AI business impact 2026: ತಂತ್ರಜ್ಞಾನದ ಜಗತ್ತಿನಲ್ಲಿ ಒಂದು ಸಣ್ಣ ಅಪ್‌ಡೇಟ್ ಕೋಟಿ ಕೋಟಿ ವ್ಯವಹಾರವನ್ನು ಹೇಗೆ ಧೂಳೀಪಟ ಮಾಡಬಲ್ಲದು ಎಂಬುದಕ್ಕೆ ಸ್ಯಾನ್ ಫ್ರಾನ್ಸಿಸ್ಕೋದ ಈ ಘಟನೆಯೇ ಸಾಕ್ಷಿ! ಇರಾ ಬೋಡ್ನರ್, ತಮ್ಮ ಕನಸಿನ ಉದ್ಯಮ AI ಹೊಡೆತಕ್ಕೆ ಹೇಗೆ ಬಲಿಯಾಯಿತು ಎಂಬ ವಿಷಯ ಹಂಚಿಕೊಂಡಿದ್ದಾರೆ.
ಸ್ಯಾನ್ ಫ್ರಾನ್ಸಿಸ್ಕೋದ ಟೆಕ್ ಜಗತ್ತಿನಲ್ಲಿ ಇಂದು ದೊಡ್ಡ ಸುದ್ದಿಯೊಂದು ಸಂಚಲನ ಮೂಡಿಸಿದೆ. ಸ್ಟಾರ್ಟ್‌ಅಪ್ 'ರೈಸ್' (Rise) ಸಂಸ್ಥಾಪಕಿ ಇರಾ ಬೋಡ್ನರ್ (Ira Bodnar) ಅವರು ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ 'X' ನಲ್ಲಿ ಹಂಚಿಕೊಂಡಿರುವ ನೋವಿನ ಕಥೆ ಈಗ ವೈರಲ್ ಆಗಿದೆ. ಆಂಥ್ರೋಪಿಕ್ ಕಂಪನಿಯ Claude AI ಬಿಡುಗಡೆ ಮಾಡಿದ ಒಂದು ಹೊಸ ಅಪ್‌ಡೇಟ್ ಅವರ ಇಡೀ ಬಿಸಿನೆಸ್ ಮಾಡೆಲ್ ಅನ್ನು ರಾತ್ರೋರಾತ್ರಿ ಧ್ವಂಸಗೊಳಿಸಿದೆ!
ಏನಿದು 'ಸಾಸ್‌ಪೋಕಲಿಪ್ಸ್'?
ಇರಾ ಕಂಪನಿಯು ಯಾವ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿತ್ತೋ, ಅದೇ ಕ್ಷೇತ್ರಕ್ಕೆ ದೊಡ್ಡ AI ಕಂಪನಿಗಳು ಲಗ್ಗೆ ಇಟ್ಟಿವೆ. ಆಂಥ್ರೋಪಿಕ್ ಮತ್ತು 'ಮಾನ್ಸ್' (Mans) ಎಂಬ ಸಂಸ್ಥೆಗಳು ಬಿಡುಗಡೆ ಮಾಡಿದ ಹೊಸ ಫೀಚರ್‌ಗಳು 'ರೈಸ್' ಕಂಪನಿಯ ಉತ್ಪನ್ನಕ್ಕೆ ನೇರ ಸವಾಲು ಹಾಕಿವೆ. ಅಂದಹಾಗೆ ಟೆಕ್ ಉದ್ಯಮದಲ್ಲಿ ಸಣ್ಣ ಸಾಫ್ಟ್‌ವೇರ್ ಕಂಪನಿಗಳು ದೊಡ್ಡ AI ಕಂಪನಿಗಳ ಅಬ್ಬರಕ್ಕೆ ಸಿಲುಕಿ ನಾಶವಾಗುವುದನ್ನು ‘SaaS-pocalypse’ ಎಂದು ಕರೆಯಲಾಗುತ್ತಿದೆ.
ಇದೊಂದು ಹೊಸ ತಾಂತ್ರಿಕ ಪದ. SaaS ಎಂದರೆ 'Software as a Service'. ಸಣ್ಣ ಕಂಪನಿಗಳು ಒಂದು ನಿರ್ದಿಷ್ಟ ಕೆಲಸಕ್ಕಾಗಿ ಸಾಫ್ಟ್‌ವೇರ್ ತಯಾರಿಸಿರುತ್ತವೆ. ಆದರೆ ಅಮೆಜಾನ್, ಗೂಗಲ್ ಅಥವಾ ಮೈಕ್ರೋಸಾಫ್ಟ್‌ನಂತಹ ದೊಡ್ಡ ಕಂಪನಿಗಳು ಆ ಫೀಚರ್ ಅನ್ನು ತಮ್ಮ ಸಿಸ್ಟಮ್‌ನಲ್ಲೇ ಅಳವಡಿಸಿದಾಗ ಸಣ್ಣ ಕಂಪನಿಗಳು ಮಕಾಡೆ ಮಲಗುತ್ತವೆ. ಇದನ್ನೇ 'ಸಾಸ್‌ಪೋಕಲಿಪ್ಸ್' ಅಥವಾ ಸಾಫ್ಟ್‌ವೇರ್ ಉದ್ಯಮದ ಮಹಾದುರಂತ ಎನ್ನಲಾಗುತ್ತದೆ.
ಹಠಾತ್ ಕುಸಿತ: ಶೇ.70 ರಿಂದ ಶೇ. 20ಕ್ಕೆ ಇಳಿದ ವ್ಯವಹಾರ
ಇರಾ ಬೋಡ್ನರ್ ತಮ್ಮ ಪೋಸ್ಟ್‌ನಲ್ಲಿ ಅಳಲು ತೋಡಿಕೊಂಡಿರುವುದು ಹೀಗೆ... ಕೇವಲ 2 ತಿಂಗಳಲ್ಲಿ ನೂರಾರು ಪಾವತಿಸುವ (Paid) ಗ್ರಾಹಕರು ಈ ಸ್ಟಾರ್ಟ್‌ಅಪ್ ಸೇರಿದ್ದರು. ಕಂಪನಿಯು ಶೇ. 70 ರಷ್ಟು 'ಡೀಲ್ ಕ್ಲೋಸ್ ರೇಟ್' ಹೊಂದಿತ್ತು. "ಇಂದು ಬೆಳಗ್ಗೆ ನಾನು ಎದ್ದಾಗ ಕ್ಲಾಡ್ ನನ್ನ ಸ್ಟಾರ್ಟ್‌ಅಪ್ ಅನ್ನು ಬರ್ಬಾದ್ ಮಾಡಿದೆ ಎಂದು ತಿಳಿಯಿತು. ನಮ್ಮ ಮಾರಾಟದ ದರ ಶೇ. 70 ರಿಂದ ಶೇ. 20ಕ್ಕೆ ಕುಸಿದಿದೆ," ಎಂದು ಅವರು ಬರೆದುಕೊಂಡಿದ್ದಾರೆ.
ರೈಸ್ ಸ್ಟಾರ್ಟ್‌ಅಪ್ ಏನು ಕೆಲಸ ಮಾಡುತ್ತಿತ್ತು?
ಈ ಕಂಪನಿಯು Google ಮತ್ತು Meta (Facebook/Instagram) ಜಾಹೀರಾತುಗಳನ್ನು ನಿರ್ವಹಿಸಲು ಒಂದು 'AI ಏಜೆಂಟ್' ಅನ್ನು ಸಿದ್ಧಪಡಿಸಿತ್ತು. ಇದು ಕಂಪನಿಗಳ ಜಾಹೀರಾತು ಖಾತೆಗಳನ್ನು ಸ್ವಯಂಚಾಲಿತವಾಗಿ ನಿರ್ವಹಿಸುವ ಕೆಲಸ ಮಾಡುತ್ತಿತ್ತು. ಆದರೆ, ಈಗ ಕ್ಲಾಡ್ AI ನೇರವಾಗಿ ಮೆಟಾ ಜಾಹೀರಾತುಗಳಿಗಾಗಿ 'ಕನೆಕ್ಟರ್‌ಗಳನ್ನು' ಬಿಡುಗಡೆ ಮಾಡಿದೆ. ಇದರಿಂದಾಗಿ ರೈಸ್ ಅಂತಹ ಸಣ್ಣ ಕಂಪನಿಗಳ ಅವಶ್ಯಕತೆ ಇಲ್ಲದಂತಾಗಿದೆ.
ಹೊಸ ಕಾರ್ಯತಂತ್ರದತ್ತ ಹೆಜ್ಜೆ
ಅಪಾಯವನ್ನು ಮೊದಲೇ ಅರಿತ ಇರಾ ಬೋಡ್ನರ್ ತಂಡವು ಈಗ ತನ್ನ ಹಾದಿಯನ್ನು ಬದಲಿಸಿಕೊಳ್ಳಲು ಮುಂದಾಗಿದೆ:
ಈಗ ಅವರು ದೊಡ್ಡ ಜಾಹೀರಾತು ಏಜೆನ್ಸಿಗಳಿಗಾಗಿ AI Workflows ಸಿದ್ಧಪಡಿಸುವತ್ತ ಗಮನ ಹರಿಸುತ್ತಿದ್ದಾರೆ.
ಕಡಿಮೆ ಉದ್ಯೋಗಿಗಳೊಂದಿಗೆ ನೂರಾರು ಅಕೌಂಟ್‌ಗಳನ್ನು ಹೇಗೆ ನಿರ್ವಹಿಸಬೇಕು ಎಂಬುದಕ್ಕೆ ಸಾಫ್ಟ್‌ವೇರ್ ನೀಡುತ್ತಿದ್ದಾರೆ.
ಭವಿಷ್ಯದ ಬಗ್ಗೆ ಆತಂಕಕಾರಿ ಮುನ್ಸೂಚನೆ
ಲೇಖನದ ಕೊನೆಯಲ್ಲಿ ಇರಾ ಅವರು ಡಿಜಿಟಲ್ ಲೋಕದ ಬಗ್ಗೆ ಒಂದು ಎಚ್ಚರಿಕೆ ನೀಡಿದ್ದಾರೆ. “ಮುಂದಿನ ದಿನಗಳಲ್ಲಿ ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಸುಮಾರು ಶೇ. 98 ರಷ್ಟು ವಿಡಿಯೋಗಳನ್ನು AI ಸೃಷ್ಟಿಸಬಹುದು. ಇನ್ನು ಮುಂದೆ ಯಶಸ್ಸು ಎನ್ನುವುದು ಸೃಜನಶೀಲತೆಗಿಂತ ಅಲ್ಗಾರಿದಮ್‌ಗಳನ್ನು ಯಾರು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ.”

