BCCI hits Rs 1700000000 jackpot: ಬಿಸಿಸಿಐ ಮುಂದಿನ ಎರಡು ವರ್ಷಗಳ ಕಾಲ ಭಾರತೀಯ ಕ್ರಿಕೆಟ್‌ನ ಟೈಟಲ್ ಸ್ಪಾನ್ಸರ್ ಆಗಿ ಮುತ್ತೂಟ್ ಫಿನ್‌ಕಾರ್ಪ್‌ ಅನ್ನು ಆಯ್ಕೆ ಮಾಡಿದೆ. ಈ ಒಪ್ಪಂದವು ಭಾರತದಲ್ಲಿ ನಡೆಯುವ ಎಲ್ಲಾ ಅಂತಾರಾಷ್ಟ್ರೀಯ ಹಾಗೂ ಪ್ರಮುಖ ದೇಶೀಯ ಟೂರ್ನಿಗಳಿಗೆ ಅನ್ವಯವಾಗಲಿದೆ. ಹೆಚ್ಚಿನ ಮಾಹಿತಿಗೆ ಪೂರ್ಣ ಓದಿ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮುಂದಿನ ಎರಡು ವರ್ಷಗಳ ಕಾಲ ಭಾರತೀಯ ಕ್ರಿಕೆಟ್‌ನ ಟೈಟಲ್ ಸ್ಪಾನ್ಸರ್ ಆಗಿ ಮುತ್ತೂಟ್ ಫಿನ್‌ಕಾರ್ಪ್‌ (Muthoot FinCorp) ಅನ್ನು ಆಯ್ಕೆ ಮಾಡಿದೆ. ಈ ಒಪ್ಪಂದವು 2027-28ರ ಕ್ರಿಕೆಟ್ ಸೀಸನ್‌ವರೆಗೆ ಜಾರಿಯಲ್ಲಿರಲಿದ್ದ, ಭಾರತದಲ್ಲಿ ನಡೆಯುವ ಎಲ್ಲ ಅಂತಾರಾಷ್ಟ್ರೀಯ ಪಂದ್ಯಗಳ ಜೊತೆಗೆ ಹಲವು ಪ್ರಮುಖ ದೇಶೀಯ ಟೂರ್ನಿಗಳಿಗೂ ಇದು ಅನ್ವಯವಾಗಲಿದೆ.

ಇಂದು(ಸೆಪ್ಟೆಂಬರ್ 27) ಭಾರತದ ತಿರುವನಂತಪುರದಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧ ಭಾರತದ ಮೊದಲ ಅಂತಾರಾಷ್ಟ್ರೀಯ ಪಂದ್ಯಕ್ಕೂ ಮುನ್ನ ಈ ಘೋಷಣೆ ಮಾಡಲಾಗಿದೆ.

ಮುತ್ತೂಟ್ ಫಿನ್‌ಕಾರ್ಪ್ ಎಷ್ಟು ಕಾಲ ಟೈಟಲ್ ಸ್ಪಾನ್ಸರ್ ಆಗಿರಲಿದೆ?

ಮುತ್ತೂಟ್ ಫಿನ್‌ಕಾರ್ಪ್ 2027-28ರ ಸೀಸನ್‌ನವರೆಗೆ ಭಾರತೀಯ ಕ್ರಿಕೆಟ್‌ನ ಟೈಟಲ್ ಸ್ಪಾನ್ಸರ್ ಆಗಿರಲಿದೆ. ಈ ಒಪ್ಪಂದವು ಭಾರತದ ಹಲವು ಕ್ರಿಕೆಟ್ ತಂಡಗಳು ಮತ್ತು ಪ್ರಮುಖ ಟೂರ್ನಿಗಳನ್ನು ಒಳಗೊಂಡಿರಲಿದೆ. ಭಾರತದ ಪುರುಷರ ತಂಡ, ಮಹಿಳೆಯರ ಹಿರಿಯ ತಂಡಗಳು, ಭಾರತ ಎ ತಂಡ, ಅಂಡರ್-19 ತಂಡಗಳು ಹಾಗೂ ಇತರ ನಿರ್ದಿಷ್ಟ ತಂಡಗಳು ಈ ಒಪ್ಪಂದದ ವ್ಯಾಪ್ತಿಗೆ ಬರಲಿವೆ.

2026-27ರಲ್ಲಿ ಭಾರತ ಯಾವ ಸರಣಿಗಳನ್ನು ಆಡಲಿದೆ?

ಭಾರತ ತನ್ನ ತವರು ನೆಲದಲ್ಲಿ ಇಂದು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯೊಂದಿಗೆ ಆರಂಭಿಸಲಿದೆ. ಉಭಯ ತಂಡಗಳು ಮೂರು ಏಕದಿನ ಪಂದ್ಯಗಳು ಮತ್ತು ಐದು ಟಿ20 ಪಂದ್ಯಗಳನ್ನು ಆಡಲಿವೆ. ಬಳಿಕ ಶ್ರೀಲಂಕಾ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು, ಅದು ಕೂಡ ಮೂರು ಟಿ20 ಪಂದ್ಯಗಳು ಮತ್ತು ಮೂರು ಏಕದಿನ ಪಂದ್ಯಗಳು ಆಡಲಿದೆ. ಇದರೊಂದಿಗೆ ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಕೂಡ ಭಾರತದಲ್ಲೇ ನಡೆಯಲಿವೆ.

ಮಹಿಳಾ ಮತ್ತು ಕಿರಿಯರ ಕ್ರಿಕೆಟ್‌ಗೂ ಈ ಒಪ್ಪಂದ ಅನ್ವಯ?

ಹೌದು. ಈ ಒಪ್ಪಂದವು ಭಾರತೀಯ ಮಹಿಳಾ ತಂಡದ ಪಂದ್ಯಗಳು ಹಾಗೂ ಭಾರತದ ವಯೋಮಿತಿ ಆಧಾರಿತ ತಂಡಗಳ ಪಂದ್ಯಗಳಿಗೂ ಅನ್ವಯವಾಗಲಿದೆ. ಅಂದರೆ ಭಾರತ ಎ ಮತ್ತು ಅಂಡರ್-19 ತಂಡಗಳೂ ಈ ಒಪ್ಪಂದದ ಭಾಗವಾಗಿವೆ. ಭಾರತೀಯ ಕ್ರಿಕೆಟ್‌ನ ವಿವಿಧ ಹಂತಗಳಲ್ಲಿ ಮುತ್ತೂಟ್ ಫಿನ್‌ಕಾರ್ಪ್‌ ತನ್ನ ಸಹಭಾಗಿತ್ವ ಹೊಂದಿರಲಿದೆ.

ಯಾವ ದೇಶೀಯ ಟೂರ್ನಿಗಳು ಒಪ್ಪಂದದ ವ್ಯಾಪ್ತಿಗೆ ಬರುತ್ತವೆ?

ಭಾರತದ ಹಲವು ಪ್ರಮುಖ ದೇಶೀಯ ಕ್ರಿಕೆಟ್ ಟೂರ್ನಿಗಳೂ ಈ ಒಪ್ಪಂದದ ವ್ಯಾಪ್ತಿಗೆ ಬರಲಿವೆ. ಇವುಗಳಲ್ಲಿ ಮುಖ್ಯವಾಗಿ ರಣಜಿ ಟ್ರೋಫಿ, ಇರಾನಿ ಕಪ್, ದುಲೀಪ್ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ, ದೇವಧರ್ ಟ್ರೋಫಿ ಮತ್ತು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಸೇರಿವೆ. ಹೀಗಾಗಿ ಈ ಒಪ್ಪಂದವು ಅಂತಾರಾಷ್ಟ್ರೀಯ ಕ್ರಿಕೆಟ್ ಮಾತ್ರವಲ್ಲದೆ ದೇಶೀಯ ಕ್ರಿಕೆಟ್‌ಗೂ ಅನ್ವಯವಾಗಲಿದೆ.

ಮುತ್ತೂಟ್ ಫಿನ್‌ಕಾರ್ಪ್‌ ಟೈಟಲ್ ಸ್ಪಾನ್ಸರ್ ಬಗ್ಗೆ BCCI ಹೇಳಿದ್ದೇನು?

ಮುತ್ತೂಟ್ ಫಿನ್‌ಕಾರ್ಪ್‌ ದೇಶಾದ್ಯಂತ ಹೊಂದಿರುವ ನೆಟ್‌ವರ್ಕ್‌ ಹಾಗೂ ಭಾರತೀಯ ಕ್ರಿಕೆಟ್‌ನ ಜನಪ್ರಿಯತೆ ಎರಡನ್ನೂ ಈ ಒಪ್ಪಂದ ಒಂದಾಗಿಸುತ್ತದೆ ಎಂದು BCCI ಹೇಳಿದೆ. ಮುತ್ತೂಟ್ ಫಿನ್‌ಕಾರ್ಪ್‌ ಮತ್ತು ಭಾರತದ ಪುರುಷ ಹಾಗೂ ಮಹಿಳಾ ಕ್ರಿಕೆಟ್ ತಂಡಗಳು ಬಳಸುವ ನೀಲಿ ಬಣ್ಣದಲ್ಲಿರುವ ಸಾಮ್ಯತೆಯನ್ನೂ ಮಂಡಳಿ ಉಲ್ಲೇಖಿಸಿದೆ.

BCCI ಅಧ್ಯಕ್ಷ ಮಿಥುನ್ ಮನ್ಹಾಸ್ ಮಾತನಾಡಿ, ತವರು ನೆಲದಲ್ಲಿ ನಡೆಯಲಿರುವ ಭಾರತದ ಹಿರಿಯ ತಂಡಗಳು, ದೇಶೀಯ ಟೂರ್ನಿಗಳು ಮತ್ತು ವೃತ್ತಿಜೀವನದ ವಿವಿಧ ಹಂತಗಳಲ್ಲಿರುವ ಆಟಗಾರರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಿದರು. ಮುತ್ತೂಟ್ ಫಿನ್‌ಕಾರ್ಪ್‌ ಅನ್ನು BCCI ಕುಟುಂಬಕ್ಕೆ ಸ್ವಾಗತಿಸಿದ ಅವರು, ಕಂಪನಿಯೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿರುವುದಾಗಿ ತಿಳಿಸಿದರು.

ಒಪ್ಪಂದದ ಬಗ್ಗೆ ಮುತ್ತೂಟ್ ಫಿನ್‌ಕಾರ್ಪ್‌ ಹೇಳಿದ್ದೇನು?

ಮುತ್ತೂಟ್ ಫಿನ್‌ಕಾರ್ಪ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಥಾಮಸ್ ಜಾರ್ಜ್ ಮುತ್ತೂಟ್ ಮಾತನಾಡಿ, ಕ್ರಿಕೆಟ್ ಮೂಲಕ ದೇಶಾದ್ಯಂತದ ಜನರೊಂದಿಗೆ ಸಂಪರ್ಕ ಸಾಧಿಸಲು ಕಂಪನಿಗೆ ಸಾಧ್ಯವಾಗುತ್ತದೆ ಎಂದು ಹೇಳಿದರು. BCCI ಜೊತೆಗಿನ ಈ ಒಪ್ಪಂದಿದಾಗಿ ರಾಷ್ಟ್ರೀಯ ಹಾಗೂ ದೇಶೀಯ ಎರಡೂ ಹಂತಗಳಲ್ಲಿ ಭಾರತೀಯ ಕ್ರಿಕೆಟ್‌ಗೆ ಬೆಂಬಲ ನೀಡುವ ಕಂಪನಿಯ ಬದ್ಧತೆಯನ್ನು ತೋರಿಸುತ್ತದೆ ಎಂದು ಅವರು ಹೇಳಿದರು.

ಮುತ್ತೂಟ್ ಫಿನ್‌ಕಾರ್ಪ್‌ನ ಸಿಇಒ ಶಾಜಿ ವರ್ಗೀಸ್ ಮಾತನಾಡಿ ಈ ಸಹಭಾಗಿತ್ವವು ಭಾರತದ ಹಲವು ತಂಡಗಳು ಮತ್ತು ಪ್ರಮುಖ ದೇಶೀಯ ಟೂರ್ನಿಗಳನ್ನು ಒಳಗೊಂಡಿರಲಿದೆ ಎಂದು ಹೇಳಿದರು. ಭಾರತೀಯ ಆಟಗಾರರ ಕ್ರಿಕೆಟ್ ಜರ್ನಿಯ ಭಾಗವಾಗಲು ಈ ಒಪ್ಪಂದ ಒಂದು ಅವಕಾಶವಾಗಿದೆ ಎಂದು ಅವರು ತಿಳಿಸಿದರು.

ಇತರ BCCI ಅಧಿಕಾರಿಗಳು ಏನು ಹೇಳಿದರು?

BCCI ಗೌರವ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಾತನಾಡಿ, ಭಾರತದಲ್ಲಿ ನಡೆಯುತ್ತಿರುವ ಕ್ರಿಕೆಟ್ ಪಂದ್ಯಾವಳಿಗೆ ಹಿರಿಯ ತಂಡಗಳು, ಭಾರತ ಎ ತಂಡ, ವಯೋಮಿತಿ ಆಧಾರಿತ ತಂಡಗಳು ಮತ್ತು ದೇಶೀಯ ಟೂರ್ನಿಗಳನ್ನು ಒಳಗೊಂಡಿರುವ ಸಂಪೂರ್ಣ ಕ್ರಿಕೆಟ್ ವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

BCCI ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ರಣಜಿ ಟ್ರೋಫಿ, ದುಲೀಪ್ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಮತ್ತು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಂತಹ ದೇಶೀಯ ಟೂರ್ನಿಗಳ ಮಹತ್ವವನ್ನು ಒತ್ತಿ ಹೇಳಿದರು. ಈ ಟೂರ್ನಿಗಳು ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮುನ್ನಡೆಯಲು ಸಹಾಯ ಮಾಡುತ್ತವೆ ಎಂದು ಹೇಳಿದರು.

BCCI ಖಜಾಂಚಿ ಎ. ರಘುರಾಮ್ ಭಟ್ ಮಾತನಾಡಿ, ಪ್ರಮುಖ ಬ್ರ್ಯಾಂಡ್‌ಗಳು ಭಾರತೀಯ ಕ್ರಿಕೆಟ್‌ನಲ್ಲಿ ಆಸಕ್ತಿ ತೋರುತ್ತಿರುವುದು ದೇಶಾದ್ಯಂತ ಕ್ರಿಕೆಟ್ ಹೊಂದಿರುವ ವ್ಯಾಪಕ ಜನಪ್ರಿಯತೆಯನ್ನು ತೋರಿಸುತ್ತದೆ ಎಂದು ಹೇಳಿದರು.

BCCI ಜಂಟಿ ಕಾರ್ಯದರ್ಶಿ ಪ್ರಭ್‌ತೇಜ್ ಭಾಟಿಯಾ ಅವರು ಮುತ್ತೂಟ್ ಫಿನ್‌ಕಾರ್ಪ್‌ ಅನ್ನು ಸ್ವಾಗತಿಸಿ, ಈ ಸಹಭಾಗಿತ್ವವು ಭಾರತದ ವಿವಿಧ ತಂಡಗಳು, ಟೂರ್ನಿಗಳು ಮತ್ತು ವಿವಿಧ ಪ್ರದೇಶಗಳನ್ನು ಒಳಗೊಂಡಿರಲಿದೆ ಎಂದು ಹೇಳಿದರು.