ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ದಿಢೀರ್ ದಾಳಿ ನಡೆಸಿದ್ದು, ಪ್ರಜ್ವಲ್ ರೇವಣ್ಣ ಮೊಬೈಲ್ ಬಳಸುತ್ತಿರುವುದು ಪತ್ತೆಯಾಗಿದೆ. ಈ ಕಾರ್ಯಾಚರಣೆಯಲ್ಲಿ ಕರ್ತವ್ಯಲೋಪ ಸಾಬೀತಾದ ಹಿನ್ನೆಲೆಯಲ್ಲಿ ಜೈಲಿನ ಸಹಾಯಕ ಅಧೀಕ್ಷಕ ಈರಣ್ಣ ರಂಗಾಪುರ ಅವರನ್ನು ಅಮಾನತುಗೊಳಿಸಲಾಗಿದೆ. ಅಲ್ಲದೆ, ಜೈಲಿನಲ್ಲಿ ಸಿಗ್ನಲ್ ನೀಡುತ್ತಿದ್ದ ಏರ್‌ಟೆಲ್‌ ಕಂಪನಿ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ.

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರಾಜ್ಯಾತಿಥ್ಯ ಮತ್ತು ನಿಯಮಬಾಹಿರ ಚಟುವಟಿಕೆಗಳ ಕುರಿತು ಗಂಭೀರ ಆರೋಪಗಳು ಕೇಳಿಬಂದ ಬೆನ್ನಲ್ಲೇ ಸಿಸಿಬಿ (ಕೇಂದ್ರ ಅಪರಾಧ ವಿಭಾಗ) ಅಧಿಕಾರಿಗಳು ಜೈಲಿನ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯ ವೇಳೆ ಅಧಿಕಾರಿಗಳ ಕರ್ತವ್ಯಲೋಪ ಮತ್ತು ಅಕ್ರಮಗಳು ಸಾಬೀತಾಗಿದ್ದು, ಜೈಲಿನ ಅಸಿಸ್ಟಂಟ್ ಸೂಪರಿಂಡೆಂಟ್ ಈರಣ್ಣ ರಂಗಾಪುರ ಅವರನ್ನು ಅಮಾನತುಗೊಳಿಸಲಾಗಿದೆ.

ಸಿಸಿಬಿ ದಾಳಿ ತಡೆಗೆ ಯತ್ನಿಸಿದ್ದ ಎಎಸ್‌ಪಿ ಈರಣ್ಣ

ಜೈಲಿನಲ್ಲಿ ಹಿಂದೆ ನಡೆದ ದಾಳಿಗಳ ಸಂದರ್ಭದಲ್ಲೆಲ್ಲಾ ಅಕ್ರಮಗಳು ಸಿಗದಂತೆ ಖೈದಿಗಳನ್ನು ಜಾಗೃತಗೊಳಿಸುವಲ್ಲಿ ಎಎಸ್‌ಪಿ ಈರಣ್ಣ ಸಕ್ರಿಯರಾಗಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಧಿಕಾರಿಗಳು ಪರಿಶೀಲನೆಗೆ ಬಂದಾಗ ಅವರನ್ನು ಕನಿಷ್ಠ 15 ರಿಂದ 20 ನಿಮಿಷಗಳ ಕಾಲ ಒಳಗೆ ಬಿಡದೆ ತಡೆದು, ಖೈದಿಗಳು ಮೊಬೈಲ್ ಹಾಗೂ ಇತರ ನಿಷೇಧಿತ ವಸ್ತುಗಳನ್ನು ಬಚ್ಚಿಡಲು ಸಮಯ ಮಾಡಿಕೊಡುತ್ತಿದ್ದರು ಎನ್ನಲಾಗಿದೆ. ಆದರೆ, ಈ ಬಾರಿಯ ದಾಳಿಯಲ್ಲಿ ಸಿಸಿಬಿ ಅಧಿಕಾರಿಗಳು ಈರಣ್ಣ ಅವರ ಮಾತಿಗೆ ಕ್ಯಾರೇ ಎನ್ನದೆ ಏಕಾಏಕಿ ಜೈಲಿನೊಳಗೆ ನುಗ್ಗಿ ಕಾರ್ಯಾಚರಣೆ ನಡೆಸಿದ್ದಾರೆ.

ಪ್ರಜ್ವಲ್ ರೇವಣ್ಣ ಮೊಬೈಲ್ ಬಳಕೆ ವಿಡಿಯೋ ವೈರಲ್, ಸಂಭಾಷಣೆ ಏನು?

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ತಮ್ಮ ಜೈಲಿನ ಸೆಲ್‌ನಲ್ಲಿ ನಿಂತು ನಗುತ್ತಾ ಆಪ್ತರೊಂದಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಿರುವ 17 ಸೆಕೆಂಡ್‌ಗಳ ವಿಡಿಯೋ ಬಹಿರಂಗಗೊಂಡು ವೈರಲ್ ಆಗಿದೆ. ಈ ಸಂಭಾಷಣೆಯಲ್ಲಿ ಆಪ್ತನು "ನೀವು ಫೋನೇ ಮಾಡಿಲ್ಲವೆಂದು ಅಳುತ್ತಿದ್ದಾರೆ, ಮೊದಲು ಹೊರಗೆ ಬನ್ನಿ" ಎಂದಾಗ, ಪ್ರಜ್ವಲ್ "ನಾನು ಅವರಿಗೆ ಮೊನ್ನೆ ತಾನೇ ಫೋನ್ ಮಾಡಿದ್ದೆ" ಎಂದು ಉತ್ತರಿಸುವುದು ದಾಖಲಾಗಿದೆ.

ಈ ವಿಡಿಯೋ ಮೂರ್ನಾಲ್ಕು ತಿಂಗಳ ಹಳೆಯದ್ದು ಎಂದು ಶಂಕಿಸಲಾಗಿದ್ದು, ಹಲವು ತಿಂಗಳುಗಳಿಂದ ಜೈಲಾಧಿಕಾರಿಗಳು ಹಣ ಪಡೆದು ಪ್ರಜ್ವಲ್‌ಗೆ ಮೊಬೈಲ್ ಬಳಕೆಗೆ ಅವಕಾಶ ಮಾಡಿಕೊಟ್ಟಿದ್ದರೆ ಎಂಬ ಅನುಮಾನ ಮೂಡಿದೆ. ಆಗಸ್ಟ್ 6 ರಂದು ಜೈಲು ಸಿಬ್ಬಂದಿ ನಡೆಸಿದ್ದ ಬ್ಯಾರಕ್ ಪರಿಶೀಲನೆ ಕೇವಲ ಕಾಟಾಚಾರಕ್ಕಿತ್ತೇ ಎಂಬ ಪ್ರಶ್ನೆಗಳು ಎದ್ದಿವೆ.

ವರ್ಗಾವಣೆ ಬೆನ್ನಲ್ಲೇ ಅಮಾನತು ಆದೇಶ

ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಈರಣ್ಣ ಅವರನ್ನು ಚಿಕ್ಕಮಗಳೂರು ಕಾರಾಗೃಹಕ್ಕೆ ವರ್ಗಾವಣೆ ಮಾಡಿ ಡಿಜಿಪಿ ಅಲೋಕ್ ಅವರು ಮಂಗಳವಾರವಷ್ಟೇ ಆದೇಶಿಸಿದ್ದರು. ಆದರೆ ವರ್ಗಾವಣೆ ಆದೇಶ ತಲುಪುವ ಮುನ್ನವೇ ಸಿಸಿಬಿ ದಾಳಿ ನಡೆದು ಪ್ರಜ್ವಲ್ ಸೆಲ್‌ನಲ್ಲಿ ಮೊಬೈಲ್ ಪತ್ತೆಯಾಗಿದೆ. ಪ್ರಜ್ವಲ್ ಇದ್ದ ವಿಭಾಗದ ಭದ್ರತಾ ಉಸ್ತುವಾರಿ ವಹಿಸಿದ್ದ ಈರಣ್ಣ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.

ಏರ್‌ಟೆಲ್‌ ಕಂಪನಿ ವಿರುದ್ಧ ಎಫ್‌ಐಆರ್ ದಾಖಲು

ಪರಪ್ಪನ ಅಗ್ರಹಾರ ಜೈಲಿನಲ್ಲಿ ಅತ್ಯಾಧುನಿಕ ಮೊಬೈಲ್ ಜಾಮರ್‌ಗಳನ್ನು ಅಳವಡಿಸಲಾಗಿದ್ದರೂ, ಆಂಧ್ರಪ್ರದೇಶ ಮೂಲದ ಏರ್‌ಟೆಲ್‌ ಸಿಮ್‌ಗಳು ಮಾತ್ರ ತಡೆರಹಿತವಾಗಿ ಸಕ್ರಿಯವಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಜಾಮರ್ ಇದ್ದರೂ ಏರ್‌ಟೆಲ್ ಸಿಗ್ನಲ್‌ಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬ ಬಗ್ಗೆ ಕಂಪನಿಯ ಅಧಿಕಾರಿಗಳಿಂದ ಸೂಕ್ತ ವಿವರಣೆ ಸಿಗದ ಹಿನ್ನೆಲೆಯಲ್ಲಿ, ಏರ್‌ಟೆಲ್ ಕಂಪನಿ ವಿರುದ್ಧ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲು ಡಿಜಿಪಿ ಅಲೋಕ್ ಸೂಚಿಸಿದ್ದಾರೆ.

ಮನೆ ಊಟ ಹಾಗೂ ಮಂಚದ ಸೌಲಭ್ಯಕ್ಕೆ ಬ್ರೇಕ್

ಈ ಹಿಂದೆ ಅನಾರೋಗ್ಯದ ನೆಪವೊಡ್ಡಿ ಸೆಲ್‌ನಲ್ಲಿ ಪಡೆಯಲಾಗಿದ್ದ ದಿವಾನ್ ಕಾಟ್ (ಮಂಚ) ಹಾಗೂ ನ್ಯಾಯಾಲಯದ ಅನುಮತಿಯೊಂದಿಗೆ ನೀಡಲಾಗುತ್ತಿದ್ದ ಮನೆ ಊಟದ ಸೌಲಭ್ಯವನ್ನು ಕಾರಾಗೃಹ ಅಧಿಕಾರಿಗಳು ಈಗ ಸಂಪೂರ್ಣವಾಗಿ ರದ್ದುಗೊಳಿಸಿದ್ದಾರೆ. ಪ್ರಜ್ವಲ್ ಅವರಿಗೆ ಸಜಾ ಖೈದಿಯ ನಿಯಮಾವಳಿಗಳು ಅನ್ವಯವಾಗುವುದರಿಂದ ಮಂಚವನ್ನು ತೆರವುಗೊಳಿಸಿ, ಜೈಲಿನ ಊಟವನ್ನೇ ಕಡ್ಡಾಯಗೊಳಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಜೈಲಿನಲ್ಲಿ ಅಕ್ರಮಗಳಿಗೆ ಸಹಕರಿಸಿದ ಮತ್ತಷ್ಟು ಸಿಬ್ಬಂದಿಯ ವಿರುದ್ಧ ಕ್ರಮ ಜರುಗುವ ಸಾಧ್ಯತೆಯಿದೆ.