ಪುಟಿನ್ ವಿರುದ್ಧವೇ ತಿರುಗಿಬಿದ್ದ ವ್ಯಾಗ್ನರ್, ಶೀಘ್ರವೇ ರಷ್ಯಾಕ್ಕೆ ಹೊಸ ಅಧ್ಯಕ್ಷ ಎಂದ ರೆಬಲ್ ಆರ್ಮಿ!
Russia coup Wagner Group: ರಷ್ಯಾ ಸೇನೆಯ ನಾಯಕತ್ವವನ್ನು ಧರೆಗುರುಳಿಸುವುದಾಗಿ ಪಣ ತೊಟ್ಟಿರುವ ರಷ್ಯಾದ ಖಾಸಗಿ ಸೇನೆ ವ್ಯಾಗ್ನರ್ ತನ್ನ ಸೈನಿಕರು ಮಾಸ್ಕೋದತ್ತ ನುಗ್ಗುತ್ತಿರುವುದಾಗಿ ಹೇಳಿದೆ.
ಮಾಸ್ಕೋ (ಜೂ.24): ರಷ್ಯಾ ದೇಶದ ವಿರುದ್ಧವೇ ತೊಡೆತಟ್ಟಿರುವ ವ್ಯಾಗ್ನರ್ ಸೇನೆಯನ್ನು ಬಗ್ಗುಬಡಿಯುವುದಾಗಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ ಬೆನ್ನಲ್ಲಿಯೇ ಇಲ್ಲಿಯವರೆಗೂ ರಷ್ಯಾದ ಪರವಾಗಿ ಯುದ್ಧ ಮಾಡುತ್ತಿದ್ದ ಖಾಸಗಿ ಸೇನೆ ವ್ಯಾಗ್ನರ್ ಆರ್ಮಿ ತಿರುಗಿಬಿದ್ದಿದೆ. ರಷ್ಯಾದ ಅಧ್ಯಕ್ಷ ತನ್ನ ಭಾಷಣದ ವೇಳೆ ಕೆಟ್ಟ ಆಯ್ಕೆಯನ್ನು ಮಾಡಿದ್ದರು. ದೇಶವು ಶೀಘ್ರದಲ್ಲಿಯೇ ಹೊಸ ಅಧ್ಯಕ್ಷರನ್ನು ಪಡೆದುಕೊಳ್ಳಲಿದೆ ಎಂದು ವ್ಯಾಗ್ನರ್ ಹೇಳಿದೆ. ಇದರ ಬೆನ್ನಲ್ಲಿಯೇ ರಷ್ಯಾದಲ್ಲಿ ರುಸ್ತೂವ್ ನಗರದ ಮೇಲೆ ದಾಳಿ ಮಾಡಿರುವ ವ್ಯಾಗ್ನರ್ ಆರ್ಮಿ ನಗರವನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದೆ. ಯೆವ್ಗೆನಿ ಪ್ರಿಗೊಝಿನ್ ನೇತೃತ್ವದ ವ್ಯಾಗ್ನರ್ ಆರ್ಮಿ, ರಷ್ಯಾ ದೇಶದ ಮಿಲಿಟರಿ ನಾಯಕತ್ವವನ್ನು ಸಂಪೂರ್ಣವಾಗಿ ಧರೆಗುರುಳಿಸುವುದಾಗಿ ಪಣ ತೊಟ್ಟಿದೆ. ರಷ್ಯಾದ ಎರಡು ನಗರದಗಳ ಮೇಲೆ ತಮ್ಮ ನಿಯಂತ್ರಣವಿದೆ ಎಂದು ತಿಳಿಸಿದ್ದು, ರಷ್ಯಾ ಸೇನೆಯ ಮೂರು ಹೆಲಿಕಾಪ್ಟರ್‌ಗಳನ್ನು ಹೊಡೆದುರುಳಿಸಿದ್ದೇವೆ ಎಂದು ತಿಳಿಸಿದೆ. ಬಂಡುಕೋರ ಸೇನಾ ಗುಂಪಾಗಿರುವ ವ್ಯಾಗ್ನರ್ ಆರ್ಮಿಗೆ ರಷ್ಯಾದ ನ್ಯಾಷನಲ್ ಗಾರ್ಡ್ಸ್ ಅಲ್ಪ ಪ್ರತಿರೋಧ ನೀಡಿದ್ದಾರೆ.
ದೇಶವನ್ನು ಉದ್ದೇಶಿಸಿ ವ್ಲಾಡಿಮಿರ್ ಪುಟಿನ್ ಮಾಡಿದ ಭಾಷಣದಲ್ಲಿ ವ್ಯಾಗ್ನರ್ ಸೇನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಅವರು, ಈ ಸೇನೆ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದೆ ಎಂದುದ್ದರು. ಅದರರ್ಥ ವ್ಯಾಗ್ನರ್ ಆರ್ಮಿಯ ನಾಯಕ ಯೆವ್ಗೆನಿ ಪ್ರಿಗೊಝಿನ್, ರಷ್ಯಾಕ್ಕೆ ದ್ರೋಹ ಬಗೆದಿದ್ದಾರೆ ಎನ್ನುವ ಮಾತನ್ನಾಡಿದ್ದರು.
'ನಮ್ಮ ದೇಶದ ಬೆನ್ನಿಗೆ ಚೂರಿ ಇರಿಯುವಂಥ ಕೆಲಸ' ಎಂದು ಪುಟಿನ್ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದ್ದರು. ಇಂದು ನಾವು ಎದುರಿಸುತ್ತಿರುವುದು ನಿಜವಾದ ದ್ರೋಹ. ಕೆಟ್ಟ ದೂರಾಲೋಚನೆಗಳು ಹಾಗೂ ವೈಯಕ್ತಿಕ ಹಿತಾಸಕ್ತಿಗಳು ಈ ಅರಾಜಕತೆಗೆ ಕಾರಣವಾಗಿದೆ' ಎಂದು ಪುಟಿನ್, ಪ್ರಿಗೊಝಿನ್ ಉದ್ದೇಶಿಸಿ ಹೇಳಿದ್ದರು.
"ದ್ರೋಹದ ಹಾದಿಯಲ್ಲಿ ನಿಂತವರು, ಸಶಸ್ತ್ರ ದಂಗೆಯನ್ನು ಸಿದ್ಧಪಡಿಸಿದವರು, ಬ್ಲ್ಯಾಕ್‌ಮೇಲ್ ಮತ್ತು ಭಯೋತ್ಪಾದಕ ವಿಧಾನಗಳ ಹಾದಿಯಲ್ಲಿ ನಿಂತವರು, ಕಾನೂನಿನ ಮುಂದೆ ಮತ್ತು ನಮ್ಮ ಜನರ ಮುಂದೆ ದೊಡ್ಡ ಶಿಕ್ಷೆಯನ್ನು ಅನುಭವಿಸುತ್ತಾರೆ" ಎಂದು ಪುಟಿನ್ ಹೇಳಿದ್ದರು. ರಷ್ಯಾ ತನ್ನ ಭವಿಷ್ಯಕ್ಕಾಗಿ ಕಠಿಣ ಯುದ್ಧವನ್ನು ನಡೆಸುತ್ತಿರುವ ಸಮಯದಲ್ಲಿ ಪುಟಿನ್ ವ್ಯಾಗ್ನರ್ ಆರ್ಮಿಯ ದಂಗೆಯನ್ನು ಖಂಡಿದ್ದಾರೆ. "ಪಾಶ್ಚಿಮಾತ್ಯ ದೇಶಗಳ ಸಂಪೂರ್ಣ ಮಿಲಿಟರಿ, ಆರ್ಥಿಕ ಮತ್ತು ಮಾಹಿತಿ ಯಂತ್ರವನ್ನು ನಮ್ಮ ವಿರುದ್ಧ ಬಿಡಲಾಗಿದೆ' ಎಂದು ಪುಟಿನ್ ಆಕ್ರೋಶ ವ್ಯಕ್ತಪಡಿಸಿದ್ದರು.
"ಈ ಯುದ್ಧ, ನಮ್ಮ ಜನರ ಭವಿಷ್ಯವನ್ನು ನಿರ್ಧರಿಸುವಾಗ, ಎಲ್ಲಾ ಶಕ್ತಿಗಳ ಏಕೀಕರಣ, ಏಕತೆ, ಬಲವರ್ಧನೆ ಮತ್ತು ಜವಾಬ್ದಾರಿಯ ಅಗತ್ಯವಿರುತ್ತದೆ." ಇಂತಹ ಸಮಯದಲ್ಲಿ ಸಶಸ್ತ್ರ ದಂಗೆಯು 'ರಷ್ಯಾಕ್ಕೆ, ಅದರ ಜನರಿಗೆ ಪೆಟ್ಟು ನೀಡಲಿದೆ' ಎಂದಿದ್ದರು. "ಸಶಸ್ತ್ರ ಬಂಡಾಯಕ್ಕೆ ಸಂಚು ರೂಪಿಸಿದವರು ಮತ್ತು ಸಂಘಟಿಸಿದವರು, ತಮ್ಮ ಒಡನಾಡಿಗಳ ವಿರುದ್ಧ ಶಸ್ತ್ರಾಸ್ತ್ರಗಳನ್ನು ಎತ್ತಿದವರು, ರಷ್ಯಾಕ್ಕೆ ದ್ರೋಹ ಬಗೆದವರು ಇದಕ್ಕೆ ತಕ್ಕೆ ಬೆಲೆ ತೆರಲಿದ್ದಾರೆ' ಎಂದಿದ್ದರು.
ಉಕ್ರೇನ್ ಯುದ್ಧದಲ್ಲಿ ಹೋರಾಡಲು ನಿರಾಕರಿಸಿದ ಯೋಧನ ತಲೆಗೆ ಸುತ್ತಿಗೆ ಬಡಿದು ಸಾಯಿಸಿದ ರಷ್ಯಾ!
ಏನಿದು ವ್ಯಾಗ್ನರ್ ಆರ್ಮಿ?: ತನ್ನದೇ ಜನರ ಮೇಲೆ ರಷ್ಯಾ ಸೇನೆ ದಾಳಿ ನಡೆಸಿದ ಎನ್ನುವ ಸಿಟ್ಟಿಗಾಗಿ ವ್ಯಾಗ್ನರ್ ಆರ್ಮಿ ರಷ್ಯಾದ ಮೇಲೆಯೇ ಬಂಡೆದಿದ್ದೆ. ವ್ಯಾಗ್ನರ್ ಆರ್ಮಿಯನ್ನು ರಷ್ಯಾದಲ್ಲಿ ಅಧಿಕೃತವಾಗಿ ಪಿಎಂಸಿ ವ್ಯಾಗ್ನರ್ ಎನ್ನಲಾಗುತ್ತದೆ. ರಷ್ಯಾದ ಅರೆಸೇನಾ ಮಿಲಿಟರಿಯಾಗಿರುವ ಇದು, ಕಾನೂನಿಗಿಂತ ಮಿಗಿಲಾಗಿ ಕೆಲಸ ಮಾಡುತ್ತದೆ. ಸಂಪೂರ್ಣ ಖಾಸಗಿ ಸೇನೆಯ ನೆಟ್‌ವರ್ಕ್ ಇದಾಗಿದೆ. 2014ರಲ್ಲಿ ರಷ್ಯಾ ಪರ ಪಡೆಗಳನ್ನು ಬೆಂಬಲಿಸುವ ಮೂಲಕ ಮೊದಲ ಬಾರಿಗೆ ಬೆಳಕಿಗೆ ಬಂದಿತ್ತು. ಆರಂಭದಲ್ಲಿ ರಷ್ಯಾದ ಎಲೈಟ್ ರೆಜಿಮೆಂಟ್ ಹಾಗೂ ಸ್ಪೆಷಲ್ ಫೋರ್ಸ್‌ನ 5 ಸಾವಿರ ಸೈನಿಕರನ್ನು ಹೊಂದಿತ್ತು ಎನ್ನಾಗಿತ್ತು.ಆದರೆ, ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಬಹುಶಃ ಈ ಸೈನಿಕರ ಸಂಖ್ಯೆ 50 ಸಾವಿರ ಇರಬಹುದು ಎಂದು ಅಂದಾಜಿಸಲಾಗಿತ್ತು. ತನ್ನ ಮೊದಲ ಕಮಾಂಡರ್ ಆಗಿರುವ ಡಿಮಿಟ್ರಿ ಉಟ್ಕಿನ್ ಅವರಿಗೆ ಇದ್ದ ನಿಕ್‌ನೇಮ್ 'ವ್ಯಾಗ್ನರ್' ಹೆಸರನ್ನೇ ಇದಕ್ಕೆ ಇಡಲಾಗಿದೆ.
ರಷ್ಯಾ ಅಧ್ಯಕ್ಷ ಪುಟಿನ್ ಹತ್ಯೆಗೆ ಪ್ರಯತ್ನ, ನಿವಾಸದ ಮೇಲೆ ಡ್ರೋನ್ ದಾಳಿ!