Asianet Suvarna News Asianet Suvarna News

ಅನ್ನದಾತರಿಗೆ ಸಂತಸದ ಸುದ್ದಿ ನೀಡಿದ ಸಚಿವೆ ನಿರ್ಮಲಾ ಸೀತಾರಾಮನ್

2.8 ಲಕ್ಷ ಕೋಟಿ ಕೃಷಿ ಕ್ಷೇತ್ರಕ್ಕೆ ದೇಶದ ಇತಿಹಾಸದಲ್ಲೇ ಈ ಬಾರಿ ಅತಿ ಹೆಚ್ಚು ಅನುದಾನ| ನಾಗರಿಕ ವಿನಾನಯಾನ ಸಚಿವಾಲಯದಿಂದ ರಾಷ್ಟ್ರೀಯ ಅಂತಾರಾಷ್ಟ್ರೀಯ ಮಾರ್ಗದಲ್ಲಿ ಕಿಸಾನ್ ಉಡಾನ್ ವಿಮಾನ ಹಾರಾಟ| ಆಯವ್ಯಯದ ಶೇ.10  ಪಾಲು ಕೃಷಿಗೆ ಮೀಸಲು| 

Finance Minister Nirmala Sitharaman announcement 16 action plans for Farmers
Author
Bengaluru, First Published Feb 2, 2020, 10:17 AM IST

ನವದೆಹಲಿ(ಫೆ.02): ಫಸಲಿಗೆ ಉತ್ತಮ ಬೆಲೆ ಸಿಗದೆ ಕಂಗಾಲಾಗಿರುವ ರೈತ ಸಮುದಾಯದ ನೆರವಿಗೆ ನಿಲ್ಲಲು ಕೇಂದ್ರ ಸರ್ಕಾರ ಪ್ರಮುಖ ಘೋಷಣೆಗಳನ್ನು ಬಜೆಟ್‌ನಲ್ಲಿ ಮಾಡಿದೆ. ರೈತರ ಉತ್ಪನ್ನ ಸಾಗಣೆಗೆ ‘ಕಿಸಾನ್ ರೈಲು’ ಹಾಗೂ ‘ಕೃಷಿ ಉಡಾನ್’ ವಿಮಾನಯಾನ ಆರಂಭಿಸುವುದು ಸೇರಿದಂತೆ ಒಟ್ಟು 16 ಕ್ರಿಯಾ ಯೋಜನೆಗಳನ್ನು ಪ್ರಕಟಿಸಿದೆ. 

ಕೇಂದ್ರ ಬಜೆಟ್ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಿಸಾನ್ ರೈಲು, ಕೃಷಿ ಉಡಾನ್ ಘೋಷಣೆಯಿಂದಾಗಿ, ಬಹುಬೇಗನೆ ಹಾಳಾಗುವ ಬೆಳೆಗಳನ್ನು ಬೇಡಿಕೆ ಇರುವ ಊರುಗಳಿಗೆ ಶರವೇಗದಲ್ಲಿ ಸಾಗಿಸಲು ರೈತರಿಗೆ ಅನುಕೂಲವಾಗಲಿದೆ. ಕೃಷಿ, ನೀರಾವರಿ ಮತ್ತು ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳಿಗೆ 1.60 ಲಕ್ಷ ಕೋಟಿ ರು. ಅನುದಾನವನ್ನು ಬಜೆಟ್‌ನಲ್ಲಿ ತೆಗೆದಿರಿಸಿರುವ ನಿರ್ಮಲಾ ಅವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ಗೆ 1.23 ಲಕ್ಷ ಕೋಟಿ ರು. ಅನುದಾನ ಪ್ರಕಟಿಸಿದ್ದಾರೆ. ಈ ಎರಡೂ ಕ್ಷೇತ್ರಗಳಿಗೆ ಒಟ್ಟು 2.83 ಲಕ್ಷ ಕೋಟಿ ರು. ದೊರೆತಿದೆ. 30 ಲಕ್ಷ ಕೋಟಿ ರು. ಗಾತ್ರದ ಹಣಕಾಸು ಬಜೆಟ್‌ನಲ್ಲಿ ಹೆಚ್ಚೂಕಡಿಮೆ ಶೇ.10 ರಷ್ಟು ಪಾಲು ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಗೆ ದಕ್ಕಿದೆ.

1. ಕೇಂದ್ರದ 3 ಕಾಯ್ದೆ ಜಾರಿಗೆ ರಾಜ್ಯಗಳಿಗೆ ಪ್ರೋತ್ಸಾಹ

ಮಾದರಿ ಕೃಷಿ ಭೂಮಿ ಗುತ್ತಿಗೆ ಕಾಯ್ದೆ-2016, ಮಾದರಿ ಕೃಷಿ ಉತ್ಪಾದನೆ ಹಾಗೂ ಜಾನುವಾರು ಮಾರುಕಟ್ಟೆ (ಉತ್ತೇಜನ ಹಾಗೂ ಸೌಕರ್ಯ) ಕಾಯ್ದೆ 2017, ಮಾದರಿ ಕೃಷಿ ಉತ್ಪಾದನೆ ಮತ್ತು ಜಾನುವಾರು ಗುತ್ತಿಗೆ ಕೃಷಿ ಹಾಗೂ ಸೇವೆ (ಉತ್ತೇಜನ ಹಾಗೂ ಸೌಲಭ್ಯ) ಕಾಯ್ದೆ 2018 ಅನ್ನು ಕೇಂದ್ರ ಸರ್ಕಾರ ರೂಪಿಸಿದೆ. ಇವನ್ನು ಅನುಷ್ಠಾನಕ್ಕೆ ತರುವ ರಾಜ್ಯಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶವಿದೆ ಎಂದು ನಿರ್ಮಲಾ ತಿಳಿಸಿದ್ದಾರೆ. 

ವಿವಿಧ ಕಾರಣಕ್ಕೆ ಪಾಳು ಬಿದ್ದಿರುವ ಭೂಮಿಯನ್ನು ಕೃಷಿ ಜಮೀನು ಹೊಂದಿಲ್ಲದವರಿಗೆ ಅಥವಾ ಇತರೆ ರೈತರಿಗೆ ಕಾನೂನುಬದ್ಧವಾಗಿ ನೀಡಲು ಕೇಂದ್ರ ಸರ್ಕಾರ 2016 ರಲ್ಲಿ ಮಾದರಿ ಕೃಷಿ ಭೂಮಿ ಗುತ್ತಿಗೆ ಕಾಯ್ದೆಯನ್ನು ಜಾರಿಗೆ ತಂದಿದೆ. ಈ ರೀತಿ ಗುತ್ತಿಗೆ ಪಡೆದ ರೈತನಿಗೆ ಕೃಷಿ ಸಾಲ ಸೌಲಭ್ಯವೂ ಲಭಿಸುತ್ತದೆ. ಆದರೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಇದನ್ನು ಅನುಷ್ಠಾನಕ್ಕೆ ತಂದಿಲ್ಲ. ತನ್ಮೂಲಕ ಲಭ್ಯವಿರುವ ಕೃಷಿ ಭೂಮಿ ಉಪಯೋಗವಾಗುತ್ತಿಲ್ಲ ಎಂಬ ವಾದವಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಗಳಲ್ಲಿ ಏಕಸ್ವಾಮ್ಯವನ್ನು ಮುರಿದು, ಖಾಸಗಿ ಹಾಗೂ ಇನ್ನಿತರರಿಗೆ ಸಗಟು ಮಾರುಕಟ್ಟೆ ಸ್ಥಾಪಿಸುವುದಕ್ಕೆ ಅನುವು ಮಾಡಿಕೊಡಲು ಸರ್ಕಾರ 2017 ಲ್ಲಿ ಮಾದರಿ ಕೃಷಿ ಉತ್ಪಾದನೆ ಕಾಯ್ದೆ ಜಾರಿಗೆ ತಂದಿದೆ. 

ಅದು ಕೂಡ ಹಲವು ರಾಜ್ಯಗಳಲ್ಲಿ ಜಾರಿಗೆ ಬಂದಿಲ್ಲ. ಉದ್ಯಮ ಸಂಸ್ಥೆಗಳ ಜತೆ ರೈತರು ನೇರವಾಗಿ ಒಪ್ಪಂದ ಮಾಡಿಕೊಂಡು ಗುತ್ತಿಗೆ ಕೃಷಿ ಮಾಡುವುದಕ್ಕೆ ಅವಕಾಶ ಕಲ್ಪಿಸಲು 2018 ಲ್ಲಿ ಕೇಂದ್ರ ಸರ್ಕಾರ ಮಾದರಿ ಕೃಷಿ ಉತ್ಪನ್ನ ಹಾಗೂ ಜಾನುವಾರು ಗುತ್ತಿಗೆ ಕೃಷಿ ಹಾಗೂ ಸೇವೆ ಕಾಯ್ದೆಯನ್ನು ಸರ್ಕಾರ ಅಂಗೀಕರಿಸಿತ್ತು. ಆದರೆ ಕೃಷಿ ರಾಜ್ಯಗಳಿಗೆ ಸಂಬಂಧಿಸಿದ ವಿಷಯವಾಗಿದ್ದರಿಂದ ವಿವಿಧ ಕಾರಣಗಳನ್ನು ಮುಂದೊಡ್ಡಿ ಹಲವು ರಾಜ್ಯಗಳು ಈ ಮೂರೂ ಕಾಯ್ದೆ ಜಾರಿಗೆ ಹಿಂದೇಟು ಹಾಕಿವೆ. ಇದರಿಂದ ಕೃಷಿ ಕ್ಷೇತ್ರದಲ್ಲಿ ಮಹತ್ತರ ಸುಧಾರಣೆಗೆ ತೊಡಕಾಗಿದೆ ಎಂಬುದು ಕೇಂದ್ರ ಸರ್ಕಾರದ ವಾದ.

2. ನೀಲಿ ಆರ್ಥಿಕತೆಗೆ ಹೊಸ ಚೌಕಟ್ಟು

ಸಮುದ್ರ ಮೀನುಗಾರಿಕೆ ಸಂಪನ್ಮೂಲದ ಅಭಿವೃದ್ಧಿ, ನಿರ್ವಹಣೆ ಹಾಗೂ ಸಂರಕ್ಷಣೆಗಾಗಿ ಚೌಕಟ್ಟುವೊಂದನ್ನು ರೂಪಿಸಲು ಸರ್ಕಾರ ಉದ್ದೇಶಿಸಿದೆ ಎಂದು ಬಜೆಟ್‌ನಲ್ಲಿ ಹೇಳಲಾಗಿದೆ.

3. ಜಲ ಸಂವರ್ಧನೆಗೆ 100 ಜಿಲ್ಲೆಗಳಲ್ಲಿ ಯೋಜನೆ

ಅಂತರ್ಜಲ ಸಮಸ್ಯೆ ಸೇರಿದಂತೆ ನೀರಿನ ತೀವ್ರ ಕೊರತೆ ಎದುರಿಸುತ್ತಿರುವ ದೇಶದ 100 ಜಿಲ್ಲೆಗಳಲ್ಲಿ ಸಮಗ್ರ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ನಿರ್ಮಲಾ ಅವರು ತಿಳಿಸಿದ್ದಾರೆ. ನೀರಿನ ಕೊರತೆ ಎಂಬುದು ದೇಶಾದ್ಯಂತ ಗಂಭೀರ ಕಳವಳವಾಗಿದೆ ಎಂದೂ ಅವರು ಬಜೆಟ್‌ನಲ್ಲಿ ತಿಳಿಸಿದ್ದಾರೆ. ಜಲ ಕೊರತೆ ಎದುರಿಸುತ್ತಿರುವ ಜಿಲ್ಲೆಗಳಿಗಾಗಿ ಕೇಂದ್ರ ಸರ್ಕಾರ ಜಲಶಕ್ತಿ ಅಭಿಯಾನವನ್ನು ನಡೆಸುತ್ತಿದೆ. ಇದರಡಿ ಮಳೆ ನೀರು ಕೊಯ್ಲು, ನೀರಿನ ಸಂರಕ್ಷಣೆ, ಸಾಂಪ್ರದಾಯಿಕ ಜಲಮೂಲ ಹಾಗೂ ಕೆರೆಗಳ ಪುನರುಜ್ಜೀವನ ಹಾಗೂ ನೀರಿನ ಮರುಬಳಕೆ, ಅರಣ್ಯೀಕರಣ ದಂತಹ ಪ್ರಮುಖ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

4. ಎಲ್ಲ ಬಗೆಯ ರಸಗೊಬ್ಬರ ಸಮತೋಲಿತ ಬಳಕೆ

ಸಾಂಪ್ರದಾಯಿಕ ಸಾವಯವ ಹಾಗೂ ಇನ್ನಿತರೆ ರಸಗೊಬ್ಬರ ಸೇರಿದಂತೆ ಎಲ್ಲ ಬಗೆಯ ಗೊಬ್ಬರಗಳನ್ನೂ ಸಮತೋಲಿತವಾಗಿ ಬಳಸಲು ಸರ್ಕಾರ ಪ್ರೋತ್ಸಾಹ ನೀಡುತ್ತದೆ. ರಾಸಾಯನಿಕ ರಸಗೊಬ್ಬರದ ಮಿತಿಮೀರಿದ ಬಳಕೆ ಪ್ರೋತ್ಸಾಹಿಸುತ್ತಿರುವ ಹಾಲಿ ವ್ಯವಸ್ಥೆಯನ್ನು ಬದಲಿಸಲು ಇದು ಅಗತ್ಯವಾಗಿದೆ ಎಂದು ನಿರ್ಮಲಾ ತಿಳಿಸಿದ್ದಾರೆ.

5. ಜಿಲ್ಲೆ/ತಾಲೂಕು ಮಟ್ಟದಲ್ಲಿ ಉಗ್ರಾಣ

ದೇಶದಲ್ಲಿ 162 ದಶಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ಕೃಷಿ ಉಗ್ರಾಣ, ಕೋಲ್ಡ್ ಸ್ಟೋರೇಜ್, ರೀಫರ್ (ಶೈತ್ಯ) ವಾಹನ ಸೌಲಭ್ಯ ಇದೆ. ಈ ಎಲ್ಲವೂಗಳನ್ನು ಒಂದು ನಕ್ಷೆಯಲ್ಲಿ ತೋರಿಸಿ, ಜಿಯೋ ಟ್ಯಾಗ್ ಮಾಡಲು ನಬಾರ್ಡ್ ಕೆಲಸ ಆರಂಭಿಸಲಿದೆ. ಇದರ ಜತೆಗೆ ಉಗ್ರಾಣ ಅಭಿವೃದ್ಧಿ ಮತ್ತು ನಿಯಂತ್ರಣ ಪ್ರಾಧಿಕಾರದ ನಿಯಮ ಗಳಿಗೆ ಅನುಗುಣವಾಗಿ ಉಗ್ರಾಣ ಸ್ಥಾಪಿಸಲು ಉದ್ದೇಶಿಸಲಾಗಿದೆ. ಜಿಲ್ಲೆ/ತಾಲೂಕು ಮಟ್ಟದಲ್ಲಿ ಇಂತಹ ಉಗ್ರಾಣಗಳನ್ನು ಸ್ಥಾಪಿಸಲು ಒಂದು ಬಾರಿಯ ಅನುದಾನವನ್ನು ನೀಡಲಾಗುತ್ತದೆ. ಇದಲ್ಲದೆ ಭಾರತೀಯ ಆಹಾರ ನಿಗಮ ಹಾಗೂ ಕೇಂದ್ರೀಯ ಉಗ್ರಾಣ ನಿಗಮಗಳು ತಮ್ಮ ಜಾಗದಲ್ಲಿ ಉಗ್ರಾಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ನಿರ್ಮಲಾ ಸೂಚಿಸಿದ್ದಾರೆ.

6. ಹಾಲು, ಮಾಂಸ ಸಾಗಣೆಗೆ ಕಿಸಾನ್ ರೈಲು

ಹಾಲು, ಮಾಂಸ ಹಾಗೂ ಮೀನಿನಂತಹ ಬಹುಬೇಗನೆ ಹಾಳಾಗುವ ಉತ್ಪನ್ನಗಳಿಗೆ ದೇಶಾದ್ಯಂತ ಸುಗಮ ಶೈತ್ಯೀಕೃತ ವ್ಯವಸ್ಥೆ ಕಲ್ಪಿಸಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ಸಾರ್ವಜನಿಕ- ಖಾಸಗಿ ಸಹಭಾಗಿತ್ವದೊಂದಿಗೆ ಭಾರತೀ ಯ ರೈಲ್ವೆ ಮೂಲಕ ‘ಕಿಸಾನ್ ರೈಲು’ ಓಡಿಸಲು ಉದ್ದೇಶಿಸಿದೆ. ಎಕ್ಸ್‌ಪ್ರೆಸ್‌ಹಾಗೂ ಸರಕು ಸಾಗಣೆ ರೈಲುಗಳಲ್ಲಿ ಇದಕ್ಕಾಗಿ ರೆಫ್ರಿಜರೇಟೆಡ್ ಬೋಗಿಗಳನ್ನು ಅಳವಡಿಸಲಾಗುತ್ತದೆ ಎಂದು ಬಜೆಟ್‌ನಲ್ಲಿ ಹೇಳಲಾಗಿದೆ.

7. ಗ್ರಾಮಗಳಲ್ಲೇ ಸಂಗ್ರಹ ವ್ಯವಸ್ಥೆಗೆ ‘ಧಾನ್ಯಲಕ್ಷ್ಮಿ’

ಆಯಾ ಗ್ರಾಮಗಳಲ್ಲೇ ಆಹಾರ ಧಾನ್ಯಗಳ ಸಂಗ್ರಹ ಯೋಜನೆ ಆರಂಭಿಸಲು ಉದ್ದೇಶಿಸಲಾಗಿದೆ. ಇದನ್ನು ಸ್ವ ಸಹಾಯ ಸಂಘಗಳು ನಡೆಸುತ್ತವೆ. ಇದರಿಂದಾಗಿ ರೈತರಿಗೆ ಫಸಲು ಸಂಗ್ರಹಿಸಲು ಅನುಕೂಲವಾಗುತ್ತದೆ. ಸಾಗಣೆ ವೆಚ್ಚ ಉಳಿಯುತ್ತದೆ. ಮಹಿಳೆಯರು, ಸ್ವಸಹಾಯ ಸಂಘಗಳು ಧಾನ್ಯಲಕ್ಷ್ಮಿ ಎಂಬ ಹೆಗ್ಗಳಿಕೆಯನ್ನು ಮರಳಿ ಪಡೆಯಲಿದ್ದಾರೆ.

8. ಸ್ವಸಹಾಯ ಸಂಘಗಳ ವಿಸ್ತರಣೆ

ಬಡತನ ನಿರ್ಮೂಲನೆಗಾಗಿ ಇರುವ ದೀನ್ ದಯಾಳ್ ಅಂತ್ಯೋದಯ ಯೋಜನೆಯಡಿ ೫೮ ಲಕ್ಷ ಸ್ವಸಹಾಯ ಗುಂಪುಗಳನ್ನು ಒಗ್ಗೂಡಿಸಲಾಗಿದೆ. ಆ ಸಂಘಗಳನ್ನು ಮತ್ತಷ್ಟು ವಿಸ್ತರಿಸಲಾಗುತ್ತದೆ ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.

9. ರೈತರ ಉತ್ಪನ್ನ ಸಾಗಣೆಗೆ ‘ಕೃಷಿ ಉಡಾನ್’ ವಿಮಾನ

ರೈತರು ಬೆಳೆದ ಉತ್ಪನ್ನಗಳನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ತಾಣಗಳಿಗೆ ಒಯ್ಯಲು ವಿಮಾನ ಸೇವೆ ಕಲ್ಪಿಸಲು ಸರ್ಕಾರ ಉದ್ದೇಶಿಸಿದೆ. ಇದಕ್ಕಾಗಿ ‘ಕೃಷಿ ಉಡಾನ್’ ಯೋಜನೆಯನ್ನು ಘೋಷಿಸಿದೆ. ನಾಗರಿಕ ವಿಮಾನಯಾನ ಸಚಿವಾಲಯ ಇದನ್ನು ಜಾರಿಗೆ ತರಲಿದೆ. ಈಶಾನ್ಯ ಹಾಗೂ ಬುಡಕಟ್ಟು ಜಿಲ್ಲೆಗಳಿಗೆ ಇದರಿಂದ ತೀವ್ರ ಅನುಕೂಲವಾಗಲಿದೆ ಎಂದು ಸರ್ಕಾರ ತಿಳಿಸಿದೆ. 500 ಕಿ.ಮೀ. ಒಳಗಿನ ಸ್ಥಳಗಳಿಗೆ ಅಗ್ಗದ ದರದಲ್ಲಿ ವಿಮಾನಯಾನ ಕಲ್ಪಿಸಲು ಸರ್ಕಾರ ಈಗಾಗಲೇ ‘ಉಡಾನ್’ ಯೋಜನೆ ಜಾರಿಗೆ ತಂದಿದೆ.

10. ಒಂದು ಉತ್ಪನ್ನ ಒಂದು ಜಿಲ್ಲೆ’ ಯೋಜನೆ

ತೋಟಗಾರಿಕಾ ವಲಯದ ಹಾಲಿ ಉತ್ಪಾದನೆ ಪ್ರಮಾಣ 311 ದಶಲಕ್ಷ ಮೆಟ್ರಿಕ್ ಟನ್‌ನಷ್ಟಿದೆ. ಇದು ಆಹಾರ ಧಾನ್ಯಗಳ ಉತ್ಪಾದನೆ ಪ್ರಮಾಣವನ್ನು ಮೀರಿಸಿದೆ. ಉತ್ತಮ ಮಾರುಕಟ್ಟೆ ಹಾಗೂ ರಫ್ತಿಗಾಗಿ ‘ಒಂದು ಉತ್ಪನ್ನ ಒಂದು ಜಿಲ್ಲೆ’ಗೆ ಆದ್ಯತೆ ನೀಡುವ ರಾಜ್ಯಗಳಿಗೆ ಬೆಂಬಲ ನೀಡಲಾಗುತ್ತದೆ ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.

11. ಮಳೆ ಇಲ್ಲವಾ? ಜೇನು ಸಾಕಿ, ವಿದ್ಯುತ್ ಉತ್ಪಾದಿಸಿ

ಮಳೆಯಾಶ್ರಿತ ಪ್ರದೇಶಗಳಲ್ಲಿ ಸಮಗ್ರ ಕೃಷಿ ವ್ಯವಸ್ಥೆಯನ್ನು ವಿಸ್ತರಿಸಲಾಗುತ್ತದೆ. ಬಹುವಿಧದ ಬೆಳೆ ಪದ್ಧತಿ, ಜೇನು ಸಾಕಣೆ, ಸೌರ ಪಂಪ್ ಅಳವಡಿಕೆ, ಸೌರಶಕ್ತಿ ಉತ್ಪಾದನೆಯನ್ನು ಇದಕ್ಕೆ ಸೇರಿಸಲಾಗುತ್ತದೆ. 2019 ರ ಬಜೆಟ್‌ನಲ್ಲಿ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಅದನ್ನೂ ಸೇರ್ಪಡೆ ಮಾಡಲಾಗುತ್ತದೆ. ಆನ್‌ಲೈನ್ ಮೂಲಕ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಇರುವ ‘ಜೈವಿಕ್ ಖೇತಿ’ ವೆಬ್‌ಸೈಟ್‌ಗೆ ಶಕ್ತಿ ತುಂಬಲಾಗುತ್ತದೆ ಎಂದು ಆಯವ್ಯಯದಲ್ಲಿ ವಿವರಿಸಲಾಗಿದೆ.

12. ಇ-ನ್ಯಾಮ್ ಜತೆ ಇ-ಎನ್ ಡಬ್ಲ್ಯುಆರ್ ವಿಲೀನ

ಉಗ್ರಾಣದಲ್ಲಿರುವ ಸರಕಿನ ಮಾಲೀಕತ್ವವನ್ನು ನೇರವಾಗಿ ಮಾರಾಟ ಮಾಡುವುದಕ್ಕೆ ಸಂಬಂಧಿಸಿದ ನೆಗೋಷಿಯಬಲ್ ವೇರ್‌ಹೌಸಿಂಗ್ ರಿಸೀಪ್ಟ್ಸ್ (ಇ-ಎನ್‌ಡಬ್ಲ್ಯುಆರ್) ವ್ಯವಹಾರ 600 ಕೋಟಿ ರು. ದಾಟಿದೆ. ಹೀಗಾಗಿ ಇದನ್ನು ಇ-ನ್ಯಾಮ್ ಜತೆ ಜೋಡಿಸಲಾಗುತ್ತದೆ ಎಂದು ನಿರ್ಮಲಾ ವಿವರಿಸಿದ್ದಾರೆ.

13. 15 ಲಕ್ಷ ಕೋಟಿ ರು. ಸಾಲ ವಿತರಣೆ

2020-21 ನೇ ಸಾಲಿನಲ್ಲಿ 15 ಲಕ್ಷ ಕೋಟಿ ರು. ಕೃಷಿ ಸಾಲ ವಿತರಣೆಗೆ ಮಾಡಲಾಗುತ್ತದೆ. ಪಿಎಂ ಕಿಸಾನ್ ಯೋಜನೆಯ ಎಲ್ಲ ಫಲಾನು ಭವಿಗಳನ್ನೂ ಕಿಸಾನ್ ಕ್ರೆಡಿಟ್ ಕಾರ್ಡ್ ವ್ಯಾಪ್ತಿಗೆ ತರಲಾಗುತ್ತದೆ. ಕೃಷಿ ಸಾಲ ವಿತರಣೆ ವಲಯದಲ್ಲಿ ಬ್ಯಾಂಕೇತರ ಹಣಕಾಸು ಕಂಪನಿ ಹಾಗೂ ಸಹಕಾರ ಸಂಸ್ಥೆ ಸಕ್ರಿಯ ವಾಗಿವೆ. ನಬಾರ್ಡ್ ಮರು ಹಣಕಾಸು ಯೋಜನೆ ಮತ್ತಷ್ಟು ವಿಸ್ತರಿಸಲಾಗುತ್ತದೆ.

14. ಹಾಲು ಸಂಸ್ಕರಣೆ 5 ವರ್ಷದಲ್ಲಿ ಡಬಲ್

ರೈತರ ಆದಾಯವನ್ನು ಡಬಲ್ ಮಾಡುವ ಗುರಿಯನ್ನು ಈಗಾಗಲೇ ಹಾಕಿಕೊಂಡಿರುವ ಕೇಂದ್ರ ಸರ್ಕಾರ ಇದೀಗ ದೇಶದಲ್ಲಿ ಸಂಸ್ಕರಣೆ ಯಾಗುವ ಹಾಲಿನ ಪ್ರಮಾಣವನ್ನು ಮುಂದಿನ 5 ವರ್ಷಗಳಲ್ಲಿ ದ್ವಿಗುಣಗೊಳಿಸುವ ಮಹತ್ವಾಕಾಂಕ್ಷಿ ಉದ್ದೇಶ ಹೊಂದಿದೆ. ಸದ್ಯ ದೇಶದ 53.5 ದಶಲಕ್ಷ ಮೆಟ್ರಿಕ್ ಟನ್ ಹಾಲು ಸಂಸ್ಕರಣಾ ಸಾಮರ್ಥ್ಯ ಹೊಂದಿದೆ. 2025 ರೊಳಗೆ ಇದನ್ನು 108 ಮೆಟ್ರಿಕ್ ಟನ್‌ಗೆ ಏರಿಸುವ ಗುರಿ ಹೊಂದಿರುವುದಾಗಿ ಬಜೆಟ್‌ನಲ್ಲಿ ತಿಳಿಸಲಾಗಿದೆ. ಇದೇ ವೇಳೆ ರಾಸುಗಳನ್ನು ಬಾಧಿಸುವ ಕಾಲು-ಬಾಯಿ ರೋಗ, ಬ್ರೂಸೆಲ್ಲೋಸಿಸ್, ಕುರಿ- ಮೇಕೆಗಳನ್ನು ಕಾಡುವ ‘ಪಿಪಿ ಆರ್’ ಕಾಯಿಲೆಯನ್ನೂ 2025 ರೊಳಗೆ ನಿರ್ಮೂಲನೆ ಮಾಡುವ ಉದ್ದೇಶ ಹೊಂದಲಾಗಿದೆ. ಕೃತಕ ಗರ್ಭಧಾರಣೆ ಪ್ರಮಾಣವನ್ನು ಈಗಿರುವ ಶೇ.30 ರಿಂದ ಶೇ.70ಕ್ಕೆ ಹೆಚ್ಚಳಗೊಳಿಸಲಾಗುತ್ತದೆ. ಮೇವು ಫಾರ್ಮ್‌ಗಳನ್ನು ಅಭಿವೃದ್ಧಿಪಡಿಸಲು ಉದ್ಯೋಗಖಾತ್ರಿ ಯನ್ನು ಬಳಸಿಕೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.

15. 20 ಲಕ್ಷ ರೈತರಿಗೆ ಸೋಲಾರ್ ಪಂಪ್‌ಸೆಟ್ 

ವಿದ್ಯುತ್ ಅವಲಂಬಿತ ಪಂಪ್‌ಸೆಟ್ ಬಳುತ್ತಿರುವ ರೈತರನ್ನು ಸೌರಶಕ್ತಿಯೆಡೆಗೆ ಆಕರ್ಷಿಸುವ ಸಲುವಾಗಿ ಕೇಂದ್ರ ಸರ್ಕಾರ ‘ಪ್ರಧಾನಮಂತ್ರಿ ಕಿಸಾನ್ ಊರ್ಜ ಸುರಕ್ಷಾ ಉತ್ಥಾನ ಮಹಾಭಿಯಾನ’ (ಪಿಎಂ- ಕುಸುಮ್) ಎಂಬ ಯೋಜನೆ ಜಾರಿಗೊಳಿಸಿದೆ. ಈ ಕಾರ್ಯಕ್ರಮವನ್ನು ಬಜೆಟ್‌ನಲ್ಲಿ 20 ಲಕ್ಷ ರೈತರಿಗೆ ವಿಸ್ತರಿಸಲಾಗಿದೆ. ಸೌರ ಪಂಪ್‌ಸೆಟ್‌ಗಳನ್ನು ತೆರೆಯಲು ಸರ್ಕಾರ ನೆರವು ಒದಗಿಸಲಿದೆ. ಇದೇ ವೇಳೆ, ವಿದ್ಯುತ್ ಪಂಪ್ ಗಳನ್ನು ಹೊಂದಿರುವ 15 ಲಕ್ಷ ರೈತರಿಗೆ ಅವನ್ನು ಸೋಲಾರ್ ಆಗಿ ಪರಿವರ್ತಿಸಿ, ವಿದ್ಯುತ್ ಕಂಪನಿಗಳ ಜತೆ ಜೋಡಣೆ ಮಾಡಲು ಅನುದಾನ ನೀಡಲಾಗುತ್ತದೆ. ಪಾಳು ಜಾಗದಲ್ಲಿ ಸೌರ ವಿದ್ಯುತ್ ಉತ್ಪಾದಿಸಿ ವಿದ್ಯುತ್ ಕಂಪನಿಗಳಿಗೆ ಮಾರಾಟ ಮಾಡಲು ಯೋಜನೆಯನ್ನೂ ಜಾರಿಗೆ ತರಲಾಗುತ್ತದೆ ಎಂದು ನಿರ್ಮಲಾ ತಿಳಿಸಿದ್ದಾರೆ. 2019 ರ ಜುಲೈನಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ಅನ್ನದಾತ ಕೂಡ ಊರ್ಜದಾತ ಆಗಬಹುದು (ವಿದ್ಯುತ್ ಉತ್ಪತ್ತಿದಾರ) ಎಂದು ನಾನು ಹೇಳಿದ್ದೆ. ಅದರಂತೆ ಪಿಎಂ- ಕುಸುಮ್ ಯೋಜನೆಯಡಿ ರೈತರು ಪಂಪ್‌ಸೆಟ್ ಚಾಲನೆಗಾಗಿ ಡೀಸೆಲ್ ಹಾಗೂ ಸೀಮೆಎಣ್ಣೆ ಮೇಲೆ ಅವಲಂಬನೆಯಾಗುವುದನ್ನು ತಪ್ಪಿಸಲಾಗಿದೆ. ಅವರನ್ನು ಸೌರ ಶಕ್ತಿಯ ವ್ಯಾಪ್ತಿಗೆ ತರಲಾಗಿದೆ ಎಂದು ನಿರ್ಮಲಾ ತಿಳಿಸಿದ್ದಾರೆ.

16. 2 ವರ್ಷದಲ್ಲಿ 200 ಲಕ್ಷ ಟನ್ ಮೀನು ಉತ್ಪಾದನೆ

ಮೀನು ಸಂಸ್ಕರಣೆ ಹಾಗೂ ಮಾರುಕಟ್ಟೆಯಿಂದ ಕರಾವಳಿ ಪ್ರದೇಶಗಳ ಯುವಕರಿಗೆ ಅನುಕೂಲವಾಗುತ್ತದೆ. ಹೀಗಾಗಿ 2022-23 ರೊಳಗೆ ಮೀನು ಉತ್ಪಾದನೆಯನ್ನು 200 ಲಕ್ಷ ಟನ್‌ಗೆ ಹೆಚ್ಚಿಸಲಾಗುತ್ತದೆ. ಆಲ್ಗೆ, ಸಮುದ್ರ ಕಳೆ ಹಾಗೂ ‘ಕೇಜ್ ಕಲ್ಚರ್’ (ಬಲೆಯೊಳಗೆ ಮೀನುಗಾರಿಕೆ) ಅನ್ನು ಕೂಡ ಪ್ರೋತ್ಸಾಹಿಸಲಾಗುತ್ತದೆ ಎಂದು ನಿರ್ಮಲಾ ಅವರು ವಿವರಿಸಿದ್ದಾರೆ. 3477 ಸಾಗರಮಿತ್ರ ಹಾಗೂ 500 ಮೀನು ಕೃಷಿ ಉತ್ಪಾದಕ ಸಂಘಟನೆಗಳ ಮೂಲಕ ಮೀನುಗಾರಿಕೆಯನ್ನು ವಿಸ್ತರಿಸಲು ಸರ್ಕಾರ ಯುವಕರನ್ನು ತೊಡಗಿಸಿಕೊಳ್ಳಲಿದೆ. ಮೀನುಗಾರಿಕೆ ರಫ್ತು ಪ್ರಮಾಣವನ್ನು 2024-25 ರೊಳಗೆ 1 ಲಕ್ಷ ಕೋಟಿ ರು.ಗೆ ಹೆಚ್ಚಿಸುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
 

Follow Us:
Download App:
  • android
  • ios