ಅಮೆರಿಕದ ಹೈಪ್ರೊಫೈಲ್ ಲೈಂಗಿಕ ಹಗರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ ಕಡತಗಳಲ್ಲಿದ್ದ ನೊಬೆಲ್‌ ಪ್ರಶಸ್ತಿ ವಿಜೇತ ಖ್ಯಾತ ಖಗೋಳ ಭೌತವಿಜ್ಞಾನಿ ಸ್ಪೀಫನ್‌ ಹಾಕಿಂಗ್‌ ಅವರ ಫೋಟೋ ಬಹಿರಂಗವಾಗಿದೆ. ಇದರಲ್ಲಿ ಅವರು ಬಿಕಿನಿ ಧರಿಸಿದ್ದ ಮಹಿಳೆಯರಿಬ್ಬರ ಮಧ್ಯೆ ನಗುತ್ತಿದ್ದಾರೆ.

ವಾಷಿಂಗ್ಟನ್‌: ಅಮೆರಿಕದ ಹೈಪ್ರೊಫೈಲ್ ಲೈಂಗಿಕ ಹಗರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ ಕಡತಗಳಲ್ಲಿದ್ದ ನೊಬೆಲ್‌ ಪ್ರಶಸ್ತಿ ವಿಜೇತ ಖ್ಯಾತ ಖಗೋಳ ಭೌತವಿಜ್ಞಾನಿ ಸ್ಪೀಫನ್‌ ಹಾಕಿಂಗ್‌ ಅವರ ಫೋಟೋ ಬಹಿರಂಗವಾಗಿದೆ. ಇದರಲ್ಲಿ ಅವರು ಬಿಕಿನಿ ಧರಿಸಿದ್ದ ಮಹಿಳೆಯರಿಬ್ಬರ ಮಧ್ಯೆ ನಗುತ್ತಿದ್ದಾರೆ. ಇದು ತೀವ್ರ ಚರ್ಚೆಗೆ ಕಾರಣವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ, ಈ ಪೋಟೋದಲ್ಲಿರುವ ಮಹಿಳೆಯರು ಹಾಕಿಂಗ್‌ ಅವರನ್ನು ದೀರ್ಘ ಕಾಲದಲ್ಲಿ ಆರೈಕೆ ಮಾಡುತ್ತಿದ್ದವರು ಎಂದು ಕುಟುಂಬದ ಮೂಲಗಳು ಸ್ಪಷ್ಟಪಡಿಸಿವೆ.

ಹಾಕಿಂಗ್‌ ಅವರು ರೆಸಾರ್ಟ್‌ವೊಂದರಲ್ಲಿ ಕೂತು ಹಣ್ಣುಗಳಿಂದ ಅಲಂಕರಿಸಿದ ಕೆಂಪು ಕಾಕ್‌ಟೈಲ್‌ವೊಂದನ್ನು ಕೈಯಲ್ಲಿ ಹಿಡಿದುಕೊಂಡಿರುವ ಫೋಟೋ ಇದಾಗಿದೆ. ಇದು ಯಾವ ಸಮಯದ ಫೋಟೋ ಎಂಬ ವಿಷಯ ಎಪ್‌ಸ್ಟೀನ್‌ ಫೈಲನಲ್ಲಿಲ್ಲ.

ಆದರೆ, ಹಾಕಿಂಗ್‌ ಕುಟುಂಬ ಮಾತ್ರ, ‘ಇದು 2006ರಲ್ಲಿ ಸೇಂಟ್‌ ಥಾಮಸ್‌ ಕೆರಿಬಿಯನ್‌ ದ್ವೀಪದ ರಿಟ್ಜ್‌ ಕಾರ್ಲ್‌ಟನ್‌ ಹೋಟೆಲ್‌ನಲ್ಲಿ ತೆಗೆಯಲಾದ ಫೋಟೋ. ಅಲ್ಲಿ ಅವರು ಕ್ವಾಂಟಮ್‌ ಕಾಸ್ಮಾಲಜಿ (ಕ್ವಾಂಟಮ್ ವಿಶ್ವವಿಜ್ಞಾನ) ಕುರಿತು ಭಾಷಣ ಮಾಡಿದ್ದರು. ಫೋಟೋದಲ್ಲಿರುವ ಮಹಿಳೆಯರು ಹಲವು ವರ್ಷಗಳಿಂದ ಹಾಕಿಂಗ್‌ ಅವರನ್ನು ನೋಡಿಕೊಳ್ಳುತ್ತಿದ್ದರು. ಬ್ರಿಟನ್‌ ಮೂಲದ ಕೇರ್‌ ಟೇಕರ್‌ ಅವರಾಗಿದ್ದು, ಅನುಚಿತ ವರ್ತನೆಯ ಕುರಿತ ಆರೋಪ ಮಾಡುವುದು ಸರಿಯಲ್ಲ’ ಎಂದು ತಿಳಿಸಿದೆ.

ಮಾರ್ಚ್‌, 2006ರಲ್ಲಿ ಎಪ್‌ಸ್ಟೀನ್‌ ಆಯೋಜಿಸಿದ್ದ ಆ ಕಾನ್ಫರೆನ್ಸ್‌ನಲ್ಲಿ ಹಾಕಿಂಗ್‌ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದ 21 ಖ್ಯಾತ ವಿಜ್ಞಾನಿಗಳೂ ಪಾಲ್ಗೊಂಡಿದ್ದರು.

ಎಪ್‌ಸ್ಟೀನ್‌ ಫೈಲಲ್ಲಿ ಹೆಸರು: ವಿಶ್ವ ಆರ್ಥಿಕ ವೇದಿಕೆಯ ಸಿಇಒ ಬ್ರೆಂಡೆ ರಾಜೀನಾಮೆ

ವಾಷಿಂಗ್ಟನ್‌: ಅಮೆರಿಕದ ಕುಖ್ಯಾತ ಲೈಂಗಿಕ ಹಗರಣ ಎಪ್‌ಸ್ಟೀನ್‌ ಫೈಲ್ಸ್‌ನಲ್ಲಿ ತಮ್ಮ ಹೆಸರು ಉಲ್ಲೇಖವಾಗಿರುವ ಹಿನ್ನೆಲೆಯಲ್ಲಿ ವಿಶ್ವ ಆರ್ಥಿಕ ವೇದಿಕೆಯ ಸಿಇಒ ಬೋರ್ಜ್ ಬ್ರೆಂಡೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜೆಫ್ರಿ ಎಪ್‌ಸ್ಟೀನ್‌ ಜತೆಗಿನ ತಮ್ಮ ನಂಟಿನ ಬಗ್ಗೆ ವಿಚಾರಣೆ ನಡೆಯುತ್ತಿರುವ ಕಾರಣ ಈ ಹೆಜ್ಜೆ ಇಟ್ಟಿರುವುದಾಗಿ ಅವರು ಹೇಳಿದ್ದಾರೆ. ಇವರು 8.5 ವರ್ಷದಿಂದ ಈ ಹುದ್ದೆಯಲ್ಲಿದ್ದರು.

ಫೈಲ್ಸ್‌ನಲ್ಲಿ ಬ್ರೆಂಡೆ ಅವರು ಎಪ್‌ಸ್ಟೀನ್‌ ಜತೆಗಿನ 3 ಬಿಸ್ನೆಸ್‌ ಭೋಜನದಲ್ಲಿ ಭಾಗವಹಿಸಿದ್ದರು ಹಾಗೂ ಇ-ಮೇಲ್‌ ಮೂಲಕ ಸಂವಹನ ನಡೆಸಿದ್ದರು ಎನ್ನಲಾಗಿದೆ.

ಪ್ರಿಯಾಂಕಾ ಸಣ್ಣ ವಿಷಯಕ್ಕೂ ಸಿಟ್ಟು ಮಾಡ್ಕೋತಾಳೆ: ರಾಹುಲ್‌ ಚಟಾಕಿ

ವಯನಾಡ್‌: ‘ಸೋದರಿ ಪ್ರಿಯಾಂಕಾ ಗಾಂಧಿ ಸಣ್ಣಸಣ್ಣ ವಿಷಯಕ್ಕೂ ಮುನಿಸಿಕೊಳ್ತಾರೆ’ ಎಂದು ಅವರ ಸಹೋದರ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಾಸ್ಯ ಚಟಾಕಿ ಹಾರಿಸಿದರು.

ವಯನಾಡು ಸಂಸದೆಯೂ ಆದ ಪ್ರಿಯಾಂಕಾ ಗಾಂಧಿ ಸಮ್ಮುಖದಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ ರಾಹುಲ್‌, ಹಿಂದಿನ ದಿನ ನಡೆದ ಪ್ರಸಂಗವೊಂದನ್ನು ವಿವರಿಸಿದರು.‘ನಾನು ಮತ್ತು ಪ್ರಿಯಾಂಕಾ ಸಣ್ಣಸಣ್ಣ ವಿಷಯಗಳಿಗೂ ಕಿತ್ತಾಡುತ್ತಿರುತ್ತೇವೆ. ನಿನ್ನೆ ಕೂಡ ಹಾಗೆಯೇ ಆಗಿ ಆಕೆ ನನ್ನೊಂದಿಗೆ ಮಾತು ಬಿಟ್ಟಿದ್ದರು. ನಾನು ತಾಯಿ ಸೋನಿಯಾರ ಬಳಿ ಹೋದಾಗ ಈ ಬಗ್ಗೆ ಹೇಳಿದೆ. ಜತೆಗೆ, ಪ್ರಿಯಾಂಕಾ ನನ್ನನ್ನು ಮಾತಾಡಿಸಲೇಬೇಕಾದಂತಹ ಸನ್ನಿವೇಶ ಸೃಷ್ಟಿಸಿದ್ದೇನೆ ಎಂದೆ. ಅದರಂತೆ ಇವತ್ತು ಇಬ್ಬರೂ ವಯನಾಡಿನತ್ತ ಹೊರಟೆವು. ಬೆಳಗ್ಗೆಯೂ ಆಕೆಯ ಮುನಿಸು ಮುಂದುವರೆದಿತ್ತು. ಆದರೆ ಇಲ್ಲಿಗೆ ಬಂದು ತಲುಪುತ್ತಿದ್ದಂತೆ ಮಾತನಾಡಿಸಲು ಶುರು ಮಾಡಿದರು. ಇದು ಇದನ್ನು ವಯನಾಡಿನ ಮಹಿಮೆ’ ಎಂದು ತಮಾಷೆ ಮಾಡಿದರು.

ಕೇರಳ ಸ್ಟೋರಿ-2 ರಿಲೀಸ್‌ಗೆ ಕೇರಳ ಹೈಕೋರ್ಟ್‌ ತಡೆ

ಕೊಚ್ಚಿ: ರಾಜ್ಯವೊಂದರ ಹೆಸರನ್ನು ದುರ್ಬಳಕೆ ಮಾಡಲಾಗಿದೆ ಎಂಬುದು ಸೇರಿದಂತೆ ಕೆಲ ಆರೋಪವನ್ನು ಎದುರಿಸುತ್ತಿರುವ ‘ಕೇರಳ ಸ್ಟೋರಿ-2’ ಚಿತ್ರದ ಬಿಡುಗಡೆಗೆ ಕೇರಳ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ. ‘ಚಿತ್ರಕ್ಕೆ ಪ್ರಮಾಣಪತ್ರ ನೀಡುವ ವೇಳೆ ಸೆನ್ಸಾರ್‌ ಮಂಡಳಿಯು ತಲೆ ಉಪಯೋಗಿಸಿಲ್ಲ’ ಎಂದೂ ಮೂದಲಿಸಿದೆ.ಫೆ.27ಕ್ಕೆ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ ಇದರಲ್ಲಿ ಕೇರಳದ ಹೆಸರನ್ನು ಬಳಸಿರುವ ಕಾರಣ ರಾಜ್ಯದ ಹೆಸರಿಗೆ ಕಳಂಕವಂಟುತ್ತದೆ ಎಂದು ಆರೋಪಿಸಿ ಅರ್ಜಿಗಳು ಸಲ್ಲಿಕೆಯಾಗಿದ್ದವು.ಇದರ ವಿಚಾರಣೆ ನಡೆಸಿದ ಕೋರ್ಟ್‌, ‘ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಮಾರ್ಗಸೂಚಿಯನ್ನು ಪಾಲಿಸಲಾಗಿದೆಯೇ ಎಂಬುದನ್ನು ಸೆನ್ಸಾರ್ ಮಂಡಳಿ ಗಮನಿಸಿಲ್ಲ. ಹೀಗಾಗಿ ಇನ್ನು 13 ದಿನಗಳ ವರೆಗೆ ಚಿತ್ರದ ಬಿಡುಗಡೆ ಮಾಡುವಂತಿಲ್ಲ’ ಎಂದು ಆದೇಶಿಸಿತು.

ಜತೆಗೆ, ಪರಿಷ್ಕರಣಾ ಅರ್ಜಿಯನ್ನು 2 ವಾರಗಳ ಒಳಗೆ ಪರಿಗಣಿಸಿ ಆದೇಶ ಹೊರಡಿಸುವಂತೆ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತು. ಅದಕ್ಕೂ ಮೊದಲು ಸಿಬಿಎಫ್‌ಸಿ ಮತ್ತು ನಿರ್ಮಾಪಕ ವಿಪುಲ್ ಅಮೃತ್‌ಲಾಲ್ ಶಾ ಅವರಿಗೆ ವಿಚಾರಣೆಗೆ ಅವಕಾಶ ನೀಡಬೇಕು ಎಂದಿದೆ.