ಕೋತಿಗಳನ್ನು ಕಾಡಿದ ಬೇಸಿಗೆಯ ನೀರಿನ ದಾಹ : ಕಿಟಕಿಯಿಂದ ಮನೆಗೆ ನುಗ್ಗಿ ನೀರು ಕುಡಿದ ಮಂಗ
ಗಾರ್ಡನ್ ಸಿಟಿ ಬೆಂಗಳೂರು ಕೂಡ ಈ ಬಾರಿಯ ಬಿಸಿಲಿಗೆ ಇನ್ನಿಲ್ಲದಂತೆ ಕಂಗೆಟ್ಟಿದ್ದು, ನಗರದ ಅನೇಕ ಕಡೆಗಳಲ್ಲಿ ನೀರಿಗೆ ಹಾಹಾಕಾರದ ಸ್ಥಿತಿ ಇದೆ. ಹೀಗಿರುವಾಗ ಪ್ರಾಣಿಗಳ ಕತೆಯಂತೂ ಹೇಳುವುದೇ ಬೇಡ. ನೀರಿಗಾಗಿ ಅವುಗಳು ಮನೆಗಳತ್ತ ದಾಂಗುಡಿ ಇಡುತ್ತಿವೆ.
ಬೆಂಗಳೂರು: ಈ ಬಾರಿಯ ಬೇಸಿಗೆಯ ಧಗೆಯ ಜೊತೆ ನೀರಿನ ಅಭಾವ ಎಲ್ಲರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಮನುಷ್ಯರು ಮಾತ್ರವಲ್ಲದೇ ಪ್ರಾಣಿಗಳು ಕೂಡ ಬಿಸಿಲಿನ ಪ್ರತಾಪಕ್ಕೆ ಬಳಲಿ ಬೆಂಡಾಗುತ್ತಿದ್ದು, ನೀರನ್ನು ಅರಸಿ ಎಲ್ಲಿ ಇಲ್ಲಿ ಅಲೆದು ಹೈರಾಣಾಗುತ್ತಿವೆ. ಗಾರ್ಡನ್ ಸಿಟಿ ಬೆಂಗಳೂರು ಕೂಡ ಈ ಬಾರಿಯ ಬಿಸಿಲಿಗೆ ಇನ್ನಿಲ್ಲದಂತೆ ಕಂಗೆಟ್ಟಿದ್ದು, ನಗರದ ಅನೇಕ ಕಡೆಗಳಲ್ಲಿ ನೀರಿಗೆ ಹಾಹಾಕಾರದ ಸ್ಥಿತಿ ಇದೆ. ಹೀಗಿರುವಾಗ ಪ್ರಾಣಿಗಳ ಕತೆಯಂತೂ ಹೇಳುವುದೇ ಬೇಡ. ನೀರಿಗಾಗಿ ಅವುಗಳು ಮನೆಗಳತ್ತ ದಾಂಗುಡಿ ಇಡುತ್ತಿವೆ. ಅದೇ ರೀತಿ ಈಗ ಬೆಂಗಳೂರಿನಲ್ಲಿ ಕೋತಿಯೊಂದು ನೀರನ್ನು ಅರಸುತ್ತಾ ಮನೆಯ ಅಡುಗೆ ಮನೆಗೆ ನುಗ್ಗಿದೆ. ಬಳಿಕ ಅಲ್ಲಿದ್ದ ವಾಟರ್ ಪೂರಿಫೈಯರ್(ನೀರಿನ ಶುದ್ಧಿಕರಣ ಯಂತ್ರ) ದಿಂದ ನೀರು ಕುಡಿಯಲು ಪ್ರಯತ್ನಿಸುತ್ತಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ನೀರಿನ ಅಭಾವ ಬೆಂಗಳೂರಿನಲ್ಲಿ ಯಾವ ರೀತಿ ಬಾಧಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಈ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಬೆಂಗಳೂರಿನ ಅಕ್ಷತ್ ತಕ್ ಎಂಬುವವರು ಪೋಸ್ಟ್ ಮಾಡಿದ್ದು, ಕೋತಿಗಳು ಕೂಡ ಬಾಯಾರಿಕೆಯಿಂದ ಬಳಲಿವೆ. ನೀರಿನ ಹುಡುಕಾಟಕ್ಕಿಳಿದಿರುವ ಅವುಗಳು ಮನೆಯ ಕಿಟಕಿಗಳ ಮೂಲಕ ಮನೆಯೊಳಗೆ ನುಗ್ಗಿ ನೀರು ಕುಡಿಯಲು ನೋಡುತ್ತಿವೆ. ಮನುಷ್ಯರಿಗಿಂತ ಹೆಚ್ಚಾಗಿ ಈ ಬಾರಿ ನೀರಿನ ಅಭಾವ ಪ್ರಾಣಿಗಳನ್ನು ಇನ್ನಿಲ್ಲದಂತೆ ಕಾಡುತ್ತಿವೆ. ಅವುಗಳಿಗಾಗಿಯಾದರು ನೀರನ್ನು ಉಳಿಸೋಣ ಎಂದು ಬರೆದುಕೊಂಡಿದ್ದಾರೆ. 42 ಸೆಕೆಂಡ್‌ಗಳ ವೀಡಿಯೋದಲ್ಲಿ ಕಾಣಿಸುವಂತೆ ಅಡುಗೆ ಮನೆಗೆ ನುಗ್ಗಿದ ಕೋತಿಯೊಂದು ಅಲ್ಲಿದ್ದ ವಾಟರ್ ಪ್ಯೂರಿಫೈಯರ್‌ಗೆ ಬಾಯಿ ಇಟ್ಟು ನೀರು ಕುಡಿಯಲು ಯತ್ನಿಸುವುದನ್ನು ನೋಡಬಹುದಾಗಿದೆ. ಒಂದು ಕೋತಿ ಅಡುಗೆ ಮನೆಯೊಳಗೆ ಎಂಟ್ರಿಕೊಟ್ಟಿದ್ದರೆ, ಮತ್ತೊಂದು ಕೋತಿ ಅಡುಗೆ ಮನೆಯ ಕಿಟಿಕಿಯಲ್ಲಿ ಕುಳಿತಿದೆ.
ನಂದಿಬೆಟ್ಟದಲ್ಲಿ ಕೋತಿಗಳ ದರ್ಬಾರ್: ಪ್ರವಾಸಿಗರಿಗೆ ಸಮಸ್ಯೆ!
ಬೆಂಗಳೂರಿನಲ್ಲಿ ಈ ವರ್ಷದ ಬೇಸಿಗೆಯಲ್ಲಿ ದಿನಕ್ಕೆ 500 ಮಿಲಿಯನ್ ಲೀಟರ್ ನೀರಿನ ಕೊರತೆ ಎದುರಿಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಹೇಳಿದ್ದರು. ಬೆಂಗಳೂರು ನಗರಕ್ಕೆ ಪ್ರತಿದಿನವೂ 2,600 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಹಲವು ಪ್ರದೇಶಗಳಲ್ಲಿ ನೀರಿನ ಕೊರತೆ ಬಹಳ ದಟ್ಟವಾಗಿದ್ದು, ಜನ ನೀರಿಗಾಗಿ ಪರದಾಡುತ್ತಿದ್ದಾರೆ. ಕೆಲವರು ಬೇರೆಡೆಯಿಂದ ನೀರನ್ನು ಹಣಕ್ಕೆ ಟ್ಯಾಂಕರ್‌ಗಳ ಮೂಲಕ ಖರೀದಿ ಮಾಡುತ್ತಿದ್ದಾರೆ. ಈ ಮಧ್ಯೆ ಈ ಕೋತಿಯ ಈ ವೀಡಿಯೋ ಪ್ರಾಣಿಗಳು ಕೂಡ ನೀರಿನ ದಾಹದಿಂದ ಹೇಗೆ ಬೇಸತ್ತಿವೆ ಎಂಬುದನ್ನು ತೋರಿಸುತ್ತಿದೆ.
ವಾಟರ್ ಪ್ಯೂರಿಫೈರ್‌ನಿಂದ ಕೋತಿ ನೀರು ಕುಡಿಯುತ್ತಿರುವ ವೀಡಿಯೋ ಇಲ್ಲಿದೆ ನೋಡಿ
ಸರೋವರಗಳ ಊರಾಗಿದ್ದ ಬೆಂಗಳೂರಲ್ಲಿ 2025ರಲ್ಲಿ ನೀರೇ ಇರೋಲ್ವಾ!?