ತೀವ್ರ ಆರ್ಥಿಕ ಸಂಕಷ್ಟದಿಂದಾಗಿ ಪಾಕಿಸ್ತಾನವು 50 ವರ್ಷಗಳ ವಿರಾಮದ ನಂತರ ಮದ್ಯ ರಫ್ತನ್ನು ಪುನರಾರಂಭಿಸಿದೆ. 'ಮರ್ರಿ ಬ್ರೂವರಿ' ಸಂಸ್ಥೆಯು ವಿದೇಶಗಳಿಗೆ ಬಿಯರ್ ರಫ್ತು ಮಾಡಲು ಆರಂಭಿಸಿದೆ.
ನವದೆಹಲಿ (ಮೇ.5): ಸಾಲದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನವು ಬರೊಬ್ಬರಿ 50 ವರ್ಷಗಳ ವಿರಾಮದ ನಂತರ ಮತ್ತೆ ವಿದೇಶಗಳಿಗೆ ಮದ್ಯ ರಫ್ತು ಮಾಡಲು ಆರಂಭಿಸಿದೆ. ದೇಶದ ಏಕೈಕ ಸ್ಥಳೀಯ ಮದ್ಯ ತಯಾರಿಕಾ ಸಂಸ್ಥೆಯಾದ 'ಮರ್ರಿ ಬ್ರೂವರಿ' (Murree Brewery), 2026ರ ಏಪ್ರಿಲ್‌ನಲ್ಲಿ ಬ್ರಿಟನ್, ಜಪಾನ್, ಪೋರ್ಚುಗಲ್ ಮತ್ತು ಥೈಲ್ಯಾಂಡ್‌ನಂತಹ ದೇಶಗಳಿಗೆ ಬಿಯರ್ ಮತ್ತು ಇತರ ಮದ್ಯದ ಉತ್ಪನ್ನಗಳನ್ನು ರಫ್ತು ಮಾಡಲು ಶುರು ಮಾಡಿದೆ. ಕಂಪನಿಯ ರಫ್ತು ವ್ಯವಸ್ಥಾಪಕ ರಮೀಜ್ ಶಾ ಅವರ ಪ್ರಕಾರ, ಸದ್ಯಕ್ಕೆ ವಿದೇಶಗಳಲ್ಲಿ ಮಾರುಕಟ್ಟೆ ಜಾಲವನ್ನು ಸೃಷ್ಟಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸುವ ಯೋಜನೆಯಿದೆ ಎಂದಿದ್ದಾರೆ.
ಆರ್ಥಿಕ ಸಂಕಷ್ಟದಿಂದ ನಿಯಮಕ್ಕೆ ವಿನಾಯುತಿ
ಇಸ್ಲಾಮಿಕ್ ನಿಯಮಗಳನ್ನು ಉಲ್ಲೇಖಿಸಿ ಸುಮಾರು 50 ವರ್ಷಗಳ ಹಿಂದೆ ಪಾಕಿಸ್ತಾನದ ಮುಸ್ಲಿಂ ಜನಸಂಖ್ಯೆಗೆ ಮದ್ಯಪಾನವನ್ನು ನಿಷೇಧಿಸಲಾಗಿತ್ತು ಮತ್ತು ಅದರ ಬೆನ್ನಲ್ಲೇ ರಫ್ತು ಪ್ರಕ್ರಿಯೆಯನ್ನೂ ಸ್ಥಗಿತಗೊಳಿಸಲಾಗಿತ್ತು. ಆದರೆ, ಪಾಕಿಸ್ತಾನದಲ್ಲಿರುವ ಮುಸ್ಲಿಮೇತರರಿಗೆ ಕೆಲವು ವಿನಾಯಿತಿಗಳನ್ನು ನೀಡಲಾಗಿತ್ತು. ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರ್ಕಾರವು 2025ರಲ್ಲಿ ಮದ್ಯ ರಫ್ತಿಗೆ ಅನುಮತಿ ನೀಡಿದ್ದು, ಇದೀಗ ಇಸ್ಲಾಮಿಕ್ ಸಹಕಾರ ಸಂಘಟನೆಯ (OIC) ಭಾಗವಲ್ಲದ ದೇಶಗಳಿಗೆ ಪೂರೈಕೆ ಆರಂಭವಾಗಿದೆ.
138 ಬಿಲಿಯನ್ ಡಾಲರ್ ವಿದೇಶಿ ಸಾಲ
ಪಾಕಿಸ್ತಾನದ ಪ್ರಸ್ತುತ ಆರ್ಥಿಕ ಸ್ಥಿತಿ ಅತ್ಯಂತ ಶೋಚನೀಯವಾಗಿದ್ದು, ದೇಶವು 138 ಬಿಲಿಯನ್ ಡಾಲರ್ ವಿದೇಶಿ ಸಾಲವನ್ನು ಹೊಂದಿದೆ. ಸರ್ಕಾರದ ಆದಾಯ ಮತ್ತು ವೆಚ್ಚದ ನಡುವೆ ಭಾರಿ ಅಂತರವಿದ್ದು, 2026ರ ಹಣಕಾಸು ವರ್ಷದಲ್ಲಿ ಸರ್ಕಾರದ ಅಂದಾಜು ಆದಾಯ 11,072 ಬಿಲಿಯನ್ ಪಾಕಿಸ್ತಾನಿ ರೂಪಾಯಿಗಳಾಗಿದ್ದರೆ ($40 ಬಿಲಿಯನ್), ವೆಚ್ಚವು 16,286 ಬಿಲಿಯನ್ ರೂಪಾಯಿಗಳಿಗೆ ($58 ಬಿಲಿಯನ್) ತಲುಪಿದೆ. ಇದರಲ್ಲಿ ಸುಮಾರು 8,200 ಬಿಲಿಯನ್ ರೂಪಾಯಿಗಳು ($30 ಬಿಲಿಯನ್) ಕೇವಲ ಸಾಲದ ಬಡ್ಡಿ ಪಾವತಿಗೆ ವ್ಯಯವಾಗುತ್ತಿದೆ.
ಒಟ್ಟು 138 ಬಿಲಿಯನ್ ಡಾಲರ್ ಬಾಹ್ಯ ಸಾಲದಲ್ಲಿ ಸರ್ಕಾರಿ ಸಾಲದ ಪಾಲು 92 ಬಿಲಿಯನ್ ಡಾಲರ್ ಆಗಿದ್ದರೆ, ಉಳಿದದ್ದು ಖಾಸಗಿ ವಲಯ ಮತ್ತು ಬ್ಯಾಂಕುಗಳ ಹೊಣೆಗಾರಿಕೆಯಾಗಿದೆ. ಕಳೆದ ಕೆಲವು ವರ್ಷಗಳಿಂದ ಮರ್ರಿ ಬ್ರೂವರಿ ಕೇವಲ ಪ್ಯಾಕೇಜ್ ಮಾಡಿದ ಜ್ಯೂಸ್, ಮಿನರಲ್ ವಾಟರ್ ಮತ್ತು ಫ್ರೂಟ್ ಫ್ಲೇವರ್ ಪಾನೀಯಗಳಂತಹ ಅಲ್ಕೊಹಾಲ್ ರಹಿತ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡುತ್ತಿತ್ತು. ಕಳೆದ ಹಣಕಾಸು ವರ್ಷದಲ್ಲಿ 100 ಮಿಲಿಯನ್ ಡಾಲರ್ ಆದಾಯ ಗಳಿಸಿದ್ದ ಈ ಸಂಸ್ಥೆಯ ಸಿಇಒ ಇಸ್ಫನ್ಯಾರ್ ಭಂಡಾರಾ ಅವರು ಮದ್ಯ ರಫ್ತು ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದರು. ಇದಲ್ಲದೆ, 2021ರಲ್ಲಿ ಪಾಕಿಸ್ತಾನವು ಬಲೂಚಿಸ್ತಾನದಲ್ಲಿ ಕೆಲಸ ಮಾಡುತ್ತಿರುವ ಚೀನೀ ಪ್ರಜೆಗಳ ಅಗತ್ಯಕ್ಕಾಗಿ ಮದ್ಯ ತಯಾರಿಸಲು ಚೀನೀ ಕಂಪನಿಯೊಂದಕ್ಕೆ ಅನುಮತಿ ನೀಡಿತ್ತು. 70ರ ದಶಕದ ನಿಷೇಧಕ್ಕೂ ಮೊದಲು ಮರ್ರಿ ಬ್ರೂವರಿ ಭಾರತ, ಅಫ್ಘಾನಿಸ್ತಾನ ಮತ್ತು ಅಮೆರಿಕಕ್ಕೂ ಮದ್ಯ ರಫ್ತು ಮಾಡುತ್ತಿತ್ತು.
ಮದ್ಯ ಮಾರಾಟ ನಿಷೇಧಿಸಿದ್ದ ಭುಟ್ಟೋ
ಪಾಕಿಸ್ತಾನದಲ್ಲಿ ಮದ್ಯ ನಿಷೇಧದ ಇತಿಹಾಸವನ್ನು ಗಮನಿಸಿದರೆ, 1977ರ ಏಪ್ರಿಲ್‌ನಲ್ಲಿ ಅಂದಿನ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೋ ಅವರು ದೇಶದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿದರು. ಆ ಸಮಯದಲ್ಲಿ ಭುಟ್ಟೋ ಸರ್ಕಾರದ ವಿರುದ್ಧ ಭಾರಿ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿದ್ದವು ಮತ್ತು ಅವರು 1977ರ ಚುನಾವಣೆಯಲ್ಲಿ ಅಕ್ರಮ ಎಸಗಿದ್ದಾರೆ ಹಾಗೂ 'ಪಾಶ್ಚಿಮಾತ್ಯ ಜೀವನಶೈಲಿ' ಅಳವಡಿಸಿಕೊಂಡಿದ್ದಾರೆ ಎಂಬ ಆರೋಪಗಳನ್ನು ಎದುರಿಸುತ್ತಿದ್ದರು. ವಿರೋಧ ಪಕ್ಷದ ನಾಯಕರೊಂದಿಗೆ ಮಾತುಕತೆ ನಡೆಸುವಾಗ ಅವರು ನೈಟ್‌ಕ್ಲಬ್‌ಗಳು ಮತ್ತು ಬಾರ್‌ಗಳನ್ನು ಮುಚ್ಚಬೇಕು ಹಾಗೂ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂಬ ಬೇಡಿಕೆ ಇಟ್ಟಿದ್ದರು. ಈ ಒತ್ತಡಕ್ಕೆ ಮಣಿದ ಭುಟ್ಟೋ ಸರ್ಕಾರವು ಮೇ 1977ರಲ್ಲಿ ಕರಾಚಿಯಲ್ಲಿ ಉದ್ಘಾಟನೆಯಾಗಬೇಕಿದ್ದ ದೊಡ್ಡ ಕ್ಯಾಸಿನೊ ಯೋಜನೆಯನ್ನೂ ರದ್ದುಗೊಳಿಸಿದರು. ಉದ್ಯಮಿ ತುಫೈಲ್ ಶೇಖ್ ನಿರ್ಮಿಸುತ್ತಿದ್ದ ಈ ಕ್ಯಾಸಿನೊ ಕೊಲ್ಲಿ ರಾಷ್ಟ್ರಗಳು ಮತ್ತು ಯುರೋಪ್‌ನ ಪ್ರವಾಸಿಗರನ್ನು ಆಕರ್ಷಿಸುವ ಗುರಿ ಹೊಂದಿತ್ತು. ಈ ನಿರ್ಧಾರದಿಂದ ಶೇಖ್ ಅಸಮಾಧಾನಗೊಂಡಾಗ, ಭುಟ್ಟೋ ಅವರು ಇದು ತಾತ್ಕಾಲಿಕ ಕ್ರಮವಷ್ಟೇ ಎಂದು ಭರವಸೆ ನೀಡಿದ್ದರು.
ಕಾನೂನು ಸಡಿಲ ಮಾಡಿದ್ದ ಮುಷರಫ್
ಆದರೆ 1977ರ ಜುಲೈನಲ್ಲಿ ಭುಟ್ಟೋ ಸರ್ಕಾರವನ್ನು ಪದಚ್ಯುತಗೊಳಿಸಿದ ಮಿಲಿಟರಿ ಆಡಳಿತಗಾರ ಜಿಯಾ-ಉಲ್-ಹಕ್, ಮದ್ಯ ನಿಷೇಧದ ಕಾನೂನನ್ನು ಇನ್ನಷ್ಟು ಕಠಿಣಗೊಳಿಸಿದರು. ಅವರು ಇದನ್ನು ಇಸ್ಲಾಮಿಕ್ ಕಾನೂನಿನೊಂದಿಗೆ ಜೋಡಿಸಿ, ಮುಸ್ಲಿಮರಿಗೆ ಮದ್ಯ ಮಾರಾಟ ಮತ್ತು ಸೇವನೆಯನ್ನು ಅಕ್ರಮವೆಂದು ಘೋಷಿಸಿ ಕಠಿಣ ಶಿಕ್ಷೆ ವಿಧಿಸಲು ಆರಂಭಿಸಿದರು. ಆದರೂ, ಮುಸ್ಲಿಮೇತರ ಹೆಸರಿನಲ್ಲಿ ಪರವಾನಗಿ ಪಡೆದ ಮದ್ಯದ ಅಂಗಡಿಗಳಿಗೆ ಅವಕಾಶ ನೀಡಲಾಯಿತು. ನಂತರದ ವರ್ಷಗಳಲ್ಲಿ ಜನರಲ್ ಪರ್ವೇಜ್ ಮುಷರಫ್ ಅವರ ಕಾಲದಲ್ಲಿ ಈ ಕಾನೂನು ಸ್ವಲ್ಪ ಸಡಿಲಗೊಂಡಿತು. ಮುಷರಫ್ ಕಾನೂನನ್ನು ರದ್ದುಗೊಳಿಸಲು ಪ್ರಯತ್ನಿಸಿದರೂ ರಾಜಕೀಯ ಕಾರಣಗಳಿಂದ ಸಾಧ್ಯವಾಗಲಿಲ್ಲ, ಆದರೆ ಅವರ ಅವಧಿಯಲ್ಲಿ ಮುಸ್ಲಿಮರಿಗೆ ಮದ್ಯ ಲಭ್ಯವಾಗುವುದು ಸುಲಭವಾಯಿತು. ಈ ನಿಷೇಧದ ಬಗ್ಗೆ ಒಂದು ವಿಭಿನ್ನ ವಾದವಿದ್ದು, ಮದ್ಯ ನಿಷೇಧದಿಂದಾಗಿ ಪಾಕಿಸ್ತಾನದ ಜನರು ಹೆಚ್ಚು ಅಪಾಯಕಾರಿಯಾದ ಹೆರಾಯಿನ್ ವ್ಯಸನಕ್ಕೆ ತಿರುಗಿದರು ಎನ್ನಲಾಗುತ್ತದೆ. 1979ರಲ್ಲಿ ಪಾಕಿಸ್ತಾನದಲ್ಲಿ ಕೇವಲ ಎರಡು ಹೆರಾಯಿನ್ ಪ್ರಕರಣಗಳು ವರದಿಯಾಗಿದ್ದರೆ, 1985ರ ವೇಳೆಗೆ ಪಾಕಿಸ್ತಾನವು ವಿಶ್ವದ ಅತಿದೊಡ್ಡ ಹೆರಾಯಿನ್ ಗ್ರಾಹಕ ದೇಶಗಳಲ್ಲಿ ಒಂದಾಯಿತು. ಅಲ್ಲದೆ, ಅಕ್ರಮ ಮದ್ಯ ಮಾಫಿಯಾದಿಂದಾಗಿ ವಿಷಪೂರಿತ ಮದ್ಯ ಸೇವಿಸಿ ನೂರಾರು ಜನರು ಸಾವನ್ನಪ್ಪುತ್ತಿದ್ದಾರೆ ಎಂಬ ಆರೋಪವೂ ಇದೆ.
ಧಾರ್ಮಿಕ ಸಂಘಟನೆಗಳು ಮದ್ಯಪಾನವನ್ನು ಬ್ರಿಟಿಷರ ಕಾಲದ ಅಭ್ಯಾಸ ಎಂದು ಕರೆದರೂ, ದಕ್ಷಿಣ ಏಷ್ಯಾದಲ್ಲಿ ಮದ್ಯದ ಇತಿಹಾಸವು ಸುಮಾರು 5,000 ವರ್ಷಗಳಷ್ಟು ಹಳೆಯದಾಗಿದೆ. ಸಿಂಧೂ ನಾಗರಿಕತೆಯ ಕಾಲದಲ್ಲೂ ವೈನ್ ತಯಾರಿಸಲಾಗುತ್ತಿತ್ತು ಎಂಬ ಕುರುಹುಗಳು ಸಿಕ್ಕಿವೆ. ಮೊಹೆಂಜೊದಾರೋದಲ್ಲಿ ಪತ್ತೆಯಾದ ವಿಶ್ವದ ಅತ್ಯಂತ ಹಳೆಯ ಡಿಸ್ಟಿಲರ್‌ಗಳು (Distillers) ಪ್ರಸ್ತುತ ತಕ್ಷಶಿಲಾ ಮ್ಯೂಸಿಯಂನಲ್ಲಿವೆ. ಮೊಘಲರ ಮತ್ತು ದೆಹಲಿ ಸುಲ್ತಾನರ ಕಾಲದಲ್ಲೂ ಮದ್ಯ, ಗಾಂಜಾ ಮತ್ತು ಅಫೀಮು ಬಳಕೆ ಸಾಮಾನ್ಯವಾಗಿದ್ದು, ಅನೇಕ ಅರಸರು ಸ್ವತಃ ಮದ್ಯ ಸೇವಿಸುತ್ತಿದ್ದರು. ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ಅನೇಕ ಆಡಳಿತಗಾರರು ಮದ್ಯವನ್ನು ನಿಷೇಧಿಸಲು ಪ್ರಯತ್ನಿಸಿದರೂ, ಜನರ ಹಳೆಯ ಅಭ್ಯಾಸಗಳನ್ನು ಸಂಪೂರ್ಣವಾಗಿ ಬದಲಾಯಿಸಲು ಅವರ ಪ್ರಯತ್ನಗಳು ಯಶಸ್ವಿಯಾಗಲಿಲ್ಲ ಎಂದು ವರದಿಗಳು ತಿಳಿಸಿವೆ. ಇದೀಗ ಆರ್ಥಿಕ ದುಸ್ಥಿತಿಯು ಪಾಕಿಸ್ತಾನದ ಈ 50 ವರ್ಷಗಳ ಹಳೆಯ ನೀತಿಯನ್ನು ಬದಲಿಸುವಂತೆ ಮಾಡಿದೆ.


