ಬೆಂಗಳೂರಿನ ಇಂದಿರಾನಗರದ ಅರಾಕು ಕೆಫೆಯಲ್ಲಿ ಕ್ರೆಡ್ ಸಂಸ್ಥಾಪಕ ಕುನಾಲ್ ಶಾ ಅವರಂತಿರುವ ವ್ಯಕ್ತಿಯೊಬ್ಬರು ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿರುವ ಫೋಟೋ ವೈರಲ್ ಆಗಿದೆ. ಇದು ಬೆಂಗಳೂರಿನ ಸ್ಟಾರ್ಟ್‌ಅಪ್ ಸಂಸ್ಕೃತಿಗೆ ಮೆಚ್ಚುಗೆ ತಂದಿದೆ.

ಬೆಂಗಳೂರು (ಸೆ.25): ಸಿಲಿಕಾನ್ ಸಿಟಿ ಬೆಂಗಳೂರಿನ ಇಂದಿರಾನಗರದಲ್ಲಿರುವ ಪ್ರಸಿದ್ಧ 'ಅರಾಕು ಕೆಫೆ'ಯಲ್ಲಿ (Araku Café) ತೀರಾ ಸಾಮಾನ್ಯರಂತೆ ಮೂಲೆ ಟೇಬಲ್‌ನಲ್ಲಿ ಕುಳಿತು ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ತೀವ್ರ ವೈರಲ್ ಆಗಿದ್ದು, ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಈ ಫೋಟೋದಲ್ಲಿ ಕಂಡುಬರುವ ವ್ಯಕ್ತಿ ಪ್ರಸಿದ್ಧ 'ಕ್ರೆಡ್' (Cred) ಸಂಸ್ಥೆಯ ಸಂಸ್ಥಾಪಕ ಹಾಗೂ ವಾಟ್ಸಾಪ್‌ನ ಜಾಗತಿಕ ಸಿಇಒ (WhatsApp Global CEO) ಕುನಾಲ್ ಶಾ ಎಂದು ನೆಟ್ಟಿಗರು ಗುರುತಿಸಿದ್ದಾರೆ.

ನೆಟ್‌ವರ್ಕಿಂಗ್ ಪೋಸ್ಟ್‌ನಲ್ಲಿ ತೂರಿಬಂದ ಪ್ರಸಿದ್ಧ ಮುಖ!

ಈ ಇಡೀ ಘಟನೆಗೆ ಕಾರಣವಾಗಿದ್ದು ಎಕ್ಸ್ (ಟ್ವಿಟರ್) ಯೂಸರ್‌ ಒಬ್ಬರು ಹಂಚಿಕೊಂಡ ಒಂದು ಸಾದಾಸೀದಾ ಪೋಸ್ಟ್. ಇಂದಿರಾನಗರದ ಅರಾಕು ಕೆಫೆಯ ಫೋಟೋ ಒಂದನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದ ಸಿಮ್, "ಪ್ರಸ್ತುತ ಇಂದಿರಾನಗರದ ಅರಾಕು ಕೆಫೆಯಲ್ಲಿದ್ದೇನೆ. ಇಲ್ಲಿ ಯಾರಾದರೂ ಸ್ಟಾರ್ಟ್‌ಅಪ್ ಸಂಸ್ಥಾಪಕರು ಅಥವಾ ಗ್ರೋತ್‌ ವಿಭಾಗದವರು ಫ್ರೀ ಇದ್ದೀರಾ? ಭೇಟಿಯಾಗಲು ಸಂತೋಷವಾಗುತ್ತದೆ," ಎಂದು ಬರೆದುಕೊಂಡಿದ್ದರು.

ಸಾಮಾನ್ಯವಾಗಿ ವೃತ್ತಿಪರ ನೆಟ್‌ವರ್ಕಿಂಗ್‌ಗಾಗಿ ಹಾಕಲಾಗಿದ್ದ ಈ ಪೋಸ್ಟ್‌ನಲ್ಲಿ, ಹಿನ್ನೆಲೆಯ ಮೂಲೆಯಲ್ಲಿ ಏಕಾಂಗಿಯಾಗಿ ಕುಳಿತು ಲ್ಯಾಪ್‌ಟಾಪ್‌ನಲ್ಲಿ ಮಗ್ನರಾಗಿದ್ದ ವ್ಯಕ್ತಿಯೊಬ್ಬರು ನೆಟ್ಟಿಗರ ಕಣ್ಣಿಗೆ ಬಿದ್ದಿದ್ದಾರೆ. ಆ ವ್ಯಕ್ತಿಯ ಮುಖಚರ್ಯೆ ಹಾಗೂ ಕೆಲಸದ ಶೈಲಿ 'ಕ್ರೆಡ್' ಸಂಸ್ಥಾಪಕ ಕುನಾಲ್ ಶಾ ಅವರನ್ನೇ ಹೋಲುತ್ತಿದ್ದುದರಿಂದ, ಯೂಸರ್‌ಗಳು ಆ ಫೋಟೋವನ್ನು ಜೂಮ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡಲು ಪ್ರಾರಂಭಿಸಿದರು.

ಬೆಂಗಳೂರು ಸ್ಟಾರ್ಟ್‌ಅಪ್ ಸಂಸ್ಕೃತಿಗೆ ನೆಟ್ಟಿಗರು ಫಿದಾ

ಈ ಫೋಟೋ ವೈರಲ್ ಆಗುತ್ತಿದ್ದಂತೆ ಎಕ್ಸ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಕಮೆಂಟ್‌ಗಳು ಹಾಗೂ ಮೀಮ್‌ಗಳು ಹರಿದುಬರತೊಡಗಿವೆ. ಪ್ರಮುಖ ತಂತ್ರಜ್ಞಾನ ನಾಯಕರು ಹಾಗೂ ಉದ್ಯಮಿಗಳು ಬೆಂಗಳೂರಿನಲ್ಲಿ ಯಾವುದೇ ಹಮ್ಮು-ಬಿಮ್ಮಿಲ್ಲದೆ ಸಾರ್ವಜನಿಕ ಕೆಫೆಗಳಲ್ಲಿ ಕುಳಿತು ಕೆಲಸ ಮಾಡುವ 'ಓಪನ್ ವರ್ಕ್ ಕಲ್ಚರ್'ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಒಬ್ಬ ಯೂಸರ್‌ ತಮಾಷೆಯಾಗಿ, "ವಾಟ್ಸಾಪ್ ಸಂಸ್ಥೆಯನ್ನೇ ಬೆಂಗಳೂರಿನ ಯಾವುದೋ ಕೆಫೆಯಲ್ಲಿ ಕುಳಿತು ನಿರ್ವಹಿಸಬಹುದು ಎಂದಾದರೆ, ಕಂಪನಿಗಳು ಇನ್ಮುಂದೆ 'ವರ್ಕ್ ಫ್ರಮ್ ಆಫೀಸ್' ಅನ್ನು ಐಚ್ಛಿಕ (Optional) ಮಾಡುವುದು ಒಳಿತು!" ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬ ಯೂಸರ್‌, "ಇಂದಿರಾನಗರದ ಅರಾಕು ಕೆಫೆಗೆ ಹೋದರೆ ಸಾಕು, ಅಲ್ಲಿ ಎಷ್ಟೋ ಯುನಿಕಾರ್ನ್ ಕಂಪನಿಗಳ ಸಂಸ್ಥಾಪಕರು ಕ್ಯಾಶುಯಲ್ ಆಗಿ ಕುಳಿತು ಕೆಲಸ ಮಾಡುತ್ತಿರುವುದು ಕಾಣಿಸುತ್ತದೆ, ಇದು ನಿಜಕ್ಕೂ ಅದ್ಭುತ ವಾತಾವರಣ," ಎಂದು ಅಭಿಪ್ರಾಯಪಟ್ಟಿದ್ದಾರೆ.

ಖಾಸಗಿತನ ಹಾಗೂ ಸಮ್ಮತಿಯ ಕುರಿತು ಜೋರಾದ ಚರ್ಚೆ

ಫೋಟೋ ವೈರಲ್ ಆಗುತ್ತಿರುವ ಬೆನ್ನಲ್ಲೇ, ಕೆಲವರು ಈ ರೀತಿಯ ಘಟನೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ವ್ಯಕ್ತಿಯೊಬ್ಬರ ಗಮನಕ್ಕೆ ಬಾರದಂತೆ ಅಥವಾ ಅವರ ಅನುಮತಿಯಿಲ್ಲದೆ ಫೋಟೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಹಾಕುವುದು ವೈಯಕ್ತಿಕ ಖಾಸಗಿತನದ (Privacy) ಸ್ಪಷ್ಟ ಉಲ್ಲಂಘನೆ ಎಂದು ಹಲವರು ಸರಣಿ ಟ್ವೀಟ್ ಮಾಡಿದ್ದಾರೆ.

"ಅದರಲ್ಲೂ ಮೆಟಾ (Meta) ಅಥವಾ ವಾಟ್ಸಾಪ್‌ನಂತಹ ಬೃಹತ್ ಸಂಸ್ಥೆಯ ಪ್ರಮುಖ ಹುದ್ದೆಯಲ್ಲಿದ್ದವರ ಫೋಟೋವನ್ನು ಅವರ ಸಮ್ಮತಿಯಿಲ್ಲದೆ ಕ್ಲಿಕ್ ಮಾಡಿ ವೈರಲ್ ಮಾಡಿರುವುದೇ ದೊಡ್ಡ ವ್ಯಂಗ್ಯ," ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಪ್ರಸ್ತುತ ಆ ಫೋಟೋದಲ್ಲಿ ಇರುವುದು ನಿಜವಾಗಿಯೂ ಕುನಾಲ್ ಶಾ ಅವರೇ ಹೌದೇ ಎಂಬ ಗೊಂದಲ ಮುಂದುವರಿದಿದ್ದರೂ, ಈ ಫೋಟೋ ಮಾತ್ರ ಬೆಂಗಳೂರಿನ ವಿಶಿಷ್ಟ ಹಾಗೂ ಧಾವಂತದ ಸ್ಟಾರ್ಟ್‌ಅಪ್ ಸಂಸ್ಕೃತಿಗೆ ಹಿಡಿದ ಕನ್ನಡಿಯಾಗಿದೆ.