Asianet Suvarna News Asianet Suvarna News

ಕೊನೆಯ ಒತ್ತೆಯಾಳು ಬಿಡುಗಡೆಯಾಗುವವರೆಗೂ ವಿಶ್ರಮಿಸಲ್ಲ: ನೇತನ್ಯಾಹು ಘೋಷಣೆ

ಗಾಜಾಪಟ್ಟಿಯ ಪ್ರತಿಯೊಬ್ಬ ಹಮಾಸ್ ಉಗ್ರನನ್ನೂ ಹುಡುಕಿ ಕೊಲ್ಲುತ್ತೇವೆ ಎಂದು ಶಪಥ ಮಾಡಿರುವ ಇಸ್ರೇಲ್‌, ಯುದ್ಧದ ಆರನೇ ದಿನ ವಾಯುದಾಳಿಯನ್ನು ಇನ್ನಷ್ಟು ತೀವ್ರಗೊಳಿಸಿದೆ.

Israel Palestine war We Kill every Hamas terrorist Do Not Rest Until Last Hostage Is Released Israel Prime Minister Netanyahu Declaration akb
Author
First Published Oct 13, 2023, 7:34 AM IST

ಜೆರುಸಲೇಂ: ಗಾಜಾಪಟ್ಟಿಯ ಪ್ರತಿಯೊಬ್ಬ ಹಮಾಸ್ ಉಗ್ರನನ್ನೂ ಹುಡುಕಿ ಕೊಲ್ಲುತ್ತೇವೆ ಎಂದು ಶಪಥ ಮಾಡಿರುವ ಇಸ್ರೇಲ್‌, ಯುದ್ಧದ ಆರನೇ ದಿನ ವಾಯುದಾಳಿಯನ್ನು ಇನ್ನಷ್ಟು ತೀವ್ರಗೊಳಿಸಿದೆ. ಗಾಜಾಪಟ್ಟಿಗೆ ನೀರು, ಆಹಾರ, ಔಷಧ ಹಾಗೂ ಇಂಧನ ಪೂರೈಕೆಯನ್ನು ಇಸ್ರೇಲ್‌ ಸಂಪೂರ್ಣ ಬಂದ್‌ ಮಾಡಿದ್ದು, ಹಮಾಸ್‌ ಉಗ್ರರು ಒತ್ತೆ ಇರಿಸಿಕೊಂಡಿರುವ ಕಟ್ಟಕಡೆಯ ಇಸ್ರೇಲಿ ಒತ್ತೆಯಾಳನ್ನು ಸುರಕ್ಷಿತವಾಗಿ ಮರಳಿ ಕಳಿಸುವವರೆಗೂ ಹನಿ ನೀರು ನೀಡುವುದಿಲ್ಲ ಎಂದು ಅಬ್ಬರಿಸಿದೆ.

ಇದೇ ವೇಳೆ ಎರಡೂ ಕಡೆ ಸೇರಿ ಸಾವಿನ ಸಂಖ್ಯೆ 4000ಕ್ಕೆ ಏರಿಕೆಯಾಗಿದೆ. ಇಸ್ರೇಲ್‌ಗೆ ಬೆಂಬಲ ನೀಡಲು ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್‌ ಟೆಲ್‌ ಅವಿವ್‌ಗೆ ಗುರುವಾರ ಬಂದಿಳಿದಿದ್ದಾರೆ. ಗಾಜಾಪಟ್ಟಿಯ ಆಸ್ಪತ್ರೆಗಳಲ್ಲಿ ನವಜಾತ ಶಿಶುಗಳಿಗೆ ಇನ್‌ಕ್ಯುಬೇಟರ್‌ ಇಲ್ಲದೆ, ಸಾವಿನ ಶಯ್ಯೆಯಲ್ಲಿರುವ ವಯೋವೃದ್ಧರಿಗೆ ಆಕ್ಸಿಜನ್‌ ಇಲ್ಲದೆ ಪರದಾಟ ಆರಂಭವಾಗಿದೆ. ಶೀಘ್ರದಲ್ಲೇ ಎಲ್ಲಾ ಆಸ್ಪತ್ರೆಗಳೂ ಶವಾಗಾರಗಳಾಗಲಿವೆ ಎಂದು ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ವಿಶ್ವಸಂಸ್ಥೆಯ ವೈದ್ಯರು ಹೇಳಿದ್ದಾರೆ.

ಗಾಜಾಪಟ್ಟಿಯ ಬೀದಿ ಬೀದಿಗಳಲ್ಲಿ ಆಹಾರ, ನೀರು ಹಾಗೂ ಔಷಧಿಗಾಗಿ ಹಾಹಾಕಾರ ಶುರುವಾಗಿದೆ. ಇಸ್ರೇಲ್‌ನ ಕ್ಷಿಪಣಿ ದಾಳಿಯಿಂದ ತಪ್ಪಿಸಿಕೊಂಡು ಓಡಿಹೋಗಲು ಪ್ಯಾಲೆಸ್ತೀನಿಯನ್ನರಿಗೆ ಯಾವುದೇ ಜಾಗವಿಲ್ಲದಂತಾಗಿದೆ. ಪ್ಯಾಲೆಸ್ತೀನಿಯನ್ನರಿಗೆ ಗಾಜಾಪಟ್ಟಿ ತೊರೆಯಲು ದಾರಿ ಮಾಡಿಕೊಡಿ ಎಂಬ ಅಮೆರಿಕದ ಪ್ರಸ್ತಾಪವನ್ನು ಈಜಿಪ್ಟ್‌ ಕೂಡ ತಿರಸ್ಕರಿಸಿದೆ.

ದಾಳಿ ತೀವ್ರವಾಗುತ್ತಿರುವುದರಿಂದ 23 ಲಕ್ಷ ಜನಸಂಖ್ಯೆಯ ಗಾಜಾಪಟ್ಟಿಯಲ್ಲಿ ಸಾವಿನ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಇದರ ಜೊತೆಗೇ, ಯಾವುದೇ ಕ್ಷಣದಲ್ಲಿ ಗಾಜಾ ಮೇಲೆ ಇಸ್ರೇಲ್‌ ಭೂದಾಳಿಯನ್ನೂ ಆರಂಭಿಸುವ ಸಾಧ್ಯತೆಯಿದ್ದು, ಪ್ಯಾಲೆಸ್ತೀನಿಯನ್ನರಲ್ಲಿ ಆತಂಕ ಹೆಚ್ಚಾಗಿದೆ. ‘ಸರ್ಕಾರ ಸೂಚಿಸಿದ ಕೂಡಲೇ ಭೂದಾಳಿ ಆರಂಭಿಸುತ್ತೇವೆ’ ಎಂದು ಇಸ್ರೇಲಿ ಮಿಲಿಟರಿ ವಕ್ತಾರರು ಹೇಳಿದ್ದಾರೆ.

ಕತ್ತಲಲ್ಲೇ ರಾತ್ರಿ ಕಳೆದ ಗಾಜಾ:

ಗಾಜಾಪಟ್ಟಿಯ ಏಕೈಕ ವಿದ್ಯುತ್‌ ಉತ್ಪಾದನಾ ಕೇಂದ್ರವು ಇಂಧನವಿಲ್ಲದೆ ಬಂದ್‌ ಆಗಿದ್ದು, ಬುಧವಾರ ರಾತ್ರಿಯನ್ನು ಇಡೀ ಗಾಜಾಪಟ್ಟಿ ಕಾರ್ಗತ್ತಲಿನಲ್ಲಿ ಕಳೆದಿದೆ. ವಿದ್ಯುತ್‌ ಉತ್ಪಾದಿಸುವ ಬಿಡಿ ಜನರೇಟರ್‌ಗಳು ಕೂಡ ಶೀಘ್ರದಲ್ಲೇ ಇಂಧನವಿಲ್ಲದೆ ಬಂದ್‌ ಆಗಲಿವೆ. ಗುರುವಾರ ಬೆಳಿಗ್ಗೆ ಜನರು ಬೇಕರಿಗಳ ಮುಂದೆ ಆಹಾರಕ್ಕಾಗಿ ಮುಗಿಬಿದ್ದಿದ್ದರು. ಕೆಲವೇ ಸಮಯದಲ್ಲಿ ಬೇಕರಿಗಳು ಖಾಲಿಯಾಗಿ ಬಾಗಿಲು ಮುಚ್ಚಿದವು. ದಿನಸಿ ಅಂಗಡಿಗಳು ಕೂಡ ಖಾಲಿಯಾಗುತ್ತಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಸುರಕ್ಷಿತ ಜಾಗಕ್ಕೆ ಹಮಾಸ್‌ ಹುಡುಕಾಟ:

ಗುರುವಾರವೂ ಗಾಜಾಪಟ್ಟಿಯ ಮೇಲೆ ಇಸ್ರೇಲ್‌ ಮಿಲಿಟರಿ ತೀವ್ರ ಕ್ಷಿಪಣಿ ದಾಳಿ ನಡೆಸಿದ್ದು, ಪ್ಯಾಲೆಸ್ತೀನಿಯನ್ನರು ಜೀವ ಉಳಿಸಿಕೊಳ್ಳಲು ಬೀದಿಗಳಲ್ಲಿ ತಮ್ಮ ಮಕ್ಕಳು, ಅಳಿದುಳಿದ ಆಸ್ತಿಪಾಸ್ತಿಗಳನ್ನು ಹೊತ್ತುಕೊಂಡು ಸುರಕ್ಷಿತ ಸ್ಥಳ ಹುಡುಕುತ್ತಾ ಓಡುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು. ವಿಶ್ವಸಂಸ್ಥೆಯ ಶಾಲೆಗಳಲ್ಲಿ ಸಾವಿರಾರು ಜನರು ಆಶ್ರಯ ಪಡೆದಿದ್ದು, ಅಲ್ಲಿ ಇನ್ನಾರಿಗೂ ಜಾಗವಿಲ್ಲದಂತಾಗಿದೆ.

ಯುಎಸ್ ಸೆಕ್ರಟರಿಗೆ ಮಕ್ಕಳ ಮೃತದೇಹ ಫೋಟೋ ಹಂಚಿದ ಇಸ್ರೇಲ್, ಹಮಾಸ್ ಭೀಕರತೆಯ ಸಾಕ್ಷಿ!

ಅಬ್ಬರಿಸಿದ ಪ್ರಧಾನಿ ನೇತನ್ಯಾಹು:

ಗುರುವಾರ ಟೀವಿ ಚಾನಲ್‌ನಲ್ಲಿ ಮಾತನಾಡಿದ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೇತನ್ಯಾಹು, ‘ಪ್ರತಿಯೊಬ್ಬ ಹಮಾಸ್‌ ಸದಸ್ಯನೂ ಸತ್ತ ಎಂದು ತಿಳಿಯಿರಿ. ಹಮಾಸ್‌ ಸಂತಾನವನ್ನೇ ನಾವು ಹೊಸಕಿಹಾಕುತ್ತೇವೆ’ ಎಂದು ಶಪಥ ಮಾಡಿದರು.

ಇದೇ ವೇಳೆ, ಗುರುವಾರ ಮಾಜಿ ರಕ್ಷಣಾ ಸಚಿವ ಹಾಗೂ ವಿರೋಧ ಪಕ್ಷದ ನಾಯಕ ಬೆನ್ನಿ ಗಂಟ್ಸ್‌ ಇಸ್ರೇಲ್‌ನ ಯುದ್ಧಕಾಲದ ಸಚಿವ ಸಂಪುಟಕ್ಕೆ ಸೇರ್ಪಡೆಯಾದರು.

ಒತ್ತೆಯಾಳು ಬಿಡದಿದ್ದರೆ ನಿರ್ನಾಮ:

ಇಸ್ರೇಲ್‌ನ ಇಂಧನ ಸಚಿವ ಕಟ್ಜ್‌ ಮಾತನಾಡಿ, ‘ಹಮಾಸ್‌ ಉಗ್ರರು ಹೊತ್ತೊಯ್ದಿರುವ ಇಸ್ರೇಲಿ ಒತ್ತೆಯಾಳುಗಳ ಪೈಕಿ ಕಟ್ಟಕಡೆಯ ಒತ್ತೆಯಾಳನ್ನು ಸುರಕ್ಷಿತವಾಗಿ ಮರಳಿ ಕಳಿಸುವವರೆಗೂ ಗಾಜಾಪಟ್ಟಿಯ ಒಂದೇ ಒಂದು ನಲ್ಲಿಯಲ್ಲಿ ನೀರು ಬರುವುದಿಲ್ಲ. ಅಲ್ಲಿಗೆ ಯಾವುದೇ ಇಂಧನ ಟ್ರಕ್‌ ಹೋಗಲು ಬಿಡುವುದಿಲ್ಲ’ ಎಂದು ಹೇಳಿದರು.ಶನಿವಾರ ಹಮಾಸ್‌ ಉಗ್ರರು ಇಸ್ರೇಲ್‌ನ ಒಳಗೆ ನುಗ್ಗಿ ದಾಳಿ ನಡೆಸಿದ ಬಳಿಕ 150ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಕರೆದೊಯ್ದಿದ್ದಾರೆ ಎಂದು ಹೇಳಲಾಗಿದೆ.

ಹಮಾಸ್ ಉಗ್ರರ ಬೆಂಬಲಿಸಿದ ಸಿರಿಯಾಗೆ ಸಂಕಷ್ಟ, 2 ವಿಮಾನ ನಿಲ್ದಾಣ ಮೇಲೆ ದಾಳಿ ನಡೆಸಿದ ಇಸ್ರೇಲ್!

ಆಸ್ಪತ್ರೆಗಳೆಲ್ಲ ಶವಾಗಾರಗಳು:

ಇಂಧನ, ನೀರು, ಔಷಧ ಹಾಗೂ ಆಹಾರವಿಲ್ಲದೆ ಗಾಜಾಪಟ್ಟಿಯ ಆಸ್ಪತ್ರೆಗಳಲ್ಲಿ ತೀವ್ರ ಪರದಾಟ ಉಂಟಾಗಿದೆ. ರೋಗಿಗಳಿಗೆ ಆಕ್ಸಿಜನ್‌ ಸಿಗುತ್ತಿಲ್ಲ. ಎಕ್ಸ್‌ರೇ ಯಂತ್ರಗಳು ಸ್ತಬ್ಧವಾಗಿವೆ. ಡಯಾಲಿಸಿಸ್‌ ನಿಂತಿದೆ. ಶಿಶುಗಳಿಗೆ ಇನ್‌ಕ್ಯುಬೇಟರ್‌ಗಳಿಲ್ಲ. ಆಪರೇಷನ್‌ ಥಿಯೇಟರ್‌ಗಳು ಬಂದಾಗಿವೆ. ವಿದ್ಯುತ್‌ ಇಲ್ಲದೆ ಆಸ್ಪತ್ರೆಗಳು ಶವಾಗಾರಗಳಾಗುತ್ತಿವೆ ಎಂದು ರೆಡ್‌ ಕ್ರಾಸ್‌ ಹೇಳಿದೆ.

'ಒತ್ತೆಯಾಳಾಗಿ ನರಳೋದಕ್ಕಿಂತ ಸತ್ತಿದ್ದೆ ಒಳ್ಳೆಯದಾಯ್ತ..' 8 ವರ್ಷದ ಮಗಳ ಸಾವನ್ನು ಸ್ವಾಗತಿಸಿದ ಇಸ್ರೇಲ್‌ ಪ್ರಜೆ!

ಸಾವಿನ ಸಂಖ್ಯೆ 4000ಕ್ಕೆ ಏರಿಕೆ:

ಇಸ್ರೇಲ್‌ ಹಾಗೂ ಗಾಜಾಪಟ್ಟಿ ಎರಡೂ ಕಡೆ ಸೇರಿ ಸಾವಿನ ಸಂಖ್ಯೆ 4000ಕ್ಕೆ ಏರಿಕೆಯಾಗಿದೆ. ಗಾಜಾದಲ್ಲಿ 1200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಪ್ಯಾಲೆಸ್ತೀನ್‌ನ ಆರೋಗ್ಯ ಸಚಿವರು ಹೇಳಿದ್ದಾರೆ. ಇಸ್ರೇಲ್‌ನಲ್ಲಿ 1200 ಜನರು ಮೃತಪಟ್ಟಿದ್ದಾರೆ ಎಂದು ಇಸ್ರೇಲ್‌ ಸರ್ಕಾರ ಹೇಳಿಕೊಂಡಿದ್ದು, 1500ಕ್ಕೂ ಹೆಚ್ಚು ಹಮಾಸ್‌ ಉಗ್ರರು ಮೃತಪಟ್ಟಿದ್ದಾರೆ ಎಂದು ತಿಳಿಸಿದೆ. ಗಾಜಾಪಟ್ಟಿಯಲ್ಲಿ 3,38,000 ಲಕ್ಷ ಜನರು ಇಸ್ರೇಲ್‌ನ ದಾಳಿಯಿಂದ ಪಾರಾಗಲು ಮನೆ ತೊರೆದು ಓಡಿಹೋಗಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

'ಇಸ್ರೇಲ್‌ನ ಹಿಂದೆ ನಿಂತಿರೋದು ಅಮೆರಿಕ' ಇಸ್ರೇಲ್‌ ಮೇಲೆ ದಾಳಿ ಮಾಡುವ ರಾಷ್ಟ್ರಗಳಿಗೆ ಯುಎಸ್‌ ಎಚ್ಚರಿಕೆ!

Follow Us:
Download App:
  • android
  • ios