ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತ ಸಿಂಧೂ ಒಪ್ಪಂದ ರದ್ದುಗೊಳಿಸುವ ಬೆದರಿಕೆ ಹಾಕಿದ ನಂತರ, ಪಾಕಿಸ್ತಾನ ಪ್ರತೀಕಾರಕ ಕ್ರಮ ಕೈಗೊಂಡಿದೆ. ವಾಘಾ ಗಡಿ ಮುಚ್ಚಿ, ಭಾರತೀಯ ವಿಮಾನಗಳಿಗೆ ವಾಯುಮಾರ್ಗ ನಿರ್ಬಂಧಿಸಿ, ವ್ಯಾಪಾರ ಸ್ಥಗಿತಗೊಳಿಸಿದೆ. ಭಾರತೀಯ ರಾಯಭಾರ ಕಚೇರಿಯ ಸಿಬ್ಬಂದಿ ಕಡಿತಗೊಳಿಸಿ, ವೀಸಾ ರದ್ದುಪಡಿಸಿದೆ. ಸಿಂಧೂ ಒಪ್ಪಂದ ರದ್ದತಿ ಯುದ್ಧಕ್ಕೆ ಸಮ ಎಂದೂ ಎಚ್ಚರಿಸಿದೆ.

ನವದೆಹಲಿ (ಏ.24): ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಪೈಶಾಚಿಕ ಕೃತ್ಯಕ್ಕೆ ಪಾಕಿಸ್ತಾನವನ್ನೇ ನೇರ ಹೊಣೆಗಾರರನ್ನಾಗಿ ಮಾಡಿದ್ದ ಭಾರತ, ಬುಧವಾರ ಪ್ರಧಾನಿ ನೇತೃತ್ವದಲ್ಲಿ ನಡೆದ ಭದ್ರತಾ ಸಂಪುಟ ಸಮಿತಿ ಸಭೆಯಲ್ಲಿ ಕೆಲವೊಂದು ಐತಿಹಾಸಿಕ ನಿರ್ಣಯಗಳನ್ನು ಮಾಡಿತ್ತು. ಇದರಲ್ಲಿ ಪ್ರಮುಖವಾಗಿ ಸಿಂಧೂ ನದಿ ಒಪ್ಪಂದವನ್ನು ರದ್ದು ಮಾಡುವುದು ಹಾಗೂ ಪಾಕಿಸ್ತಾನದ ಎಲ್ಲಾ ನಾಗರೀಕರಿಗೆ ನೀಡಿದ್ದ ಭಾರತದ ವೀಸಾವನ್ನು ರದ್ದು ಮಾಡುವುದು ಒಳಗೊಂಡಿತ್ತು.

ಇದಕ್ಕೆ ಪ್ರತಿಯಾಗಿ ಇಂದು ಪಾಕಿಸ್ತಾನ ಕೂಡ ಪ್ರಧಾನಿ ಶೆಹಬಾಜ್‌ ಷರೀಫ್‌ ನೇತೃತ್ವದಲ್ಲಿ ನ್ಯಾಷನಲ್‌ ಸೆಕ್ಯುರಿಟಿ ಕಮಿಟಿ ಸಭೆ ಕರೆದಿತ್ತು. ಪಹಲ್ಗಾಮ್ ದಾಳಿಯ ಬಳಿಕ ಭಾರತದ ಕಠಿಣ ನಿಲುವಿನ ನಂತರದ ಪರಿಸ್ಥಿತಿಯನ್ನು ಪರಿಶೀಲಿಸಲು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಗುರುವಾರ ರಾಷ್ಟ್ರೀಯ ಭದ್ರತಾ ಸಮಿತಿ (ಎನ್‌ಎಸ್‌ಸಿ) ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉನ್ನತ ನಾಗರಿಕ ಮತ್ತು ಮಿಲಿಟರಿ ನಾಯಕತ್ವ ಭಾಗವಹಿಸಿದ್ದ ಈ ಸಭೆಯಲ್ಲಿ ಎಲ್ಲಾ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಪಾಕಿಸ್ತಾನಿ ವಾಯುಪ್ರದೇಶವನ್ನು ನಿರ್ಬಂಧಿಸುವುದು ಮತ್ತು ವಾಘಾ ಗಡಿಯನ್ನು ಮುಚ್ಚುವುದು ಸೇರಿದಂತೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಸಿಂಧೂ ನದಿ ನೀರಿನ ಒಪ್ಪಂದವನ್ನು ರದ್ದು ಮಾಡಲು ನಿರ್ಧಾರ ಮಾಡಿರುವುದು ಯುದ್ಧದ ಮುನ್ಸೂಚನೆ ಎಂದು ಪಾಕ್‌ ಹೇಳಿದೆ. ಅದಲ್ಲದೆ, ಪಹಲ್ಗಾಮ್‌ನಲ್ಲಿ ಆಗಿರುವ ಕೃತ್ಯಕ್ಕೆ ಪಾಕಿಸ್ತಾನವನ್ನು ದೂಷಣೆ ಮಾಡುವುದು ಬಿಡಬೇಕು ಎಂದು ಆಗ್ರಹಿಸಿದೆ.
ಪತ್ರಿಕಾ ಪ್ರಕಟಣೆಯಲ್ಲಿ, ಪಾಕಿಸ್ತಾನದ ಪಿಎಂಒ, ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್‌ನ ಬಲವನ್ನು ಏಪ್ರಿಲ್ 30 ರಿಂದ ಜಾರಿಗೆ ಬರುವಂತೆ 30 ರಾಜತಾಂತ್ರಿಕರು ಮತ್ತು ಸಿಬ್ಬಂದಿ ಸದಸ್ಯರಿಗೆ ಇಳಿಸಲಾಗುವುದು ಎಂದು ದೃಢಪಡಿಸಿದೆ. ಪಾಕಿಸ್ತಾನದ ಮೂಲಕ ಯಾವುದೇ ಮೂರನೇ ದೇಶಕ್ಕೆ ಮತ್ತು ಅಲ್ಲಿಂದ ಭಾರತಕ್ಕೆ ಬರುವ ಎಲ್ಲಾ ವ್ಯಾಪಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅದು ಹೇಳಿದೆ.

ಪಾಕಿಸ್ತಾನವು ವಾಘಾ ಗಡಿ ಪೋಸ್ಟ್ ಅನ್ನು ಮುಚ್ಚಲು ನಿರ್ಧರಿಸಿದೆ. ಭಾರತದಿಂದ ಈ ಮಾರ್ಗದ ಮೂಲಕ ಎಲ್ಲಾ ಗಡಿಯಾಚೆಗಿನ ಸಾಗಣೆಯನ್ನು ನಿರ್ಬಂಧಿಸಿದೆ. "ಮಾನ್ಯ ಅನುಮೋದನೆಗಳೊಂದಿಗೆ ದಾಟಿದವರು ತಕ್ಷಣವೇ ಆ ಮಾರ್ಗದ ಮೂಲಕ ಹಿಂತಿರುಗಬಹುದು ಆದರೆ ಏಪ್ರಿಲ್ 30ರ ಒಳಗಾಗಿ ಭಾರತ ದಾಟಬೇಕು" ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇಸ್ಲಾಮಾಬಾದ್ ಭಾರತೀಯ ಪ್ರಜೆಗಳಿಗೆ ನೀಡಲಾದ ಸಾರ್ಕ್ ವೀಸಾ ವಿನಾಯಿತಿ ಯೋಜನೆ (SVES) ಅಡಿಯಲ್ಲಿ ಎಲ್ಲಾ ವೀಸಾಗಳನ್ನು ಸ್ಥಗಿತಗೊಳಿಸಿದೆ ಮತ್ತು ತಕ್ಷಣದಿಂದ ಜಾರಿಗೆ ಬರುವಂತೆ ಅವುಗಳನ್ನು ರದ್ದುಗೊಳಿಸಲಾಗಿದೆ ಎಂದು ಪರಿಗಣಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪಾಕ್‌ ಮಾಡಿದ ನಿರ್ಧಾರಗಳೇನು?

1. ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ಭಾರತದ ಘೋಷಣೆಯನ್ನು ಪಾಕಿಸ್ತಾನ ತೀವ್ರವಾಗಿ ತಿರಸ್ಕರಿಸುತ್ತದೆ. ಈ ಒಪ್ಪಂದವು ವಿಶ್ವಬ್ಯಾಂಕ್ ಮಧ್ಯಸ್ಥಿಕೆ ವಹಿಸಿದ ಬದ್ಧ ಅಂತರರಾಷ್ಟ್ರೀಯ ಒಪ್ಪಂದವಾಗಿದ್ದು, ಏಕಪಕ್ಷೀಯ ಅಮಾನತುಗೊಳಿಸುವ ಯಾವುದೇ ನಿಬಂಧನೆಯನ್ನು ಹೊಂದಿಲ್ಲ. ನೀರು ಪಾಕಿಸ್ತಾನದ ಪ್ರಮುಖ ರಾಷ್ಟ್ರೀಯ ಹಿತಾಸಕ್ತಿಯಾಗಿದ್ದು, ಅದರ 240 ಮಿಲಿಯನ್ ಜನರಿಗೆ ಜೀವನಾಡಿಯಾಗಿದೆ ಮತ್ತು ಅದರ ಲಭ್ಯತೆಯನ್ನು ಎಲ್ಲಾ ವೆಚ್ಚದಲ್ಲಿಯೂ ರಕ್ಷಿಸಲಾಗುತ್ತದೆ. ಸಿಂಧೂ ಜಲ ಒಪ್ಪಂದದ ಪ್ರಕಾರ ಪಾಕಿಸ್ತಾನಕ್ಕೆ ಸೇರಿದ ನೀರಿನ ಹರಿವನ್ನು ನಿಲ್ಲಿಸುವ ಅಥವಾ ತಿರುಗಿಸುವ ಯಾವುದೇ ಪ್ರಯತ್ನ ಮತ್ತು ನದಿಯ ಕೆಳಭಾಗದ ಹಕ್ಕುಗಳನ್ನು ಕಸಿದುಕೊಳ್ಳುವುದನ್ನು ಯುದ್ಧದ ಕೃತ್ಯವೆಂದು ಪರಿಗಣಿಸಲಾಗುತ್ತದೆ.

2. ಅಂತಾರಾಷ್ಟ್ರೀಯ ಒಪ್ಪಂದಗಳು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳು ಮತ್ತು ಅಂತರರಾಷ್ಟ್ರೀಯ ಬಾಧ್ಯತೆಗಳನ್ನು ನಿರ್ಲಕ್ಷಿಸುವ ಭಾರತದ ಅಜಾಗರೂಕ ಮತ್ತು ಬೇಜವಾಬ್ದಾರಿಯುತ ವರ್ತನೆಯನ್ನು ಗಮನಿಸಿದ ಪಾಕಿಸ್ತಾನ, ಸಿಮ್ಲಾ ಒಪ್ಪಂದ ಸೇರಿದಂತೆ ಭಾರತದೊಂದಿಗಿನ ಎಲ್ಲಾ ದ್ವಿಪಕ್ಷೀಯ ಒಪ್ಪಂದಗಳನ್ನು ತಡೆಹಿಡಿಯುವ ಹಕ್ಕನ್ನು ಚಲಾಯಿಸಲಿದೆ. ಪಾಕಿಸ್ತಾನದೊಳಗೆ ಭಯೋತ್ಪಾದನೆಯನ್ನು ಪ್ರಚೋದಿಸುವ, ಅಂತರರಾಷ್ಟ್ರೀಯ ಹತ್ಯೆಗಳನ್ನು ನಡೆಸುವ ಮತ್ತು ಕಾಶ್ಮೀರದ ಕುರಿತು ಅಂತರರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ನಿರ್ಣಯಗಳನ್ನು ಪಾಲಿಸದಿರುವ ತನ್ನ ಸ್ಪಷ್ಟ ನಡವಳಿಕೆಯನ್ನು ಭಾರತ ತ್ಯಜಿಸುವವರೆಗೆ ಇದು ಮಾನ್ಯವಾಗಿರುತ್ತದೆ.

3.ಪಾಕಿಸ್ತಾನವು ವಾಘಾ ಗಡಿ ಪೋಸ್ಟ್ ಅನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಚ್ಚಲಿದೆ. ಈ ಮಾರ್ಗದ ಮೂಲಕ ಭಾರತದಿಂದ ಎಲ್ಲಾ ಗಡಿಯಾಚೆಗಿನ ಸಾಗಣೆಯನ್ನು ವಿನಾಯಿತಿ ಇಲ್ಲದೆ ರದ್ದುಗೊಳಿಸಲಾಗುತ್ತದೆ ಮಾನ್ಯ ಅನುಮೋದನೆಗಳೊಂದಿಗೆ ದಾಟಿದವರು ಆ ಮಾರ್ಗದ ಮೂಲಕ ತಕ್ಷಣವೇ ಹಿಂತಿರುಗಬಹುದು ಆದರೆ ಏಪ್ರಿಲ್ 30ರ ನಂತರ ಇದನ್ನು ಬಂದ್‌ ಮಾಡಲಾಗುತ್ತದೆ.

4. ಪಾಕಿಸ್ತಾನವು ಸಾರ್ಕ್ ವೀಸಾ ವಿನಾಯಿತಿ ಯೋಜನೆ (SVES) ಅಡಿಯಲ್ಲಿ ಭಾರತೀಯ ಪ್ರಜೆಗಳಿಗೆ ನೀಡಲಾದ ಎಲ್ಲಾ ವೀಸಾಗಳನ್ನು ಸ್ಥಗಿತಗೊಳಿಸಿದೆ ಮತ್ತು ಸಿಖ್ ಧಾರ್ಮಿಕ ಯಾತ್ರಿಕರನ್ನು ಹೊರತುಪಡಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಅವುಗಳನ್ನು ರದ್ದುಗೊಳಿಸಲಾಗಿದೆ ಎಂದು ಪರಿಗಣಿಸುತ್ತದೆ. SVES ಅಡಿಯಲ್ಲಿ ಪ್ರಸ್ತುತ ಪಾಕಿಸ್ತಾನದಲ್ಲಿರುವ ಭಾರತೀಯ ಪ್ರಜೆಗಳು 48 ಗಂಟೆಗಳ ಒಳಗೆ ನಿರ್ಗಮಿಸಲು ಸೂಚಿಸಲಾಗಿದೆ, ಸಿಖ್ ಯಾತ್ರಿಕರನ್ನು ಇದಕ್ಕೆ ಹೊರತುಪಡಿಸಲಾಗಿದೆ.

5.ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ರಕ್ಷಣಾ, ನೌಕಾ ಮತ್ತು ವಾಯು ಸಲಹೆಗಾರರನ್ನು ಪಾಕಿಸ್ತಾನವು ಗ್ರಾಟಾ ಅಲ್ಲ ಎಂದು ಘೋಷಿಸುತ್ತದೆ. ಅವರು ತಕ್ಷಣ ಪಾಕಿಸ್ತಾನವನ್ನು ತೊರೆಯುವಂತೆ ನಿರ್ದೇಶಿಸಲಾಗಿದೆ. ಏಪ್ರಿಲ್‌ 30ರ ಒಳಗೆ ಅವರು ದೇಶ ಖಾಲಿ ಮಾಡಬೇಜು. ಭಾರತೀಯ ಹೈಕಮಿಷನ್‌ನಲ್ಲಿರುವ ಈ ಹುದ್ದೆಗಳನ್ನು ರದ್ದುಗೊಳಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ. ಈ ಸಲಹೆಗಾರರ ​​ಸಹಾಯಕ ಸಿಬ್ಬಂದಿಯನ್ನು ಸಹ ಭಾರತಕ್ಕೆ ಮರಳಲು ನಿರ್ದೇಶಿಸಲಾಗಿದೆ.

6.ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್‌ನ ಬಲವನ್ನು ಏಪ್ರಿಲ್ 30, 2025 ರಿಂದ ಜಾರಿಗೆ ಬರುವಂತೆ 30 ರಾಜತಾಂತ್ರಿಕರು ಮತ್ತು ಸಿಬ್ಬಂದಿ ಸದಸ್ಯರಿಗೆ ಇಳಿಸಲಾಗುತ್ತದೆ.

7. ಭಾರತೀಯ ಸ್ವಾಮ್ಯದ ಅಥವಾ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಪಾಕಿಸ್ತಾನದ ವಾಯುಪ್ರದೇಶವು ತಕ್ಷಣದಿಂದ ಜಾರಿಗೆ ಬರುವಂತೆ ಮುಚ್ಚಲ್ಪಡುತ್ತದೆ.

ಉಗ್ರರು ಸಾಯಿಸುವ ಮುನ್ನ 'ನೀವು ಹಿಂದೂನಾ' ಕೇಳಿದ್ದೇ ಸುಳ್ಳಂತೆ! ಈ ಯುವತಿ ಮಾತು ಕೇಳಿ... ಯಾರೀಕೆ?

8. ಪಾಕಿಸ್ತಾನದ ಮೂಲಕ ಯಾವುದೇ ಮೂರನೇ ದೇಶಕ್ಕೆ ಮತ್ತು ಅಲ್ಲಿಂದ ಭಾರತಕ್ಕೆ ಮಾಡುವ ಎಲ್ಲಾ ವ್ಯಾಪಾರವನ್ನು ತಕ್ಷಣವೇ ಸ್ಥಗಿತಗೊಳಿಸಲಾಗಿದೆ.

ಉಗ್ರರಿಗೆ ಊಹೆಗೂ ನಿಲುಕದ ಶಿಕ್ಷೆ, ಪ್ರತೀಕಾರವನ್ನು ಇಂಗ್ಲೀಷ್‌ನಲ್ಲಿ ಜಗತ್ತಿಗೆ ಹೇಳಿದ ಮೋದಿ