ಭಾರತದ "ಆಪರೇಷನ್ ಸಿಂಧೂರ್" ನಂತರ ಪಾಕಿಸ್ತಾನ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ನಾಗರಿಕ ಪ್ರದೇಶಗಳ ಮೇಲೆ ಭಾರತ ಉದ್ದೇಶಪೂರ್ವಕ ದಾಳಿ ನಡೆಸಿದೆ ಎಂದು ಆರೋಪಿಸಿ, ಪ್ರತೀಕಾರದ ಕ್ರಮಕ್ಕೆ ಸೇನೆಗೆ ಅನುಮತಿ ನೀಡಿದೆ. ಪಾಕಿಸ್ತಾನ ಚೀನಾಗೆ ಮಾಹಿತಿ ನೀಡಿದ್ದು, ಭಾರತದ ಕ್ರಮವನ್ನು ಚೀನಾ "ವಿಷಾದನೀಯ" ಎಂದಿದೆ.
ಇಸ್ಲಾಮಾಬಾದ್ (ಮೇ.7): ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರ್ ಮೇಲೆ ಬುಧವಾರ ಮುಂಜಾನೆ ಭಾರತ ಆಪರೇಷನ್ ಸಿಂಧೂರ್ ಹೆಸರಲ್ಲಿ ಮೂರೂ ಸೇನಾಪಡೆಗಳ ಜಂಟಿ ಕಾರ್ಯಾಚರಣೆ ಮಾಡಿದ ಬೆನ್ನಲ್ಲಿಯೇ ಪಾಕಿಸ್ತಾನ ಅವಮಾನದಿಂದ ಕುದ್ದುಹೋಗಿದೆ. ತನ್ನಲ್ಲಿ ಆಗಿರುವ ಸಾವು ನೋವುಗಳ ಸಂಖ್ಯೆಯನ್ನು ಲೆಕ್ಕ ಹಾಕುವುದರ ಬದಲು ಭಾರತದ 3, 4, 5 ಕೊನೆಗೆ ಆರು ಜೆಟ್ ಉರುಳಿಸಿದ್ದೇವೆ ಅನ್ನೋ ಸುಳ್ಳುಸುದ್ದಿಗಳನ್ನೇ ಹರಡಿಸುವುದರಲ್ಲಿ ಬ್ಯುಸಿಯಾಗಿದೆ.
ಇದರ ನಡುವೆ ಪಾಕಿಸ್ತಾನದ ಪ್ರಧಾನಿ ಶೆಷಬಾಜ್ ಷರೀಫ್ ಭಾರತದ ಆಪರೇಷನ್ ಸಿಂಧೂರದ ಬೆನ್ನಲ್ಲಿಯೇ ನ್ಯಾಷನಲ್ ಸೆಕ್ಯುರಿಟಿ ಏಜೆನ್ಸಿ ಸಭೆ ಕರೆದಿದ್ದಾರೆ.ಭಾರತದ ದಾಳಿಯ ನಂತರ ಪಾಕಿಸ್ತಾನ ಸರ್ಕಾರವು ಮಿಲಿಟರಿಗೆ "ಅನುಗುಣವಾದ ಕ್ರಮಗಳನ್ನು ಕೈಗೊಳ್ಳಲು" ಅಧಿಕಾರ ನೀಡಿದ್ದಾಗಿ ವರದಿಯಾಗಿದೆ.
"ಈ ಅಪ್ರಚೋದಿತ ಮತ್ತು ನ್ಯಾಯಸಮ್ಮತವಲ್ಲದ ದಾಳಿಗಳು ಕಾಲ್ಪನಿಕ ಭಯೋತ್ಪಾದಕ ಶಿಬಿರಗಳ ಉಪಸ್ಥಿತಿಯ ಸುಳ್ಳು ನೆಪದಲ್ಲಿ ಉದ್ದೇಶಪೂರ್ವಕವಾಗಿ ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿದ್ದವು. ಇದರ ಪರಿಣಾಮವಾಗಿ ಮುಗ್ಧ ಪುರುಷರು, ಮಹಿಳೆಯರು ಮತ್ತು ಮಕ್ಕಳು ಹುತಾತ್ಮರಾದರು ಮತ್ತು ಮಸೀದಿಗಳು ಸೇರಿದಂತೆ ನಾಗರಿಕ ಮೂಲಸೌಕರ್ಯಕ್ಕೆ ಹಾನಿ ಉಂಟಾಗಿದೆ" ಎಂದು ಪಾಕಿಸ್ತಾನದ ಮಾಹಿತಿ ಸಚಿವಾಲಯದ ಹೇಳಿಕೆ ತಿಳಿಸಿದೆ.
"ವಿಶ್ವಸಂಸ್ಥೆಯ ಚಾರ್ಟರ್‌ನ 51ನೇ ವಿಧಿಗೆ ಅನುಗುಣವಾಗಿ, ಪಾಕಿಸ್ತಾನವು ತನ್ನ ಸಾರ್ವಭೌಮತ್ವದ ಉಲ್ಲಂಘನೆ ಮತ್ತು ಅಮಾಯಕ ಪಾಕಿಸ್ತಾನಿ ಜೀವಗಳ ನಷ್ಟಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಆಯ್ಕೆ ಮಾಡಿದ ಸಮಯ, ಸ್ಥಳ ಮತ್ತು ರೀತಿಯಲ್ಲಿ ಆತ್ಮರಕ್ಷಣೆಗಾಗಿ ಪ್ರತಿಕ್ರಿಯಿಸುವ ಹಕ್ಕನ್ನು ಕಾಯ್ದಿರಿಸಿದೆ' ಎಂದು ತಿಳಿಸಿದೆ.
"ಈ ನಿಟ್ಟಿನಲ್ಲಿ ಅನುಗುಣವಾದ ಕ್ರಮಗಳನ್ನು ಕೈಗೊಳ್ಳಲು ಪಾಕಿಸ್ತಾನದ ಸಶಸ್ತ್ರ ಪಡೆಗಳಿಗೆ ಅಧಿಕಾರ ನೀಡಲಾಗಿದೆ" ಎಂದು ಸಚಿವಾಲಯ ತಿಳಿಸಿದೆ. ಅದರೊಂದಿಗೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಈ ಉದ್ವಿಗ್ನತೆ ಇನ್ನೊಂದು ಮಟ್ಟಕ್ಕೆ ಹೋಗುವುದು ಖಚಿತವಾಗಿದೆ.
ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಮಿತಿಯು ಭಾರತವು "ಈ ಪ್ರದೇಶದಲ್ಲಿ ಬೆಂಕಿ ಹೊತ್ತಿಸಿದೆ" ಎಂದು ಹೇಳಿದ್ದಲ್ಲದೆ , ನಂತರದ ಪರಿಣಾಮಗಳಿಗೆ ನವದೆಹಲಿಯದ್ದೇ ನೇರ ಜವಾಬ್ದಾರಿ. ಜಗತ್ತು ಭಾರತವನ್ನು "ಜವಾಬ್ದಾರಿಯುತ"ರನ್ನಾಗಿ ಮಾಡಬೇಕು ಎಂದು ಸಮಿತಿ ಹೇಳಿದೆ.
ಭಾರತದ ದಾಳಿಯ ಬಗ್ಗೆ ಚೀನಾಗೆ ಮಾಹಿತಿ ನೀಡಿದ ಪಾಕ್:
ಪಾಕಿಸ್ತಾನದ ಉಪ ಪ್ರಧಾನ ಮಂತ್ರಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್ ಅವರು ಭಾರತದ ದಾಳಿಗಳ ಬಗ್ಗೆ ದೇಶದಲ್ಲಿರುವ ಚೀನಾ ರಾಯಭಾರಿಗೆ ಮಾಹಿತಿ ನೀಡಿದ್ದಾರೆ. ಇಶಾಕ್ ದಾರ್ ಅವರು ಚೀನಾ ರಾಯಭಾರಿ ಜಿಯಾಂಗ್ ಜೆಡಾಂಗ್ ಅವರನ್ನು ಭೇಟಿಯಾದ ನಂತರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಭಾರತವು ಅಪ್ರಚೋದಿತವಾಗಿ ಪಾಕಿಸ್ತಾನದ ಸಾರ್ವಭೌಮತ್ವವನ್ನು ಉಲ್ಲಂಘಿಸಿ ಅಮಾಯಕರ ಜೀವಗಳನ್ನು ಕಳೆದುಕೊಂಡಿರುವುದರಿಂದ ಉಂಟಾಗಿರುವ ಗಂಭೀರ ಪರಿಸ್ಥಿತಿಯ ಬಗ್ಗೆ ಫೆಡರಲ್ ಸಚಿವರು ಚೀನಾ ರಾಯಭಾರಿಗೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ.
ಯಾವುದೇ ಬೆಲೆ ತೆತ್ತಾದರೂ ತನ್ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಪಾಕಿಸ್ತಾನದ ದೃಢ ಬದ್ಧತೆಯನ್ನು ಇಶಾಕ್ ದಾರ್ ಪುನರುಚ್ಚರಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಚೀನಾ ರಾಯಭಾರಿ ಮತ್ತು ಪಾಕಿಸ್ತಾನದ ಉಪ ಪ್ರಧಾನ ಮಂತ್ರಿ ಪ್ರಾದೇಶಿಕ ಭದ್ರತಾ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರು ಮತ್ತು ಎಲ್ಲಾ ಸಂಬಂಧಿತ ಕ್ಷೇತ್ರಗಳಲ್ಲಿ ನಿಕಟ ಸಮನ್ವಯವನ್ನು ಕಾಯ್ದುಕೊಳ್ಳಲು ಒಪ್ಪಿಕೊಂಡರು. ಇದಕ್ಕೂ ಮೊದಲು, ಚೀನಾ ವಿದೇಶಾಂಗ ಸಚಿವಾಲಯವು ಪಾಕಿಸ್ತಾನದ ವಿರುದ್ಧ ಭಾರತದ ಮಿಲಿಟರಿ ಕಾರ್ಯಾಚರಣೆಯನ್ನು "ವಿಷಾದನೀಯ" ಎಂದು ಬಣ್ಣಿಸಿತ್ತು.


