ಸಂಸತ್ತಿನಲ್ಲಿ ಸಂಸದ ಜೋರ್ಡಾನ್ ಲೇನ್ ತಮ್ಮ ಬೀಳ್ಕೊಡುಗೆ ಭಾಷಣದ ವೇಳೆ ಗೆಳತಿಗೆ ಮದುವೆ ಪ್ರಪೋಸ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಗೆಳತಿ ನಟಾಲಿ ಒಪ್ಪಿಗೆ ಸೂಚಿಸಿದ್ದು, ಇಡೀ ಸದನದಲ್ಲಿ ಹರ್ಷೋದ್ಗಾರ ಮುಗಿಲುಮುಟ್ಟಿತ್ತು.
ಸಿಡ್ನಿ: ಗಂಭೀರ ರಾಜಕೀಯ ಚರ್ಚೆಗಳು ಮತ್ತು ವಾಗ್ವಾದಗಳಿಗೆ ಸಾಕ್ಷಿಯಾಗುವ ಸಂಸತ್ ಭವನವು ಅಪರೂಪದ ರೊಮ್ಯಾಂಟಿಕ್ ಕ್ಷಣಕ್ಕೆ ಸಾಕ್ಷಿಯಾದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ನ್ಯೂ ಸೌತ್ ವೇಲ್ಸ್ (NSW) ಸಂಸತ್ತಿನ ಸದಸ್ಯರಾದ ಜೋರ್ಡಾನ್ ಲೇನ್ (Jordan Lane) ಅವರು ನವೆಂಬರ್ 19ರಂದು ತಮ್ಮ ಬೀಳ್ಕೊಡುಗೆ ಭಾಷಣದ ವೇಳೆ, ತಮ್ಮ ಬಹುಕಾಲದ ಗೆಳತಿ ನಟಾಲಿ ಅವರಿಗೆ ಮದುವೆ ಪ್ರಪೋಸ್ ಮಾಡುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
'ನನ್ನ ಕೊನೆಯ ಪ್ರಶ್ನೆ ನನ್ನ ಪ್ರೀತಿಗೆ...'
ರೈಡ್ (Ryde) ಕ್ಷೇತ್ರದ 32 ವರ್ಷದ ಲಿಬರಲ್ ಪಕ್ಷದ ಸಂಸದರಾಗಿರುವ ಜೋರ್ಡಾನ್ ಲೇನ್, 2027ರ ಮಾರ್ಚ್ ಚುನಾವಣೆಯಲ್ಲಿ ಸ್ಪರ್ಧಿಸದೆ ರಾಜಕೀಯದಿಂದ ನಿವೃತ್ತರಾಗುವುದಾಗಿ ಇತ್ತೀಚೆಗಷ್ಟೇ ಘೋಷಿಸಿದ್ದರು. ಗುರುವಾರ ಸಂಸತ್ತಿನಲ್ಲಿ ತಮ್ಮ ವಿದಾಯದ ಭಾಷಣ ಮಾಡುತ್ತಿದ್ದ ವೇಳೆ, ಸಾರ್ವಜನಿಕ ಗ್ಯಾಲರಿಯಲ್ಲಿ ಕುಳಿತಿದ್ದ 10 ವರ್ಷಗಳಿಗೂ ಹೆಚ್ಚಿನ ಕಾಲದ ತಮ್ಮ ಗೆಳತಿ ನಟಾಲಿ ಹಿಸ್ಸಿ ಅವರತ್ತ ನೋಡಿ ಅನಿರೀಕ್ಷಿತ ಪ್ರಶ್ನೆ ಕೇಳಿದರು.
“ಸ್ಪೀಕರ್ ಅವರೇ, ರೈಡ್ ಕ್ಷೇತ್ರದ ಸಂಸದನಾಗಿ ನನ್ನ ಕೊನೆಯ ಪ್ರಶ್ನೆ ನನ್ನ ಮಹಾನ್ ಪ್ರೀತಿ ನಟಾಲಿಗೆ: ನೀನು ನನ್ನನ್ನು ಮದುವೆಯಾಗುತ್ತೀಯಾ? (Will you marry me?)” ಎಂದು ಹೇಳುತ್ತಲೇ ಜೋರ್ಡಾನ್ ಲೇನ್ ತಮ್ಮ ಜೇಬಿನಿಂದ ನಿಶ್ಚಿತಾರ್ಥದ ಉಂಗುರವನ್ನು ಹೊರತೆಗೆದರು.
ಸದನದಲ್ಲಿ ಮೊಳಗಿದ ಚಪ್ಪಾಳೆ, ಹರ್ಷೋದ್ಗಾರ!
ಮಂಡಿಯೂರಿ ಕುಳಿತು ಪ್ರಪೋಸ್ ಮಾಡಿದ ಜೋರ್ಡಾನ್ ಅವರ ಪ್ರಶ್ನೆಗೆ ನಟಾಲಿ ಸಂತೋಷದಿಂದ 'ಎಸ್' (ಹೌದು) ಎಂದು ಒಪ್ಪಿಗೆ ಸೂಚಿಸಿದರು. ತಕ್ಷಣವೇ ನಟಾಲಿ ಅವರ ಬೆರಳಿಗೆ ಉಂಗುರ ತೊಡಿಸಿ ಅಪ್ಪಿಕೊಂಡಾಗ, ಇಡೀ ಸದನದಲ್ಲಿ ಹಾಜರಿದ್ದ ಸಹ ಸಂಸದರು ಚಪ್ಪಾಳೆ ಹಾಗೂ ಹರ್ಷೋದ್ಗಾರದೊಂದಿಗೆ ನವಜೋಡಿಗೆ ಶುಭಾಶಯ ಕೋರಿದರು.
ಸಂಸತ್ ದಾಖಲೆಯಲ್ಲೂ 'ಎಸ್' ಸೇರ್ಪಡೆ!
ಈ ಸುಂದರ ಕ್ಷಣದ ಬಳಿಕ ಹಾಸ್ಯಭರಿತವಾಗಿ ಮಾತನಾಡಿದ ಜೋರ್ಡಾನ್ ಲೇನ್, "ಅವಳು 'ಎಸ್' ಎಂದು ಹೇಳಿದ್ದಾಳೆ ಎಂಬುದನ್ನು ಸಂಸತ್ತಿನ ಅಧಿಕೃತ ದಾಖಲೆಯಲ್ಲಿ (Hansard) ನೋಂದಾಯಿಸಬೇಕೆಂದು ನಾನು ಬಯಸುತ್ತೇನೆ" ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಗ್ರೆಗ್ ಪೈಪರ್, "58ನೇ ಸಂಸತ್ತು 'ಪ್ರೀತಿಯ ಸಂಸತ್ತು' (Parliament of Love) ಎಂದೇ ನೆನಪಿನಲ್ಲಿ ಉಳಿಯಲಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸದ್ಯ ಈ ಮಧುರ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.















