ಪ್ರತಿ ಬಾರಿ ಬೇರೆ ದೇಶದ ಮುಂದೆ ನಿಂತು ಸಾಲ ಕೇಳೋಕೆ ನಾಚಿಕೆ ಆಗುತ್ತೆ: ಪಾಕ್ ಪ್ರಧಾನಿ!
ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರ ವಿಡಿಯೋ ವೈರಲ್ ಆಗಿದೆ. ಯುಎಇ ಅಧ್ಯಕ್ಷರ ಮುಂದೆ ನಿಂತು ಸಾಲ ಕೊಡಿ ಎಂದು ಕೇಳಲು ನನಗೆ ನಾಚಿಕೆ ಆಗುತ್ತದೆ. ಆದರೆ, ನಾನು ಏನೂ ಮಾಡಲಾಗದ ಪರಿಸ್ಥಿತಿಯಲ್ಲಿದ್ದೇನೆ ಎಂದು ಹೇಳಿರುವ ವಿಡಿಯೋ ಇದಾಗಿದೆ.
ನವದೆಹಲಿ (ಜ.23): ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ವಿಡಿಯೋ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಈ ಹಿಂದೆ ಯುಎಇಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ದೇಶಕ್ಕಾಗಿ ಸಾಲ ಕೇಳುವಾಗ ಎದುರಿಸಿದ್ದ ಮಾನಸಿಕ ಉದ್ವೇಗ ಮತ್ತು ಹಿಂಜರಿಕೆಯ ಬಗ್ಗೆ ಮಾತನಾಡಿದ್ದಾರೆ. ಶೆಹಬಾಜ್ ಅವರ ಮಾತಿನ ಪ್ರಕಾರ, ಪಾಕಿಸ್ತಾನದ ವಜೀರ್ ಇ ಆಜಂ ಆಗಿ ಯುಎಇಯಲ್ಲಿ ನಾನು ಎದುರಿಸಿದ ಸಂಗತಿಗಳನ್ನು ನಿಮ್ಮ ಎದುರಿಗೆ ಹೇಳುವುದು ಬಹಳ ಅವಶ್ಯಕವಾಗಿದೆ. ಅಲ್ಲಿ ನಾನು ಸಾಕಷ್ಟು ಮುಜುಗರವನ್ನು ಎದುರಿಸಬೇಕಾಯಿತು. ಒಂದು ವಾರದ ಹಿಂದೆ ಶೆಹಬಾಜ್ ಷರೀಫ್ ವಿದೇಶ ಪ್ರವಾಸಕ್ಕೆ ತೆರಳಿದ್ದರು. ಜಿನೆವಾದಲ್ಲಿ ನಡೆದ ಹವಮಾನ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಅದಾದ ಬಳಿಕ ಅವರು ಸೌದಿ ಅರೇಬಿಯಾ ಹಾಗೂ ಯುಎಇ ದೇಶಕ್ಕೆ ಭೇಟಿ ನೀಡಿದ್ದರು. ಅವರು ಹೋದ ಮೂರೂ ಕಡೆಗಳಲ್ಲೂ ದೇಶಕ್ಕಾಗಿ ಅವರು ಸಾಲ ಕೇಳಿದ್ದರು. ಸೌದಿ 2 ಮತ್ತು ಯುಎಇ $ 1 ಬಿಲಿಯನ್ ಗ್ಯಾರಂಟಿ ಠೇವಣಿ ನೀಡುವುದಾಗಿ ಭರವಸೆ ನೀಡಿತ್ತು. ಪಾಕಿಸ್ತಾನ ಸರ್ಕಾರ ಈ ಹಣವನ್ನು ಖರ್ಚು ಮಾಡುವಂತಿರಲಿಲ್ಲ.
ನಾನು ಎರಡು ದಿನಗಳ ಹಿಂದೆ ಯುಎಇಯಿಂದ ಬಂದಿದ್ದೇನೆ. ಅಲ್ಲಿನ ಅಧ್ಯಕ್ಷ ನನ್ನ ಹಿರಿಯ ಸಹೋದರ ಮೊಹಮ್ಮದ್ ಬಿನ್ ಜಾಯೆದ್. ಅವರು ಅಪಾರ ಪ್ರೀತಿಯಿಂದ ನನ್ನನ್ನು ಸ್ವಾಗತಿಸಿದರು. ಕಳೆದ ಬಾರಿ ಅವರಿಗೆ ಭೇಟಿ ಮಾಡುವ ವೇಳೆ, ಅವರಿಂದ ಇನ್ನೆಂದೂ ಜಾಸ್ತಿ ಸಾಲ ಕೇಳುವುದಿಲ್ಲ ಎಂದು ನಿರ್ಧಾರ ಮಾಡಿದ್ದೆ. ಆದರೆ, ಕೊನೆಯ ಕ್ಷಣದಲ್ಲಿ ಬೇರೆಲ್ಲೂ ಉಪಾಯ ಸಿಗದೇ ಇದ್ದಾಗ, ಅವರಿಂದ ಇನ್ನಷ್ಟು ಸಾಲ ಕೇಳಲು ನಿರ್ಧಾರ ಮಾಡಿದ ಧೈರ್ಯ ತಂದುಕೊಂಡಿದ್ದೆ. 'ಸರ್ ನೀವು ನನ್ನ ಅಣ್ಣ. ನನಗೆ ತುಂಬಾ ನಾಚಿಕೆಯಾಗುತ್ತಿದೆ. ಆದರೆ ಏನು ಮಾಡೋದು. ನಾನು ತುಂಬಾ ಅಸಹಾಯಕನಾಗಿದ್ದೇನೆ. ನಮ್ಮ ಆರ್ಥಿಕತೆಯ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ನಮ್ಮ ದೇಶಕ್ಕೆ ಕೆಲವೊಂದಿಷ್ಟು ಬಿಲಿಯನ್ ಡಾಲರ್ ಸಹಾಯ ಮಾಡಿ ಎಂದು ತಾವು ಕೇಳಿದ್ದಾಗಿ ಶೆಹಬಾಜ್ ಷರೀಫ್ ಆ ವಿಡಿಯೋದಲ್ಲಿ ಹೇಳಿದ್ದಾರೆ.
ಕಳೆದ ವಾರ, ಪಾಕಿಸ್ತಾನಿ ಸೇನೆಯ ಪಾಸಿಂಗ್ ಔಟ್ ಪರೇಡ್ ಸಮಾರಂಭದಲ್ಲಿ ಷರೀಫ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಆಗಲೂ ಅವರು ದೇಶದ ಸಾಲದ ಕುರಿತಾಗಿ ಮಾತನಾಡಿದ್ದರು. ಅಧ್ಯಕ್ಷ ಆರಿಫ್ ಅಲ್ವಿ ಸಹ ಸೇನಾ ಮುಖ್ಯಸ್ಥ ಮತ್ತು ಐಎಸ್‌ಐ ಜೊತೆಗೆ ಇಲ್ಲಿ ಉಪಸ್ಥಿತರಿದ್ದರು. ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಮತ್ತು ಐಎಸ್‌ಐ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ನದೀಮ್ ಅಂಜುಮ್ ಅವರ ಮುಂದೆ ಶಹಬಾಜ್ ಷರೀಫ್ ಅವರ ಈ ಹೇಳಿಕೆಯನ್ನು ಪ್ರಮುಖವೆಂದು ಪರಿಗಣಿಸಲಾಗಿದೆ, ಏಕೆಂದರೆ ಪಾಕಿಸ್ತಾನದ ಒಟ್ಟು ಬಜೆಟ್‌ನ ಹೆಚ್ಚಿನ ಭಾಗವನ್ನು ಸೇನೆಗೆ ಖರ್ಚು ಮಾಡಲಾಗುತ್ತದೆ ಮತ್ತು ಪ್ರತಿ ವರ್ಷ ಅದು 10% ರಷ್ಟು ಹೆಚ್ಚಾಗುತ್ತದೆ.
ಪ್ರತಿ ಬಾರಿಯೂ ಸಾಲ ಕೇಳುವುದು ನನಗೆ ನಾಚಿಕೆಗೇಡಿನ ಸಂಗತಿ. ಪಾಕಿಸ್ತಾನ ಪರಮಾಣು ಶಕ್ತಿಯಾಗಿರುವ ಕಾರಣ ಇದು ಇನ್ನೂ ಕೆಟ್ಟದಾಗಿ ಕಾಣುತ್ತದೆ. ಒಂದು ದೇಶವಾಗಿ ಎಲ್ಲಿಯವರೆಗೆ ನಾವು ಸಾಲದ ಮೇಲೆ ನಿಲ್ಲುತ್ತೇವೆ ಎಂದು ನಾನು ಕೇಳಲು ಬಯಸುತ್ತೇನೆ. ದೇಶವನ್ನು ನಡೆಸಲು ಇದು ಸರಿಯಾದ ಮಾರ್ಗವಲ್ಲ, ಅಥವಾ ಈ ರೀತಿಯಲ್ಲಿ ನಾವು ದೇಶವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು ಸಾಧ್ಯವಿಲ್ಲ. ಇವತ್ತಲ್ಲದಿದ್ದರೆ ನಾಳೆ ಈ ಋಣವನ್ನು ಈ ದೇಶಕ್ಕೂ ಹಿಂದಿರುಗಿಸಬೇಕಾಗುತ್ತದೆ ಎಂದು ಕೂಡ ಯೋಚಿಸಬೇಕು ಎಂದು ಪರೇಡ್‌ನಲ್ಲಿ ಷರೀಪ್ ಹೇಳಿದ್ದರು.
ಭಿಕ್ಷೆ ಬೇಡುವುದು, ವಿದೇಶಿ ಸಾಲ ಕೇಳುವುದು ನಾಚಿಕೆಗೇಡಿನ ಸಂಗತಿ: ಪಾಕ್ ಪ್ರಧಾನಿ; ನಿಜವಾದ ಮೋದಿ ಭವಿಷ್ಯ.
ಜಿನೀವಾದಲ್ಲಿ, ಶಹಬಾಜ್ ಪಾಕಿಸ್ತಾನಕ್ಕೆ $ 16 ಶತಕೋಟಿ ಸಹಾಯವನ್ನು ಕೋರಿದ್ದರು. ಇದರಿಂದಾಗಿ ಪ್ರವಾಹ ಧ್ವಂಸಗೊಂಡ ದೇಶವು ಸ್ವಲ್ಪ ಸಹಾಯವನ್ನು ಪಡೆಯಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದಾಗ್ಯೂ, ಇಲ್ಲಿಂದ ಅವರು 10 ಬಿಲಿಯನ್ ಡಾಲರ್ ಭರವಸೆ ಸಿಕ್ಕಿತ್ತು. ಇದರಲ್ಲಿ ಒಂದು ಪೈಸೆಯೂ ಪಾಕಿಸ್ತಾನದ ಸರ್ಕಾರದ ಖಜಾನೆಗೆ ಈವರೆಗೂ ಬಂದಿಲ್ಲ. ಇದಾದ ಬಳಿಕ ಷರೀಫ್ ಸೌದಿ ಅರೇಬಿಯಾಕ್ಕೆ ತೆರಳಿದ್ದರು. ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಆಗಲೇ ಇಲ್ಲಿ ಹಾಜರಿದ್ದರು. ಸೌದಿ ಅರೇಬಿಯಾ ಇಬ್ಬರಿಂದಲೂ ಎಚ್ಚರಿಕೆಯಿಂದ ತಪ್ಪಿಸಿಕೊಂಡಿತು. ವಾಸ್ತವವಾಗಿ, ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ 5 ಬಿಲಿಯನ್ ಡಾಲರ್ ನೀಡುವುದಾಗಿ ಭರವಸೆ ನೀಡಿದರು. ಸೌದಿ ಕೇವಲ 3 ಬಿಲಿಯನ್ ಡಾಲರ್ ಮಾತ್ರ ಠೇವಣಿಯಾಗಿ ನೀಡಲಿದೆ ಎಂದು ಮಾತುಕತೆಯಲ್ಲಿ ತಿಳಿದುಬಂದಿದೆ. ಉಳಿದ ಎರಡು ಬಿಲಿಯನ್ ಡಾಲರ್ ಈಗಾಗಲೇ ಪಾಕಿಸ್ತಾನದಲ್ಲಿದೆ. ಯುಎಇ ಕೂಡ ಅದೇ ಕೆಲಸ ಮಾಡಿದೆ.
ನಾವು ಪಾಠ ಕಲಿತಿದ್ದೇವೆ: ಪ್ರಧಾನಿ ಮೋದಿ ಜತೆ ಪ್ರಾಮಾಣಿಕ ಮಾತುಕತೆ ನಡೆಸಬೇಕು ಎಂದ ಪಾಕ್ ಪಿಎಂ ಶೆಹಬಾಜ್..!
ದೇಶಕ್ಕೆ ಹಿಂದಿರುಗಿದ ನಂತರ, ಷರೀಫ್, ನಾವು ಈ ಎರಡೂ ದೇಶಗಳಿಗೆ ಕೃತಜ್ಞರಾಗಿರುತ್ತೇವೆ. ಭವಿಷ್ಯದಲ್ಲಿ ಅವರಿಬ್ಬರೊಂದಿಗೆ ಉತ್ತಮ ಸಂಬಂಧವನ್ನು ಉಳಿಸಿಕೊಳ್ಳುವ ಭರವಸೆ ಇದೆ. ಇಮ್ರಾನ್ ಖಾನ್ ಕಾಲದಲ್ಲಿ ಈ ಸಂಬಂಧ ತೀರಾ ಹದಗೆಟ್ಟಿತ್ತು ಎಂದು ಹೇಳಿದ್ದರು.