ನೇಪಾಳದ ಚಿತ್ವಾನ್‌ನಲ್ಲಿ ನಡೆದ ಮದುವೆಯೊಂದರಲ್ಲಿ ಘೇಂಡಾಮೃಗವೊಂದು ಅನಿರೀಕ್ಷಿತವಾಗಿ ಆಗಮಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೆಲವರು ಜೋರಾಗಿ ಹಸಿವಾದಾಗ ಹಾಗೂ ಸ್ನೇಹಿತರು, ಕೆಲವು ಹಾಸ್ಟೆಲ್‌ನಲ್ಲಿದ್ದು ಓದುವ ವಿದ್ಯಾರ್ಥಿಗಳು ಜೊತೆಗಿದ್ದಾಗ ಮೋಜು ಮಾಡುವುದಕ್ಕಾಗಿ ಅಪರಿಚಿತರ ಮದುವೆಗೆ ಎಂಟ್ರಿ ಕೊಟ್ಟು ಹೊಟ್ಟೆತುಂಬಾ ಊಟ ಮಾಡಿ ಮದುವೆ ಮನೆಯಿಂದ ಹೋಗುವುದನ್ನು ನೀವು ಕೇಳಿರಬಹುದು. ಆದರೆ ಇಲ್ಲೊಂದು ಕಡೆ ಹೊಟ್ಟೆ ಹಸಿವಿನಿಂದ ಕಂಗಾಲಾದ ಘೇಂಡಾಮೃಗವೊಂದು ಮದುವೆ ಮನೆಗೆ ಎಂಟ್ರಿ ಕೊಟ್ಟಿದೆ. ಸಾಮಾಜಿಕ ಜಾಲತಾಣದಲ್ಲಿ ಇದರ ವೀಡಿಯೋ ಈಗ ವೈರಲ್ ಆಗಿದೆ. ನೆರೆಯ ನೇಪಾಳದಲ್ಲಿ ಈ ಘಟನೆ ನಡೆದಿದೆ. ಮದುವೆ ಮನೆಯೊಳಗೆ ಬಂದ ವಿಶೇಷ ಅತಿಥಿಯನ್ನು ನೋಡಿ ಜನ ಒಂದು ಕ್ಷಣ ಗಾಬರಿಯಾಗಿದ್ದಾರೆ.
ವೈರಲ್ ಆದ ವಿಡಿಯೋದಲ್ಲಿ ಮದುವೆ ಮನೆಗೆ ಸ್ವಾಗತ ಕೋರುತ್ತಿರುವ ಬ್ಯಾನರನ್ನು ಕಾಣಬಹುದು. ಜೊತೆಗೆ ಈ ಘೇಂಡಾಮೃಗ ಮದುವೆ ಮನೆಯ ದ್ವಾರದ ಮೂಲಕ ಒಳಗೆ ನಿಧಾನವಾಗಿ ಸಾಗುತ್ತಾ ಅಲ್ಲಿ ಓಡಾಡುವುದನ್ನು ನೋಡಬಹುದಾಗಿದೆ. ಅಂದಹಾಗೆ ಈ ಘಟನೆ ನಡೆದಿರುವುದು ನೇಪಾಳದ ಚಿತ್ವಾನ್‌ನಲ್ಲಿ ಅಲ್ಲಿ ಮದುವೆಯ ಅರತಕ್ಷತೆಯನ್ನು ಆಯೋಜಿಸಲಾಗಿತ್ತು.. ಅಲ್ಲಿಗೆ ಎಂಟ್ರಿಕೊಟ್ಟ ಕಾಡಿನ ಸುಂದರಿ ಅಲ್ಲಿದ್ದವರನ್ನೆಲ್ಲಾ ಒಂದು ಕ್ಷಣ ದಂಗಾಗಿಸಿದೆ.
ಹೀಗೆ ಮದುವೆ ರಿಸೆಪ್ಷನ್‌ಗೆ ಎಂಟ್ರಿಕೊಟ್ಟ ಘೇಂಡಾಮೃಗ ಮದುವೆ ಇಲ್ಲಿಗೆ ಸಮೀಪದ ಚಿತ್ವಾನ್ ರಾಷ್ಟ್ರೀಯ ಉದ್ಯಾನವನದಿಂದ ಬಂದಿರಬಹುದು ಎಂದು ಊಹಿಸಲಾಗಿದೆ. ಆದರೆ ಇದು ಯಾವಾಗ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆದಾಗಿನಿಂದ ಅನೇಕರು ಈ ವೀಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ. ಹಲವರು ಇದೊಂದು ಸುಂದರವಾದ ದೃಶ್ಯ ಎಂದು ಕರೆದರೆ ಮತ್ತೆ ಕೆಲವರು ಇದರ ಬಗ್ಗೆ ಹಾಸ್ಯ ಮಾಡಿದ್ದಾರೆ.
gags.nepal ಎಂಬ ಇನ್ಸ್ಟಾ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದೆ. ಒಬ್ಬರು ಈ ಘೇಂಡಾಮೃಗದ ಭೇಟಿಯನ್ನು ವೈಲ್ಡ್ ಕಾರ್ಡ್ ಎಂಟ್ರಿ ಎಂದು ಕರೆದಿದ್ದಾರೆ. ಮತ್ತೊಬ್ಬರು ಇದು ಒಳ್ಳೆ ಗುಣನಡತೆಯ ಘೇಂಡಾಮೃಗ ಇದರ ಪೋಷಕರು ಅದಕ್ಕೆ ಚೆನ್ನಾಗಿ ಬುದ್ಧಿ ಕಲಿಸಿದ್ದಾರೆ ಎಂದು ಕರೆದಿದ್ದಾರೆ. ಮತ್ತೆ ಕೆಲವರು ಇದು ವಿಷ್ಣುವಿನ ವಾಹ ಹೀಗಾಗಿ ಇಲ್ಲಿ ಮದುವೆ ಆಗುತ್ತಿರುವವರಿಗೆ ದೇವರು ಆಶೀರ್ವದಿಸಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಈ ಘೇಂಡಾಮೃಗ ಬಹಳ ಕುತೂಹಲದಿಂದ ಎಲ್ಲವನ್ನೂ ಇಲ್ಲಿ ವೀಕ್ಷಿಸುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ.
