ಈ ಬಾರಿಯ ಹಬ್ಬಕ್ಕೆ ಎಲೆಕ್ಟ್ರಾನಿಕ್ಸ್, ಗೃಹಪಯೋಗಿ ವಸ್ತುಗಳನ್ನು ಖರೀದಿಸಲು ಪ್ಲಾನ್ ಮಾಡಿದ್ದೀರಾ? ಆಫರ್ , ಡಿಸ್ಕೌಂಟ್ ಸೇರಿದಂತೆ ಹಲವು ಪ್ರಯೋಜನಗಳಿಗೆ ಕಾದು ಕುಳಿತಿದ್ದರೆ ಮಹತ್ವದ ಅಪ್‌ಡೇಟ್ ಬಹಿರಂಗವಾಗಿದೆ.

ನವದೆಹಲಿ (ಸೆ.27) ಸಾಲು ಸಾಲುಗಳು ಹಬ್ಬ ಆಗಮಿಸುತ್ತಿದೆ. ಭಾರತದಲ್ಲಿ ದೀಪಾವಳಿ, ನವರಾತ್ರಿ ಹಬ್ಬಗಳಲ್ಲಿ ಎಲೆಕ್ಟ್ರಾನಿಕ್ಸ್ ವಸ್ತುಗಳು, ಗೃಹಪಯೋಗಿ ವಸ್ತುಗಳು, ಕಾರು, ಬೈಕ್ ಸೇರಿದಂತೆ ಖರೀದಿಗಳಲ್ಲಿ ಭರ್ಜರಿ ಡಿಸ್ಕೌಂಟ್, ಆಫರ್ ಸಾಮಾನ್ಯವಾಗಿದೆ. ಆದರೆ ಈ ಬಾರಿ ಗೃಹಪಯೋಗಿ ವಸ್ತುಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳು ದುಬಾರಿಯಾಗುತ್ತಿದೆ. ಉತ್ಪಾದನಾ ಕಂಪನಿಗಳ ವೆಚ್ಚ ಹೆಚ್ಚಳಗೊಂಡಿದ್ದು, ಆಕ್ಟೋಬರ್ ತಿಂಗಳಿನಿಂದ ಎಲೆಕ್ಟ್ರಾನಿಕ್ಸ್ ಹಾಗೂ ಗೃಹಪಯೋಗಿ ವಸ್ತುಗಳ ಬೆಲೆ ಶೇಕಡಾ 5 ರಿಂದ 8ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

ಉತ್ಪದನಾ ವೆಚ್ಚ ಹೆಚ್ಚಳ

ಎಲೆಕ್ಟ್ರಾನಿಕ್ಸ್ ಹಾಗೂ ಗೃಹಪಯೋಗಿ ವಸ್ತುಗಳ ಉತ್ಪದನಾ ಕಂಪನಿಗಳಿಗೆ ಹೊರೆಯಾಗುತ್ತಿದೆ. ಪ್ರಮುಖವಾಗಿ ಉತ್ಪದನಾ ವೆಚ್ಚ ಏರಿಕೆಯಾಗಿದೆ. ಕಚ್ಚಾ ವಸ್ತುಗಳ ಬೆಲೆ, ಸಾರಿಗೆ, ವಿದೇಶಿ ವಿನಿಮಯ ಕೊರತೆ, ಹಲವು ದೇಶಗಳಲ್ಲಿನ ಯುದ್ದ ಸಂದರ್ಭ, ಪೂರೈಕೆ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ಎಲೆಕ್ಟ್ರಾನಿಕ್ಸ್ ಹಾಗೂ ಗೃಹಪಯೋಗಿ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಕಂಪನಿಗಳ ಉತ್ಪಾದನಾ ವೆಚ್ಚದ ಹೊರೆಯನ್ನು ಸರಿದೂಗಿಸಲು ಇದೀಗ ಬೆಲೆ ಏರಿಕೆಗೆ ಮುಂದಾಗಿದೆ.

ಯಾವ ವಸ್ತುಗಳಿಗೆ ಎಷ್ಟು ಬೆಲೆ ಏರಿಕೆ?

ಉತ್ಪಾದನಾ ವೆಚ್ಚ ಹೆಚ್ಚಳದಿಂದ ಬೆಲೆ ಏರಿಕೆ ಅನಿವಾರ್ಯ ಎಂದು ಕಂಪನಿಗಳು ಹೇಳಿಕೊಂಡಿದೆ. ಆದರೆ ಕೆಲ ಎಲೆಕ್ಟ್ರಾನಿಕ್ಸ್ ವಸ್ತುಗಳ ಬೆಲೆ ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆ ಇದೆ. ಏರ್ ಕಂಡೀಷನ್ (ಎಸಿ) ಬೆಲೆ ಶೇಕಡಾ 5 ರಿಂದ 8ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ವಾಶಿಂಗ್‌ಮಶಿನ್, ರೆಫ್ರಿಜರೇಟರ್, ಎಲ್‌ಇಡಿ ಟೆಲಿವಿಶನ್ ಬೆಲೆ ಶೇಕಡಾ 3 ರಿಂದ 4ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ತಾಮ್ರ, ಸ್ಟೀಲ್, ಆಲ್ಯುಮಿನಿಯಂ ಸೇರಿದಂತೆ ಹಲವು ಆಮದು ವಸ್ತುಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಇನ್ನು ಗೃಹಪಯೋಗಿ ವಸ್ತುಗಳ ಬೆಲೆಯಲ್ಲೂ ಭಾರಿ ಏರಿಕೆ ಸಾಧ್ಯತೆ ಇದೆ. ಶೇಕಡಾ 4 ರಿಂದ 10 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಹಲವು ಬ್ರ್ಯಾಂಡ್‌ಗಳ ವಸ್ತುಗಳ ಬೆಲೆ ಅಕ್ಟೋಬರ್ 1 ರಿಂದ ಏರಿಕೆಯಾಗುತ್ತಿದೆ. ಕೆಲ ಬ್ರ್ಯಾಂಡ್ ಉತ್ಪನ್ನಗಳ ಬೆಲೆ ಹಂತ ಹಂತವಾಗಿ ಏರಿಕೆಯಾಗಲಿದೆ.