ಇಲ್ಲೊಬ್ಬರು ಎಂಆರ್‌ಐ ಸ್ಕ್ಯಾನ್ ಮಾಡಿಸುವುದಕ್ಕೆ ಪತ್ನಿಗೆ ಸಹಾಯ ಮಾಡಲು ಹೋದವರನ್ನು ಅವರ ಮೈ ಮೇಲಿದ್ದ ಲೋಹದ ಚೈನ್‌ನ ಕಾರಣಕ್ಕೆ ಎಂಆರ್‌ಐ ಸ್ಕ್ಯಾನಿಂಗ್ ಮೆಷಿನ್ ಅವರನ್ನು ಅಚಾನಕ್ ಆಗಿ ಒಳಗೆಳೆದುಕೊಂಡಿದ್ದು ಅವರು ಸಾವನ್ನಪ್ಪಿದ್ದಾರೆ.

ನ್ಯೂಯಾರ್ಕ್‌: ಎಂಆರ್‌ಐ ಸ್ಕ್ಯಾನ್ ಮಾಡಿಸಿಕೊಂಡ ಬಹುತೇಕರಿಗೆ ಅದರೊಳಗೆ ಹೋಗುವ ವೇಳೆ ಯಾವುದೇ ಲೋಹದ ವಸ್ತುಗಳನ್ನು ಮೈ ಮೇಲೆ ಹಾಕಿರಬಾರದು ಎಂದು ವೈದ್ಯರು ಹೇಳುವುದನ್ನು ಕೇಳಿರಬಹುದು. ಇದಕ್ಕಾಗಿ ಎಂಆರ್‌ಐ ಸ್ಕ್ಯಾನಿಂಗ್ ರೂಮ್‌ಗೆ ಹೋಗುವಾಗಲೇ ಮೈ ಮೇಲಿದ್ದ ಎಲ್ಲಾ ಲೋಹದ ವಸ್ತುಗಳನ್ನು ಬಿಚ್ಚಿಡಲಾಗುತ್ತದೆ. ಆದರೆ ಇಲ್ಲೊಬ್ಬರು ಎಂಆರ್‌ಐ ಸ್ಕ್ಯಾನ್ ಮಾಡಿಸುವುದಕ್ಕೆ ಪತ್ನಿಗೆ ಸಹಾಯ ಮಾಡಲು ಹೋದವರನ್ನು ಅವರ ಮೈ ಮೇಲಿದ್ದ ಲೋಹದ ಚೈನ್‌ನ ಕಾರಣಕ್ಕೆ ಎಂಆರ್‌ಐ ಸ್ಕ್ಯಾನಿಂಗ್ ಮೆಷಿನ್ ಅವರನ್ನು ಅಚಾನಕ್ ಆಗಿ ಒಳಗೆಳೆದುಕೊಂಡಿದ್ದು ಅವರು ಸಾವನ್ನಪ್ಪಿದ್ದಾರೆ. ಇಂತಹ ಆಘಾತಕಾರಿ ಘಟನೆ ಅಮೆರಿಕಾದ ನ್ಯೂಯಾರ್ಕ್‌ನಲ್ಲಿ ನಡೆದಿದೆ.

ಘಟನೆ ನಡೆದಿದ್ದು ಹೇಗೆ?

ಆಡ್ರಿಯೆನ್ ಜೋನ್ಸ್-ಮ್ಯಾಕ್‌ಆಲಿಸ್ಟರ್ ಎಂಬ ಮಹಿಳೆ ತಮ್ಮ ಮೊಣಕಾಲಿನ ಮೇಲೆ ಎಂಆರ್‌ಐ ಸ್ಕ್ಯಾನಿಂಗ್ ಮಾಡುವುದಕ್ಕೆ ಮುಂದಾಗಿದ್ದರು. ಇದಕ್ಕಾಗಿ ಆಸ್ಪತ್ರೆಯಲ್ಲಿ ಅವರು ಸಿದ್ಧಗೊಂಡಿದ್ದರು. ಈ ವೇಳೆ ಅವರನ್ನು ಮೇಜಿನ ಮೇಲೆ ಇಳಿಸುವುದಕ್ಕೆ ಅವರ ಪತಿ ಕೀತ್ ಮ್ಯಾಕ್‌ಆಲಿಸ್ಟರ್ ಅವರ ಸಹಾಯ ಪಡೆಯುವಂತೆ ವೈದ್ಯರಿಗೆ ಮಹಿಳೆ ಆಡ್ರಿಯೆನ್ ಜೋನ್ಸ್-ಮ್ಯಾಕ್‌ಆಲಿಸ್ಟರ್ ಸಲಹೆ ನೀಡಿದ್ದರು. ಅದರಂತೆ 61 ವರ್ಷದ ಕೀತ್ ಮ್ಯಾಕ್‌ಆಲಿಸ್ಟರ್ ಅವರು ಎಂಆರ್‌ಐ ಸ್ಕ್ಯಾನಿಂಗ್ ಕೊಠಡಿಗೆ ಬಂದಿದ್ದಾರೆ. ಆದರೆ ಅವರು ಲೋಹದ ಚೈನ್ ಧರಿಸಿದ್ದನ್ನು ವೈದ್ಯರು ಗಮನಿಸಿಲ್ಲ ಅವರಿಗೂ ತಿಳಿದಿಲ್ಲ.

ಮೆಟಲ್ ಚೈನ್ ಧರಿಸಿದ್ದ ಅವರು ಎಂಆರ್‌ಐ ಸ್ಕ್ಯಾನಿಂಗ್ ಮೆಷಿನ್ ಬಳಿ ಬರುತ್ತಲೇ ಎಂಆರ್‌ಐ ಸ್ಕ್ಯಾನಿಂಗ್ ಮೆಷಿನ್ ಒಮ್ಮೆಲೇ ಅವರನ್ನು ಒಳಗೆಳೆದಿದೆ. ಅವರು 9 ಕೆಜಿ(20 ಪೌಂಡ್ ತೂಕ) ದ ಮೆಟಲ್ ಚೈನ್‌ ಅನ್ನು ಅವರು ಈ ವೇಳೆ ಧರಿಸಿದ್ದರು ಎಂದು ವರದಿಯಾಗಿದೆ. ಎಂಆರ್‌ಐ ಸ್ಕ್ಯಾನಿಂಗ್ ಮೆಷಿನ್ ಮೆಷಿನ್‌ನ ಮ್ಯಾಗ್ನೇಟಿಕ್ ಪವರ್( ಆಯಸ್ಕಾಂತೀಯ ಶಕ್ತಿ) ನಿಂದಾಗಿ ಅವರನ್ನು ಅವರನ್ನು ಮೆಷಿನ್ ಕೂಡಲೇ ಒಳಗೆಳೆದುಕೊಂಡಿದೆ. ಕೂಡಲೇ ವೈದ್ಯರು ಹಾಗೂ ಸಿಬ್ಬಂದಿ ಅವರನ್ನು ಹೊರಗೆಳೆದಿದ್ದರೂ ಅಷ್ಟರಲ್ಲಾಗಲೇ ಅವರಿಗೆ ಹಲವು ಬಾರಿ ಹೃದಯಾಘಾತವಾಗಿದ್ದು, ಅವರು ಸಾವನ್ನಪ್ಪಿದ್ದಾರೆ.

ಈ ಘಟನೆ ಒಂದು ಕ್ಷಣ ವೈದ್ಯರಿಗೂ ಆಘಾತ ಮೂಡಿಸಿದೆ. ಮೃತ್ ಕೀತ್ ಮ್ಯಾಕ್‌ಆಲಿಸ್ಟರ್ ಅವರು ಲಾಂಗ್ ಐಲ್ಯಾಂಡ್‌ನವರಾಗಿದ್ದು, ನ್ಯೂಯಾರ್ಕ್‌ನ ವೆಸ್ಟ್‌ಬರಿಯಲ್ಲಿರುವ ವೈದ್ಯಕೀಯ ಸೌಲಭ್ಯದಲ್ಲಿ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (ಎಂಆರ್‌ಐ) ಯಂತ್ರವೂ ಅವರನ್ನು ಹಠಾತ್ ಆಗಿ ಒಳಗೆಳೆದುಕೊಂಡ ನಂತರ ಅವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಈ ಘಟನೆ ಅಲ್ಲಿನ ನಸ್ಸೌ ಓಪನ್ ಎಂಆರ್‌ಐನಲ್ಲಿ ನಡೆದಿದೆ. ಅಲ್ಲಿ ಮೆಕ್‌ಅಲಿಸ್ಟರ್ ತಮ್ಮ ಪತ್ನಿ ಆಡ್ರಿಯೆನ್ ಜೋನ್ಸ್ ಮೆಕ್‌ಅಲಿಸ್ಟರ್ ಅವರ ಮೊಣಕಾಲು ಸ್ಕ್ಯಾನ್‌ಗಾಗಿ ಬಂದಿದ್ದರು.

ಆಡ್ರಿಯೆನ್ ಹೇಳುವಂತೆ, ಸ್ಕ್ಯಾನಿಂಗ್ ಟೇಬಲ್‌ನಿಂದ ಎದ್ದೇಳಲು ಸಹಾಯ ಮಾಡುವುದಕ್ಕೆ ಆಕೆಯ ಪತಿ ಎಂಆರ್‌ಐ ಕೋಣೆಗೆ ಬಂದಿದ್ದರು. ಈ ವೇಳೆ ಯಂತ್ರ ಅವರನ್ನು ಎಳೆದುಕೊಂಡಿದೆ ಆಡ್ರಿಯೆನ್ ಮತ್ತು ಹಾಜರಿದ್ದ ಎಂಆರ್‌ಐ ತಂತ್ರಜ್ಞರು ಮ್ಯಾಕ್‌ಅಲಿಸ್ಟರ್‌ರನ್ನು ಯಂತ್ರದಿಂದ ದೂರ ಎಳೆಯಲು ಪ್ರಯತ್ನಿಸಿದರಾದರು ವಿಫಲರಾದರು ಎಂದು ವರದಿಯಾಗಿದೆ.

ಮ್ಯಾಕ್‌ಅಲಿಸ್ಟರ್ ಭಾರವಾದ ಲಾಕ್‌ನೊಂದಿಗೆ ದೊಡ್ಡ ಲೋಹದ ಚೈನ್ ಧರಿಸಿದ್ದರು, ಇದರಿಂದಾಗಿ ಶಕ್ತಿಯುತವಾದ ಎಂಆರ್‌ಐ ಮ್ಯಾಗ್ನೆಟ್ ಅವರನ್ನು ಯಂತ್ರದೊಳಗೆ ಎಳೆದೊಯ್ದಿತು ಎಂದು ಪೊಲೀಸರು ತಿಳಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಮರುದಿನ ಅವರು ಸಾವನ್ನಪ್ಪಿದ್ದಾರೆ. ತೂಕದ ತರಬೇತಿ ಉದ್ದೇಶಗಳಿಗಾಗಿ ತನ್ನ ಪತಿ ಯಾವಾಗಲೂ 20 ಪೌಂಡ್‌ಗಳ ಚೈನ್‌ ಅನ್ನು ಧರಿಸುತ್ತಿದ್ದರು ಎಂದು ಮಹಿಳೆ ಆಡ್ರಿಯನ್ ಹೇಳಿದ್ದಾರೆ.

ಈ ದುರಂತದ ನಂತರ ಎಂಆರ್‌ಐ ಸುರಕ್ಷತಾ ಪ್ರೋಟೋಕಾಲ್‌ಗಳ ಮಹತ್ವದ ಬಗ್ಗೆ ವೈದ್ಯಕೀಯ ವೃತ್ತಿಪರರು ಎಚ್ಚರಿಸುತ್ತಿದ್ದಾರೆ.