ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ತೈಲ ಕಂಪನಿಗಳಿಗೆ 400 ಕೋಟಿ ರೂ.ಗೂ ಅಧಿಕ ಡೀಸೆಲ್ ಹಣ ಪಾವತಿಸದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಬಾಕಿ ಹಣ ಪಾವತಿಸದಿದ್ದರೆ ಇಂಧನ ಪೂರೈಕೆ ಸ್ಥಗಿತಗೊಳಿಸುವುದಾಗಿ ತೈಲ ಕಂಪನಿಗಳು ಎಚ್ಚರಿಕೆ ನೀಡಿವೆ. ಇದರಿಂದ ಲಕ್ಷಾಂತರ ಪ್ರಯಾಣಿಕರ ಸಂಚಾರದ ಮೇಲೆ ತೀವ್ರ ಪರಿಣಾಮ ಬೀರುವ ಆತಂಕ ಎದುರಾಗಿದೆ.
ಬೆಂಗಳೂರು: ನಗರದ ಸಾರಿಗೆ ಜೀವನಾಡಿಯಾಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ತೀವ್ರ ಆರ್ಥಿಕ ಸಂಕಷ್ಟಕ್ಕೆ ಈಡಾಗಿದೆ. ತೈಲ ಕಂಪನಿಗಳಿಗೆ ಕಳೆದ ಮೂರು ತಿಂಗಳಿನಿಂದ ಸುಮಾರು ₹400 ಕೋಟಿಗೂ ಅಧಿಕ ಡೀಸೆಲ್ ಹಣ ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿದ್ದು, ಈಗ ತೀವ್ರ ಹೊಡೆತ ಬಿದ್ದಿದೆ.
ಪ್ರತಿದಿನದ ಡೀಸೆಲ್ ಬಳಕೆ ಮತ್ತು ವೆಚ್ಚ
ಬಿಎಂಟಿಸಿಯ ಸಾವಿರಾರು ಬಸ್‌ಗಳ ಕಾರ್ಯಾಚರಣೆಗೆ ಪ್ರತಿದಿನ ಸರಾಸರಿ 2.5 ಲಕ್ಷ ಲೀಟರ್ ಡೀಸೆಲ್ ಬೇಕಾಗುತ್ತದೆ. ಈ ಬೃಹತ್ ಪ್ರಮಾಣದ ಇಂಧನ ಪೂರೈಕೆಗಾಗಿ ಸಂಸ್ಥೆಯು ಪ್ರತಿದಿನ ತೈಲ ಕಂಪನಿಗಳಿಂದ ಸುಮಾರು ₹2 ರಿಂದ ₹3 ಕೋಟಿ ಮೌಲ್ಯದ ಡೀಸೆಲ್ ಖರೀದಿ ಮಾಡುತ್ತದೆ. ಆದರೆ, ಕಳೆದ ಮೂರು ತಿಂಗಳಿಂದ ಈ ಹಣವನ್ನು ಪಾವತಿಸಲು ಸಾಧ್ಯವಾಗದ ಕಾರಣ ಬಾಕಿ ಮೊತ್ತವು ಬೃಹತ್ ಪ್ರಮಾಣದಲ್ಲಿ ಬೆಳೆಯುತ್ತಲೇ ಸಾಗಿದೆ.
ಬಾಕಿ ಹಣ ತೀರಿಸುವಂತೆ ತೈಲ ಕಂಪನಿಗಳ ಎಚ್ಚರಿಕೆ
ಬಾಕಿ ಇರುವ ಹಣವನ್ನು ತಕ್ಷಣವೇ ಪಾವತಿಸಬೇಕು, ಇಲ್ಲವಾದಲ್ಲಿ ಬಿಎಂಟಿಸಿ ಬಸ್‌ಗಳಿಗೆ ನೀಡಲಾಗುತ್ತಿರುವ ಇಂಧನ ಪೂರೈಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದಾಗಿ ತೈಲ ಮಾರಾಟ ಕಂಪನಿಗಳು ಬಿಎಂಟಿಸಿಗೆ ಪತ್ರ ಬರೆದು ಎಚ್ಚರಿಕೆ ನೀಡಿದೆ. ಒಂದು ವೇಳೆ ತೈಲ ಕಂಪನಿಗಳು ಇಂಧನ ಪೂರೈಕೆಯನ್ನು ಸ್ಥಗಿತಗೊಳಿಸಿದರೆ, ಇಂಧನದ ಕೊರತೆಯಿಂದಾಗಿ ಸಾವಿರಾರು ಬಸ್‌ಗಳು ತಮ್ಮ ಕಾರ್ಯಾಚರಣೆಯನ್ನು ನಿಲ್ಲಿಸಿ ಗ್ಯಾರೇಜ್ ಸೇರುವುದು ಪಕ್ಕಾ. ಮಾತ್ರವಲ್ಲ ಪ್ರತಿದಿನ ಬಿಎಂಟಿಸಿಯನ್ನೇ ನಂಬಿ ಪ್ರಯಾಣಿಸುವ ಲಕ್ಷಾಂತರ ಬೆಂಗಳೂರಿನ ಜನರ ದಿನನಿತ್ಯದ ಸಂಚಾರದ ಮೇಲೆ ಇದು ತೀವ್ರ ಪರಿಣಾಮ ಬೀರಲಿದೆ.
ಈ ಬಗ್ಗೆ ಮಾತನಾಡಿದ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಘುನಂದನ್ ಮೂರ್ತಿ ಅವರು ಸಾಮಾನ್ಯವಾಗಿ ತೈಲ ಕಂಪನಿಗಳಿಗೆ ಹಣ ಪಾವತಿ ಮಾಡ್ತಾ ಇದ್ದೇವೆ. ಹಂತ ಹಂತವಾಗಿ ಪಾವತಿ ಮಾಡುವಾಗ ಬ್ಯಾಲೆನ್ಸ್ ಉಳಿದಿರುತ್ತೆ. ತೈಲ ಬಾಕಿ ಬಗ್ಗೆ ಕಂಪನಿಗಳ ಜೊತೆಗೆ ಚರ್ಚೆ ಮಾಡ್ತಾ ಇದ್ದೇವೆ. ಹಣ ಪಾವತಿ ಮಾಡುವ ಬಗ್ಗೆ ಕಂಪನಿಗಳಿಗೆ ಆಶ್ವಾಸನೆ ನೀಡಿದ್ದೇವೆ. ಆದಷ್ಟು ಬೇಗ ಎಲ್ಲವನ್ನೂ ಪಾವತಿ ಮಾಡ್ತೇವೆ. ತೈಲ ಕಂಪನಿಗಳು ನಮಗೆ ಕ್ರೇಡಿಟ್ ನೀಡುತ್ತದೆ. ಆ ಕ್ರೇಡಿಟ್‌ಗೆ ತಕ್ಕಂತೆ ಪಾವತಿ ಮಾಡ್ತೇವೆ ಎಂದು ಹೇಳಿದ್ದಾರೆ.
ಪ್ರಸ್ತುತ ಆಡಳಿತ ಮಂಡಳಿಯು ತೈಲ ಕಂಪನಿಗಳಿಗೆ ಹಣ ಪಾವತಿಸಲು ಕ್ರಮ ಕೈಗೊಳ್ಳುತ್ತಿದ್ದು, ಸಂಸ್ಥೆಯ ಆರ್ಥಿಕ ಸ್ಥಿತಿಯನ್ನು ಸರಿದೂಗಿಸಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಯಾವುದೇ ಸಮಸ್ಯೆ ಬಾರದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.

