ಸೌದಿ ಅರೇಬಿಯಾ ಮತ್ತು ಅಮೆರಿಕ ಪಡೆಗಳು ಇರಾಕ್‌ನಲ್ಲಿರುವ ಇರಾನ್ ಬೆಂಬಲಿತ ಉಗ್ರರ ನೆಲೆಗಳ ಮೇಲೆ ಜಂಟಿ ವೈಮಾನಿಕ ದಾಳಿ ನಡೆಸಿವೆ. ತಮ್ಮ ನೆಲೆಗಳ ಮೇಲೆ ನಡೆದ 30ಕ್ಕೂ ಹೆಚ್ಚು ಡ್ರೋನ್ ದಾಳಿ ಯತ್ನಗಳಿಗೆ ಪ್ರತ್ಯುತ್ತರವಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ನವದೆಹಲಿ/ರಿಯಾದ್ (ಜು.29): ಈಗಾಗಲೇ ಅಮೆರಿಕ ಹಾಗೂ ಇರಾನ್ ನಡುವಿನ ಮಧ್ಯಪ್ರಾಚ್ಯ ಯುದ್ಧವು ಜಗತ್ತನ್ನು ತಲ್ಲಣಗೊಳಿಸುತ್ತಿರುವ ಬೆನ್ನಲ್ಲೇ, ಇದೀಗ ಮತ್ತಷ್ಟು ಬಲಶಾಲಿ ರಾಷ್ಟ್ರಗಳು ಅಧಿಕೃತವಾಗಿ ಸಮರಕ್ಕಿಳಿದಿವೆ. ಸೌದಿ ಅರೇಬಿಯಾ ಮತ್ತು ಅಮೆರಿಕ ಪಡೆಗಳು ಮಂಗಳವಾರ ಇರಾಕ್ ಮೇಲೆ ಜಂಟಿಯಾಗಿ ಭಾರಿ ಪ್ರಮಾಣದ ವೈಮಾನಿಕ ದಾಳಿ (Air Strike) ನಡೆಸಿವೆ. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ತೀವ್ರ ಆತಂಕ ಹಾಗೂ ತಲ್ಲಣ ಸೃಷ್ಟಿಯಾಗಿದೆ.
ಅಮೆರಿಕ ಮತ್ತು ಇರಾನ್ ನಡುವಿನ ಸುದೀರ್ಘ ಸಂಘರ್ಷದಿಂದಾಗಿ ಈಗಾಗಲೇ ಮಧ್ಯಪ್ರಾಚ್ಯದಲ್ಲಿ (Middle East) ಅತ್ಯಂತ ಉದ್ವಿಗ್ನ ವಾತಾವರಣ ನೆಲೆಸಿದೆ. ಈ ಯುದ್ಧದ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆ ತೀವ್ರ ಅಸ್ಥಿರಗೊಂಡಿದ್ದು, ಕಚ್ಚಾ ತೈಲದ (Crude Oil) ಬೆಲೆಗಳು ಗಗನಕ್ಕೇರಿವೆ. ಹೀಗಿರುವಾಗಲೇ, ಸಂಘರ್ಷಕ್ಕೆ ಹೊಸ ತಿರುವು ಸಿಕ್ಕಿದ್ದು, ಅಖಾಡಕ್ಕಿಳಿದಿರುವ ಸೌದಿ ಅರೇಬಿಯಾ ನೇರವಾಗಿ ಇರಾಕ್ ಮೇಲೆ ಬಾಂಬ್ ದಾಳಿ ನಡೆಸಿದೆ.
ಅಮೆರಿಕ ಸೆಂಟ್ರಲ್ ಕಮಾಂಡ್ ಸ್ಪಷ್ಟನೆ
ಇರಾಕ್ ಮೇಲೆ ನಡೆಸಲಾದ ಈ ವೈಮಾನಿಕ ದಾಳಿಯ ಕುರಿತು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಅಧಿಕೃತ ಮಾಹಿತಿಯನ್ನು ಹೊರಹಾಕಿದೆ. ಈ ಕುರಿತು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಯುಎಸ್ ಸೆಂಟ್ರಲ್ ಕಮಾಂಡ್, "ಇರಾಕ್ ಮೂಲದ ಭಯೋತ್ಪಾದಕ ಸಂಘಟನೆಗಳ ನೆಲೆಗಳ ಮೇಲೆ ಜುಲೈ 28 ರಂದು ಸೌದಿ ಅರೇಬಿಯಾ ಪಡೆಗಳು ಭಾರಿ ದಾಳಿ ನಡೆಸಿವೆ. ಈ ಉಗ್ರರಿಗೆ ಇರಾನ್‌ನ 'ರಿವೊಲ್ಯೂಷನರಿ ಗಾರ್ಡ್ ಕಾರ್ಪ್ಸ್' (IRGC) ಬೆಂಬಲವಿತ್ತು. ಅಮೆರಿಕನ್ ಮಿಲಿಟರಿ ಪಡೆಗಳು ಹಾಗೂ ಸೌದಿ ಅರೇಬಿಯಾದ ಪ್ರಮುಖ ಮೂಲಸೌಕರ್ಯ ನೆಲೆಗಳ ಮೇಲೆ ದಾಳಿ ನಡೆಸಲು ಐಆರ್‌ಜಿಸಿ ಈ ಉಗ್ರರಿಗೆ ಆದೇಶ ನೀಡಿತ್ತು" ಎಂದು ತಿಳಿಸಿದೆ.
30ಕ್ಕೂ ಹೆಚ್ಚು ಡ್ರೋನ್ ದಾಳಿಗೆ ಪ್ರತ್ಯುತ್ತರ
ಐಆರ್‌ಜಿಸಿ ಸೂಚನೆಯಂತೆ ಕಳೆದ 72 ಗಂಟೆಗಳಲ್ಲಿ ಸೌದಿ ಹಾಗೂ ಅಮೆರಿಕನ್ ನೆಲೆಗಳ ಮೇಲೆ ಬರೋಬ್ಬರಿ 30ಕ್ಕೂ ಹೆಚ್ಚು ಡ್ರೋನ್ (Drone) ದಾಳಿಗಳ ಯತ್ನ ನಡೆದಿತ್ತು. ಈ ಬೆದರಿಕೆಗೆ ತಕ್ಷಣದ ಪ್ರತ್ಯುತ್ತರವಾಗಿ ಅಮೆರಿಕ ಮತ್ತು ಸೌದಿ ಅರೇಬಿಯಾ ಜಂಟಿಯಾಗಿ ಪೂರ್ವ ಇರಾಕ್‌ನಲ್ಲಿರುವ ಉಗ್ರರ ಅಡಗುದಾಣಗಳು ಹಾಗೂ ಶಸ್ತ್ರಾಸ್ತ್ರ ಸಂಗ್ರಹಾಗಾರಗಳನ್ನು ಗುರಿಯಾಗಿಸಿಕೊಂಡು ಪ್ರಬಲ ಏರ್‌ಸ್ಟ್ರೈಕ್ ನಡೆಸಿವೆ.
ಅಷ್ಟೇ ಅಲ್ಲದೆ, ಕಳೆದ ಫೆಬ್ರವರಿಯಿಂದ ಏಪ್ರಿಲ್ ಅವಧಿಯಲ್ಲೂ ಸಹ ಈ ಉಗ್ರಗಾಮಿ ಗುಂಪುಗಳು ಅಮೆರಿಕನ್ ಪಡೆಗಳ ಮೇಲೆ ಸುಮಾರು 600 ಬಾರಿ ದಾಳಿ ನಡೆಸಲು ಯತ್ನಿಸಿದ್ದವು ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಹೇಳಿದೆ. ಸದ್ಯ ಈ ಭೀಕರ ವೈಮಾನಿಕ ದಾಳಿಯಿಂದಾಗಿ ಇಡೀ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ತಿರುಗುವ ಸಾಧ್ಯತೆಯಿದ್ದು, ಇರಾಕ್ ಕೂಡ ಯಾವುದೇ ಕ್ಷಣದಲ್ಲಿ ಪ್ರತಿದಾಳಿ ನಡೆಸುವ ಭೀತಿ ಎದುರಾಗಿದೆ.


