ಹೊಂಡಕ್ಕೆ ಬಿದ್ದ ಮರಿಯ ರಕ್ಷಿಸುವಾಗ ಪ್ರಜ್ಞೆ ತಪ್ಪಿದ ತಾಯಾನೆ: ಸಿಪಿಆರ್ ಮಾಡಿ ಜೀವ ಉಳಿಸಿದ ರಕ್ಷಕರು
ತಾಯಿಯೊಂದಿಗೆ ಸಾಗುತ್ತಿರುವ ಮರಿಯೊಂದು ಹೊಂಡಕ್ಕೆ ಬಿದ್ದಿದ್ದು, ಅದರ ರಕ್ಷಣೆಗೆ ಮುಂದಾದ ತಾಯಾನೆಗೆ ಒತ್ತಡದಿಂದಾಗಿ ಪ್ರಜ್ಞೆ ತಪ್ಪಿದೆ, ಕೂಡಲೇ ಅಲ್ಲಿದ್ದ ಕೆಲ ಸಿಬ್ಬಂದಿ ಆನೆಗೆ ಸಿಪಿಆರ್ ಮಾಡುವ ಮೂಲಕ ಆನೆಯ ಜೀವ ಉಳಿಸಿದ್ದಾರೆ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಥೈಲ್ಯಾಂಡ್: ತನ್ನ ಮರಿಗಳಿಗೆ, ಮಕ್ಕಳಿಗೆ ತಾಯ್ತನ ತಾಯಿ ಪ್ರೀತಿ ತೋರುವುದರಲ್ಲಿ ಪ್ರಾಣಿಗಳು ಮನುಷ್ಯರು ಎಂಬ ಬೇಧವಿಲ್ಲ. ತಮ್ಮ ಮರಿಗಳ ರಕ್ಷಣೆಯ ವಿಚಾರಕ್ಕೆ ಬಂದಾಗ ಆನೆಗಳು ಆ ವಿಚಾರದಲ್ಲಿ ಒಂದು ಕೈ ಮೇಲೆಯೇ. ಕೆಲ ದಿನಗಳ ಹಿಂದೆ ಸುರಿಯುತ್ತಿರುವ ಮಳೆಯ ಮಧ್ಯೆ ತನ್ನ ಮರಿ ಒದ್ದೆಯಾಗದಂತೆ ತಾಯಾನೆ ರಕ್ಷಣೆ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು. ವಿಶೇಷವಾಗಿ ಆನೆಗಳು ತಮ್ಮ ಮರಿಗಳಿಗೆ ವಿಶೇಷವಾದ ರಕ್ಷಣೆಯನ್ನು ನೀಡುತ್ತವೆ. ಅದಾಗ್ಯೂ ತಾಯಿಯೊಂದಿಗೆ ಸಾಗುತ್ತಿರುವ ಮರಿಯೊಂದು ಹೊಂಡಕ್ಕೆ ಬಿದ್ದಿದ್ದು, ಅದರ ರಕ್ಷಣೆಗೆ ಮುಂದಾದ ತಾಯಾನೆಗೆ ಒತ್ತಡದಿಂದಾಗಿ ಪ್ರಜ್ಞೆ ತಪ್ಪಿದಂತಾಗಿದ್ದು, ಕೂಡಲೇ ಅಲ್ಲಿದ್ದ ಕೆಲ ಸಿಬ್ಬಂದಿ ಆನೆಗೆ ಸಿಪಿಆರ್ ಮಾಡುವ ಮೂಲಕ ಆನೆಯ ಜೀವ ಉಳಿಸಿದ್ದಾರೆ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಳೆಗಾಲ ವಾಹನ ಸವಾರರಿಗೆ ಮಾತ್ರವಲ್ಲದೇ ಪ್ರಾಣಿಗಳಿಗೆ ತೊಂದರೆ ಉಂಟು ಮಾಡುತ್ತಿದೆ. ಕೆಸರಿನ ರಸ್ತೆಗಳು ಮಳೆಗಾಲದಲ್ಲಿ ಕಾಡಿನಲ್ಲಿ ಸಂಚರಿಸುವ ಕಾಡು ಪ್ರಾಣಿಗಳಿಗೂ ಅಪಾಯಕಾರಿ. ಮಳೆಯಿಂದಾಗಿ ಮಣ್ಣು ಮೆತ್ತಗಾಗಿದ್ದು, ಜಾರುವ ಸಾಧ್ಯತೆ ಜಾಸ್ತಿಯೇ ಇರುತ್ತದೆ. ಹಾಗೆಯೇ ತಾಯಿಯೊಂದಿಗೆ ಹೊರಟ ಪುಟ್ಟ ಆನೆ ಮರಿಯೊಂದು ಥಾಯ್ಲೆಂಡ್‌ನಲ್ಲಿ ಎತ್ತರದ ಚರಂಡಿಗೆ ಬಿದ್ದಿರುವುದು ಇದಕ್ಕೆ ನಿದರ್ಶನ. ಈ ವೇಳೆ ಆನೆ ರಕ್ಷಕರು ಒತ್ತಡದಲ್ಲಿ ಮೂರ್ಛೆ ಹೋಗುತ್ತಿರುವ ತಾಯಿಯೊಂದಿಗೆ ಮಗುವನ್ನು ಉಳಿಸಲು ಪ್ರಯತ್ನಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಥಾಯ್ಲೆಂಡ್‌ನ ನಖೋನ್ ನಯೋಕ್ ಪ್ರಾಂತ್ಯದ ಖಾವೊ ಯಾಯಿ ರಾಷ್ಟ್ರೀಯ ಉದ್ಯಾನವನದ ಸಮೀಪ ಈ ಘಟನೆ ನಡೆದಿದೆ. ರಾಯಲ್ ಹಿಲ್ ಗಾಲ್ಫ್ ಕೋರ್ಸ್ ಪ್ರದೇಶದಲ್ಲಿನ ಮ್ಯಾನ್‌ಹೋಲ್‌ಗೆ ಒಂದು ವರ್ಷದ ಆನೆ ಮರಿ ಬಿದ್ದಿದೆ. ಮಗು ಹೊಂಡಕ್ಕೆ ಬಿದ್ದ ನಂತರ ತಾಯಾನೆ ಅದನ್ನು ಹೊರಗೆ ತರಲು ಸಾಕಷ್ಟು ಪ್ರಯತ್ನ ಮಾಡಿದೆ. ಆದಾಗ್ಯೂ, ನಿರಂತರ ತುಂತುರು ಮಳೆ ಮತ್ತು ಜಾರುವಂತಿದ್ದ ಮಣ್ಣಿನ ಭೂಪ್ರದೇಶವು ತಾಯಾನೆಯ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳ್ಳುವಂತೆ ಮಾಡಿತು. ಈ ನಡುವೆ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ವನ್ಯಜೀವಿ ರಕ್ಷಕರು ಮರಿಗೆ ಮೇಲೆ ಬರಲು ಸಹಾಯ ಮಾಡಲು ಘಟನಾ ಸ್ಥಳಕ್ಕೆ ಆಗಮಿಸಿದಾಗ, ಆತಂಕಗೊಂಡ ತಾಯಿ ಅವರ ಕಾರ್ಯಾಚರಣೆಗೆ ಅಡ್ಡಿ ಮಾಡಿದ್ದಾಳೆ. ಹೀಗಾಗಿ ಉದ್ರಿಕ್ತ ಆನೆಯನ್ನು ನಿಗ್ರಹಿಸಲು ರಕ್ಷಣಾ ತಂಡವು ಅರಿವಳಿಕೆ ನೀಡಿದಾಗ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ತಿರುಗಿದ್ದಲ್ಲದೇ ತಾಯಾನೆ ಬಹುತೇಕ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ.
ಗಂಗೆಯಲ್ಲಿ 3 km ಈಜಿ ಮಾವುತನ ರಕ್ಷಿಸಿದ ಆನೆ: ವಿಡಿಯೋ ವೈರಲ್
ಕೂಡಲೇ ಸಿಪಿಆರ್ ಮಾಡಿದ ವನ್ಯಜೀವಿ ರಕ್ಷಕರು ಆನೆಯನ್ನು ರಕ್ಷಣೆ ಮಾಡಿದ್ದಾರೆ. ಪ್ರಜ್ಞೆ ತಪ್ಪಿದ ತಾಯಾನೆಗೆ ವನ್ಯಜೀವಿ ರಕ್ಷಕರು ಕಾರ್ಡಿಯೋಪಲ್ಮನರಿ ರೆಸಸಿಟೇಶನ್ (CPR) ಮಾಡಿದ್ದಾರೆ. ಪ್ರಜ್ಞೆ ತಪ್ಪಿದ ಆನೆ ಅರ್ಧ ಹೊಂಡದಲ್ಲಿ ಅರ್ಧ ಮೇಲೆ ಇತ್ತು. ಇದನ್ನು ಕ್ರೇನ್ ಮೂಲಕ ಮೇಲೆತ್ತಿದ್ದ ವನ್ಯಜೀವಿ ರಕ್ಷಕರು ನಂತರ ಆನೆ ಮೇಲೆ ನಿಂತು ಸಿಪಿಆರ್ ಮಾಡಿದ್ದಾರೆ. ಈ ಮೂಲಕ ವನ್ಯಜೀವಿ ರಕ್ಷಕರು ಮರಿಗೆ ಮಾತ್ರವಲ್ಲದೇ ತಾಯಿಗೂ ಮೇಲೆಳಲು ಸಹಾಯ ಮಾಡಿದ್ದಾರೆ.
ತಾಯಿ ಹತ್ತಿರದಲ್ಲಿದ್ದಾಗ ಮಗುವಿನ ಹತ್ತಿರ ಹೋಗುವುದು ಅಸಾಧ್ಯವಾಗಿತ್ತು. ಆದ್ದರಿಂದ ನಾವು ತಾಯಾನೆಗೆ ಮೂರು ಡೋಸ್ ಟ್ರ್ಯಾಂಕ್ವಿಲೈಜರ್‌ಗಳನ್ನು (ಅರಿವಳಿಕೆ) ನೀಡಿದ್ದೇವೆ ಆದರೆ ಅವರು ಅಲ್ಲಿಂದ ದೂರ ಹೋಗುವ ಬದಲು ಮಗುವಿನ ಬಳಿ ಹೋಗಿ ಹೊಂಡದ ಸಮೀಪವೇ ಬಿದ್ದಿಳು ಎಂದು ಈ ಆಪರೇಷನ್‌ನಲ್ಲಿ ತೊಡಗಿದ್ದ ಪಶುವೈದ್ಯೆ ಡಾ ಚನನ್ಯಾ ಕಾಂಚನಸಾರಕ್ ಮಾಧ್ಯಮಗಳಿಗೆ ವಿವರಿಸಿದರು.
ಜೋರಾಗಿ ಸುರಿಯೋ ಮಳೆಗೆ ಛತ್ರಿಯಂತೆ ನಿಂತ ಅಮ್ಮ: ಆನೆಗಳ ವಿಡಿಯೋ ವೈರಲ್
ಹಲವು ಅಡೆತಡೆಗಳ ನಡುವೆಯೂ ತಾಯಿ ತನ್ನ ಮಗುವನ್ನು ಬಿಟ್ಟು ಹೋಗಲಿಲ್ಲ ಎಂದು ಡಾ ಚನನ್ಯ ಹೇಳಿದರು. ಈ ರಕ್ಷಣಾ ಕಾರ್ಯಾಚರಣೆ ಬದುಕಿನಲ್ಲಿ ಎಂದು ಮರೆಯಲಾಗದ ಘಟನೆ ಎಂದು ಅವರು ಹೇಳಿದ್ದಾರೆ. ಅಂತಿಮವಾಗಿ, ಆನೆಮರಿ ಹೊಂಡದಿಂದ ಮೇಲೆ ಬರುವಲ್ಲಿ ಯಶಸ್ವಿಯಾಯಿತು. ಮತ್ತು ತಾಯಿ ಆನೆಗೂ ಪ್ರಜ್ಞೆ ಮರಳಿತು. ಆನೆ ಮರಿ ಹೊರಬಂದ ತಕ್ಷಣ ತಾಯಿ ಮರಿಗೆ ಹಾಲುಣಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದಾಗಿದೆ. ದಿ ಗಾರ್ಡಿಯನ್ ಪ್ರಕಾರ, ಮೂರು ಗಂಟೆಗಳ ಕಾಲ ನಡೆದ ಸಮಗ್ರ ಮತ್ತು ಉದ್ವಿಗ್ನ ಕಾರ್ಯಾಚರಣೆಯ ನಂತರ ಅಮ್ಮ ಮರಿ ಇಬ್ಬರೂ ಕಾಡಿನತ್ತ ತೆರಳಿದ್ದಾರೆ.
ಒಟ್ಟಿನಲ್ಲಿ ಹೃದಯ ನೋವು ಒತ್ತಡ ಕಾಣಿಸಿಕೊಂಡಾಗ ಸಿಪಿಆರ್ ಎಷ್ಟು ಅಮೂಲ್ಯವಾದುದು ಎಂಬುದನ್ನು ಈ ಘಟನೆ ತೋರಿಸಿಕೊಟ್ಟಿದೆ.