ಲೋಕಾಯುಕ್ತ ಪೊಲೀಸರು ರಾಜ್ಯಾದ್ಯಂತ 10 ಅಧಿಕಾರಿಗಳ ಮೇಲೆ ದಾಳಿ ನಡೆಸಲಾಗಿದೆ. ಈ ಪೈಕಿ ಬೆಂಗಳೂರಿನ ಮೂವರು ಪ್ರಮುಖ ಅಧಿಕಾರಿಗಳಾದ ನರೇಂದ್ರ ಕುಮಾರ್, ಪ್ರವೀಣ್ ಶ್ರೀಹರಿ, ಮತ್ತು ಪುಷ್ಪ ಡಿ.ಆರ್. ಅವರ ಮನೆಗಳಲ್ಲಿ ಅಪಾರ ಪ್ರಮಾಣದ ನಗದು, ಚಿನ್ನಾಭರಣ, ಮತ್ತು ಸ್ಥಿರಾಸ್ತಿಗಳು ಪತ್ತೆಯಾಗಿವೆ.

ಬೆಂಗಳೂರು (ಜು.08): ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಪೊಲೀಸರು ಇಂದು ರಾಜ್ಯಾದ್ಯಂತ ಬೃಹತ್ ಬೇಟೆ ನಡೆಸಿದ್ದಾರೆ. ಒಟ್ಟು 7 ಜಿಲ್ಲೆಗಳ 10 ಅಧಿಕಾರಿಗಳಿಗೆ ಸಂಬಂಧಿಸಿದ 53 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದ್ದು, ಅಧಿಕಾರಿಗಳ ಅಕ್ರಮ ಆಸ್ತಿಯ ಪರ್ವತವೇ ಬಯಲಾಗಿದೆ. ಈ ಪೈಕಿ ಬೆಂಗಳೂರಿನ ಮೂವರು ಪ್ರಭಾವಿ ಅಧಿಕಾರಿಗಳ ಮನೆಯಲ್ಲಿ ಪತ್ತೆಯಾದ ಆಸ್ತಿಪಾಸ್ತಿ ಮತ್ತು ನಗದು ನೋಡಿ ಸ್ವತಃ ಲೋಕಾಯುಕ್ತ ಸಿಬ್ಬಂದಿಯೇ ದಂಗಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಂಗಳೂರಿನಲ್ಲಿ ದಾಳಿಗೊಳಗಾದ ಪ್ರಮುಖ ಅಧಿಕಾರಿಗಳು ಮತ್ತು ಅವರ ಬಳಿ ಪತ್ತೆಯಾದ ಅಕ್ರಮ ಆಸ್ತಿಯ ವಿವರ ಇಲ್ಲಿದೆ:

1. ನರೇಂದ್ರ ಕುಮಾರ್ ಎಂ. (ಸಹಾಯಕ ಅಭಿಯಂತರರು, ಲೋಕೋಪಯೋಗಿ ಇಲಾಖೆ)

  • ಲೋಕೋಪಯೋಗಿ ಇಲಾಖೆಯ ನರೇಂದ್ರ ಕುಮಾರ್ ಅವರಿಗೆ ಸೇರಿದ 4 ಸ್ಥಳಗಳ ಮೇಲೆ ದಾಳಿ ನಡೆಸಲಾಗಿತ್ತು.
  • ಸ್ಥಿರ ಆಸ್ತಿ: 3 ವಾಸದ ಮನೆಗಳು, 4 ಎಕರೆ ಕೃಷಿ ಜಮೀನು ಪತ್ತೆಯಾಗಿದ್ದು, ಇದರ ಮೌಲ್ಯ ಅಂದಾಜು ₹5.95 ಕೋಟಿ ಎಂದು ಅಂದಾಜಿಸಲಾಗಿದೆ.
  • ಚರ ಆಸ್ತಿ: ದಾಳಿ ವೇಳೆ ₹3.10 ಲಕ್ಷ ನಗದು ಜೊತೆಗೆ ಬರೋಬ್ಬರಿ ₹1.20 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ₹1.2 ಕೋಟಿ ನಗದು ಪತ್ತೆಯಾಗಿದೆ. 
  • ಅಲ್ಲದೆ, ₹89.16 ಲಕ್ಷ ಮೌಲ್ಯದ ಐಷಾರಾಮಿ ವಾಹನಗಳು ಮತ್ತು ₹27.46 ಲಕ್ಷ ಬ್ಯಾಂಕ್ ಠೇವಣಿ ಪತ್ತೆಯಾಗಿದೆ. 
  • ಇವರ ಒಟ್ಟು ಅಸಮತೋಲನ ಆಸ್ತಿ ₹5.75 ಕೋಟಿಗೂ ಅಧಿಕ ಎನ್ನಲಾಗಿದೆ.

2. ಪ್ರವೀಣ್ ಶ್ರೀಹರಿ ಬಿ. (ಅಧೀಕ್ಷಕ ಅಭಿಯಂತರರು, ಕೆ.ಆರ್.ಐ.ಡಿ.ಎಲ್, ಬೆಂಗಳೂರು)

  • ಕೆ.ಆರ್.ಐ.ಡಿ.ಎಲ್ ಅಧೀಕ್ಷಕ ಅಭಿಯಂತರ ಪ್ರವೀಣ್ ಶ್ರೀಹರಿ ಅವರಿಗೆ ಸೇರಿದ 5 ಕಡೆಗಳಲ್ಲಿ ಶೋಧ ನಡೆಸಲಾಯಿತು.
  • ಸ್ಥಿರ ಆಸ್ತಿ: ₹4.60 ಕೋಟಿ ಮೌಲ್ಯದ 2 ನಿವೇಶನಗಳು, 2 ವಾಸದ ಮನೆಗಳು ಹಾಗೂ 11 ಎಕರೆ ಕೃಷಿ ಜಮೀನನ್ನು ಇವರು ಹೊಂದಿದ್ದಾರೆ.
  • ಚರ ಆಸ್ತಿ: ₹2.35 ಲಕ್ಷ ನಗದು, ₹11.08 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ₹1.15 ಕೋಟಿ ಮೌಲ್ಯದ ಬೆಲೆಬಾಳುವ ವಾಹನಗಳು ಪತ್ತೆಯಾಗಿವೆ. 
  • ಇವರ ಅಸಮತೋಲನ ಆಸ್ತಿಯ ಒಟ್ಟು ಮೊತ್ತ ಸುಮಾರು ₹4.33 ಕೋಟಿ ಎಂದು ತಿಳಿದುಬಂದಿದೆ.

3. ಪುಷ್ಪ ಡಿ. ಆರ್ (ಹೆಚ್ಚುವರಿ ನಿರ್ದೇಶಕರು, ಕೃಷಿ ಮಾರಾಟ ಮಹಾ ಮಂಡಳಿ)

  • ಕೃಷಿ ಮಾರಾಟ ಮಹಾ ಮಂಡಳಿಯ ಹೆಚ್ಚುವರಿ ನಿರ್ದೇಶಕಿ ಪುಷ್ಪ ಅವರ 5 ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ ನಡೆಸಿದೆ.
  • ಸ್ಥಿರ ಆಸ್ತಿ: ಇವರ ಬಳಿ ಅಂದಾಜು ₹7.37 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. 
  • ಇದರಲ್ಲಿ 1 ನಿವೇಶನ, 3 ವಾಸದ ಮನೆಗಳು, 1 ವಾಣಿಜ್ಯ ಸಂಕೀರ್ಣ ಮತ್ತು 20 ಗುಂಟೆ ಕೃಷಿ ಜಮೀನು ಸೇರಿದೆ.
  • ಚರ ಆಸ್ತಿ: ₹72,000 ನಗದು ಮತ್ತು ₹35 ಲಕ್ಷ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ. 
  • ಇವರ ಒಟ್ಟು ಅಸಮತೋಲನ ಆಸ್ತಿಯ ಮೌಲ್ಯ ಬರೋಬ್ಬರಿ ₹5.93 ಕೋಟಿ ದಾಟಿದೆ.

ರಾಜ್ಯಾದ್ಯಂತ ನಡೆದ ಈ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. ಈ ಭ್ರಷ್ಟ ಅಧಿಕಾರಿಗಳ ಆದಾಯಕ್ಕಿಂತ ಹೆಚ್ಚಿನ ಆಸ್ತಿಯ ಮೂಲದ ಬಗ್ಗೆ ಶೋಧ ನಡೆಸಲಾಗುತ್ತಿದೆ.