ಪಶ್ಚಿಮ ಏಷ್ಯಾದಲ್ಲಿನ ಯುದ್ಧದಿಂದಾಗಿ ಶ್ರೀಲಂಕಾ ತೀವ್ರ ಇಂಧನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು, ಸರ್ಕಾರವು ವಾರಕ್ಕೆ ನಾಲ್ಕು ದಿನಗಳ ಕೆಲಸವನ್ನು ಜಾರಿಗೆ ತಂದಿದ್ದು, ಖಾಸಗಿ ವಾಹನಗಳಿಗೆ ವಾರಕ್ಕೆ 15 ಲೀಟರ್ ಇಂಧನವನ್ನು ನಿಗದಿಪಡಿಸಿದೆ.

ಕೊಲಂಬೊ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಶ್ರೀಲಂಕಾ ತೀವ್ರ ಇಂಧನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಪರಿಸ್ಥಿತಿ ನಿಭಾಯಿಸಲು ಲಂಕಾ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ. ಇನ್ಮುಂದೆ ದೇಶದಲ್ಲಿ ವಾರಕ್ಕೆ ನಾಲ್ಕು ದಿನ ಮಾತ್ರ ಕೆಲಸದ ದಿನಗಳೆಂದು ಚಾನೆಲ್ ನ್ಯೂಸ್ ಏಷ್ಯಾ ವರದಿ ಮಾಡಿದೆ. ಹೋರ್ಮುಜ್ ಜಲಸಂಧಿಯನ್ನು ಮುಚ್ಚಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

Add Asianetnews Kannada as a Preferred SourcegooglePreferred

ಈಗಾಗಲೇ ಮೂರನೇ ವಾರಕ್ಕೆ ಕಾಲಿಟ್ಟಿರುವ ಈ ಸಂಘರ್ಷದಿಂದಾಗಿ, ಆಮದು ಮಾಡಿಕೊಳ್ಳುವ ಇಂಧನವನ್ನೇ ಹೆಚ್ಚು ಅವಲಂಬಿಸಿರುವ ದೇಶಗಳು ಸಂಕಷ್ಟಕ್ಕೆ ಸಿಲುಕಿವೆ. ಈ ಹಿಂದೆ ಪಾಕಿಸ್ತಾನ ಕೂಡ ಇದೇ ರೀತಿ ಕಠಿಣ ನಿರ್ಬಂಧಗಳನ್ನು ಹೇರಿತ್ತು. 2022ರ ಆರ್ಥಿಕ ಹಿಂಜರಿತದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಶ್ರೀಲಂಕಾ, ಪರಿಸ್ಥಿತಿ ಮತ್ತಷ್ಟು ಹದಗೆಡುವ ಮುನ್ನವೇ ಇಂಧನ ಬಳಕೆಯನ್ನು ಕಡಿಮೆ ಮಾಡಲು ಈ ಕ್ರಮ ಕೈಗೊಂಡಿದೆ.

ಪ್ರತಿ ಬುಧವಾರ ರಜಾದಿನವಾಗಿ ಘೋಷಣೆ

ಈ ಹೊಸ ನಿಯಮಗಳು ಶಾಲೆ ಮತ್ತು ವಿಶ್ವವಿದ್ಯಾಲಯಗಳಿಗೂ ಅನ್ವಯವಾಗಲಿವೆ ಮತ್ತು ಮುಂದಿನ ಆದೇಶದವರೆಗೂ ಜಾರಿಯಲ್ಲಿರುತ್ತವೆ ಎಂದು ಅಗತ್ಯ ಸೇವೆಗಳ ಕಮಿಷನರ್ ಜನರಲ್ ಪ್ರಭಾತ್ ಚಂದ್ರಕೀರ್ತಿ ತಿಳಿಸಿದ್ದಾರೆ. ಖಾಸಗಿ ವಲಯದವರೂ ಇದೇ ಮಾದರಿಯನ್ನು ಅನುಸರಿಸಬೇಕು ಮತ್ತು ಪ್ರತಿ ಬುಧವಾರವನ್ನು ರಜಾದಿನವೆಂದು ಘೋಷಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಅಧ್ಯಕ್ಷ ಅನುರ ಕುಮಾರ ದಿಸನಾಯಕ ಅವರ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯ ನಂತರ ಈ ಘೋಷಣೆ ಹೊರಬಿದ್ದಿದೆ. "ನಾವು ಕೆಟ್ಟ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗಬೇಕು, ಆದರೆ ಒಳ್ಳೆಯದಾಗಲಿದೆ ಎಂದು ಆಶಿಸೋಣ" ಎಂದು ಅಧ್ಯಕ್ಷರು ಹೇಳಿದ್ದಾರೆ. ಆಸ್ಪತ್ರೆಗಳು, ಬಂದರುಗಳು ಮತ್ತು ತುರ್ತು ಕಾರ್ಯಾಚರಣೆಗಳಂತಹ ಅಗತ್ಯ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

ವಾರಕ್ಕೆ 15 ಲೀಟರ್ ಪೆಟ್ರೋಲ್

ಮಾರ್ಚ್ 15 ರಿಂದ, ಖಾಸಗಿ ವಾಹನ ಸವಾರರಿಗೆ ವಾರಕ್ಕೆ ಕೇವಲ 15 ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ ಅನ್ನು ನಿಗದಿಪಡಿಸಲಾಗಿದೆ. ಆದರೆ, ಸಾರ್ವಜನಿಕ ಸಾರಿಗೆ ವಾಹನಗಳಿಗೆ 200 ಲೀಟರ್‌ವರೆಗೆ ಇಂಧನ ಸಿಗಲಿದೆ. ದೇಶದಲ್ಲಿರುವ ಪೆಟ್ರೋಲ್ ಮತ್ತು ಡೀಸೆಲ್ ದಾಸ್ತಾನು ಸುಮಾರು ಆರು ವಾರಗಳವರೆಗೆ ಮಾತ್ರ ಸಾಕಾಗುತ್ತದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಇದನ್ನೂ ಓದಿ: ಮುಖಕ್ಕೆ ಫೇಸ್ ಪ್ಯಾಕ್ ಹಾಕಿ ಮೀಟಿಂಗ್‌ ಹಾಜರು, ಜೆನ್‌ಜಿ ಉದ್ಯೋಗಿ ನೋಡಿ ಬಾಸ್ ರಿಯಾಕ್ಷನ್ ವೈರಲ್

ಅಂದಹಾಗೆ, ಶ್ರೀಲಂಕಾ ತನ್ನ ಸಂಪೂರ್ಣ ತೈಲ ಅಗತ್ಯಕ್ಕೆ ಆಮದನ್ನೇ ಅವಲಂಬಿಸಿದೆ. ವಿದ್ಯುತ್ ಉತ್ಪಾದನೆಗೆ ಬೇಕಾದ ಕಲ್ಲಿದ್ದಲನ್ನು ಕೂಡ ಹೊರಗಿನಿಂದಲೇ ಖರೀದಿಸುತ್ತದೆ. ಸಿಂಗಾಪುರ, ಮಲೇಷ್ಯಾ ಮತ್ತು ದಕ್ಷಿಣ ಕೊರಿಯಾದಿಂದ ಸಂಸ್ಕರಿಸಿದ ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಂಡರೆ, ಮಧ್ಯಪ್ರಾಚ್ಯದಿಂದ ಕಚ್ಚಾ ತೈಲವನ್ನು ತರಿಸಿಕೊಳ್ಳುತ್ತದೆ. ಪ್ರಯಾಣ ಮತ್ತು ಇಂಧನ ಬಳಕೆಯನ್ನು ಕಡಿಮೆ ಮಾಡಲು, ಸಾರ್ವಜನಿಕ ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅಲ್ಲದೆ, ಸಾಧ್ಯವಿರುವ ಕಡೆಗಳಲ್ಲಿ ಸರ್ಕಾರಿ ನೌಕರರಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಲಾಗಿದೆ.

ಇದನ್ನೂ ಓದಿ: ಒಬ್ಬಂಟಿ ಐಲು ದೊರೆ ಟ್ರಂಪ್‌ಗೆ ಮಿತ್ರರ ಶಾಕ್: ಹಾರ್ಮುಜ್ ಬಿಕ್ಕಟ್ಟಿನಲ್ಲಿ ಅಮೆರಿಕ ಏಕಾಂಗಿ!