ಎಸ್ಸೆಲ್ ಗ್ರೂಪ್ ಸಂಸ್ಥಾಪಕ ಡಾ. ಸುಭಾಷ್ ಚಂದ್ರ ಅವರು, ಮುಖೇಶ್ ಅಂಬಾನಿ ಮಾಲೀಕತ್ವದ 'ನೆಟ್‌ವರ್ಕ್ 18' ತಮ್ಮ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ತಮ್ಮ ಮೇಲಿರುವುದು ವೈಯಕ್ತಿಕ ಸಾಲವಲ್ಲ, ಬದಲಿಗೆ ಕಂಪನಿ ಸಾಲಗಳಿಗೆ ನೀಡಿದ ವೈಯಕ್ತಿಕ ಗ್ಯಾರಂಟಿ ಎಂದು ಸ್ಪಷ್ಟಪಡಿಸಿರುವ ಅವರು, ಈ ದುರುದ್ದೇಶಪೂರಿತ ಪ್ರಚಾರವನ್ನು ನಿಲ್ಲಿಸುವಂತೆ ಅಂಬಾನಿಯವರಿಗೆ ಮನವಿ ಮಾಡಿದ್ದಾರೆ.
ಮುಂಬೈ: ಝೀ ಗ್ರೂಪ್ ಸಂಸ್ಥಾಪಕ, ಉದ್ಯಮಿ ಸುಭಾಷ್ ಚಂದ್ರ ಅವರ ವೈಯಕ್ತಿಕ ದಿವಾಳಿತನ ಪ್ರಕರಣದಲ್ಲಿ 22 ಸಾವಿರ ಕೋಟಿ ರು. ಸಾಲಕ್ಕೆ ಪ್ರತಿಯಾಗಿ 6.5 ಕೋಟಿ ರು. ಅಷ್ಟೇ ವಸೂಲಿ ಮಾಡುವ ಪ್ರಸ್ತಾಪಕ್ಕೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಒಪ್ಪಿಗೆ ನೀಡಿದ್ದು, ಇದು ಭಾರೀ ಚರ್ಚೆಗೆ, ವಿವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT) ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ತಮ್ಮ ಹಾಗೂ ಎಸ್ಸೆಲ್ ಗ್ರೂಪ್ ವಿರುದ್ಧ ಸುಳ್ಳು ಸುದ್ದಿಗಳನ್ನು ಬಿತ್ತರಿಸಲಾಗುತ್ತಿದೆ ಎಂದು ಸಂಸ್ಥೆಯ ಸಂಸ್ಥಾಪಕ ಡಾ. ಸುಭಾಷ್ ಚಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಮಾಲೀಕತ್ವದ 'ನೆಟ್‌ವರ್ಕ್ 18' (Network18) ಸಮೂಹವು ತಮ್ಮ ವೈಯಕ್ತಿಕ ಗ್ಯಾರಂಟಿ ಪ್ರಕರಣದ ಕುರಿತು ತಪ್ಪು ಮಾಹಿತಿ ಪ್ರಸಾರ ಮಾಡುತ್ತಿದೆ ಎಂದು ಆರೋಪಿಸಿರುವ ಅವರು, ಈ ತಪ್ಪು ಪ್ರಚಾರವನ್ನು ತಕ್ಷಣವೇ ನಿಲ್ಲಿಸುವಂತೆ ಬಹಿರಂಗ ಮನವಿ ಮಾಡಿದ್ದಾರೆ.
ರೂ. 43,000 ಕೋಟಿ ಸಾಲ ಮರುಪಾವತಿಯಾಗಿದೆ 'ನನ್ನ ಬಳಿ ಈಗೇನೂ ಇಲ್ಲ'
ಜೀ ನ್ಯೂಸ್‌ನಲ್ಲಿ ಪ್ರಸಾರವಾದ ವೀಡಿಯೊ ಸಂದೇಶದಲ್ಲಿ ಮಾತನಾಡಿದ ಡಾ. ಚಂದ್ರ, ಸಾಲ ಮರುಪಾವತಿಯಲ್ಲಿ ತಮ್ಮ ಗ್ರೂಪ್ ಹೊಂದಿರುವ ಇತಿಹಾಸವನ್ನು ಸಾರ್ವಜನಿಕರ ಮುಂದಿಟ್ಟಿದ್ದಾರೆ, 2019 ರಲ್ಲಿ ಸಂಸ್ಥೆಯು ಎದುರಿಸಿದ್ದ ಒಟ್ಟು ರೂ. 45,000 ಕೋಟಿ ಸಾಲದ ಪೈಕಿ, ಈಗಾಗಲೇ ರೂ. 43,000 ಕೋಟಿಯನ್ನು ಯಶಸ್ವಿಯಾಗಿ ಮರುಪಾವತಿಸಲಾಗಿದೆ. ಸಾಲ ತೀರಿಸಲು ಜೀ ಎಂಟರ್‌ಟೈನ್‌ಮೆಂಟ್ (ZEEL) ನಂತಹ ಪ್ರಮುಖ ಕಂಪನಿಗಳ ಷೇರುಗಳು ಹಾಗೂ ಕುಟುಂಬದ ವೈಯಕ್ತಿಕ ಆಸ್ತಿಗಳನ್ನು ಮಾರಾಟ ಮಾಡಲಾಗಿದೆ. ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಂತೆ ಕಳೆದುಕೊಳ್ಳಲು ನನ್ನ ಬಳಿ ಈಗ ಯಾವುದೇ ಆಸ್ತಿ ಅಥವಾ ಖ್ಯಾತಿ ಉಳಿದಿಲ್ಲ. ಹೀಗಾಗಿ ನನ್ನ ವಿರುದ್ಧ ದುರುದ್ದೇಶಪೂರಿತ ವರದಿಗಳನ್ನು ಬಿತ್ತರಿಸುವುದು ಸರಿಯಲ್ಲ ಎಂದಿದ್ದಾರೆ.
ವೈಯಕ್ತಿಕ ಸಾಲವಲ್ಲ, ಅದು ವೈಯಕ್ತಿಕ ಖಾತರಿ (Personal Guarantees):
ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ರೂ. 22,000 ಕೋಟಿ ಸಾಲದ ಅಂಕಿ-ಅಂಶವನ್ನು ಸುಳ್ಳು ಎಂದು ತಳ್ಳಿಹಾಕಿದ ಅವರು, ಕಾನೂನು ಪ್ರಕ್ರಿಯೆ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಈ ಎನ್‌ಸಿಎಲ್‌ಟಿ ಪ್ರಕ್ರಿಯೆಗಳು ಎಸ್ಸೆಲ್ ಗ್ರೂಪ್‌ನ ಸಂಸ್ಥೆಗಳು ಪಡೆದ ಸಾಲಗಳಿಗೆ ನೀಡಲಾದ 'ವೈಯಕ್ತಿಕ ಗ್ಯಾರಂಟಿ ಸಂಬಂಧಿಸಿದವೇ ಹೊರತು, ಇವು ಡಾ. ಚಂದ್ರ ಅವರ ವೈಯಕ್ತಿಕ ಸಾಲಗಳಲ್ಲ. NCLT ಪ್ರಕ್ರಿಯೆಯಲ್ಲಿ ಒಟ್ಟು ರೂ. 22,006 ಕೋಟಿ ಮೌಲ್ಯದ ಹಕ್ಕುಗಳು (claims) ಸಲ್ಲಿಕೆಯಾಗಿದ್ದರೂ, ಮರುಪಾವತಿ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿರುವ ಸಾಲದಾತರ ನಿಜವಾದ ಹಕ್ಕಿನ ಮೊತ್ತ ರೂ. 3,992 ಕೋಟಿ ಮಾತ್ರ. ಬಾಕಿ ಇರುವ ಎರಡು ಖಾತೆಗಳಿಗೆ ಸಂಬಂಧಿಸಿದಂತೆ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ಬಳಿ ಯಥೇಚ್ಛ ಆಸ್ತಿಗಳ ಭದ್ರತೆ ಇದ್ದು, ಯಾವುದೇ ಬ್ಯಾಂಕ್‌ಗೆ ನಷ್ಟವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಖೇಶ್ ಅಂಬಾನಿಗೆ ಫೋನ್ ಹಾಗೂ ಪತ್ರ:
ವರದಿಗಳ ಕುರಿತು ಚರ್ಚಿಸಲು ಮುಖೇಶ್ ಅಂಬಾನಿ ಅವರನ್ನು ನೇರವಾಗಿ ಸಂಪರ್ಕಿಸಲು ಯತ್ನಿಸಿರುವುದಾಗಿ ಡಾ. ಚಂದ್ರ ಬಹಿರಂಗಪಡಿಸಿದ್ದಾರೆ. ವರದಿಯ ಬಗ್ಗೆ ಕಳವಳ ವ್ಯಕ್ತಪಡಿಸಿ ನಮ್ಮ ಪ್ರತಿನಿಧಿಗಳು ಆ ಮಾಧ್ಯಮದ ಸಂಪಾದಕರನ್ನು ಸಂಪರ್ಕಿಸಿದಾಗ, ಮೇಲಿನಿಂದ ಬಂದ ಸೂಚನೆಗಳ ಮೇರೆಗೆ ಈ ವರದಿ ಪ್ರಸಾರವಾಗುತ್ತಿದೆ ಎಂದು ತಿಳಿಸಿದರು. ಈ ವಿಷಯ ತಿಳಿದು ನಾನು ಮುಖೇಶ್ ಅಂಬಾನಿ ಅವರಿಗೆ ಕರೆ ಮಾಡಿದೆ, ಆದರೆ ಸಂಪರ್ಕ ಸಾಧಿಸಲು ಸಾಧ್ಯವಾಗಲಿಲ್ಲ. ತದನಂತರ ಅವರಿಗೆ ಪತ್ರವನ್ನೂ ಬರೆದಿದ್ದೇನೆ. ಹೀಗಾಗಿ ಸಾರ್ವಜನಿಕ ನ್ಯಾಯಾಲಯದ ಮುಂದೆ ಸತ್ಯವನ್ನು ಇಡಲು ನಿರ್ಧರಿಸಿದ್ದೇನೆ ಎಂದರು.
ಸರ್ಕಾರದ ವಿಶೇಷ ಸೌಲಭ್ಯವನ್ನಾಗಲಿ, ಸಹಾಯವನ್ನಾಗಲಿ ಪಡೆದಿಲ್ಲ
2013-14ರ ಅವಧಿಯಲ್ಲಿ ಜೀ ನ್ಯೂಸ್ ಮೂಲಕ ನರೇಂದ್ರ ಮೋದಿ ಅವರಿಗೆ ಬೆಂಬಲ ನೀಡಿದ್ದರೂ, ಗ್ರೂಪ್ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದಾಗ ತಾವು ಸರ್ಕಾರದಿಂದ ಯಾವುದೇ ವಿಶೇಷ ನೆರವು ಅಥವಾ ಹಸ್ತಕ್ಷೇಪವನ್ನು ಕೋರಿರಲಿಲ್ಲ ಎಂದು ಸ್ಪಷ್ಟಪಡಿಸಿದರು. ನಿಯಮಾನುಸಾರವೇ ಎಲ್ಲಾ ಸಾಲಗಳನ್ನು ತೀರಿಸಲಾಗಿದೆ ಎಂದಿದ್ದಾರೆ.
ಧೀರೂಭಾಯಿ ಅಂಬಾನಿ ನೆನೆದು ಶುಭಹಾರೈಕೆ:
ತಮ್ಮ ಉದ್ವೇಗರಹಿತ ಹೇಳಿಕೆಯನ್ನು ಸಮಾಧಾನಕರವಾಗಿ ಮುಕ್ತಾಯಗೊಳಿಸಿದ ಡಾ. ಸುಭಾಷ್ ಚಂದ್ರ, "ನಾನು ಧೀರೂಭಾಯಿ ಅಂಬಾನಿ ಅವರ ಬಗ್ಗೆ ಅಪಾರ ಗೌರವ ಹೊಂದಿದ್ದೇನೆ ಮತ್ತು ಉದ್ಯಮಿಯಾಗಿ ಅವರಿಂದ ಸಾಕಷ್ಟು ಕಲಿತಿದ್ದೇನೆ. ಮುಖೇಶ್ ಜಿ, ದೇವರು ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ಒಳ್ಳೆಯದು ಮಾಡಲಿ. ನೀವು ವಿಶ್ವದ ನಂಬರ್ 1 ಉದ್ಯಮಿಯಾಗಲಿ ಎಂಬುದು ಒಬ್ಬ ಭಾರತೀಯನಾಗಿ ನನ್ನ ಹಾರೈಕೆ. ಆದರೆ, ಕಳೆದುಕೊಳ್ಳಲು ಏನೂ ಉಳಿಯದ ನನ್ನಂತಹ ವ್ಯಕ್ತಿಯ ವಿರುದ್ಧ ಇಂತಹ ದುರುದ್ದೇಶಪೂರಿತ ಅಪಪ್ರಚಾರಗಳನ್ನು ಮಾಡಿಸುವುದನ್ನು ದಯವಿಟ್ಟು ನಿಲ್ಲಿಸಿ" ಎಂದು ಕೈಜೋಡಿಸಿ ವಿನಂತಿಸಿದರು.


