ಟೆಕ್ ದೈತ್ಯ ಆಪಲ್ ಸಂಸ್ಥೆಯು ಬೆಂಗಳೂರಿನ 'ಎಂಬಸಿ ಜೆನಿತ್' ಕಚೇರಿ ಸಂಕೀರ್ಣದಲ್ಲಿ ಹೆಚ್ಚುವರಿಯಾಗಿ 1.21 ಲಕ್ಷ ಚದರ ಅಡಿ ಜಾಗವನ್ನು ಬಾಡಿಗೆಗೆ ಪಡೆದುಕೊಂಡಿದೆ. ಈ 10 ವರ್ಷಗಳ ಬೃಹತ್ ಒಪ್ಪಂದದ ಅಡಿಯಲ್ಲಿ ಆಪಲ್ ಒಟ್ಟು 1,333 ಕೋಟಿ ರೂಪಾಯಿ ಬಾಡಿಗೆ ಪಾವತಿಸಲಿದೆ.
ಬೆಂಗಳೂರು (ಫೆ.24): ಇತ್ತೀಚೆಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜಾಗತಿಕ ದೈತ್ಯ ಕಂಪನಿಗಳಲ್ಲಿ ಒಂದಾಗ ಅಮೆಜಾನ್ ಕಂಪನಿ ಏಷ್ಯಾದಲ್ಲಿಯೇ 2ನೇ ಅತಿದೊಡ್ಡ ಕಚೇರಿಯನ್ನು ಬೆಂಗಳೂರಿನಲ್ಲಿ ಆರಂಭಿಸಿದೆ. ಇದರ ಬೆನ್ನಲ್ಲಿಯೇ ಟೆಕ್ ದೈತ್ಯ ಆಪಲ್ (Apple) ಸಂಸ್ಥೆಯು ತನ್ನ ಕಚೇರಿ ಜಾಲವನ್ನು ಮತ್ತಷ್ಟು ವಿಸ್ತರಿಸಿದೆ. ನಗರದ ಹೊರ ವರ್ತುಲ ರಸ್ತೆಯಲ್ಲಿರುವ (ORR) ಪ್ರತಿಷ್ಠಿತ 'ಎಂಬಸಿ ಜೆನಿತ್' (Embassy Zenith) ಕಚೇರಿ ಸಂಕೀರ್ಣದಲ್ಲಿ ಆಪಲ್ ಹೆಚ್ಚುವರಿಯಾಗಿ 1.21 ಲಕ್ಷ ಚದರ ಅಡಿ ಜಾಗವನ್ನು ಬಾಡಿಗೆಗೆ ಪಡೆದುಕೊಂಡಿದೆ. ಈ ಬೃಹತ್ ಒಪ್ಪಂದದ ಮೂಲಕ ಮುಂದಿನ 10 ವರ್ಷಗಳ ಅವಧಿಗೆ ಆಪಲ್ ಬರೋಬ್ಬರಿ 1,333 ಕೋಟಿ ರೂಪಾಯಿ ಬಾಡಿಗೆ ರೂಪದಲ್ಲಿ ಪಾವತಿಸಲು ಬದ್ಧವಾಗಿದೆ. ಈ ಮೂಲಕ ಬೆಂಗಳೂರು ರಿಯಲ್ ಎಸ್ಟೇಟ್ ಅನ್ನು ಮತ್ತಷ್ಟು ಉತ್ತುಂಗಕ್ಕೆ ಕೊಂಡೊಯ್ಯುತ್ತಿವೆ.
ಬಾಡಿಗೆ ದರ ಎಷ್ಟು?
ರಿಯಲ್ ಎಸ್ಟೇಟ್ ಡೇಟಾ ವಿಶ್ಲೇಷಣಾ ಸಂಸ್ಥೆಯಾದ 'ಪ್ರಾಪ್‌ಸ್ಟಾಕ್' (Propstack) ಲಭ್ಯಪಡಿಸಿರುವ ದಾಖಲೆಗಳ ಪ್ರಕಾರ, ಆಪಲ್ ಹೊಸದಾಗಿ ಪಡೆದಿರುವ 1.21 ಲಕ್ಷ ಚದರ ಅಡಿ ಜಾಗಕ್ಕೆ ಪ್ರತಿ ತಿಂಗಳು ಸುಮಾರು 2.84 ಕೋಟಿ ರೂಪಾಯಿ ಬಾಡಿಗೆ ಪಾವತಿಸಲಿದೆ. ಅಂದರೆ, ಪ್ರತಿ ಚದರ ಅಡಿಗೆ ತಿಂಗಳಿಗೆ 235 ರೂಪಾಯಿ ಬಾಡಿಗೆ ನಿಗದಿಪಡಿಸಲಾಗಿದೆ. ಈ ಹೊಸ ಒಪ್ಪಂದವು ಸೆಪ್ಟೆಂಬರ್ 25, 2025 ರಿಂದಲೇ ಜಾರಿಗೆ ಬಂದಿದೆ.
ಒಟ್ಟು 3.89 ಲಕ್ಷ ಚದರ ಅಡಿ ವಿಸ್ತೀರ್ಣ:
ಈ ಹೊಸ ಸೇರ್ಪಡೆಯೊಂದಿಗೆ, ಎಂಬಸಿ ಜೆನಿತ್ ಕಾಂಪೌಂಡ್‌ನಲ್ಲಿ ಆಪಲ್ ಸಂಸ್ಥೆ ಹೊಂದಿರುವ ಒಟ್ಟು ಕಚೇರಿ ವಿಸ್ತೀರ್ಣ 3.89 ಲಕ್ಷ ಚದರ ಅಡಿಗೆ ಏರಿಕೆಯಾಗಿದೆ. ಇದಕ್ಕೂ ಮೊದಲು, ಏಪ್ರಿಲ್ 2025 ರಲ್ಲಿ ಸಂಸ್ಥೆಯು ಇದೇ ಕಟ್ಟಡದ 5 ರಿಂದ 13ನೇ ಮಹಡಿಗಳಲ್ಲಿ 2.68 ಲಕ್ಷ ಚದರ ಅಡಿ ಜಾಗವನ್ನು ಬಾಡಿಗೆಗೆ ಪಡೆದಿತ್ತು. ಈಗ ನೆಲಮಹಡಿಯಿಂದ ನಾಲ್ಕನೇ ಮಹಡಿಯವರೆಗೆ ಹೆಚ್ಚುವರಿ ಜಾಗವನ್ನು ತನ್ನದಾಗಿಸಿಕೊಂಡಿದೆ. ಈಗ ಒಟ್ಟಾರೆಯಾಗಿ ಆಪಲ್ ತಿಂಗಳಿಗೆ ಅಂದಾಜು 9.16 ಕೋಟಿ ರೂಪಾಯಿ ಬಾಡಿಗೆಯನ್ನು ಎಂಬಸಿ ಜೆನಿತ್ ಮಾಲೀಕರಿಗೆ ಪಾವತಿಸಲಿದೆ.
ಒಪ್ಪಂದದ ಪ್ರಮುಖಾಂಶಗಳು:
ಒಟ್ಟು ಅವಧಿ: 10 ವರ್ಷಗಳ ಲೀಸ್ ಒಪ್ಪಂದ.
ಬಾಡಿಗೆ ಏರಿಕೆ: ಏಪ್ರಿಲ್ 3, 2026 ರಿಂದ ಅನ್ವಯವಾಗುವಂತೆ ವಾರ್ಷಿಕ ಶೇ. 4.5 ರಷ್ಟು ಬಾಡಿಗೆ ಹೆಚ್ಚಳವಾಗಲಿದೆ.
ಭದ್ರತಾ ಠೇವಣಿ: ಈ ಒಪ್ಪಂದಕ್ಕಾಗಿ ಆಪಲ್ 14.24 ಕೋಟಿ ರೂಪಾಯಿಗಳನ್ನು ಸೆಕ್ಯೂರಿಟಿ ಡಿಪಾಸಿಟ್ ಆಗಿ ನೀಡಿದೆ.
ಮಾಲೀಕತ್ವ: ಎಂಬಸಿ ಜೆನಿತ್ ಕಟ್ಟಡದ ಮಾಲೀಕರಾದ 'ಮ್ಯಾಕ್ ಚಾರ್ಲ್ಸ್ (ಇಂಡಿಯಾ) ಲಿಮಿಟೆಡ್' ಜೊತೆ ಈ ಒಪ್ಪಂದ ನಡೆದಿದೆ.
ಬೆಂಗಳೂರು ಏಕೆ ಪ್ರಮುಖ?
ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುತ್ತಿರುವ ಆಪಲ್ ಪಾಲಿಗೆ ಬೆಂಗಳೂರು ಅತ್ಯಂತ ಪ್ರಮುಖ ಕೇಂದ್ರವಾಗಿದೆ. ವಿಶ್ವದರ್ಜೆಯ 'ಗ್ರೇಡ್ ಎ' (Grade A) ಕಚೇರಿಗಳಿಗೆ ಬೆಂಗಳೂರಿನಲ್ಲಿ ಇರುವ ಬೇಡಿಕೆಯನ್ನು ಈ ಒಪ್ಪಂದ ಸಾಬೀತುಪಡಿಸಿದೆ. ಜಾಗತಿಕ ಮಟ್ಟದಲ್ಲಿ ಆರ್ಥಿಕ ಅಸ್ಥಿರತೆಯ ನಡುವೆಯೂ, ಆಪಲ್‌ನಂತಹ ದೊಡ್ಡ ಕಂಪನಿಗಳು ಬೆಂಗಳೂರಿನ ತಾಂತ್ರಿಕ ಪ್ರತಿಭೆ ಮತ್ತು ಮೂಲಸೌಕರ್ಯದ ಮೇಲೆ ನಂಬಿಕೆ ಇಟ್ಟಿರುವುದು ನಗರದ ಆರ್ಥಿಕತೆಗೆ ಪೂರಕವಾಗಿದೆ.
ಈ ಬೃಹತ್ ವಿಸ್ತರಣೆಯು ಬೆಂಗಳೂರಿನ ವಾಣಿಜ್ಯ ರಿಯಲ್ ಎಸ್ಟೇಟ್ ಮಾರುಕಟ್ಟೆಗೆ ಹೊಸ ಚೈತನ್ಯ ನೀಡಿದೆ. ಕೇವಲ ಉತ್ಪಾದನೆ ಮಾತ್ರವಲ್ಲದೆ, ಸಂಶೋಧನೆ ಮತ್ತು ಅಭಿವೃದ್ಧಿ (R&D) ಹಾಗೂ ಆಡಳಿತಾತ್ಮಕ ಕೆಲಸಗಳಿಗೂ ಆಪಲ್ ಬೆಂಗಳೂರನ್ನೇ ಪ್ರಧಾನವಾಗಿ ಆರಿಸಿಕೊಳ್ಳುತ್ತಿರುವುದು ವಿಶೇಷ.


