿಸುವ ಹಂತದಲ್ಲಿ ಮಾಲಿನ್ಯ ಹೊರಸೂಸುವಿಕೆ ಹೆಚ್ಚಾಗಲಿದೆ. ಹೆಚ್ಚಿನ ವೈಜ್ಞಾನಿಕ ಅಭಿವೃದ್ಧಿ ಸಾಧಿಸುವ ತನಕವೂ ಅಭಿವೃದ್ಧಿ ಮತ್ತು ಮಾಲಿನ್ಯಗಳ ನಡುವಿನ ಸಂಬಂಧ ಇದೇ ರೀತಿ ಮುಂದುವರಿಯಲಿದೆ ಎನ್ನುವುದು ಬರೋಸ್ ಅಭಿಪ್ರಾಯವಾಗಿದೆ.

ಇದನ್ನೂ ಓದಿ:  ಕೊಡಗಿನ ವೀರ ಯೋಧರು: ದೇಶ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಕೊಡವರಿಗೊಂಡು ನಮನ

ಭಾರತ 2024ರ ವೇಳೆಗೆ 90ಕ್ಕೂ ಹೆಚ್ಚು ಇಂಗಾಲ ತಟಸ್ಥ ವಿಮಾನ ನಿಲ್ದಾಣಗಳನ್ನು ಹೊಂದಲು ಉದ್ದೇಶಿಸಿದ್ದು, ಪ್ರಸ್ತುತ ನವದೆಹಲಿ ಮತ್ತು ಕೊಚ್ಚಿ ವಿಮಾನ ನಿಲ್ದಾಣಗಳಷ್ಟೇ ಇಂಗಾಲ ತಟಸ್ಥವಾಗಿದ್ದು, ಇದನ್ನು ಸಾಧಿಸುವುದು ಒಂದು ಸವಾಲಾಗಿದೆ.

ಕನ್ಸರ್ವೇಶನ್ ಆ್ಯಕ್ಷನ್ ಟ್ರಸ್ಟ್ ಸ್ಥಾಪಕರಾದ ಡೆಬಿ ಗೋಯಂಕಾ ಅವರು ಮುಂಬೈ ಮತ್ತು ದೆಹಲಿಯಲ್ಲಿ ನಡೆಯುತ್ತಿರುವ ಯೋಜನೆಗಳಿಂದ ಉಂಟಾಗುವ ಪರಿಸರದ ಮೇಲಿನ ದುಷ್ಪರಿಣಾಮಗಳ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಅಂತಹ ಪರಿಣಾಮಗಳನ್ನು ಕಡಿಮೆಗೊಳಿಸಲು, ಅಭಿವೃದ್ಧಿ ಯೋಜನಾ ಸ್ಥಳಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಆಯ್ಕೆ ಮಾಡಬೇಕಿದೆ.

ಅಭಿವೃದ್ಧಿಯೆಡೆಗೆ ಗಮನ

ನರೇಂದ್ರ ಮೋದಿಯವರು ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, 2025ರ ವೇಳೆಗೆ ಭಾರತದ ಆರ್ಥಿಕತೆ 5 ಟ್ರಿಲಿಯನ್ ಡಾಲರ್ ಆಗಬೇಕು ಎಂಬ ಗುರಿ ಹೊಂದಿದ್ದಾರೆ. ಅದಕ್ಕಾಗಿ ವೈಮಾನಿಕ ಉದ್ಯಮ ಪ್ರಮುಖ ಆದ್ಯತೆಯಾಗಿರಲಿದೆ. ಸೆಂಟರ್ ಫಾರ್ ಎಕನಾಮಿಕ್ಸ್ ಆ್ಯಂಡ್ ಬಿಸಿನೆಸ್ ರಿಸರ್ಚ್ ಸಂಸ್ಥೆಯ ಪ್ರಕಾರ, ಭಾರತ 2035ರ ವೇಳೆಗೆ 10 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ. ಆದ್ದರಿಂದ ಮುಂದಿನ ವರ್ಷಗಳಲ್ಲಿ ವೈಮಾನಿಕ ಉದ್ಯಮದ ಪ್ರಾಮುಖ್ಯತೆ ಹೆಚ್ಚಾಗಲಿದೆ.

ಜನವರಿಯಲ್ಲಿ, ದೇಶೀಯ ವಾಯು ಯಾನ 96% ಹೆಚ್ಚಳ ಕಂಡು, ಕೋವಿಡ್ ಸಾಂಕ್ರಾಮಿಕದ ಮೊದಲು 2019ರಲ್ಲಿ ಇದ್ದ ಮಟ್ಟವನ್ನು ತಲುಪಿತು ಎಂದು ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್‌ (ಡಿಡಿಸಿಎ) ವರದಿ ಮಾಡಿದೆ. ಅಮೆರಿಕ ಮತ್ತು ಚೀನಾಗಳ ನಡುವಿನ ಘರ್ಷಣೆ ಹೆಚ್ಚುತ್ತಿರುವುದರಿಂದ, ಚೀನಾದಿಂದ ಹೊರ ನಡೆಯಲು ಬಯಸುತ್ತಿರುವ ಉತ್ಪಾದನಾ ಸಂಸ್ಥೆಗಳಿಗೆ ಭಾರತ ಒಂದು ಆಕರ್ಷಕ ತಾಣವಾಗಿದೆ. ಭಾರತದಲ್ಲಿ ದೇಶೀಯವಾಗಿ ಉದ್ಯಮಗಳ ಅಭಿವೃದ್ಧಿಯೊಡನೆ, ಆ್ಯಪಲ್ ಸಂಸ್ಥೆಯ ಸಹಭಾಗಿಯಾಗಿರುವ ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್ ಭಾರತದಲ್ಲಿ ತನ್ನ ಉತ್ಪಾದನಾ ಘಟಕವನ್ನು ಆರಂಭಿಸುತ್ತಿದ್ದು, ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ. ಪ್ರಯಾಣದ ಬೇಡಿಕೆಗಳು ಹೆಚ್ಚುತ್ತಿರುವಂತೆ, ಭಾರತಕ್ಕೆ ಅಭಿವೃದ್ಧಿ ಹೊಂದಿದ, ಹೆಚ್ಚು ಪ್ರಯಾಣಿಕ ಸಾಮರ್ಥ್ಯ ಹೊಂದಿರುವ ವಿಮಾನ ನಿಲ್ದಾಣಗಳ ಅಗತ್ಯತೆಯಿದೆ.

ಗೋಯೆಂಕಾ ಅವರ ಪ್ರಕಾರ, ಭಾರತದ ಗಾತ್ರಕ್ಕೆ ಅನುಗುಣವಾಗಿ, ಈಗಾಗಲೇ ಸಾಮರ್ಥ್ಯ ಮೀರಿ ಕಾರ್ಯಾಚರಿಸುತ್ತಿರುವ, ಹಳೆಯ ವಿಮಾನ ನಿಲ್ದಾಣಗಳ ಮೇಲೆ ಅವಲಂಬಿತವಾಗಿರುವ ಬದಲಿಗೆ, ವಾಯು ಯಾನ ದಟ್ಟಣೆಯನ್ನು ಕಡಿಮೆಗೊಳಿಸಲು ದೇಶದ ವಿವಿಧ ಭಾಗಗಳಲ್ಲಿ ಹೊಸ ವಿಮಾನ ನಿಲ್ದಾಣಗಳನ್ನು ಸ್ಥಾಪಿಸುವುದು ಅವಶ್ಯಕವಾಗಿದೆ.

Follow Us:
Download App:
  • android
  • ios