ಪಾಕಿಸ್ತಾನ ನಡೆಸಿದ ವಾಯುದಾಳಿಗೆ ಪ್ರತಿಯಾಗಿ, ತಾಲಿಬಾನ್ ಸರ್ಕಾರವು ಪಾಕ್ ಗಡಿಯೊಳಗೆ ನುಗ್ಗಿ ಸರಣಿ ದಾಳಿಗಳನ್ನು ನಡೆಸುತ್ತಿದೆ. ಈ ಕಾರ್ಯಾಚರಣೆಯಲ್ಲಿ ಅಫ್ಘಾನ್ ಸೇನೆಯು ಪಾಕಿಸ್ತಾನದ 7 ಸೇನಾ ಪೋಸ್ಟ್‌ಗಳನ್ನು ವಶಪಡಿಸಿಕೊಂಡಿದ್ದು, ಉಭಯ ದೇಶಗಳ ನಡುವೆ ತೀವ್ರ ಸಂಘರ್ಷ ಮುಂದುವರೆದಿದೆ.

ಗಡಿಯಲ್ಲಿ ರಣಭೀಕರ ಯುದ್ಧ: ತಾಲಿಬಾನ್ ಸರಣಿ ದಾಳಿ

ಅಫ್ಘಾನಿಸ್ತಾನದ ಗಡಿಯೊಳಗೆ ನುಗ್ಗಿ ಪಾಕಿಸ್ತಾನ ನಡೆಸಿದ ವಾಯುದಾಳಿಗೆ ಪ್ರತಿಯಾಗಿ ತಾಲಿಬಾನ್ ಸರ್ಕಾರ ಈಗ ಪ್ರಬಲ ಸೇಡು ತೀರಿಸಿಕೊಳ್ಳಲು ಆರಂಭಿಸಿದೆ. ಪಾಕಿಸ್ತಾನದ ಸೇನಾ ಸೌಲಭ್ಯಗಳು ಮತ್ತು ಆಯಕಟ್ಟಿನ ನೆಲೆಗಳ ಮೇಲೆ ಅಫ್ಘಾನ್ ಸೇನೆ ಸರಣಿ ದಾಳಿಗಳನ್ನು ನಡೆಸುತ್ತಿದೆ. ಕಳೆದ 48 ಗಂಟೆಗಳಿಂದ ಉಭಯ ದೇಶಗಳ ಗಡಿಯಲ್ಲಿ ಗುಂಡಿನ ಚಕಮಕಿ ಮುಂದುವರಿದಿದ್ದು, ಪರಿಸ್ಥಿತಿ ಕೈಮೀರುತ್ತಿದೆ. ಪಾಕಿಸ್ತಾನದ ಮೊಂಡುತನಕ್ಕೆ ತಕ್ಕ ಶಾಸ್ತಿ ಮಾಡುವುದಾಗಿ ಅಫ್ಘಾನ್ ಸರ್ಕಾರದ ವಕ್ತಾರ ಜಬಿಯುಲ್ಲಾ ಮುಜಾಹಿದ್ ಗುಡುಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಾಕಿಸ್ತಾನದ 7 ಸೇನಾ ಪೋಸ್ಟ್‌ಗಳು ತಾಲಿಬಾನ್ ವಶಕ್ಕೆ

ಅಫ್ಘಾನ್ ಸೇನೆಯು ನಂಗರ್ಹಾರ್-ಖೈಬರ್ ಮತ್ತು ಕುನಾರ್-ಬಜೌರ್ ಗಡಿಗಳಲ್ಲಿ ಭಾರೀ ಶಸ್ತ್ರಾಸ್ತ್ರಗಳೊಂದಿಗೆ ದಾಳಿ ಸಂಘಟಿಸಿದೆ. ಟ್ಯಾಂಕ್‌ಗಳು, ಫಿರಂಗಿಗಳು ಮತ್ತು ಮಲ್ಟಿ-ಬ್ಯಾರೆಲ್ ರಾಕೆಟ್ ಲಾಂಚರ್‌ಗಳನ್ನು ಬಳಸುತ್ತಿರುವ ತಾಲಿಬಾನ್ ಪಡೆಗಳು, ಪಾಕಿಸ್ತಾನದ 7 ಪ್ರಮುಖ ಚೆಕ್‌ಪೋಸ್ಟ್‌ಗಳನ್ನು ತನ್ನ ವಶಕ್ಕೆ ಪಡೆದುಕೊಂಡಿವೆ. ಪ್ರಸ್ತುತ ನಂಗರ್ಹಾರ್ ಮತ್ತು ಕುನಾರ್ ಗಡಿ ಭಾಗದ ಆಯಕಟ್ಟಿನ ಪ್ರದೇಶಗಳಲ್ಲಿ ಅಫ್ಘಾನ್ ಸೈನಿಕರು ಬೀಡುಬಿಟ್ಟಿದ್ದು, 'ಆಪರೇಷನ್ 201 ಖಾಲಿದ್ ಬಿನ್ ವಾಲಿದ್' ಮತ್ತು '205 ಅಲ್ ಬದ್ರ್' ಬ್ರಿಗೇಡ್‌ಗಳು ಪಾಕ್ ವಿರುದ್ಧ ಕಾರ್ಯಾಚರಣೆ ನಡೆಸುತ್ತಿವೆ.

ನಾಗರಿಕರ ಬಲಿ ಪಡೆದಿದ್ದ ಪಾಕಿಸ್ತಾನದ ವಾಯುದಾಳಿ

ಈ ಸಂಘರ್ಷಕ್ಕೆ ಮುಖ್ಯ ಕಾರಣ ಫೆಬ್ರವರಿ 22ರಂದು ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿ. ಪಾಕಿಸ್ತಾನದ ಫೈಟರ್ ಜೆಟ್‌ಗಳು ನಂಗರ್‌ಹಾರ್ ಮತ್ತು ಪತಿಕಾ ಪ್ರಾಂತ್ಯಗಳ ಮೇಲೆ ಬಾಂಬ್ ಮಳೆಗರೆದಿದ್ದವು. ಈ ದಾಳಿಯಲ್ಲಿ ಒಂದೇ ಕುಟುಂಬದ 16 ಮಂದಿ ಸೇರಿದಂತೆ ಹಲವಾರು ನಿರಪರಾಧಿ ಅಫ್ಘಾನ್ ನಾಗರಿಕರು ಸಾವನ್ನಪ್ಪಿದ್ದರು. ಮಹಿಳೆಯರು ಮತ್ತು ಮಕ್ಕಳ ಸಾವಿನಿಂದ ಕೆರಳಿದ ತಾಲಿಬಾನ್ ಸರ್ಕಾರ, ಈಗ ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಉತ್ತರಿಸುತ್ತಿದೆ.

ಪಾಕ್ ಕ್ರಮಕ್ಕೆ ಭಾರತದ ತೀವ್ರ ಖಂಡನೆ

ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ನಡೆಸಿದ ವಾಯುದಾಳಿಯನ್ನು ಭಾರತ ಸರ್ಕಾರ ಕಟುವಾಗಿ ಟೀಕಿಸಿದೆ. "ಪವಿತ್ರ ರಂಜಾನ್ ಮಾಸದಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ನಡೆಸಿದ ಈ ದಾಳಿ ಖಂಡನೀಯ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ. ತನ್ನ ಆಂತರಿಕ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಪಾಕಿಸ್ತಾನ ಇಂತಹ ಹತಾಶ ಕ್ರಮಗಳಿಗೆ ಮುಂದಾಗುತ್ತಿದೆ ಎಂದು ಚಾಟಿ ಬೀಸಿರುವ ಭಾರತ, ಅಫ್ಘಾನಿಸ್ತಾನದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ತನ್ನ ಬೆಂಬಲವನ್ನು ಘೋಷಿಸಿದೆ.