ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಬಿಗ್ ಬಾಸ್ ಪ್ರಾಯೋಜಕರಾಗಿದ್ದ ಸಿ.ಜಿ.ರಾಯ್ ಅವರು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಐಟಿ ದಾಳಿಯಿಂದ ಬೇಸತ್ತು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದ್ದು, ಅವರ ಸಾವಿಗೆ ನಟ ಭುವನ್ ಪೊನ್ನಣ್ಣ ಕರ್ಮದ ಬಗ್ಗೆ ಮಾತನಾಡುತ್ತಾ ಕಂಬನಿ ಮಿಡಿದಿದ್ದಾರೆ.

ಸಾವಿರಾರು ಕೋಟಿ ರೂಪಾಯಿಗಳ ಸಾಮ್ರಾಜ್ಯ ಕಟ್ಟಿ, ಹಲವರಿಗೆ ನೆರವಾಗಿದ್ದ ರಿಯಲ್​ ಎಸ್ಟೇಟ್​ ಉದ್ಯಮಿ ಸಿ.ಜಿ.ರಾಯ್​ ಅವರು ತಮ್ಮ ಪ್ರಾಣವನ್ನೇ ತೆಗೆದುಕೊಂಡಿರುವುದನ್ನು ಅವರನ್ನು ಬಲ್ಲ ಯಾರಿಂದಲೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ನಿರಂತರ ಐಟಿ ದಾಳಿಗೆ ಬೇಸತ್ತು ಅವರು ಸಾವಿನ ಹಾದಿ ಹಿಡಿದಿದ್ದಾರೆ ಎಂದು ಹೇಳಲಾಗುತ್ತಿದ್ದರೂ, ಇದಕ್ಕೆ ನಿಖರವಾದ ಕಾರಣ ಇನ್ನಷ್ಟೇ ಬೆಳಕಿಗೆ ಬರಬೇಕಿದೆ. ಇವರ ಸಾವಿನ ಸುತ್ತ ಇದಾಗಲೇ ವಿಧ ವಿಧ ರೀತಿಯ ವಿಷಯಗಳೂ ಮೆಲುಕು ಹಾಕುತ್ತಿವೆ. ಆತ್ಮವಿಶ್ವಾಸವೇ ಬದುಕಿಗೆ ಸ್ಫೂರ್ತಿ ಎಂದುಕೊಂಡು ತಮ್ಮ ಉದ್ಯಮಕ್ಕೂ ಕಾನ್ಫಿಡೆಂಟ್​ ಎಂದೇ ಹೆಸರು ಇರಿಸಿದ್ದ ರಾಯ್​ ಅವರ ನಿಧನಕ್ಕೆ ಹಲವರು ಕಂಬನಿ ಮಿಡಿದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಗ್​ಬಾಸ್​​ ಪ್ರಾಯೋಜಕತ್ವ

ಬಿಗ್​ಬಾಸ್​ ಸೇರಿದಂತೆ ಕೆಲವು ರಿಯಾಲಿಟಿ ಷೋಗಳಲ್ಲಿನ ವಿನ್ನರ್​, ರನ್ನರ್ಸ್​ ಅಪ್​ಗೆ ಸ್ಪಾನ್ಸರ್​ ಮಾಡಿದ್ದರು ರಾಯ್​ ಅವರು. ಬಿಗ್​ಬಾಸ್​ನ 11ನೇ ಸೀಸನ್​ನಲ್ಲಿ ಕಿಚ್ಚ ಸುದೀಪ್​ ಅವರು ವೇದಿಕೆ ಮೇಲೆ ರಾಯ್​ ಅವರನ್ನು ಬರಮಾಡಿಕೊಂಡು ಅವರನ್ನು ಹಾಡಿ ಹೊಗಳಿದ್ದರು. ಏಕೆಂದರೆ, ಆ ಸೀಸನ್​ ವಿನ್ನರ್​ಗೆ ನೀಡಬೇಕಿದ್ದ 50 ಲಕ್ಷ ರೂಪಾಯಿ ಪ್ರಾಯೋಜಕತ್ವ ಮಾಡಿದ್ದೇ ಸಿಜೆ ರಾಯ್​. ಈ ಹಣವನ್ನು ಆ ಸೀಸನ್​ನ ವಿನ್ನರ್​ ಹನುಮಂತ ಲಮಾಣಿ ಪಡೆದುಕೊಂಡಿದ್ದರು. ಈ ರೀತಿಯಾಗಿ ರಿಯಾಲಿಟಿ ಷೋಗಳ ಮೂಲಕವೂ ಪರಿಚಯವಾಗಿದ್ದವರು ರಾಯ್​. ಆದ್ದರಿಂದ ಇವರ ನಿಧನ ಸಿನಿಮಾ ಲೋಕಕ್ಕೂ ಬರಸಿಡಿಲಿನಂತೆ ಬಡಿದಿದೆ.

ಕರ್ಮ ಅನುಭವಿಸಲೇಬೇಕು

ಇದೀಗ ಬಿಗ್​ಬಾಸ್​ನ ಸ್ಪರ್ಧಿಯಾಗಿದ್ದ, ನಟಿ ಹರ್ಷಿಕಾ ಪೂಣಚ್ಚ ಅವರ ಪತಿ ಭುವನ್​ ಪೊನ್ನಣ್ಣ ಅವರು ಭಾವುಕರಾಗಿ ಪೋಸ್ಟ್​ ಒಂದನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಅವರು, ಸಾವಿನ ಬಗ್ಗೆ ನೋವು ತೋಡಿಕೊಳ್ಳುತ್ತಲೇ ಕರ್ಮವನ್ನು ಅನುಭವಿಸಲೇಬೇಕು ಎಂದು ನೊಂದು ನುಡಿದಿದ್ದಾರೆ.

ನಾವು ಪ್ರೀತಿಯಿಂದ ಕರೆಯುತ್ತಿದ್ದ ಡಾ. ರಾಯ್ ಅವರ ಹಠಾತ್ ನಿಧನದ ಸುದ್ದಿ ಕೇಳಿ ತುಂಬಾ ದುಃಖವಾಯಿತು ಮತ್ತು ಆಘಾತವಾಯಿತು. ಅವರು ಯಾವಾಗಲೂ ಜೀವನ ಮತ್ತು ಮಹತ್ವಾಕಾಂಕ್ಷೆಗಳಿಂದ ತುಂಬಿದ್ದರು ಎಂದಿದ್ದಾರೆ. ಹಣ ಮತ್ತು ಇತರ ಭೌತಿಕ ಲಾಭಗಳ ವಿಷಯಕ್ಕೆ ಬಂದಾಗ ಮಾನವೀಯತೆ ಸತ್ತಿದೆ ಎಂದು ನನಗೆ ಕೆಲವೊಮ್ಮೆ ಅನಿಸುತ್ತದೆ. ಕಾರಣ ಯಾರೇ ಆಗಿರಲಿ ಅವರು ಕರ್ಮವನ್ನು ಎದುರಿಸಬೇಕಾಗುತ್ತದೆ. ಓಂ ಶಾಂತಿ ಡಾ. ರಾಯ್. ಎಲ್ಲದಕ್ಕೂ ಧನ್ಯವಾದಗಳು. ನಿಮ್ಮನ್ನು ಎಂದಿಗೂ ಸ್ಮರಿಸುತ್ತೇವೆ ಎಂದು ಬರೆದಿದ್ದಾರೆ. ಅದರೊಂದಿಗೆ ಗುಲಾಬಿ ಹಾಗೂ ಕೈ ಮುಗಿಯುವ ಸಿಂಬಲ್ ಹಾಕಿ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ.