ಹಣದ ಕೊರತೆ: ಪೆಟ್ರೋಲ್, ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 35 ರೂ. ಹೆಚ್ಚಿಸಿದ ಪಾಕಿಸ್ತಾನ
ಇಂದಿನಿಂದಲೇ ಪಾಕಿಸ್ತಾನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 35 ರೂಪಾಯಿಗಳಷ್ಟು ಹೆಚ್ಚಾಗಿದೆ. ಇನ್ನು, ಸೀಮೆಎಣ್ಣೆ ಮತ್ತು ಲಘು ಡೀಸೆಲ್ ತೈಲದ ಬೆಲೆಯನ್ನು 18 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ.
ಇಸ್ಲಾಮಾಬಾದ್ (ಜನವರಿ 29, 2023): ಪಾಕಿಸ್ತಾನ ತೀವ್ರ ನಗದು ಕೊರತೆಯಿಂದ ಬಳಲುತ್ತಿದ್ದು, ವಿದೇಶದಿಂದ ಸಾಲ ಸಿಗದೆ ಪರದಾಡುತ್ತಿದೆ. ಅಲ್ಲದೆ, ಈಗಾಗಲೇ ತೆಗೆದುಕೊಂಡಿರುವ ಸಾಲ ತೀರಿಸಲು ಸಹ ಒದ್ದಾಡುತ್ತಿದೆ. ಇನ್ನೊಂದೆಡೆ, ಇಂಟರ್‌ಬ್ಯಾಂಕ್ ಮತ್ತು ಮುಕ್ತ ಮಾರುಕಟ್ಟೆಯಲ್ಲಿ ಅಮೆರಿಕ ಡಾಲರ್‌ಗೆ ಹೋಲಿಸಿದರೆ ಪಾಕಿಸ್ತಾನದ ಕರೆನ್ಸಿ ಪಾಕಿಸ್ತಾನ ರೂಪಾಯಿ ಅತ್ಯಂತ ಕಡಿಮೆ ಮಟ್ಟಕ್ಕೆ ಕುಸಿದಿದೆ. ಈ ಬೆನ್ನಲ್ಲೇ, ಪಾಕಿಸ್ತಾನವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಒಂದು ಲೀಟರ್‌ಗೆ 35 ರೂಪಾಯಿಗಳ ಹೆಚ್ಚಳವನ್ನು ಘೋಷಿಸಿದೆ.
ಹೌದು, ಇಂದಿನಿಂದಲೇ ಪಾಕಿಸ್ತಾನದಲ್ಲಿ (Pakistan) ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel) ಬೆಲೆ 35 ರೂಪಾಯಿಗಳಷ್ಟು ಹೆಚ್ಚಾಗಿದೆ. ಇನ್ನು, ಸೀಮೆಎಣ್ಣೆ (Kerosene) ಮತ್ತು ಲಘು ಡೀಸೆಲ್ ತೈಲದ (Fuel) ಬೆಲೆಯನ್ನು 18 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ ಎಂದು ಪಾಕಿಸ್ತಾನದ ಹಣಕಾಸು ಸಚಿವ (Finance Minister) ಇಶಾಕ್ ದಾರ್ (Ishaq Dar) ದೂರದರ್ಶನ ಭಾಷಣದಲ್ಲಿ ಘೋಷಿಸಿದ್ದಾರೆ. ಬೆಲೆ ಹೆಚ್ಚಳ ಜಾರಿಗೆ ಬರುವ 10 ನಿಮಿಷಗಳ ಮೊದಲು ಈ ಘೋಷಣೆ ಮಾಡಿದ್ದಾರೆ. 11.00 ಗಂಟೆ, 29 ಜನವರಿ, 2023 ರಿಂದ ಜಾರಿಗೆ ಬರುವಂತೆ ಸರ್ಕಾರವು ಪೆಟ್ರೋಲಿಯಂ ಉತ್ಪನ್ನಗಳ ಹೊಸ ಬೆಲೆಗಳನ್ನು ಘೋಷಿಸಿದೆ.
ಇದನ್ನು ಓದಿ: ದಿವಾಳಿ ಪಾಕ್‌ಗೆ ಐಎಂಎಫ್ ಸಾಲವಿಲ್ಲ..! ಪಾಕ್ ಬಳಿ ಈಗ ಬರೀ 3 ವಾರಕ್ಕಾಗುವಷ್ಟು ಹಣ
ಈ ಬೆಲೆ ಏರಿಕೆಯಿಂದ ಪಾಕಿಸ್ತಾನದಲ್ಲಿ ಸದ್ಯ ಒಂದು ಲೀಟರ್ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ಗೊತ್ತಾ..? ಹೈ ಸ್ಪೀಡ್ ಡೀಸೆಲ್ - ಲೀಟರ್‌ಗೆ 262.80 ರೂಪಾಯಿ ಇದ್ದರೆ, ಎಂ.ಎಸ್. ಪೆಟ್ರೋಲ್ ಲೀಟರ್‌ಗೆ 249.80 ರೂಪಾಯಿ ಇದೆ. ಇನ್ನು, ಸೀಮೆ ಎಣ್ಣೆ ಪ್ರತಿ ಲೀಟರ್‌ಗೆ 189.83 ರೂಪಾಯಿ ಇದ್ದರೆ ಲೈಟ್ ಡೀಸೆಲ್ ತೈಲ - 187 ರೂ. ಎಂದು ಪಾಕಿಸ್ತಾನದ ಹಣಕಾಸು ಸಚಿವಾಲಯ ಟ್ವೀಟ್ ಮಾಡಿದೆ.
ಇನ್ನು, ಅಂತಾರಾಷ್ಟ್ರೀಯ ಬೆಲೆಗಳು ಮತ್ತು ರೂಪಾಯಿ ಅಪಮೌಲ್ಯದ ಹೊರತಾಗಿಯೂ, ಪ್ರಧಾನಿ ಶೆಹಬಾಜ್ ಷರೀಫ್ ಅವರ ನಿರ್ದೇಶನದ ಮೇರೆಗೆ, ನಾವು ಈ ನಾಲ್ಕು ಉತ್ಪನ್ನಗಳ ಕನಿಷ್ಠ ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಿದ್ದೇವೆ ಎಂದು ಹಣಕಾಸು ಸಚಿವ ಇಶಾಕ್ ದಾರ್ ಹೇಳಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಹಾಗೆ, ಕಳೆದ ನಾಲ್ಕು ತಿಂಗಳಲ್ಲಿ ಪೆಟ್ರೋಲ್ ಬೆಲೆ ಏರಿಕೆ ಮಾಡಿಲ್ಲ. ವಾಸ್ತವವಾಗಿ, ಡೀಸೆಲ್ ಮತ್ತು ಸೀಮೆ ಎಣ್ಣೆಯ ಬೆಲೆಗಳನ್ನು ಕಡಿಮೆ ಮಾಡಲಾಗಿತ್ತು ಎಂದೂ ಇಶಾಕ್ ದಾರ್ ತಿಳಿಸಿದ್ದಾರೆ ಎಂದು ಡಾನ್ ಪತ್ರಿಕೆ ಹೇಳಿದೆ.
ಇದನ್ನೂ ಓದಿ: ಪಾಕ್‌ನಾದ್ಯಂತ ಭಾರಿ ವಿದ್ಯುತ್ ವ್ಯತ್ಯಯ: ತನಿಖೆಗೆ ಆದೇಶಿಸಿದ ಪ್ರಧಾನಿ ಶೆಹಬಾಜ್ ಷರೀಫ್
ಅಲ್ಲದೆ, ಇಂಧನ ದರ ಹೆಚ್ಚಳದ ಹಿಂದಿನ ಕಾರಣವನ್ನು ವಿವರಿಸಿದ ಇಶಾಕ್ ದಾರ್, ತೈಲ ಮತ್ತು ಅನಿಲ ನಿಯಂತ್ರಣ ಪ್ರಾಧಿಕಾರದ ಶಿಫಾರಸಿನ ಆಧಾರದ ಮೇಲೆ ಇದನ್ನು ಮಾಡಲಾಗಿದೆ ಎಂದು ಹೇಳಿದರು. ಬೆಲೆ ಏರಿಕೆಯ ನಿರೀಕ್ಷೆಯಲ್ಲಿ ಕೃತಕ ಕೊರತೆ ಮತ್ತು ಇಂಧನ ಸಂಗ್ರಹಣೆಯ ವರದಿಗಳಿವೆ, ಆದ್ದರಿಂದ ಇದನ್ನು ಎದುರಿಸಲು ಈ ಬೆಲೆ ಏರಿಕೆಯನ್ನು ತಕ್ಷಣವೇ ಮಾಡಲಾಗುತ್ತದೆ ಎಂದೂ ಅವರು ಹೇಳಿದರು.
ಪಾಕಿಸ್ತಾನಿ ರೂಪಾಯಿ ಮೌಲ್ಯವು ಗುರುವಾರದಿಂದ ಅಮೆರಿಕ ಡಾಲರ್‌ಗೆ 34 ರೂಪಾಯಿಗಳಷ್ಟು ಕುಸಿದಿದೆ. ಇದು 1999 ರಲ್ಲಿ ಹೊಸ ವಿನಿಮಯ ದರ ವ್ಯವಸ್ಥೆಯನ್ನು ಪರಿಚಯಿಸಿದ ನಂತರ ಸಂಪೂರ್ಣ ಮತ್ತು ಶೇಕಡಾವಾರು ಪರಿಭಾಷೆಯಲ್ಲಿ ಅತಿದೊಡ್ಡ ಮೌಲ್ಯ ಕುಸಿತ ಎಂದೂ ಹೇಳಲಾಗಿದೆ.
ಇದನ್ನೂ ಓದಿ: ಪ್ರತಿ ಬಾರಿ ಬೇರೆ ದೇಶದ ಮುಂದೆ ನಿಂತು ಸಾಲ ಕೇಳೋಕೆ ನಾಚಿಕೆ ಆಗುತ್ತೆ: ಪಾಕ್ ಪ್ರಧಾನಿ!
ಸ್ಥಗಿತಗೊಂಡಿದ್ದ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಸಾಲ ಕಾರ್ಯಕ್ರಮವನ್ನು ಪುನರುಜ್ಜೀವನಗೊಳಿಸಲು USD-PKR ವಿನಿಮಯ ದರದ ಮೇಲಿನ ಅನಧಿಕೃತ ಮಿತಿಯನ್ನು ಸರ್ಕಾರ ತೆಗೆದುಹಾಕಿದ ನಂತರ ಪಾಕಿಸ್ತಾನಿ ರೂಪಾಯಿ ತೀವ್ರವಾಗಿ ಕುಸಿದಿದೆ. ನಗದು ಕೊರತೆಯಿರುವ ರಾಷ್ಟ್ರವು 7 ಶತಕೋಟಿ ಡಾಲರ್ IMF ಕಾರ್ಯಕ್ರಮದ 9ನೇ ಪರಿಶೀಲನೆಯನ್ನು ಪೂರ್ಣಗೊಳಿಸಬೇಕಾಗಿದೆ.
ಇನ್ನು, ರಾಷ್ಟ್ರೀಯ ಚುನಾವಣೆಗಳಿಗೆ ಕೆಲವೇ ತಿಂಗಳುಗಳಿರುವಾಗ ಈ ನಿರ್ಧಾರಕ್ಕೆ ರಾಜಕೀಯ ಬೆಲೆ ತೆರಬೇಕಾಗಿದ್ದರೂ ಬೇಲ್‌ಔಟ್ ಯೋಜನೆಯನ್ನು ಪೂರ್ಣಗೊಳಿಸಲು ತಮ್ಮ ಸಮ್ಮಿಶ್ರ ಸರ್ಕಾರ ತೀರ್ಮಾನಿಸಿದೆ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಇಂಧನ ಬೆಲೆಗಳನ್ನು ಹೆಚ್ಚಿಸುವುದು ಮತ್ತು ತೆರಿಗೆಗಳನ್ನು ಹೆಚ್ಚಿಸುವುದು ಐಎಂಎಫ್ ಷರತ್ತುಗಳನ್ನು ಪೂರೈಸುವ ಕ್ರಮಗಳಾಗಿದೆ. ಜತೆಗೆ, ಕಳೆದ ಎರಡು ದಿನಗಳಲ್ಲಿ ಸುಮಾರು 13 ಪ್ರತಿಶತದಷ್ಟು ಕರೆನ್ಸಿ ಕುಸಿತವಾದ ಹಿನ್ನೆಲೆ ಹಣದುಬ್ಬರವನ್ನು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಭಾರತ ಪಿಒಕೆ ಹಿಂಪಡೆಯಬಹುದು; ಈ ವರ್ಷ ಪಾಕ್ ಹಲವು ಭಾಗಗಳಾಗಿ ವಿಭಜನೆಯಾಗುತ್ತೆ: ಪ್ರೊ. ಮುಖ್ತೆದಾರ್ ಖಾನ್