ಬೆಂಗಳೂರು ಸಂಚಾರ ಪೊಲೀಸರು 'ಕಾಪ್ ಫಾರ್ ದಿ ಡೇ' ಯೋಜನೆಯನ್ನು ಪುನರಾರಂಭಿಸಿದ್ದು, ಸಾರ್ವಜನಿಕರಿಗೆ ಒಂದು ದಿನ ಪೊಲೀಸರೊಂದಿಗೆ ಸೇರಿ ಟ್ರಾಫಿಕ್ ನಿಯಂತ್ರಣದ ಸವಾಲುಗಳನ್ನು ನೇರವಾಗಿ ಅನುಭವಿಸಲು ಅವಕಾಶ ನೀಡಿದ್ದಾರೆ. BTP ASTraM ಆ್ಯಪ್ ಮೂಲಕ ನೋಂದಾಯಿಸಿಕೊಂಡು, ತರಬೇತಿ ಪಡೆದು ನಗರದ ಜಂಕ್ಷನ್‌ಗಳಲ್ಲಿ ಕೆಲಸ ಮಾಡುವ ಈ ವಿಶಿಷ್ಟ ಅನುಭವದ ಭಾಗವಾಗಬಹುದು.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆಗಳಲ್ಲಿ ನಿತ್ಯ ಉಂಟಾಗುವ ಭೀಕರ ಟ್ರಾಫಿಕ್ ಜಾಮ್, ಸಿಗ್ನಲ್ ಜಂಪ್ ಮಾಡುವ ವಾಹನ ಸವಾರರು, ಧೂಳು-ಹೊಗೆಯ ನಡುವೆ ನಿಂತು ಟ್ರಾಫಿಕ್ ನಿಯಂತ್ರಿಸುವುದು ಎಷ್ಟು ಕಷ್ಟ? ಈ ಸವಾಲನ್ನು ಸಾರ್ವಜನಿಕರೂ ಸ್ವತಃ ಅನುಭವಿಸಿ ತಿಳಿದುಕೊಳ್ಳಲಿ ಎಂಬ ಉದ್ದೇಶದಿಂದ ಬೆಂಗಳೂರು ನಗರ ಸಂಚಾರ ಪೊಲೀಸರು (BTP) ‘ಕಾಪ್ ಫಾರ್ ಎ ಡೇ’ (Cop for the Day) ಎಂಬ ವಿನೂತನ ಅಭಿಯಾನವನ್ನು ಮರುಪ್ರಾರಂಭಿಸಿದ್ದಾರೆ.
ಸಂಚಾರ ಪೊಲೀಸರ ಕರ್ತವ್ಯದ ಸವಾಲುಗಳನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡುವುದು ಮತ್ತು ಸುಗಮ ಸಂಚಾರಕ್ಕೆ ಸಾರ್ವಜನಿಕರಿಂದಲೇ ನೇರ ಸಲಹೆಗಳನ್ನು ಪಡೆಯುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
'ಕಾಪ್ ಫಾರ್ ಎ ಡೇ' ಯೋಜನೆಯಲ್ಲಿ ಏನಿರಲಿದೆ?
ಬೆಂಗಳೂರು ಟ್ರಾಫಿಕ್ ಪೊಲೀಸರು ತಮ್ಮ ಅಧಿಕೃತ ‘X’ (ಹಿಂದಿನ ಟ್ವಿಟರ್) ಖಾತೆಯ ಮೂಲಕ ನಗರವಾಸಿಗಳಿಗೆ ಮುಕ್ತ ಆಹ್ವಾನ ನೀಡಿದ್ದಾರೆ. ನಮಸ್ತೆ ಬೆಂಗಳೂರು! 'ಒಂದು ದಿನದ ಮಟ್ಟಿಗೆ ಪೊಲೀಸ್ ಆಗಿ' (Cop for the Day) ಕಾರ್ಯಕ್ರಮದ ಮೂಲಕ ಸಂಚಾರ ಪೋಲಿಸ್ ಪಾತ್ರದಲ್ಲಿ ಹೆಜ್ಜೆ ಇಡಿ ಮತ್ತು ಬೆಂಗಳೂರು ಸಂಚಾರವನ್ನು ಅವರ ದೃಷ್ಟಿಕೋನದಿಂದ ಅನುಭವಿಸಿ. ನಮ್ಮ ಸಂಚಾರ ಸಿಬ್ಬಂದಿ ಎದುರಿಸುವ ಸವಾಲುಗಳನ್ನು ಪ್ರತ್ಯಕ್ಷವಾಗಿ ಅರ್ಥಮಾಡಿಕೊಳ್ಳಿ, ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ ಮತ್ತು ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕಾಗಿ ಅಮೂಲ್ಯ ಸಲಹೆಗಳನ್ನು ನೀಡಿ. BTP ASTraM ಆಪ್ ಮೂಲಕ ನೋಂದಾಯಿಸಿ ಮತ್ತು ಒಂದು ದಿನದ ಕಾಪ್ ಆಗಿ! ಅನುಭವಿಸಿ. ಅರ್ಥಮಾಡಿಕೊಳ್ಳಿ. ಭಾಗವಹಿಸಿ. ಒಟ್ಟಾಗಿ, ಸುರಕ್ಷಿತ ಬೆಂಗಳೂರನ್ನು ನಿರ್ಮಿಸೋಣ' ಎಂದು ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.
ತರಬೇತಿಗೆ ಆಯ್ಕೆಯಾದ ನಾಗರಿಕರಿಗೆ ಮೊದಲು ಹಿರಿಯ ಟ್ರಾಫಿಕ್ ಪೊಲೀಸ್ ಅಧಿಕಾರಿಗಳಿಂದ ಟ್ರಾಫಿಕ್ ನಿಯಮಗಳು, ಸಿಗ್ನಲ್ ನಿರ್ವಹಣೆ ಮತ್ತು ಜನರೊಂದಿಗೆ ವರ್ತಿಸುವ ಕುರಿತು ಅಗತ್ಯ ತರಬೇತಿ ನೀಡಲಾಗುತ್ತದೆ. ತರಬೇತಿಯ ನಂತರ ನಗರದ ಪ್ರಮುಖ ಮತ್ತು ಅತಿ ಹೆಚ್ಚು ದಟ್ಟಣೆ ಇರುವ ಜಂಕ್ಷನ್‌ಗಳಲ್ಲಿ, ಪೀಕ್ ಅವರ್ಸ್ (Peak Hours) ಸಮಯದಲ್ಲಿ ಖುದ್ದು ಪೊಲೀಸರ ಜೊತೆಯಲ್ಲೇ ನಿಂತು ವಾಹನ ಸಂಚಾರ ನಿಯಂತ್ರಿಸುವ ಮತ್ತು ನಿಯಮ ಉಲ್ಲಂಘನೆಗಳನ್ನು ಗಮನಿಸುವ ಅವಕಾಶ ಸಿಗಲಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ನಗರ ನಿವಾಸಿಗಳು ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್ ಆಪ್ ಸ್ಟೋರ್‌ನಿಂದ ‘BTP ASTraM’ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಆ್ಯಪ್‌ನಲ್ಲಿ ನೀಡಲಾಗಿರುವ ಲಿಂಕ್ ಮೂಲಕ ‘ಕಾಪ್ ಫಾರ್ ಎ ಡೇ’ ಕಾರ್ಯಕ್ರಮಕ್ಕೆ ನೋಂದಣಿ (Register) ಮಾಡಿಕೊಳ್ಳಬೇಕು. ಬಂದ ಅರ್ಜಿಗಳನ್ನು ಪರಿಶೀಲಿಸಿ, ಅರ್ಹರನ್ನು ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗುತ್ತದೆ.
ನೆಟ್ಟಿಗರ ಮೆಚ್ಚುಗೆ ಜೊತೆಗೆ ತೀವ್ರ ಟ್ರೋಲ್!
ಬೆಂಗಳೂರು ಪೊಲೀಸರ ಈ ಹೊಸ ಐಡಿಯಾ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಜನರಿಂದ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. 'ಇದು ಅತ್ಯುತ್ತಮ ಉಪಕ್ರಮ. ಬಿಸಿಲು, ಧೂಳಿನಲ್ಲಿ ದಿನವಿಡೀ ನಿಲ್ಲುವ ಪೊಲೀಸರ ಕಷ್ಟ ಜನರಿಗೆ ಅರ್ಥವಾಗುತ್ತದೆ. ನಿಯಮ ಮುರಿಯುವ ಸವಾರರನ್ನು ನೇರವಾಗಿ ನಿಭಾಯಿಸಿದಾಗ ಕಾನೂನಿನ ಮಹತ್ವ ತಿಳಿಯುತ್ತದೆ. ಮುಂಬೈ, ಪುಣೆಯಲ್ಲೂ ಇಂತಹ ನಿಯಮ ಬರಬೇಕು' ಎಂದು ಹಲವರು ಶ್ಲಾಘಿಸಿದ್ದಾರೆ.
ಮತ್ತೊಂದೆಡೆ ನೆಟ್ಟಿಗರು ಕಟುವಾಗಿಯೇ ಪ್ರತಿಕ್ರಿಯಿಸಿದ್ದು, 'ಜನರಿಗೆ ಟ್ರಾಫಿಕ್ ನಿಯಂತ್ರಿಸಲು ಹೇಳುವ ಮುನ್ನ ಮೊದಲು ರಸ್ತೆಗಳಲ್ಲಿರುವ ಗುಂಡಿಗಳನ್ನು (Potholes) ಮುಚ್ಚಿ ರಸ್ತೆ ಸರಿಮಾಡಿ', 'ಸಾಮಾನ್ಯ ಜನರೊಂದಿಗೆ ನಯವಾಗಿ ಮತ್ತು ಗೌರವದಿಂದ ಮಾತನಾಡುವುದನ್ನು ಮೊದಲು ಪೊಲೀಸರಿಗೆ ತರಬೇತಿ ನೀಡಿ' ಎಂದು ಕಿಡಿಕಾರಿದ್ದಾರೆ. ಏನೇ ಇರಲಿ, ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಹಾಡಲು ಪೊಲೀಸ್ ಇಲಾಖೆ ಹಾಗೂ ನಾಗರಿಕರ ನಡುವಿನ ಈ ಸಮನ್ವಯ ಎಷ್ಟರಮಟ್ಟಿಗೆ ಫಲ ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ.


