ಬಾಡಿಗೆ ಮನೆಯಲ್ಲಿರುವವರು ಕೂಡ ಮನೆ ಸುಂದರವಾಗಿರ್ಬೇಕು ಅಂದ್ಕೊಳ್ಳೋದು ಸಹಜ. ಹಬ್ಬದ ಟೈಮ್‌ ನಲ್ಲಿ ಮನೆಗೆ ಬಣ್ಣ ಬಳಿಯುವ ಆಸೆ ಅವರಿಗೂ ಇರುತ್ತೆ. ಹಾಗಿದ್ದಾಗ ಮನೆಗೆ ಬಣ್ಣ ಬಳಿಯಲು ಯಾರು ಹಣ ನೀಡ್ತಾರೆ ಗೊತ್ತಾ?

ದಸರಾ, ದೀಪಾವಳಿ ಹಬ್ಬಗಳು ಬರ್ತಿದ್ದಂತೆ ಮನೆ ಕ್ಲೀನಿಂಗ್‌, ಬಣ್ಣ ಬಳಿಯುವ ಕೆಲ್ಸ ಶುರುವಾಗುತ್ತೆ. ಸ್ವಂತ ಮನೆಯಲ್ಲಿರುವವರು ಮನೆಗೆ ಬಣ್ಣ ಬಳಿಯಬೇಕು ಅಂದ್ರೆ ತಾವೇ ಹಣ ಖರ್ಚು ಮಾಡ್ಬೇಕು. ಅದೇ ಬಾಡಿಗೆ ಮನೆಯಲ್ಲಿರುವವರು ಏನು ಮಾಡ್ಬೇಕು? ಬಾಡಿಗೆ ಮನೆಯ ಪೇಂಟಿಂಗ್ ಖರ್ಚನ್ನು ಬಾಡಿಗೆದಾರರು ಭರಿಸಬೇಕಾ ಇಲ್ಲ ಮನೆ ಮಾಲೀಕರು ಭರಿಸಬೇಕ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

ಮನೆಗೆ ಬಣ್ಣ ಹಚ್ಚೋರು ಯಾರು?

ಬಾಡಿಗೆ ಮನೆಗಳ ದುರಸ್ತಿ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಮನೆ ಮಾಲೀಕರು ಹಾಗೂ ಬಾಡಿಗೆದಾರರ ಜವಾಬ್ದಾರಿಗಳು ಪ್ರತ್ಯೇಕವಾಗಿರುತ್ತವೆ. ಆದರೆ ಮೊದಲು ನಿಮ್ಮ ರೆಂಟ್ ಅಗ್ರಿಮೆಂಟ್ನಲ್ಲಿ ಈ ಬಗ್ಗೆ ಏನು ಹೇಳಲಾಗಿದೆ ಎಂಬುದನ್ನು ಪರಿಶೀಲಿಸುವುದು ಮುಖ್ಯ.

ರೆಂಟ್ ಅಗ್ರಿಮೆಂಟ್ನಲ್ಲಿ ಏನಿದೆ?

ರೆಂಟ್ ಅಗ್ರಿಮೆಂಟ್ನಲ್ಲಿ ಪೇಂಟಿಂಗ್ ಮತ್ತು ಬಣ್ಣ ಬಳಿಯುವ ಜವಾಬ್ದಾರಿ ಬಾಡಿಗೆದಾರರದ್ದು ಎಂದು ನಮೂದಿಸದಿದ್ದರೆ, ಸಾಮಾನ್ಯವಾಗಿ ಮನೆಯ ಬಣ್ಣ ಮತ್ತು ಸುಣ್ಣ ಬಳಿಯುವ ಖರ್ಚು ಮನೆ ಮಾಲೀಕರ ಜವಾಬ್ದಾರಿಯಾಗಿರುತ್ತದೆ. ಉದಾಹರಣೆಗೆ, ಉತ್ತರ ಪ್ರದೇಶದ ನಗರ ಪ್ರದೇಶ ಬಾಡಿಗೆ ನಿಯಂತ್ರಣ ಕಾಯ್ದೆ, 2021ರ ಎರಡನೇ ಅನುಸೂಚಿಯಲ್ಲಿ ಗೋಡೆಗಳಿಗೆ ಸುಣ್ಣ ಬಳಿಯುವುದು ಹಾಗೂ ಬಾಗಿಲು ಮತ್ತು ಕಿಟಕಿಗಳಿಗೆ ಪೇಂಟಿಂಗ್ ಮಾಡಿಸುವುದನ್ನು ಮನೆ ಮಾಲೀಕರ ಜವಾಬ್ದಾರಿಗಳಲ್ಲಿ ಸೇರಿಸಲಾಗಿದೆ. ಆದರೆ ರೆಂಟ್ ಅಗ್ರಿಮೆಂಟ್ನಲ್ಲಿ ಬೇರೆ ರೀತಿಯ ಷರತ್ತು ಇದ್ದರೆ ಅದನ್ನು ಪರಿಗಣಿಸಲಾಗುತ್ತದೆ.

ದೀಪಾವಳಿಗೂ ಮುನ್ನ ಮನೆ ಪೇಂಟ್

ಒಂದು ಕುಟುಂಬ ಹಲವು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದೆ ಎಂದುಕೊಳ್ಳಿ. ಸಾಮಾನ್ಯ ಬಳಕೆಯಿಂದಾಗಿ ಕೆಲವು ವರ್ಷಗಳ ನಂತರ ಗೋಡೆಯ ಬಣ್ಣ ಮಾಸಬಹುದು. ದಸರಾ ಅಥವಾ ದೀಪಾವಳಿಗೂ ಮುನ್ನ ಮನೆಗೆ ಹೊಸ ಬಣ್ಣ ಮಾಡಿಸುವ ಅಗತ್ಯ ಬರಬಹುದು. ಬಾಡಿಗೆದಾರರಿಂದ ಯಾವುದೇ ವಿಶೇಷ ಹಾನಿ ಉಂಟಾಗದೆ, ಸಾಮಾನ್ಯ ಬಳಕೆಯಿಂದ ಬಣ್ಣ ಮಾಸಿದ್ದರೆ, ಇಂತಹ ಪೇಂಟಿಂಗ್ ಖರ್ಚು ಸಾಮಾನ್ಯವಾಗಿ ಮನೆ ಮಾಲೀಕರ ಜವಾಬ್ದಾರಿಯಾಗಿರುತ್ತದೆ. ಆದರೆ ಬಾಡಿಗೆದಾರರಿಂದ ಉಂಟಾದ ನಿರ್ದಿಷ್ಟ ಹಾನಿ ಅಥವಾ ಸಣ್ಣಪುಟ್ಟ ದುರಸ್ತಿಗಳ ಜವಾಬ್ದಾರಿ ಬೇರೆ ಇರಬಹುದು. ಆದ್ದರಿಂದ ಪೇಂಟಿಂಗ್ ಮಾಡಿಸುವ ಮೊದಲು ರೆಂಟ್ ಅಗ್ರಿಮೆಂಟ್ನಲ್ಲಿರುವ ಷರತ್ತುಗಳನ್ನು ಪರಿಶೀಲಿಸುವುದು ಉತ್ತಮ.

ಹೀಗಾಗಿ, ಬಾಡಿಗೆ ಮನೆಯನ್ನು ಹಬ್ಬಕ್ಕಾಗಿ ಪೇಂಟ್ ಮಾಡಿಸುವಾಗ ಖರ್ಚು ಯಾರು ಭರಿಸಬೇಕು ಎಂಬುದನ್ನು ನಿರ್ಧರಿಸಲು ಮೊದಲು ರೆಂಟ್ ಅಗ್ರಿಮೆಂಟ್ ಮತ್ತು ಅನ್ವಯವಾಗುವ ಸ್ಥಳೀಯ ನಿಯಮಗಳನ್ನು ಪರಿಶೀಲಿಸಿ.