ರಷ್ಯಾದಲ್ಲಿ ಪುಟಿನ್ ಆಪ್ತನ ಖಾಸಗಿ ಸೇನೆ ದಿಢೀರ್ ಸೈಲೆಂಟ್: ಮಾಸ್ಕೋಗೆ ಲಗ್ಗೆ ನಿರ್ಧಾರದಿಂದ ಹಿಂದೆ ಸರಿದ ವ್ಯಾಗ್ನರ್!
Russia Coup: ಮಾಸ್ಕೋದತ್ತ ಮುನ್ನುಗ್ಗುತ್ತಿರುವುದಾಗಿ ಹೇಳಿದ್ದ ವ್ಯಾಗ್ನರ್ ಪಡೆ ಮುಖ್ಯಸ್ಥ ಯೆವ್ಗೆನಿ ಪ್ರಿಗೋಝಿನ್, ತಡರಾತ್ರಿ ತಣ್ಣಗಾದಂತೆ ಕಂಡುಬಂದಿದ್ದಾರೆ. ರಷ್ಯಾ ಸ್ನೇಹಿತ ದೇಶವಾದ ಬೆಲರೂಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೋ ಸಂಧಾನಕ್ಕೆ ಇಳಿದಿದ್ದು, ಅದು ಯಶಸ್ವಿಯಾಗಿದೆ.
ಮಾಸ್ಕೋ (ಜೂನ್ 25, 2023): ಉಕ್ರೇನ್ ಮೇಲೆ ಯುದ್ಧ ಆರಂಭಿಸಿ ಒಂದೂವರೆ ವರ್ಷ ಕಳೆದರೂ ಯಶಸ್ಸು ಸಿಗದೆ ಬಸವಳಿದಿದ್ದ ರಷ್ಯಾಗೆ ಇದೀಗ ಮತ್ತೊಂದು ದೊಡ್ಡ ಸಮಸ್ಯೆ ಎದುರಾಗಿದೆ. ರಷ್ಯಾ ಸೇನೆ ತನ್ನನ್ನು ಕಡೆಗಣಿಸಿದೆ ಎಂದು ಆರೋಪಿಸಿರುವ ‘ವ್ಯಾಗ್ನರ್’ ಎಂಬ ಈ ಹಿಂದಿನ ರಷ್ಯಾ ಬೆಂಬಲಿತ ಖಾಸಗಿ ಸೇನಾ ಪಡೆ, ಇದೀಗ ನೇರವಾಗಿ ರಷ್ಯಾದ ಮೇಲೆ ಸಶಸ್ತ್ರ ಬಂಡಾಯ ಘೋಷಿಸಿದೆ. ರಷ್ಯಾ ಅಧ್ಯಕ್ಷರು, ರಕ್ಷಣಾ ಸಚಿವರು ಹಾಗೂ ಸೇನಾ ಮುಖ್ಯಸ್ಥರ ಪದಚ್ಯುತಿಯ ಪಣ ತೊಟ್ಟಿರುವ ವ್ಯಾಗ್ನರ್ ಸೇನೆ, ರಷ್ಯಾದ ರೋಸ್ತೋವ್ ನಗರ ಕೈವಶ ಮಾಡಿಕೊಂಡಿದೆ. ಈ ನಡುವೆ, ಶನಿವಾರ ಸಂಜೆಯವರೆಗೆ ಮಾಸ್ಕೋದತ್ತ ಮುನ್ನುಗ್ಗುತ್ತಿರುವುದಾಗಿ ಹೇಳಿದ್ದ ವ್ಯಾಗ್ನರ್ ಪಡೆ ಮುಖ್ಯಸ್ಥ ಯೆವ್ಗೆನಿ ಪ್ರಿಗೋಝಿನ್, ತಡರಾತ್ರಿ ತಣ್ಣಗಾದಂತೆ ಕಂಡುಬಂದಿದ್ದಾರೆ.
ರಷ್ಯಾ ಸ್ನೇಹಿತ ದೇಶವಾದ ಬೆಲರೂಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೋ ಸಂಧಾನಕ್ಕೆ ಇಳಿದಿದ್ದು, ಅದು ಯಶಸ್ವಿಯಾಗಿದೆ. ‘ಮಾಸ್ಕೋದತ್ತ ಮುನ್ನುಗ್ಗದೆ ದಾಳಿ ನಿಲ್ಲಿಸಲು ನಮ್ಮ ಸೈನಿಕರಿಗೆ ನಾವು ಸೂಚಿಸಿದ್ದೇವೆ. ರಕ್ತಪಾತ ನಮಗೆ ಇಷ್ಟವಿಲ್ಲ’ ಎಂದು ವ್ಯಾಗ್ನರ್ ಸೇನೆ ಮುಖ್ಯಸ್ಥ ಯೆವ್ಗೆನಿ ಹೇಳಿದ್ದಾರೆ. ಇದರಿಂದ ಕ್ಷಿಪ್ರಕ್ರಾಂತಿ ಆತಂಕದಲ್ಲಿದ್ದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕೊಂಚ ನಿರಾಳರಾಗಿದ್ದಾರೆ.
ಇದನ್ನು ಓದಿ: ಪುಟಿನ್ ವಿರುದ್ಧವೇ ತಿರುಗಿಬಿದ್ದ ವ್ಯಾಗ್ನರ್, ಶೀಘ್ರವೇ ರಷ್ಯಾಕ್ಕೆ ಹೊಸ ಅಧ್ಯಕ್ಷ ಎಂದ ರೆಬಲ್ ಆರ್ಮಿ!
ಇದಕ್ಕೂ ಮುನ್ನ ಅಂತರ್ಯುದ್ಧ ಆರಂಭವಾದ ಬೆನ್ನಲ್ಲೇ ದೇಶವನ್ನು ಉದ್ದೇಶಿಸಿ ಮಾತನಾಡಿದ ಪುಟಿನ್, ‘ಒಂದು ನಗರ ನಮ್ಮ ಕೈತಪ್ಪಿದೆ. ಬಂಡಾಯ ಏಳುವವರ, ಬೆನ್ನಿಗೆ ಚೂರಿ ಹಾಕಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ಸಶಸ್ತ್ರ ಪಡೆಗಳು ಮತ್ತು ಇತರೆ ಸರ್ಕಾರಿ ಸಂಸ್ಥೆಗಳಿಗೆ ಅಗತ್ಯ ಸೂಚನೆ ನೀಡಲಾಗಿದೆ. ಇಂಥ ಸಶಸ್ತ್ರ ಬಂಡಾಯದಿಂದ ದೇಶವನ್ನು ರಕ್ಷಿಸಿಕೊಳ್ಳಲು ನಾವು ಬದ್ಧ ಮತ್ತು ಸಿದ್ಧರಾಗಿದ್ದೇವೆ’ ಎಂದು ಎಚ್ಚರಿಸಿದರು. ಮತ್ತೊಂದೆಡೆ ಸೇನೆ ಕೂಡಾ ಪ್ರಿಗೋಝೀನ್ ಬಂಧನಕ್ಕೆ ಆದೇಶಿಸಿತು.
ಪ್ರಿಗೋಝಿನ್ ಕೂಡ, ‘50 ಸಾವಿರ ಸೈನಿಕರೊಂದಿಗೆ ಮಾಸ್ಕೋದತ್ತ ಮುನ್ನುಗ್ಗುತ್ತಿದ್ದೇವೆ. ಆದಷ್ಟು ಶೀಘ್ರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ರಷ್ಯಾದ ರಕ್ಷಣಾ ಸಚಿವ ಸೆರ್ಗೇಯ್ ಶೋಯ್ಗು ಮತ್ತು ಸೇನಾ ಮುಖ್ಯಸ್ಥ ಜ.ವಲೆರಿ ಗೆರಸಿಮೋವ್ ಅವರನ್ನು ಪದಚ್ಯುತ ಮಾಡುತ್ತೇವೆ’ ಎಂದು ಘೋಷಿಸಿದರು. ಅಲ್ಲದೆ ಈಗಾಗಲೇ ರಷ್ಯಾದ ರೊಸ್ತೋವ್ ಪಟ್ಟಣವನ್ನು ಕೈವಶ ಮಾಡಿಕೊಂಡಿದ್ದು, ಶೀಘ್ರವೇ ಮಾಸ್ಕೋ ಸೇರಿ ಇನ್ನಷ್ಟು ಪ್ರದೇಶಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವುದಾಗಿ ಪ್ರಿಗೋಝಿನ್ ಹೇಳಿದ್ದರು.
ಇದನ್ನೂ ಓದಿ: ಉಕ್ರೇನ್ ವಿರುದ್ಧ ಯುದ್ಧದ ಪಾಪ: ಪುಟಿನ್ ದೃಷ್ಟಿಮಂದ, ನಾಲಿಗೆ ಸ್ತಬ್ಧ, ಸಂವೇದನೆಯೂ ಇಲ್ಲ; ವೈದ್ಯರ ಕಳವಳ
ಇದರ ಬೆನ್ನಲ್ಲೇ, ರಷ್ಯಾದ ಕೆಲ ನಗರಗಳಲ್ಲಿ ಪರಸ್ಪರ ಗುಂಡಿನ ದಾಳಿ, ಹೆಲಿಕಾಪ್ಟರ್ ಮೇಲೆ ದಾಳಿ, ತೈಲ ಬಂಕ್ಗಳ ಮೇಲೆ ದಾಳಿ ಘಟನೆಗಳು ನಡೆದವು. ರಷ್ಯಾದ 4 ಹೆಲಿಕಾಪ್ಟರ್ಗಳನ್ನೂ ವ್ಯಾಗ್ನರ್ ಸೇನೆ ಹೊಡೆದುರುಳಿಸಿದವು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜಧಾನಿ ಮಾಸ್ಕೋ ಸೇರಿದಂತೆ ಪ್ರಮುಖ ನಗರಗಳಲ್ಲಿನ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಆಯಕಟ್ಟಿನ ಪ್ರದೇಶಗಳಿಗೆ ಹೆಚ್ಚಿನ ರಕ್ಷಣೆ ನೀಡಲಾಗಿದೆ. ಜುಲೈ 1 ರವರೆಗೆ ಮಾಸ್ಕೋ ವಲಯದಲ್ಲಿ ಎಲ್ಲ ಶಾಲೆಗೆ ರಜೆ ಸಾರಲಾಗಿದೆ. ಹೊರಾಂಗಣ ಸಭೆ ನಿರ್ಬಂಧಿಸಲಾಗಿದೆ. ಸೋಮವಾರ ಮಾಸ್ಕೋ ರಸ್ತೆಗಳಲ್ಲಿ ವಾಹನ ಸಂಚಾರ ಕೂಡ ನಿರ್ಬಂಧಿಸಲಾಗಿದೆ.
ದಿಢೀರ್ ಬಂಡಾಯ:
ರಷ್ಯಾ ಪರವಾಗಿ ಉಕ್ರೇನ್ನಲ್ಲಿ ಯುದ್ಧ ಮಾಡುತ್ತಿದ್ದ ವ್ಯಾಗ್ನರ್ ಸೇನೆ ಶನಿವಾರ ಬೆಳಗ್ಗೆ ಮರಳಿ ರಷ್ಯಾ ಪ್ರವೇಶ ಮಾಡಿದ್ದು ರಷ್ಯಾದಲ್ಲಿ ಸಶಸ್ತ್ರ ಬಂಡಾಯ ಘೋಷಿಸಿತು. ರಷ್ಯಾ ಸೇನೆ ತಮಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ರಷ್ಯಾ ಸರ್ಕಾರದ ವಿರುದ್ಧ ಕ್ಷಿಪ್ರಕ್ರಾಂತಿ ಮಾಡುವುದಾಗಿ ಹೇಳಿತು.
400 ದಿನಗಳ ಉಕ್ರೇನ್-ರಷ್ಯಾ ಯುದ್ಧಕ್ಕೆ ವಿಶ್ವದ ದೊಡ್ಡಣ್ಣ ಎಂಟ್ರಿ: ಯುದ್ಧಭೂಮಿಗೆ ನುಗ್ಗುತ್ತಾ ಅಮೆರಿಕ ಸೈನ್ಯ..?
ಕಳೆದೊಂದು ವರ್ಷದಿಂದ ಉಕ್ರೇನ್ ಮೇಲಿನ ದಾಳಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ರಷ್ಯಾದ ಗಡಿ ಭಾಗದ ರೊಸ್ತೋವ್ ಆನ್ ಡಾನ್ ನಗರದಲ್ಲಿ ಮಿಲಿಟರಿ ಕೇಂದ್ರ ಕಚೇರಿ ಮತ್ತು ಇಡೀ ನಗರವನ್ನು ನಾವು ಈಗಾಗಲೇ ನಮ್ಮ ವಶಕ್ಕೆ ತೆಗೆದುಕೊಂಡಿದ್ದೇವೆ. ತಮ್ಮ ಬಳಿ 50 ಸಾವಿರ ಯೋಧರ ಬೃಹತ್ ಪಡೆ ಇದೆ. ಗುರಿ ಮುಟ್ಟುವವರೆಗೂ ನಾವು ವಿರಮಿಸುವುದಿಲ್ಲ. ಈ ಹಂತದಲ್ಲಿ ಯಾರೂ ನಮಗೆ ಅಡ್ಡಿ ಮಾಡಿಲ್ಲ. ಒಂದು ವೇಳೆ ಯಾರಾದರೂ ನಮಗೆ ಅಡ್ಡಿ ಮಾಡಿದರೆ ನಾವು ಯಾರನ್ನೂ ಬಿಡುವುದಿಲ್ಲ. ರಷ್ಯಾ ಸೇನೆ ಕೂಡಾ ನಮಗೆ ಅಡ್ಡಿ ಮಾಡಬಾರದು. ಇದು ಸೇನಾ ದಂಗೆಯಲ್ಲ, ಬದಲಾಗಿ ನ್ಯಾಯದ ಕಡೆಗಿನ ನಡಿಗೆ’ ಎಂದಿತು.
ಈ ನಡುವೆ, ‘ನಾವು ಸೇನೆಗೆ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಉಕ್ರೇನ್ನಲ್ಲಿನ ನಮ್ಮ ಕ್ಯಾಂಪ್ಗಳ ಮೇಲೆ ರಷ್ಯಾ ಸೇನೆ, ರಾಕೆಟ್ ಮೂಲಕ ದಾಳಿ ನಡೆಸಿದೆ. ಹೆಲಿಕಾಪ್ಟರ್ ಗನ್ಶಿಫ್ಸ್ ಮತ್ತು ಫಿರಂಗಿಗಳ ಮೂಲಕವೂ ದಾಳಿ ನಡೆಸಲಾಗಿದೆ. ಈ ವೇಳೆ ನಾವು ಕೂಡಾ ರಷ್ಯಾದ 4 ಕಾಪ್ಟರ್ ಹೊಡೆದುರುಳಿಸಿದ್ದೇವೆ’ ಎಂದು ಪ್ರಿಗೋಝಿನ್ ಹೇಳಿದರು.
ಇದನ್ನೂ ಓದಿ: ಉಕ್ರೇನ್ನಿಂದ ರಷ್ಯಾಕ್ಕೆ ಮಕ್ಕಳ ಗಡೀಪಾರು: ವ್ಲಾಡಿಮಿರ್ ಪುಟಿನ್ ವಿರುದ್ಧ ಬಂಧನ ವಾರಂಟ್