ಅಮೆರಿಕ-ಇರಾನ್ ಸಂಘರ್ಷದ ನಡುವೆ, ಪಾಕಿಸ್ತಾನವು ಸೌದಿ ಅರೇಬಿಯಾದೊಂದಿಗೆ ರಹಸ್ಯ ರಕ್ಷಣಾ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಭಾಗವಾಗಿ, 8,000 ಪಾಕಿಸ್ತಾನಿ ಸೈನಿಕರು ಮತ್ತು ಯುದ್ಧ ವಿಮಾನಗಳನ್ನು ಸೌದಿಯಲ್ಲಿ ನಿಯೋಜಿಸಲಾಗಿದೆ.

ರಿಯಾದ್ / ಇಸ್ಲಾಮಾಬಾದ್ (ಮೇ.18): ಅಮೆರಿಕ ಮತ್ತು ಇರಾನ್ ನಡುವಿನ ಮಿಲಿಟರಿ ಸಂಘರ್ಷದಿಂದಾಗಿ ಸದ್ಯ ಜಾಗತಿಕ ಮಟ್ಟದಲ್ಲಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮಧ್ಯಪ್ರಾಚ್ಯದಲ್ಲಿ ಯಾವುದೇ ಕ್ಷಣದಲ್ಲಾದರೂ ದೊಡ್ಡ ಮಟ್ಟದ ಯುದ್ಧ ಸ್ಫೋಟಗೊಳ್ಳಬಹುದು ಎಂಬ ಆತಂಕದ ನಡುವೆಯೇ, ಈಗ ಈ ವಲಯಕ್ಕೆ ನೆರೆಯ ಪಾಕಿಸ್ತಾನದ ಸೇನೆ ಅಧಿಕೃತವಾಗಿ ಪ್ರವೇಶ ಪಡೆದಿದೆ. ಬರೋಬ್ಬರಿ 8,000 ಪಾಕಿಸ್ತಾನಿ ಸೈನಿಕರು ಜಾಗತಿಕ ರಾಜತಾಂತ್ರಿಕ ಮಹತ್ವದ ಕಣಕ್ಕೆ ಧುಮುಕಿದ್ದು, ಈ ಬೆಳವಣಿಗೆಯಿಂದಾಗಿ ಮಧ್ಯಪ್ರಾಚ್ಯದ ಅಂತಾರಾಷ್ಟ್ರೀಯ ರಾಜಕಾರಣ ತೀವ್ರ ವೇಗ ಪಡೆದುಕೊಂಡಿದೆ.

Add Asianetnews Kannada as a Preferred SourcegooglePreferred

ಹೋರ್ಮುಜ್ ಜಲಸಂಧಿ ಬಂದ್; ಜಾಗತಿಕ ಇಂಧನ ಬಿಕ್ಕಟ್ಟು ತೀವ್ರ

ಪ್ರಸ್ತುತ ಅಮೆರಿಕ ಮತ್ತು ಇರಾನ್ ನಡುವೆ ತಾತ್ಕಾಲಿಕವಾಗಿ ಕದನ ವಿರಾಮ (Ceasefire) ಜಾರಿಯಲ್ಲಿದ್ದರೂ, ಉಭಯ ದೇಶಗಳ ನಡುವಿನ ಆಂತರಿಕ ಸಂಘರ್ಷ ಮತ್ತು ಹಗೆತನವೇನೂ ಕಡಿಮೆಯಾಗಿಲ್ಲ. ಯುದ್ಧದ ಹಿನ್ನೆಲೆಯಲ್ಲಿ ಇರಾನ್ ಈಗಾಗಲೇ ಜಾಗತಿಕ ವ್ಯಾಪಾರದ ಪ್ರಮುಖ ಮಾರ್ಗವಾದ ಹೋರ್ಮುಜ್ ಜಲಸಂಧಿಯನ್ನು ಅನ್ನು ಸಂಪೂರ್ಣವಾಗಿ ಬಂದ್ ಮಾಡಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕ ಕೂಡ ಹೋರ್ಮುಜ್ ಜಲಸಂಧಿಯಲ್ಲಿ ಕಟ್ಟುನಿಟ್ಟಿನ ದಿಗ್ಬಂಧನ ಹೇರಿದೆ. ಈ ಮಾರ್ಗದಲ್ಲಿ ಉಭಯ ದೇಶಗಳು ಪರಸ್ಪರರ ವಾಣಿಜ್ಯ ಹಡಗುಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಲೇ ಇವೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ಗೆ ಮತ್ತೊಮ್ಮೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದು, "ಕೂಡಲೇ ಪೂರ್ಣ ಪ್ರಮಾಣದ ಕದನ ವಿರಾಮ ಘೋಷಿಸದಿದ್ದರೆ ಇರಾನ್ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ" ಎಂದು ಗುಡುಗಿದ್ದಾರೆ. ಆದರೆ ಇರಾನ್ ಸಹ ಯಾವುದೇ ಕಾರಣಕ್ಕೂ ಮಣಿಯಲು ಸಿದ್ಧವಿಲ್ಲ. ಹೋರ್ಮುಜ್ ಜಲಸಂಧಿ ಬಂದ್ ಆಗಿರುವುದರಿಂದ ಇಡೀ ಜಗತ್ತಿನಾದ್ಯಂತ ಭಾರಿ ಇಂಧನ ಬಿಕ್ಕಟ್ಟು (Energy Crisis) ಸೃಷ್ಟಿಯಾಗಿದೆ. ಹಲವು ದೇಶಗಳಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಅನಿಲದ ತೀವ್ರ ಅಭಾವ ತಲೆದೋರಿದ್ದು, ಇದರ ನೇರ ಆರ್ಥಿಕ ಹೊಡೆತ ಭಾರತದ ಮೇಲೂ ಬೀಳುತ್ತಿದೆ.

ಸೌದಿ-ಪಾಕ್ ರಕ್ಷಣಾ ಒಪ್ಪಂದ; ಯುದ್ಧ ವಿಮಾನಗಳೂ ನಿಯೋಜನೆ

ಈ ಎಲ್ಲಾ ಜಾಗತಿಕ ಸಂಘರ್ಷಗಳ ನಡುವೆಯೇ ಮಧ್ಯಪ್ರಾಚ್ಯದಲ್ಲಿ ಪಾಕಿಸ್ತಾನದ ಸೇನೆ ದಿಢೀರ್ ಪ್ರವೇಶ ಪಡೆದಿರುವುದು ಭಾರಿ ಕುತೂಹಲ ಮೂಡಿಸಿದೆ. ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ನಡುವೆ ಇತ್ತೀಚೆಗೆ ಅತ್ಯಂತ ರಹಸ್ಯ ಹಾಗೂ ಮಹತ್ವದ ರಕ್ಷಣಾ ಒಪ್ಪಂದ (Defence Pact) ಏರ್ಪಟ್ಟಿದೆ. ಈ ಒಪ್ಪಂದದ ಭಾಗವಾಗಿ ಪಾಕಿಸ್ತಾನವು ತನ್ನ ಬರೋಬ್ಬರಿ 8,000 ಸೈನಿಕರನ್ನು ಸೌದಿ ಅರೇಬಿಯಾದಲ್ಲಿ ನಿಯೋಜಿಸಿದೆ. ಪಾಕಿಸ್ತಾನ ಕೇವಲ ಸೈನಿಕರನ್ನು ಮಾತ್ರವಲ್ಲದೆ, ತನ್ನ ಅತ್ಯಾಧುನಿಕ ಯುದ್ಧ ವಿಮಾನಗಳನ್ನೂ (Fighter Jets) ಸೌದಿಯ ಭೂಮಿಯಲ್ಲಿ ತಂದು ನಿಲ್ಲಿಸಿದೆ.

ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ 'ರಾಯ್ಟರ್ಸ್' (Reuters) ವರದಿಯ ಪ್ರಕಾರ, ಮೂವರು ಹಿರಿಯ ರಕ್ಷಣಾ ಅಧಿಕಾರಿಗಳು ಹಾಗೂ ಇಬ್ಬರು ಉನ್ನತ ಸರ್ಕಾರಿ ಮೂಲಗಳು ಈ ಬಿಗ್ ನ್ಯೂಸ್ ಅನ್ನು ಅಧಿಕೃತವಾಗಿ ಖಚಿತಪಡಿಸಿವೆ. ಈ ದ್ವಿಪಕ್ಷೀಯ ಒಪ್ಪಂದದ ಅನ್ವಯ ಸೌದಿ ಅರೇಬಿಯಾ ಸೇನೆಗೆ ಹೆಚ್ಚುವರಿ ಮಿಲಿಟರಿ ಶಕ್ತಿ ಮತ್ತು ಬ್ಯಾಕಪ್ ಒದಗಿಸುವ ಮುಖ್ಯ ಉದ್ದೇಶದಿಂದ ಪಾಕಿಸ್ತಾನ ತನ್ನ ಬೃಹತ್ ಸೈನ್ಯವನ್ನು ಸೌದಿಯಲ್ಲಿ ತರಬೇತಿ ಹಾಗೂ ರಕ್ಷಣಾ ಕಾವಲಿಗಾಗಿ ನಿಯೋಜಿಸಿದೆ ಎನ್ನಲಾಗಿದೆ.

ಮಧ್ಯಪ್ರಾಚ್ಯ ದೇಶಗಳಲ್ಲಿ ಹೆಚ್ಚಿದ ಕಳವಳ

ಸದ್ಯಕ್ಕೆ ಅಮೆರಿಕ-ಇರಾನ್ ನಡುವೆ ಕದನ ವಿರಾಮ ಇರುವುದರಿಂದ ಮುಸ್ಲಿಂ ರಾಷ್ಟ್ರಗಳ ಒಕ್ಕೂಟ ಹಾಗೂ ಗಲ್ಫ್ ವಲಯದಲ್ಲಿ ಸಲ್ಪ ಮಟ್ಟಿನ ಶಾಂತಿ ಇದೆ. ಆದರೆ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ ಯಾವುದೇ ಕ್ಷಣದಲ್ಲಾದರೂ ಮತ್ತೊಮ್ಮೆ ಪೂರ್ಣ ಪ್ರಮಾಣದ ಯುದ್ಧ ಭುಗಿಲೇಳಬಹುದು. ಈಗಾಗಲೇ ಈ ಸಂಘರ್ಷದಿಂದಾಗಿ ಗಲ್ಫ್ ರಾಷ್ಟ್ರಗಳು ಆರ್ಥಿಕವಾಗಿ ಅಪಾರ ನಷ್ಟ ಅನುಭವಿಸಿದ್ದು, ತೀವ್ರ ಚಿಂತಾಕ್ರಾಂತವಾಗಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪಾಕಿಸ್ತಾನವು ಸೌದಿ ಅರೇಬಿಯಾದ ಪರವಾಗಿ ಸೈನ್ಯ ಮತ್ತು ಯುದ್ಧ ವಿಮಾನಗಳನ್ನು ಜಾಗತಿಕ ರಣರಂಗಕ್ಕೆ ಇಳಿಸಿರುವುದು, ಮುಂಬರುವ ದಿನಗಳಲ್ಲಿ ಮಧ್ಯಪ್ರಾಚ್ಯದಲ್ಲಿ ಮತ್ತೊಂದು ದೊಡ್ಡ ಮಹಾ ಯುದ್ಧಕ್ಕೆ ದಾರಿಯಾಗಲಿದೆಯೇ ಎಂಬ ಗಂಭೀರ ಪ್ರಶ್ನೆಯನ್ನು ಇಡೀ ವಿಶ್ವದ ರಕ್ಷಣಾ ತಜ್ಞರ ಮುಂದೆ ತಂದಿಟ್ಟಿದೆ.