ಜೋರಾಗಿ ಸುರಿಯೋ ಮಳೆಗೆ ಛತ್ರಿಯಂತೆ ನಿಂತ ಅಮ್ಮ: ಆನೆಗಳ ವಿಡಿಯೋ ವೈರಲ್
ಅಮ್ಮ ತನ್ನ ಮಕ್ಕಳ ಮೇಲೆ ತೋರುವ ಕರುಣೆ ಕಾಳಜಿ ಪದಗಳಲ್ಲಿ ವರ್ಣಿಸಲಾಗದು ಅಮ್ಮನ ಮಹತ್ವ ಸಹನೆ ಕಾಳಜಿಯನ್ನು ಅರಿತೇ ತಾಯಿಗಿಂತ ದೇವರಿಲ್ಲ ಎಂಬ ಮಾತು ಚಾಲ್ತಿಯಲ್ಲಿದೆ.
ಅಮ್ಮ ತನ್ನ ಮಕ್ಕಳ ಮೇಲೆ ತೋರುವ ಕರುಣೆ ಕಾಳಜಿ ಪದಗಳಲ್ಲಿ ವರ್ಣಿಸಲಾಗದು ಅಮ್ಮನ ಮಹತ್ವ ಸಹನೆ ಕಾಳಜಿಯನ್ನು ಅರಿತೇ ತಾಯಿಗಿಂತ ದೇವರಿಲ್ಲ ಎಂಬ ಮಾತು ಚಾಲ್ತಿಯಲ್ಲಿದೆ. ಅಮ್ಮನ ಮಮತೆ ಪ್ರೇಮ ಸೆರೆಯಾದ ಹಲವು ವಿಡಿಯೋಗಳನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ನೋಡಿದ್ದೇವೆ. ಅಮ್ಮ ಎಂಬ ಕಾಳಜಿ ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಾಗಿಲ್ಲ. ಪಶು ಪಕ್ಷಿಗಳು ಕೂಡ ತಮ್ಮ ತಮ್ಮ ಕರುಳ ಕುಡಿಗಳ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿವೆ. ಅದೇ ರೀತಿ ಆನೆಯೊಂದು ಜೋರಾಗಿ ಸುರಿಯುತ್ತಿರುವ ಮಳೆಯ ಮಧ್ಯೆ ತನ್ನ ಮರಿಯ ಮೇಲೆ ಮಳೆ ಹನಿ ಬೀಳದಂತೆ ಅಡ್ಡ ನಿಂತು ರಕ್ಷಣೆ ಮಾಡಿದೆ.
ಈ ಆನೆಗಳ ವಿಡಿಯೋವನ್ನು ಭಾರತೀಯ ಆಡಳಿತ ಸೇವೆ ಅಧಿಕಾರಿ ಸುಪ್ರಿಯಾ ಸಾಹು ಅವರು ಪೋಸ್ಟ್ ಮಾಡಿದ್ದು, ತಮಿಳುನಾಡಿನ ನೀಲಗಿರಿ ಅರಣ್ಯ ಪ್ರದೇಶದಲ್ಲಿ ಸೆರೆಯಾದ ದೃಶ್ಯ ಇದಾಗಿದೆ. 28 ಸೆಕೆಂಡುಗಳ ಈ ವಿಡಿಯೋವನ್ನು ಪೋಸ್ಟ್ ಮಾಡಿದ ಅಧಿಕಾರಿ ಸುಪ್ರಿಯಾ ಸಾಹು, ಇದೊಂದು ಅಪರೂಪದ ಕ್ಷಣ. ತಾಯಿ ಆನೆ ದೊಡ್ಡದಾದ ಛತ್ರಿಯಂತೆ ನಿಂತು ತನ್ನ ನವಜಾತ ಶಿಶುವನ್ನು ಮಳೆಯಿಂದ ರಕ್ಷಿಸುತ್ತಿದೆ. ನೀಲಗಿರಿ ಅರಣ್ಯ ಪ್ರದೇಶ ವ್ಯಾಪ್ತಿಯ ಗುಡಲೂರಿನಲ್ಲಿ ಈ ಘಟನೆ ನಡೆದಿದೆ ಎಂದು ಸಾಹು ಬರೆದುಕೊಂಡಿದ್ದಾರೆ.
ಇದನ್ನು ಓದಿ: 12,000 ಮೌಲ್ಯದ ಚರ್ಮದ ಚಪ್ಪಲಿ ಧರಿಸುವ ಆನೆ ಇವಳು
ಈ ವಿಡಿಯೋವನ್ನು 11,000ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಕೆಲವೊಮ್ಮೆ ಪ್ರಾಣಿಗಳು ಕೂಡ ನಮಗೆ ಸಣ್ಣ ಮಕ್ಕಳನ್ನು ಪ್ರೀತಿ ಹಾಗೂ ಆತ್ಮೀಯತೆಯಿಂದ ಹೇಗೆ ನೋಡಿಕೊಳ್ಳಬೇಕು ಎಂಬುದನ್ನು ತೋರಿಸಿ ಕೊಡುತ್ತವೆ. ನಿಜವಾದ ಪ್ರೀತಿಯ ನೈಜ ಅಭಿವ್ಯಕ್ತಿ ಇದು. ಅಮ್ಮನ ಪ್ರೀತಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಆನೆ ಮರಿಗಳು ಎರಡು ವರ್ಷ ಪೂರ್ಣವಾಗುವವರೆಗೂ ಆಹಾರಕ್ಕಾಗಿ ಸಂಪೂರ್ಣವಾಗಿ ತಮ್ಮ ತಾಯಿಗೆ ಅವಲಂಬಿತವಾಗಿರುತ್ತವೆ. ನಂತರ ಪ್ರಾಯ 16 ತುಂಬುತ್ತಿದ್ದಂತೆ ತನ್ನ ಹಿಂಡಿನಿಂದ ಹೊರ ಬಂದು ಸ್ವತಂತ್ರ ಜೀವನ ನಡೆಸುತ್ತವೆ.
ಹೇಳಿ ಕೇಳಿ ಇದು ಮಳೆಗಾಲ ಎಲ್ಲೆಡೆ ಜೋರಾಗಿ ಭಾನು ತೂತಾದಂತೆ ಮಳೆ ಸುರಿಯುತ್ತಿದ್ದು, ಹಲವೆಡೆ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಪ್ರಾಣಿ ಪಕ್ಷಿಗಳು ಮಳೆಯಿಂದ ರಕ್ಷಿಸಿಕೊಳ್ಳಲು ಹರ ಸಾಹಸ ಪಡುತ್ತಿವೆ. ಈ ಆನೆಯೂ ತನ್ನ ಮರಿಯನ್ನು ಮಳೆಯಿಂದ ರಕ್ಷಿಸಲು ತಾನೇ ಅಡ್ಡ ನಿಂತಿದೆ. ಮಳೆ ಎಂದರೆ ಇಷ್ಟ ಪಡದವರು ಯಾರಿದ್ದಾರೆ ಹೇಳಿ.
ಇದನ್ನು ಓದಿ: ಸಾಕುವವನ ಮುದ್ದಿಸುತ್ತಿರುವ ಮರಿಯಾನೆ: ವಿಡಿಯೋ ವೈರಲ್
ಮಳೆ ಸ್ವಲ್ಪ ಸ್ವಲ್ಪವೇ ನಿಧಾನಕ್ಕೆ ಸುರಿಯುತ್ತಿದ್ದರೆ ಚೆಂದ. ಆದರೆ ಬಾನೇ ತೂತಾದಂತೆ ಸುರಿದರೆ ಅವಾಂತರ. ಪುಟ್ಟ ಮಕ್ಕಳು ಮಳೆ ನೀರಲ್ಲಿ ನೆನೆಯಲು ತುಂಬಾ ಇಷ್ಟಪಡುತ್ತಾರೆ. ಮಳೆಯೊಂದಿಗೆ ನೆನೆಯುತ್ತಾ ಮಕ್ಕಳು ಶೀತ ಜ್ವರ ಬರಿಸಿಕೊಳ್ಳುತ್ತಾರೆ. ಮಕ್ಕಳಿಗೆ ಶೀತ ಜ್ವರ ಬಂದರೆ ಅಮ್ಮನಿಗೆ ಮತ್ತೆ ತಲೆಬಿಸಿ. ಆಕೆಯೇ ನಿದ್ದೆಗೆಡಬೇಕು, ಕಷ್ಟಪಡಬೇಕು. ಹೀಗಾಗಿ ಅಮ್ಮ ಮಕ್ಕಳನ್ನು ನೀರಿಗೆ ಇಳಿಯಲು ಬಿಡುವುದಿಲ್ಲ. ನೀರಿಗೆ ಇಳಿಯುವುದು ತಿಳಿದರೆ ಬೆತ್ತ ಹಿಡಿದು ಬರುವ ಅಮ್ಮ ಬಾರಿಸಿಯೇ ಬಿಡುತ್ತಾಳೆ. ಮಲೆನಾಡಲ್ಲಿ ಮಳೆ ಹೆಚ್ಚು ಸುರಿಯುವ ಕಡೆಗಳಲ್ಲಿ ಬಾಲ್ಯ ಕಳೆದವರಿಗೆ ಇದರ ಅನುಭವ ಆಗಿರಬಹುದು. ಅದೇ ರೀತಿ ಇಲ್ಲಿ ಆನೆ ಮರಿ ಮಳೆಯಲ್ಲಿ ನೆನೆದು ತುಂಟಾಟವಾಡಲು ನೋಡುತ್ತಿದ್ದು, ತಾಯಿ ಆನೆ ಮಾತ್ರ ಮರಿ ಒದ್ದೆಯಾಗದಂತೆ ತಡೆಯಲು ಎಲ್ಲಾ ಸಾಹಸ ಮಾಡುತ್ತಿದೆ. ಒಟ್ಟಿನಲ್ಲಿ ಈ ವಿಡಿಯೋ ನೋಡುಗರನ್ನು ಭಾವುಕವಾಗಿಸಿದೆ.