ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಭಾರತ-ಪಾಕಿಸ್ತಾನ ಸೇರಿದಂತೆ 8 ಯುದ್ಧಗಳನ್ನು ತಾನೇ ನಿಲ್ಲಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಈ ಮಧ್ಯಸ್ಥಿಕೆಯ ಪ್ರತಿಪಾದನೆಯನ್ನು ಭಾರತ ಸರ್ಕಾರ ಸಂಪೂರ್ಣವಾಗಿ ತಳ್ಳಿಹಾಕಿದೆ. ಜೊತೆಗೆ ರಷ್ಯಾ-ಉಕ್ರೇನ್ ಯುದ್ಧ ಶಮನ ಹಾಗೂ ಇರಾನ್ ಪರಮಾಣು ಶಸ್ತ್ರಾಸ್ತ್ರ ನಿಯಂತ್ರಣದ ಬಗ್ಗೆಯೂ ಅವರು ಪ್ರಸ್ತಾಪಿಸಿದ್ದಾರೆ.

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (UNGA) 81 ನೇ ಅಧಿವೇಶನದ ಚರ್ಚೆಯಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಮತ್ತು ಪಾಕಿಸ್ತಾನ ನಡುವಿನ ಸೇನಾ ಸಂಘರ್ಷ ಸೇರಿದಂತೆ ಪ್ರಪಂಚದಾದ್ಯಂತ 8 ಸಮರ ನಿಲ್ಲಿಸಿದ್ದು ನಾನೇ ಎಂದು ಟ್ರಂಪ್ ಮಂಗಳವಾರ ಮತ್ತೊಮ್ಮೆ ಹೊಗಳಿಕೊಂಡಿದ್ದಾರೆ.

ಟ್ರಂಪ್ ಉಲ್ಲೇಖಿಸಿದ 8 ಪ್ರಮುಖ ಸಂಘರ್ಷಗಳು

ತಮ್ಮ ಭಾಷಣದಲ್ಲಿ ಜಾಗತಿಕ ಶಾಂತಿ ಪ್ರಕ್ರಿಯೆಯನ್ನು ಉಲ್ಲೇಖಿಸಿದ ಟ್ರಂಪ್, ನಾನು ಅಧಿಕಾರ ವಹಿಸಿಕೊಂಡಾಗಿನಿಂದ ಎಂಟು ಯುದ್ಧಗಳನ್ನು ಇತ್ಯರ್ಥಪಡಿಸುವುದು ಮತ್ತು ಆ ದೇಶಗಳ ನಾಯಕರೊಂದಿಗೆ ನಿಕಟ ಬಾಂಧವ್ಯ ಬೆಳೆಸಿಕೊಳ್ಳುವುದು ನನಗೆ ಸಿಕ್ಕ ದೊಡ್ಡ ಗೌರವ ಎಂದಿದ್ದಾರೆ.

ತಮ್ಮ ಮಧ್ಯಸ್ಥಿಕೆಯಿಂದ ತಣ್ಣಗಾದ ಪ್ರದೇಶಗಳನ್ನು ಪಟ್ಟಿ ನೀಡಿದ ಟ್ರಂಪ್

  • ಭಾರತ ಮತ್ತು ಪಾಕಿಸ್ತಾನ
  • ಕಾಂಬೋಡಿಯಾ ಮತ್ತು ಥೈಲ್ಯಾಂಡ್
  • ಕೊಸೊವೊ ಮತ್ತು ಸೆರ್ಬಿಯಾ
  • ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಮತ್ತು ರುವಾಂಡಾ
  • ಅರ್ಮೇನಿಯಾ ಮತ್ತು ಅಜೆರ್ಬೈಜಾನ್
  • ಗಾಜಾ ಸಂಘರ್ಷ
  • ವಸಾಹತು ಪ್ರದೇಶಗಳ ಬಿಕ್ಕಟ್ಟುಗಳು

ವ್ಯಾಪಾರ ಒಪ್ಪಂದಗಳು, ಸುಂಕ ವಿಧಿಸುವ ಬೆದರಿಕೆಗಳು ಮತ್ತು ಕಾರ್ಯತಾಂತ್ರಿಕ ರಾಯಭಾರತ್ವದ ಮೂಲಕ ಈ ಮಹತ್ವದ ಬದಲಾವಣೆ ತರಲು ಸಾಧ್ಯವಾಯಿತು ಎಂದು ವಿವರ ನೀಡಿದ್ದಾರೆ.

ಪಾಕಿಸ್ತಾನ ಪ್ರಧಾನಿ ಧನ್ಯವಾದ ಮತ್ತು 3 ಕೋಟಿ ಜನರ ಜೀವ ರಕ್ಷಣೆ

ಮೇ 2025 ರ 'ಮಧ್ಯ ರಾತ್ರಿ'ಯ ಸುದೀರ್ಘ ಮಾತುಕತೆಯ ಬಳಿಕ ಭಾರತ ಮತ್ತು ಪಾಕಿಸ್ತಾನ ತಕ್ಷಣದ ಹಾಗೂ ಸಂಪೂರ್ಣ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದವು ಎಂದು ಟ್ರಂಪ್ ಹೇಳಿದ್ದು, ಈ ಪ್ರಕ್ರಿಯೆಯಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಪಾತ್ರವನ್ನು ಶ್ಲಾಘಿಸಿದರು.

ಪಾಕಿಸ್ತಾನದ ಪ್ರಧಾನಿ ಅತ್ಯಂತ ಅದ್ಭುತ ವ್ಯಕ್ತಿ. "ಡೊನಾಲ್ಡ್ ಟ್ರಂಪ್ ಅವರ ಸಮಯೋಚಿತ ಹಸ್ತಕ್ಷೇಪದಿಂದಾಗಿ ಕನಿಷ್ಠ 30 ಮಿಲಿಯನ್ (3 ಕೋಟಿ) ಜನರ ಜೀವ ಉಳಿದಿದೆ ಎಂದು ಅವರು ನನಗೆ ಪತ್ರ ಬರೆದು ಧನ್ಯವಾದ ಅರ್ಪಿಸಿದ್ದಾರೆ" ಎಂದು ಟ್ರಂಪ್ ಸಭೆಗೆ ತಿಳಿಸಿದ್ದಾರೆ.

ಅಮೆರಿಕ ಮಧ್ಯಸ್ಥಿಕೆ ಪ್ರತಿಪಾದನೆ ತಳ್ಳಿಹಾಕಿದ ಭಾರತ

ಡೊನಾಲ್ಡ್ ಟ್ರಂಪ್ ಅವರ ಈ ಮಧ್ಯಸ್ಥಿಕೆಯ ಪ್ರತಿಪಾದನೆಯನ್ನು ಭಾರತ ಸರ್ಕಾರ ಸಂಪೂರ್ಣವಾಗಿ ಮತ್ತು ನಿರಂತರವಾಗಿ ನಿರಾಕರಿಸುತ್ತಲೇ ಬಂದಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಗಡಿ ಉದ್ವಿಗ್ನತೆ ಶಮನಗೊಂಡಿದ್ದು ಎರಡೂ ದೇಶಗಳ 'ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ' (DGMOs) ನಡುವೆ ನಡೆದ ನೇರ ಹಾಗೂ ದ್ವಿಪಕ್ಷೀಯ ಮಾತುಕತೆಗಳಿಂದಲೇ ಹೊರತು, ಯಾವುದೇ ಮೂರನೇ ದೇಶ ಅಥವಾ ವ್ಯಕ್ತಿಯ ಹಸ್ತಕ್ಷೇಪದಿಂದಲ್ಲ ಎಂದು ನವದೆಹಲಿ ಸ್ಪಷ್ಟಪಡಿಸಿದೆ.

ರಷ್ಯಾ-ಉಕ್ರೇನ್ ಯುದ್ಧ ಶಮನ ಹಾಗೂ ನೂತನ ಸುಂಕ ಕಾಯ್ದೆ

ಇದೇ ವೇಳೆ, ಸುದೀರ್ಘವಾಗಿ ನಡೆಯುತ್ತಿರುವ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗೊಳಿಸಲು ತಮ್ಮ ಆಡಳಿತವು ಉಭಯ ದೇಶಗಳ ನಾಯಕರೊಂದಿಗೆ ನಿಕಟವಾಗಿ ಶ್ರಮಿಸುತ್ತಿದೆ ಎಂದು ಟ್ರಂಪ್ ಹೇಳಿದರು. ಜನರು ನಿರೀಕ್ಷಿಸುವುದಕ್ಕಿಂತಲೂ ಶೀಘ್ರದಲ್ಲೇ ಈ ಯುದ್ಧಕ್ಕೆ ತೆರೆ ಬೀಳಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು.

ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ ಅವರ ಹೆಸರಿನ ನೂತನ ಕಾಯ್ದೆಯು ಅಮೆರಿಕ ಅಧ್ಯಕ್ಷರಿಗೆ ಬೃಹತ್ ಮಟ್ಟದ 'ಸುಂಕ ವಿಧಿಸುವ ಅಧಿಕಾರಗಳನ್ನು' ನೀಡಿದ್ದು, ಜಾಗತಿಕ ಶಾಂತಿ ಮತ್ತು ಅಮೆರಿಕದ ಹಿತಾಸಕ್ತಿ ಕಾಯಲು ಅಗತ್ಯ ಬಿದ್ದರೆ ಈ ಅಧಿಕಾರವನ್ನು ಕಟ್ಟುನಿಟ್ಟಾಗಿ ಬಳಸಿಕೊಳ್ಳುವುದಾಗಿ ಟ್ರಂಪ್ ಎಚ್ಚರಿಸಿದ್ದಾರೆ.

ಅಮೆರಿಕ- ಇರಾನ್ ಸಂಘರ್ಷ ಮುಂದುವರೆದಿರುವ ನಡುವೆಯೇ ‘ಇರಾನ್‌ ಎಂದಿಗೂ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲು ಬಿಡುವುದಿಲ್ಲ. ಅಮೆರಿಕ ಮಧ್ಯಂತರ ಚುನಾವಣೆ ಬಳಿಕ ನಮ್ಮ ಜತೆ ಇರಾನ್‌ ಶಾಂತಿ ಒಪ್ಪಂದ ಮಾಡಿಕೊಳ್ಳಲಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗುಡುಗಿದ್ದಾರೆ.

ಇರಾನ್‌ ವಿರುದ್ಧ ಗುಡುಗಿದ ಟ್ರಂಪ್

ಮಂಗಳವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಟ್ರಂಪ್‌, ‘51 ವರ್ಷಗಳ ಕಾಲ ಇರಾನಿನ ಮತಾಂಧ ಆಡಳಿತವು ರಕ್ತಪಾತ ಮತ್ತು ಸಾಮೂಹಿಕ ಹತ್ಯೆಯ ಮೂಲಕ ಆಡಳಿತ ನಡೆಸಿದೆ. ಮಧ್ಯಪ್ರಾಚ್ಯ ಮತ್ತು ಅದರಾಚೆಗೂ ಸಾವು, ಹ*ತ್ಯಾಕಾಂಡ, ಅವ್ಯವಸ್ಥೆ ಹರಡಿತ್ತು. ಅವರು ಮಧ್ಯಪ್ರಾಚ್ಯವನ್ನೇ ಬೆದರಿಸುತ್ತಿದ್ದರು. ಆದರೆ ಈಗ ಇಲ್ಲ. ನಾನು ರಾಜಕೀಯಕ್ಕೆ ಪ್ರವೇಶಿಸಿದ ಮೊದಲ ದಿನದಿಂದಲೇ ಇರಾನ್‌ ಪರಮಾಣು ಶಸ್ತ್ರಾಸ್ತ್ರ ಹೊಂದಲಿ ಬಿಡುವುದಿಲ್ಲ ಎಂದು ದೃಢ ನಿರ್ಧಾರ ಮಾಡಿದ್ದೆ. ಹೀಗಾಗಿ ಸಮರ ಸಾರಲಾಯಿತು’ ಎಂದರು.

100% ತೆರಿಗೆಗೆ ಸಮರ್ಥನೆ:

ಇರಾನ್‌ ಸಮರದಲ್ಲಿನ ಅಮಾಯಕರ ಸಾವು ನಿಲ್ಲಿಸಲು, ಅದರ ಜತೆ ವ್ಯಾಪಾರ ನಂಟು ಹೊಂದಿರುವ ಭಾರತ ಸೇರಿ ವಿವಿಧ ದೇಶಗಳ ಮೇಲೆ 100% ತೆರಿಗೆ ಅನಿವಾರ್ಯವಾಗಿತ್ತು ಎಂದು ಟ್ರಂಪ್‌ ಹೇಳಿದರು. ಇದೇ ವೇಳೆ, ಅಂತಾರಾಷ್ಟ್ರೀಯ ಕೋರ್ಟನ್ನು ಟೀಕಿಸಿದ ಅವರು, ‘ಈ ಕೋರ್ಟನ್ನು ಎಲ್ಲ ದೇಶಗಳು ಬಹಿಷ್ಕರಿಸಬೇಕು’ ಎಂದು ಕರೆ ನೀಡಿದರು.