ಹಾಸನ ಸೆಕ್ಸ್ ವಿಡಿಯೋಗಳ ಬಗ್ಗೆ ತನಿಖೆಗೆ ಮಹಿಳಾ ಆಯೋಗ ಪತ್ರ
ಮಹಿಳೆಯರ ಮಾನಹಾನಿ ಉಂಟು ಮಾಡಿರುವವರನ್ನು ಶೀಘ್ರವಾಗಿ ಪತ್ತೆ ಹಚ್ಚಲು ವಿಶೇಷ ತನಿಖಾ ತಂಡವನ್ನು ರಚಿಸಬೇಕು. ಮಹಿಳೆಯರ ಮೇಲೆ ನೀಚ ಕೃತ್ಯವೆಸಗಿ ವಿಡಿಯೋ ಚಿತ್ರೀಕರಿಸಿರುವವರು ಹಾಗೂ ಅದನ್ನು ಸಾರ್ವಜನಿಕಗೊಳಿಸಿರುವವರು ಇಬ್ಬರ ಮೇಲೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ
ಬೆಂಗಳೂರು(ಏ.25): ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಲೈಂಗಿಕ ಹಿಂಸೆಯ ವಿಡಿಯೋಗಳ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಮಹಿಳೆಯರ ಮಾನಹಾನಿ ಉಂಟು ಮಾಡಿರುವವರನ್ನು ಶೀಘ್ರವಾಗಿ ಪತ್ತೆ ಹಚ್ಚಲು ವಿಶೇಷ ತನಿಖಾ ತಂಡವನ್ನು ರಚಿಸಬೇಕು. ಮಹಿಳೆಯರ ಮೇಲೆ ನೀಚ ಕೃತ್ಯವೆಸಗಿ ವಿಡಿಯೋ ಚಿತ್ರೀಕರಿಸಿರುವವರು ಹಾಗೂ ಅದನ್ನು ಸಾರ್ವಜನಿಕಗೊಳಿಸಿರುವವರು ಇಬ್ಬರ ಮೇಲೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಲೋಕಸಭಾ ಚುನಾವಣೆ 2024: ಹಾಸನ ಅಭ್ಯರ್ಥಿ ರಾಸಲೀಲೆ ಪೆನ್‌ಡ್ರೈವ್ ಸದ್ದು..!
ಈ ಕುರಿತು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಮಹಿಳಾ ಆಯೋಗಕ್ಕೆ ದೂರು ನೀಡಿದ್ದು, ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಮಹಿಳೆಯರ ಮೇಲೆ ನಡೆಸಲಾದ ಲೈಂಗಿಕ ಹಿಂಸೆಯ ಪೆನ್ ಡ್ರೈವ್‌ಗಳ ಕುರಿತು ತಿಳಿಸಿರುತ್ತಾರೆ. ಪ್ರಭಾವಿ ರಾಜಕಾರಣಿಗಳು ಅನೇಕ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿರುವ, ಕೆಲವರ ಮೇಲೆ ಅತ್ಯಾಚಾರ ಸಹ ಮಾಡುತ್ತಿರುವ ತುಣುಕುಗಳಿರುವ ಪೆನ್‌ಡ್ರೈವ್‌ಗಳು ಜನ ಸಾಮಾನ್ಯರ ಕೈಗೆ ಸಿಕ್ಕಿವೆ. ಇದರಿಂದ ಇಡೀ ಸಮಾಜ ತಲೆ ತಗ್ಗಿಸುವ ಸ್ಥಿತಿ ಏರ್ಪಟ್ಟಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ. ಮಹಿಳೆಯರ ಬದುಕು ಹಾಗೂ ಘನತೆಯನ್ನು ನಾಶ ಮಾಡುವಂತಹ ಈ ಕೃತ್ಯಕ್ಕೆ ಕಾರಣವಾಗಿರು ವವರ ವಿರುದ್ಧ ಸೂಕ್ತ ಪೊಲೀಸ್ ತನಿಖೆ ನಡೆಸಬೇಕು ಎಂದು ಕೋರಿದ್ದಾರೆ.
ಜತೆಗೆ ಹಾಸನದಲ್ಲಿ ಪೆನ್‌ಡ್ರೈವ್ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಹಲವು ಪತ್ರಿಕಾ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಹಲವು ಮಹಿಳೆಯರನ್ನು ಬಲವಂತದಿಂದ ಲೈಂಗಿಕ ಕ್ರಿಯೆಗೆ ಒತ್ತಾಯ ಪಡಿಸುವುದಲ್ಲದೇ ಅದನ್ನು ಚಿತ್ರೀಕರಿಸಲಾ ಗಿದೆ. ಹೀಗಾಗಿ ಮಹಿಳೆಯರ ಮಾನಹಾನಿ ಉಂಟು ಮಾಡಿರುವವರನ್ನು ಶೀಘ್ರ ಪತ್ತೆ ಹಚ್ಚಲು ವಿಶೇಷ ತನಿಖಾ ತಂಡವನ್ನು ರಚಿಸ ಬೇಕು ಮತ್ತು ಮಹಿಳೆಯರ ಮೇಲೆ ನೀಚ ಕೃತ್ಯವೆಸಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಾಗಲಕ್ಷ್ಮೀ ಸಿಎಂ, ಪೊಲೀಸ್ ಮಹಾ ನಿರ್ದೇಶಕರಿಗೆ ಬರೆದಿರುವ ಪತ್ರದಲ್ಲಿ ಕೋರಿದ್ದಾರೆ.