ಇರಾಕ್‌ ಸರ್ಕಾರ ಸ್ವೀಡನ್‌ ರಾಯಭಾರಿಯನ್ನು ದೇಶದಿಂದ ಉಚ್ಚಾಟನೆ ಮಾಡಿ ಆದೇಶ ಹೊರಡಿಸಿದೆ. ಜೊತೆಗೆ ಸ್ವೀಡನ್‌ನಲ್ಲಿರುವ ತನ್ನ ರಾಯಭಾರಿಗಳನ್ನು ಹಿಂತೆಗೆದುಕೊಂಡಿದೆ. 

ಸ್ಟಾಕ್‌ಹೋಮ್‌/ಬಗ್ದಾದ್‌ (ಜುಲೈ 21, 2023): ಸ್ವೀಡನ್‌ ರಾಜಧಾನಿ ಸ್ಟಾಕ್‌ಹೋಮ್‌ನಲ್ಲಿ ಕುರಾನ್‌ನ ಪ್ರತಿಗಳನ್ನು ಸುಟ್ಟ ಪ್ರಕರಣ ಇದೀಗ ಇರಾಕ್‌ ಮತ್ತು ಸ್ವೀಡನ್‌ ನಡುವೆ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಿದೆ. ಕುರಾನ್‌ ಸುಡಲು ಅನುಮತಿ ಕೊಟ್ಟ ಸ್ವೀಡನ್‌ ಸರ್ಕಾರ ನಿರ್ಧಾರ ವಿರೋಧಿಸಿ ಇರಾಕ್‌ ರಾಜಧಾನಿ ಬಾಗ್ದಾದ್‌ನಲ್ಲಿರುವ ಸ್ವೀಡನ್‌ ರಾಯಭಾರ ಕಚೇರಿಗೆ ನುಗ್ಗಿದ ನೂರಾರು ಜನರು ದಾಂಧಲೆ ಎಬ್ಬಿಸಿ ಬೆಂಕಿ ಹಾಕಿದ್ದಾರೆ. 

ಅದರ ಬೆನ್ನಲ್ಲೇ ಇರಾಕ್‌ ಸರ್ಕಾರ ಸ್ವೀಡನ್‌ ರಾಯಭಾರಿಯನ್ನು ದೇಶದಿಂದ ಉಚ್ಚಾಟನೆ ಮಾಡಿ ಆದೇಶ ಹೊರಡಿಸಿದೆ. ಜೊತೆಗೆ ಸ್ವೀಡನ್‌ನಲ್ಲಿರುವ ತನ್ನ ರಾಯಭಾರಿಗಳನ್ನು ಹಿಂತೆಗೆದುಕೊಂಡಿದೆ. ಗುರುವಾರ ಸ್ವೀಡನ್‌ನಲ್ಲಿರುವ ಇರಾಕ್‌ ದೂತಾವಾಸ ಕಚೇರಿ ಹೊರಗೆ ಇಬ್ಬರು ಪ್ರತಿಭಟನಾಕಾರರು, ಕುರಾನ್‌ ಪ್ರತಿಗಳನ್ನು ಕಾಲಿನಲ್ಲಿ ಒದ್ದು, ಇರಾಕ್‌ ಧ್ವಜ ಹಾಗೂ ಅವರ ಧಾರ್ಮಿಕ ವ್ಯಕ್ತಿಯ ಚಿತ್ರಗಳನ್ನು ತುಳಿಯುವುದರ ಮೂಲಕ ಇರಾಕಿಗರ ಆಕ್ರೋಶಕ್ಕೆ ಗುರಿಯಾಗಿದ್ದರು.

ಇದನ್ನು ಓದಿ: ಮಸೀದಿಯ ಹೊರಗಡೆ ಕುರಾನ್‌ ಸುಟ್ಟು ಪ್ರತಿಭಟನೆ, ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದ ಸ್ವೀಡನ್‌!

ಇದೇ ರೀತಿ ಟರ್ಕಿ ಸಹ ಗುರುವಾರ ಸ್ಟಾಕ್‌ಹೋಮ್‌ನಲ್ಲಿರುವ ಇರಾಕ್‌ನ ರಾಯಭಾರ ಕಚೇರಿಯ ಮುಂದೆ ಕುರಾನ್‌ನ ಮೇಲಿನ "ಹೇಯಕಾರಿ ದಾಳಿಯನ್ನು" ಬಲವಾಗಿ ಖಂಡಿಸಿತು ಮತ್ತು ಇಸ್ಲಾಂ ವಿರುದ್ಧ "ಈ ದ್ವೇಷದ ಅಪರಾಧವನ್ನು ತಡೆಯಲು ನಿರ್ಣಾಯಕ ಕ್ರಮಗಳನ್ನು" ತೆಗೆದುಕೊಳ್ಳುವಂತೆ ಸ್ವೀಡನ್‌ಗೆ ಕರೆ ನೀಡಿದೆ. "ಇರಾಕ್‌ನ ಸ್ಟಾಕ್‌ಹೋಮ್ ರಾಯಭಾರ ಕಚೇರಿಯ ಮುಂದೆ ನಮ್ಮ ಪವಿತ್ರ ಪುಸ್ತಕ ಕುರಾನ್ ಅನ್ನು ಗುರಿಯಾಗಿಸಿಕೊಂಡು ನಡೆದ ಹೇಯ ದಾಳಿಯನ್ನು ನಾವು ಬಲವಾಗಿ ಖಂಡಿಸುತ್ತೇವೆ" ಎಂದು ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ.

ಹಾಗೂ, ಇಸ್ಲಾಂ ಧರ್ಮದ ಪವಿತ್ರ ಸ್ಥಳಗಳ ತವರು ಸೌದಿ ಅರೇಬಿಯಾ, "ಈ ಅವಮಾನಕರ ಕೃತ್ಯಗಳನ್ನು ನಿಲ್ಲಿಸಲು ಎಲ್ಲಾ ತಕ್ಷಣದ ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸ್ವೀಡನ್‌ ಅಧಿಕಾರಿಗಳಿಗೆ ಸಾಮ್ರಾಜ್ಯದ ವಿನಂತಿಯನ್ನು ಒಳಗೊಂಡಿರುವ ಪ್ರತಿಭಟನಾ ಟಿಪ್ಪಣಿಯನ್ನು ಸ್ವೀಡನ್‌ ಉಸ್ತುವಾರಿಗಳಿಗೆ ಹಸ್ತಾಂತರಿಸುವುದಾಗಿ" ಹೇಳಿದೆ.

ಇದನ್ನೂ ಓದಿ: ಕುರಾನ್‌ ಬಳಿಕ ಬೈಬಲ್‌ ಪ್ರತಿ ಸುಡಲು ಸ್ವೀಡನ್‌ ಪೊಲೀಸರಿಂದ ಅನುಮತಿ