ನವದೆಹಲಿ (ಸೆ. 14): ಗಮನಿಸಿ ನೋಡಿ. ಜೂನ್‌ ಮಧ್ಯಭಾಗದಲ್ಲಿ ವಿಷಮಸ್ಥಿತಿಗೆ ತಲುಪಿದ್ದ ಭಾರತ- ಚೀನಾ ಸಂಘರ್ಷ ಇದೀಗ ಎರಡು ದೇಶಗಳ ನಡುವಿನ ಗುದ್ದಾಟವಾಗಿ ಉಳಿದಿಲ್ಲ. ಲಡಾಖಿನಲ್ಲಿ ಇಬ್ಬರ ನಡುವೆ ಎಂಬಂತಿದ್ದ ಹೊಯ್‌-ಕೈ ನೋಡನೋಡುತ್ತಲೇ ಸೌತ್‌ ಚೀನಾ ಸಮುದ್ರದಲ್ಲಿ ಕಂಪನಗಳನ್ನೆಬ್ಬಿಸಿ ಜಾಗತಿಕ ಸೆಣೆಸಾಟದ ಕ್ಯಾನ್ವಾಸಿಗೆ ಹೊರಳಿಬಿಟ್ಟಿದೆ. ‘ಅದು ಹಿಮಾಲಯವಿರಲಿ, ದಕ್ಷಿಣ ಚೀನಾ ಸಮುದ್ರ ತಟವಿದ್ದಿರಲಿ, ಚೀನಾ ಕಮ್ಯುನಿಸ್ಟ್‌ ಪಾರ್ಟಿ ಪ್ರೇರಿತ ಸಂಘರ್ಷವನ್ನು ನಾವು ಮುಂಚೂಣಿಯಲ್ಲಿ ನಿಂತು ವಿರೋಧಿಸುತ್ತೇವೆ’ ಅಂತ ಅಮೆರಿಕ ಹೇಳುವುದರೊಂದಿಗೆ ಕದನ ಕುತೂಹಲವೊಂದು ಹೊಯ್ದಾಡುವಂತಾಗಿದೆ.

ಚೀನಾ ವಿರುದ್ಧ ಜಗತ್ತೇ ಒಂದು

ವುಹಾನ್‌ ವೈರಸ್ಸಿನ ಕುರಿತು ಜಗತ್ತಿನ ಪ್ರಮುಖ ರಾಷ್ಟ್ರಗಳಿಗೆಲ್ಲ ಚೀನಾದ ವಿರುದ್ಧ ಮುನಿಸು ಶುರುವಾಗಿತ್ತಾದರೂ ಅದು ಮಿಲಿಟರಿ ಭಾಷೆಗೆ ಹೊರಳಿರಲಿಲ್ಲ. ಯಾವಾಗ ಲಡಾಖ್‌ನಲ್ಲಿ ಭಾರತವು ‘ತಾನು ಅಗತ್ಯ ಬಿದ್ದರೆ ಕೃಷ್ಣನ ಸುದರ್ಶನ ಚಕ್ರದ ನೆನಪಲ್ಲಿ ವೈರಿಗೆ ಯುದ್ಧದ ಮೂಲಕವೇ ಉತ್ತರ ಕೊಡುವುದಕ್ಕೂ ಸಿದ್ಧ’ ಎಂದು ಹೇಳಿತೋ, ಆನಂತರ ಕೊರೋನಾ ವಿಷಯವನ್ನು ಮರೆಸುವಂತೆ ಜಗತ್ತೇ ಚೀನಾದ ವಿರುದ್ಧ ಮಿಲಿಟರಿ ಶಬ್ದಭಂಡಾರವನ್ನು ಬಳಸತೊಡಗಿದೆ.

ಅಮೆರಿಕದಿಂದ ತೈವಾನ್‌ವರೆಗೆ

ಅಮೆರಿಕ-ಜಪಾನ್‌-ಆಸ್ಪ್ರೇಲಿಯಾ ದೇಶಗಳು ಜಂಟಿ ಸಮರಾಭ್ಯಾಸ ಮಾಡಿವೆ, ತೈವಾನ್‌ ಸಹ ಚೀನಾ ಏನಾದರೂ ಬಲವಂತವಾಗಿ ವಿಲೀನಗೊಳಿಸಿ ಕೊಳ್ಳುವುದಕ್ಕೆ ಬಂದರೆ ಎಂಬ ಎಚ್ಚರಿಕೆಯಲ್ಲಿ ಸಮರಾಭ್ಯಾಸ ನಡೆಸಿದೆ. ಚೀನಾದಿಂದ ಬಿಲಿಯನ್‌ ಡಾಲರುಗಟ್ಟಲೇ ಸಾಲ-ಬಂಡವಾಳ ಪಡೆದಿರುವ ಮಯನ್ಮಾರ್‌, ಫಿಲಿಪ್ಪೀನ್ಸ್‌ನಂಥ ದೇಶಗಳೂ ಚೀನಾ ತನ್ನ ರಾಷ್ಟ್ರೀಯ ಭದ್ರತೆಗೆ ಆತಂಕ ತಂದೊಡ್ಡಿದೆ ಎಂದು ರಾಗ ತೆಗೆದಿವೆ.

ಚೀನಾದ ಬೆಲ್ಟ್‌ ರೋಡ್‌ ಯೋಜನೆಯನ್ನು ಅಪ್ಪಿ ಕೊಂಡಾಡಿದ್ದ ಯುರೋಪಿನ ರಾಷ್ಟ್ರಗಳು ಕೊನೆಗೂ ಚೀನಾ ಕಂಪನಿಯ 5ಜಿ ಬಿಟ್ಟುಕೊಳ್ಳುವುದು ರಾಷ್ಟ್ರೀಯ ಭದ್ರತೆಗೆ ಸವಾಲಾಗಬಹುದು ಎಂಬ ಶಂಕೆಗೆ ಬಿದ್ದಿವೆ. ಹೀಗೆ ಚೀನಾದ ಕುರಿತಂತೆ ಬೇರೆ ಬೇರೆ ದೇಶಗಳಿಗೆ ಭಿನ್ನ ಭಿನ್ನ ಆತಂಕಗಳಿವೆ. ಆದರೆ ಅವರೆಲ್ಲರ ಕತೆಗಳು ಒಂದು ಬಿಂದುವಿನಲ್ಲಿ ಸಂಧಿಸುತ್ತವೆ. ಅದುವೇ ಭಾರತ. ಹೇಗೆ ಅಂತ ಒಂದೊಂದಾಗಿ ನೋಡುತ್ತ ಹೋಗೋಣ.

ರಾಜತಾಂತ್ರಿಕ ಹೊಡೆತ: ಚೀನಾಗೆ ಗುಡ್‌ ಬೈ ಹೇಳಿ ಭಾರತದ ಜೊತೆ ಕೈ ಜೋಡಿಸಿದ ಜರ್ಮನಿ!

ಚೀನಾದ ಹೆದ್ದಾರಿಗೆ ಭಾರತವೇ ತೊಡಕು

ಆಗಸ್ಟ್‌ 2019. 370ನೇ ವಿಧಿಯನ್ನು ತೆಗೆದುಹಾಕಿದ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿ ಭಾರತದ ಸಂಸತ್ತು ಬಿರುಸಿನ ಚರ್ಚೆಯಲ್ಲಿ ತೊಡಗಿಸಿಕೊಂಡಿತ್ತು. ವಾಗ್ವಾದಗಳ ನಡುವಲ್ಲಿ ಎದ್ದುನಿಂತ ಗೃಹ ಸಚಿವ ಅಮಿತ್‌ ಶಾ ಭಾವಾವೇಶ ತುಂಬಿಕೊಂಡು ಜೋರುಧ್ವನಿಯಲ್ಲಿ ಗುಡುಗಿದರು, ‘ಜಮ್ಮು-ಕಾಶ್ಮೀರ ಎಂದರೆ ನಾವು ಪಾಕ್‌ ಆಕ್ರಮಿತ ಕಾಶ್ಮೀರ ಮತ್ತು ಅಕ್ಸಾಯ್‌ ಚೀನ್‌ ಸೇರಿಸಿಕೊಂಡೇ ಮಾತಾಡುತ್ತಿದ್ದೇವೆ. ಅವನ್ನು ಮರುವಶ ಪಡಿಸಿಕೊಳ್ಳುವುದಕ್ಕೆ ಪ್ರಾಣವನ್ನೇ ತೆತ್ತೇವು, ಏನೆಂದುಕೊಂಡಿದ್ದೀರಿ ನೀವು?’ ಎಂದಿದ್ದರು.

ಆ ಮಾತಿನ ಚೂಪು ಕೇವಲ ಕಾಂಗ್ರೆಸ್ಸಿಗರು ಮತ್ತು ಪಾಕಿಸ್ತಾನವನ್ನಷ್ಟೇ ಅಲ್ಲ, ಚೀನಾವನ್ನೂ ತಿವಿಯಿತು. ಮೊದಲೆಲ್ಲ ಇಂಥವನ್ನು ಕೇವಲ ಮತದಾರರನ್ನು ಖುಷಿಪಡಿಸುವುದಕ್ಕಾಡಿದ ಮಾತು ಎನ್ನಬಹುದಾಗಿತ್ತೇನೋ. ಆದರೆ ಹಾಗಂದುಕೊಳ್ಳುವುದಕ್ಕೆ ಕೆಲ ವಿದ್ಯಮಾನಗಳು ಬಿಡುತ್ತಿಲ್ಲ. ಯಾವ ವಿಶೇಷ ಸ್ಥಾನಮಾನವನ್ನು ತೆಗೆದರೆ ರಕ್ತಪಾತವಾಗಿಬಿಡುತ್ತದೆ ಅಂತ ದೇಶದ ಆಂತರಿಕ ರಾಜಕೀಯ ವರ್ಗವೇ ಬ್ಲಾಕ್ಮೇಲ್‌ ಮಾಡಿಕೊಂಡಿತ್ತೋ ಅಂಥದ್ದನ್ನು ದಕ್ಕಿಸಿಕೊಂಡ, ತೀರ ಪಾಕಿಸ್ತಾನದ ಒಳಗೇ ನುಗ್ಗಿ ಬಾಲಾಕೋಟ್‌ನಲ್ಲಿ ಬಾಂಬಿಟ್ಟು ಪಾಕಿಸ್ತಾನದ ಅಣ್ವಸ್ತ್ರ ಭೀತಿಯನ್ನು ಮೆಟ್ಟಿನಿಂತ, ಪ್ರಸ್ತುತ ರಾಜಕೀಯ ನಾಯಕತ್ವದ ಧಾಡಸೀತನದ ಅರಿವು ಚೀನಾಕ್ಕಿದೆ.

ಕೇವಲ ಪಾಕ್‌ ಆಕ್ರಮಿತ ಪ್ರದೇಶವನ್ನಷ್ಟೇ ಭಾರತ ವಶಪಡಿಸಿಕೊಂಡರೂ ತನ್ನ ಬಿಲಿಯನ್ನುಗಟ್ಟಲೇ ಮೌಲ್ಯದ ಯೋಜನೆ ಹಳ್ಳ ಹಿಡಿಯುತ್ತದಲ್ಲ ಅಂತ ಚೀನಾ ಬೆಚ್ಚಿತು. ಏಕೆಂದರೆ, ಅದಾಗಲೇ ಚಾಲ್ತಿಯಲ್ಲಿರುವ ‘ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್‌’ ಪಾಕ್‌ ಆಕ್ರಮಿತ ಕಾಶ್ಮೀರದ ಗಿಲ್ಗಿಟ್‌ -ಬಾಲ್ಟಿಸ್ತಾನಗಳನ್ನು ದಾಟಿಕೊಂಡೇ ಚೀನಾವನ್ನು ತಲುಪುತ್ತದೆ. ಕರಾಚಿಯ ಗ್ವಾದಾರ್‌ ಬಂದರಿನಿಂದ ಶುರುವಾಗುವ ಈ ಕಾರಿಡಾರ್‌, ಚೀನಾಕ್ಕೆ ತೈಲ ಹಾಗೂ ಇನ್ನಿತರ ಸಾಗಣೆಗಳಲ್ಲಿ ಸಮುದ್ರ ಮಾರ್ಗದ ಸಾವಿರಾರು ಮೈಲಿಗಳನ್ನು ಉಳಿಸುತ್ತದಲ್ಲದೆ, ಅದರ ಬಹುಮುಖ್ಯ ದೌರ್ಬಲ್ಯವಾದ ‘ಮಲಾಕಾ ಸಂದಿಗ್ಧ’ವನ್ನು ತಪ್ಪಿಸುತ್ತದೆ.

ಕೊರೊನಾ ಸೃಷ್ಟಿಗೆ ಚೀನಾ ಸರ್ಕಾರವೇ ಕಾರಣ, ದಾಖಲೆ ಸಮೇತ ಮಾಹಿತಿ ಬಹಿರಂಗ!

ಏನಿದು ಮಲಾಕಾ ಸಂದಿಗ್ಧ?

ಅರಬ್‌ ರಾಷ್ಟ್ರಗಳಿಂದ ತೈಲ ತುಂಬಿಸಿಕೊಂಡು ಹಡಗುಗಳು ಚೀನಾವನ್ನು ತಲುಪಬೇಕೆಂದರೆ ಅವು ಭಾರತದ ದಕ್ಷಿಣಕ್ಕಿರುವ ಹಿಂದು ಮಹಾಸಾಗರದ ಗುಂಟ ಹಾದು, ಫೆಸಿಫಿಕ್‌ ಸಮುದ್ರವನ್ನು ಸೇರಿಕೊಂಡು ಚೀನಾದ ದಕ್ಷಿಣ ತೀರವನ್ನು ತಲುಪಬೇಕು. ಹಿಂದು ಮಹಾಸಾಗರದಿಂದ ಫೆಸಿಫಿಕ್‌ ಸಮುದ್ರಕ್ಕೆ ತಲುಪಬೇಕಾದರೆ ಮಲೇಷ್ಯಾ ಮತ್ತು ಇಂಡೊನೇಷ್ಯಗಳ ನಡುವಿನ ಇಕ್ಕಟ್ಟಾದ ಮಲಾಕಾ ಸಂಧಿಯನ್ನು ದಾಟಿಕೊಂಡೇ ಹೋಗಬೇಕು. ಜಗತ್ತಿನ ಶೇ.80ರಷ್ಟುಹಡಗುಗಳು ಈ ಮಾರ್ಗವನ್ನು ಬಳಸಲೇಬೇಕು. ಇದನ್ನು ಜಗತ್ತಿನ ಚೋಕ್‌ ಪಾಯಿಂಟ್‌ ಅರ್ಥಾತ್‌ ಉಸಿರುಗಟ್ಟಿಸಬಹುದಾದ ಜಾಗ ಅಂತಲೂ ಗುರುತಿಸುತ್ತಾರೆ.

ಭಾರತದ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ ಸಮೂಹಗಳಿಗೆ ಹತ್ತಿರದಲ್ಲಿರುವ ಈ ಜಾಗದ ಮೇಲೆ ಭಾರತದ ನೌಕಾಪಡೆಗಳಿಗೆ ಮೊದಲಿನಿಂದಲೂ ಹಿಡಿತವಿದೆ. ಜತೆಗೆ ಅಮೆರಿಕದಂಥ ಮಿಲಿಟರಿ ಬಲ ಸೇರಿದ ಮೇಲಂತೂ ಮುಗಿದೇಹೋಯಿತು. ಸಂಘರ್ಷ ಪರಾಕಾಷ್ಠೆಗೆ ಹೋದರೆ ಈ ಮಾರ್ಗವನ್ನು ಬ್ಲಾಕ್‌ ಮಾಡಿ ಚೀನಾದ ಎಲ್ಲ ಪೂರೈಕೆಗಳನ್ನು ತಡೆಹಿಡಿದು ಅದನ್ನು ಮಂಡಿಯೂರುವಂತೆ ಮಾಡುವುದು ಶತಃಸಿದ್ಧ.

ಇದಕ್ಕೆ ಉತ್ತರವಾಗಿ ಚೀನಾ ಕಂಡುಕೊಂಡ ಮಾರ್ಗ, ಪಾಕಿಸ್ತಾನದ ಗ್ವಾದಾರ್‌ ಬಂದರಿನವರೆಗೆ ಪೂರೈಕೆಗಳನ್ನು ತರಿಸಿಕೊಳ್ಳುವುದು. ನಂತರ ಪಾಕಿಸ್ತಾನದ ಎದೆ ಸೀಳಿದಂತೆ ಹಾದುಹೋಗುವ ಹೆದ್ದಾರಿಯಲ್ಲಿ ಸಂಚರಿಸಿಕೊಂಡು ಚೀನಾದ ವಾಯವ್ಯ ಭಾಗದಲ್ಲಿರುವ ಕಶ್ಗರ್‌ ತಲುಪಿಕೊಳ್ಳುವುದು. ಆಗ ಮಲಾಕಾ ಏಕೆ, ಹಿಂದು ಮಹಾಸಾಗರಕ್ಕೆ ಪ್ರವೇಶಿಸುವ ಅಗತ್ಯವೂ ಚೀನಾಕ್ಕಿಲ್ಲ.

ಅಲ್ಲದೇ, ಬಹುವಿಸ್ತಾರದ ಚೀನಾಕ್ಕೆ ತನ್ನ ಪೂರೈಕೆಗಳನ್ನು ಅಲ್ಲೆಲ್ಲೋ ದಕ್ಷಿಣ ತೀರದಲ್ಲಿಳಿಸಿಕೊಂಡು ಮತ್ತೆ ಅವುಗಳಲ್ಲಿ ಕೆಲವನ್ನು ತನ್ನ ದೇಶದ ಪಶ್ಚಿಮ ಹಾಗೂ ವಾಯವ್ಯ ಭಾಗಗಳಿಗೆಲ್ಲ ತಲುಪಿಸುವುದು ತುಂಬ ಸಮಯ ಮತ್ತು ಖರ್ಚು ಹಿಡಿಯುವ ಕೆಲಸ. ಹೀಗಾಗಿ ಪಾಕಿಸ್ತಾನವನ್ನು ಸಾಲದ ಕೂಪಕ್ಕೆ ತಳ್ಳಿ, ಹೆದ್ದಾರಿ ಮಾರ್ಗದಲ್ಲಿರುವ ನೈಸರ್ಗಿಕ ಸಂಪನ್ಮೂಲಗಳ ಮೇಲೆಲ್ಲ ತಾನು ಅಧಿಪತ್ಯ ಸ್ಥಾಪಿಸಿ ನಿರ್ಮಿಸಿರುವ ಯೋಜನೆಯೇ ಚೀನಾಕ್ಕೆ ಲಾಭದಾಯಕವಾಗಿತ್ತು.

ಭಾರತ, ನೇಪಾಳ ಬೆನ್ನಲ್ಲೇ ಮತ್ತೊಂದು ದೇಶದಲ್ಲಿ 'ಸಾಮ್ರಾಜ್ಯ' ವಿಸ್ತರಣೆಗೆ ಡ್ರ್ಯಾಗನ್ ಸಜ್ಜು!

ಚೀನಾ ಕ್ಯಾತೆ ಸೀಕ್ರೆಟ್‌

ಆದರೀಗ, ಇನ್ನು ಕೆಲ ವರ್ಷಗಳಲ್ಲೇ ಭಾರತವೇನಾದರೂ ಮಿಲಿಟರಿ ಕಾರ್ಯಾಚರಣೆ ನಡೆಸಿ ಪಾಕ್‌ ಆಕ್ರಮಿತ ಕಾಶ್ಮೀರವನ್ನು ವಶಪಡಿಸಿಕೊಳ್ಳುವಲ್ಲಿ ಸಫಲವೇ ಆಗಿಬಿಟ್ಟರೆ, ಚೀನಾವು ಗ್ವಾದಾರ್‌ ಬಂದರಿನಿಂದ ಅಷ್ಟುದ್ದ ಹೈವೇ ಮಾಡಿಕೊಂಡು ಬಂದಿದ್ದು ವ್ಯರ್ಥವಾಗಿಬಿಡುತ್ತದೆ. ಹಾಗೆಂದೇ ಚೀನಾ ಲಡಾಖ್‌ನಲ್ಲಿ ಭಾರತವನ್ನು ಮಣಿಸುವ ಅರ್ಜೆಂಟಿಗೆ ಬಿದ್ದಿತು. 2014ರ ನಂತರ ಹಿಮಾಲಯದ ದುರ್ಗಮ ಗಡಿಭಾಗಗಳನ್ನೆಲ್ಲಾ ತಲುಪುವಂತೆ ಭಾರತವು ಸೇತುವೆ, ರಸ್ತೆ ಇತ್ಯಾದಿ ಮೂಲಸೌಕರ್ಯಗಳನ್ನು ಅತಿ ತ್ವರಿತವಾಗಿ ನಿರ್ಮಿಸಿರುವುದನ್ನೂ ಚೀನಾ ಗಮನಿಸಿದೆ.

ಒಂದು ವೇಳೆ ಭಾರತವು ಪಾಕ್‌ ಆಕ್ರಮಿತ ಕಾಶ್ಮೀರದ ಮರುವಶಕ್ಕಾಗಿ ಕಾರ್ಯಾಚರಣೆ ಮಾಡಿಯೇಬಿಟ್ಟರೂ, ಬಾಲಾಕೋಟ್‌ ಪ್ರಕರಣದಲ್ಲಿ ನಡೆದುಕೊಂಡಂತೆ ವಿಶ್ವದ ಪ್ರಮುಖ ರಾಷ್ಟ್ರಗಳೆಲ್ಲ ಭಾರತದ ಪರವಾಗಿ ಇಲ್ಲವೇ ತಟಸ್ಥವಾಗಿ ನಿಂತುಬಿಡುತ್ತವೆ ಎಂಬುದೂ ಚೀನಾಕ್ಕೆ ಗೊತ್ತು. ಪಾಕ್‌ ಆಕ್ರಮಿತ ಕಾಶ್ಮೀರದ ವಿಚಾರಕ್ಕೆ ಬಂದರೆ ಪಾಶ್ಚಾತ್ಯ ಶಕ್ತಿಗಳು ಭಾರತದ ನಡೆಯನ್ನೇನೂ ವಿರೋಧಿಸಲಾರವು ಎಂಬುದಕ್ಕೆ ನಿಖರ ಕಾರಣವೊಂದಿದೆ.

1962 ರ ಬಳಿಕ ಮೊದಲ ಬಾರಿಗೆ ಮಾನಸ ಸರೋವರದ ಗುಡ್ಡ ಭಾರತದ ವಶ?

ಗಿಲ್ಗಿಟ್‌ ಪಾಕ್‌ ವಶವಾಗಿದ್ದು ಹೇಗೆ?

ಇವತ್ತಿಗೆ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ ಹಾದುಹೋಗುವ ಗಿಲ್ಗಿಟ್‌-ಬಾಲ್ಟಿಸ್ತಾನ ಪ್ರದೇಶವು ಪಾಕಿಸ್ತಾನದ ವಶವಾಗಿದ್ದು ಹೇಗೆ ಎಂಬ ಇತಿಹಾಸವನ್ನು ತುಸುವೇ ಕೆದಕಿದರೆ ಇವತ್ತಿನ ಜಾಗತಿಕ ರಾಜಕೀಯ ಹೇಗೆಲ್ಲ ಮಗ್ಗಲು ಬದಲಾಯಿಸಿದೆ ಎಂಬುದು ಅರ್ಥವಾಗಿಬಿಡುತ್ತದೆ. ಅಂದು ಭಾರತಕ್ಕೆ ಸ್ವಾತಂತ್ರ್ಯ ಮತ್ತು ದೇಶ ವಿಭಜನೆಗಳನ್ನು ಒಟ್ಟೊಟ್ಟಿಗೆ ಕೊಡಮಾಡುತ್ತಿದ್ದ ಪಾಶ್ಚಾತ್ಯ ಶಕ್ತಿಗೆ ಜಮ್ಮು-ಕಾಶ್ಮೀರವು ವಿವಾದಿತವಾಗಿ, ಒಂದು ಬಫರ್‌ ಜೋನ್‌ ಆಗಿ ಉಳಿಯುವುದು ಬೇಕಿತ್ತು. ಜಮ್ಮು-ಕಾಶ್ಮೀರದ ಗಡಿ ಅವತ್ತಿನ ಸೋವಿಯತ್‌ ರಷ್ಯಾಕ್ಕೆ ತೀರ ಸನಿಹದಲ್ಲಿತ್ತು.

ಹಾಗೆಂದೇ, ಜಮ್ಮು-ಕಾಶ್ಮೀರದ ಉಳಿದ ಭಾಗಗಳ ದೇಖರೇಖಿಯನ್ನು ಮಹಾರಾಜನಿಗೆ ಕೊಟ್ಟಿದ್ದರೂ, 1935ರಲ್ಲಿ ಗಿಲ್ಗಿಟ್‌ ಪ್ರದೇಶವನ್ನು ಬ್ರಿಟಿಷರು 60 ವರ್ಷಗಳ ಲೀಸ್‌ ಒಪ್ಪಂದದ ಮೇರೆಗೆ ತಮ್ಮಲ್ಲಿಯೇ ಇರಿಸಿಕೊಂಡಿದ್ದರು. ಕಮ್ಯುನಿಸ್ಟ್‌ ಸೋವಿಯತ್‌ ಒಕ್ಕೂಟದಿಂದ ರಕ್ಷಣೆಗಾಗಿ ಅಂತ ಅಲ್ಲಿ ಬ್ರಿಟಿಷ್‌ ಸೇನೆ ಬೀಡುಬಿಟ್ಟಿತ್ತು. ಪಾಕಿಸ್ತಾನದ ಆಕ್ರಮಣ ಶುರುವಾದಾಗ ಗಿಲ್ಗಿಟ್‌ -ಬಾಲ್ಟಿಸ್ತಾನದ ರಕ್ಷಣೆಗೆ ಇಬ್ಬರು ಬ್ರಿಟಿಷ್‌ ಸೇನಾಧಿಕಾರಿಗಳನ್ನು ಕಳುಹಿಸಲಾಗಿತ್ತು. ಮೇಜರ್‌ ಬ್ರೌನ್‌ ಎಂಬ ಬ್ರಿಟಿಷ್‌ ಅಧಿಕಾರಿ ಬಂಡೆದ್ದು, ಮಹಾರಾಜನ ಪ್ರತಿನಿಧಿಯಾಗಿದ್ದ ಘನ್ಸಾರಾ ಸಿಂಗ್‌ ಅವರನ್ನು ಬಂಧಿಸಿ, ಪಾಕ್‌ ಕಡೆಯಲ್ಲಿದ್ದ ತನ್ನ ಸಹಚರ ಬ್ರಿಟಿಷ್‌ ಅಧಿಕಾರಿಯನ್ನು ಆಹ್ವಾನಿಸಿ ಗಿಲ್ಗಿಟ್‌ ಬಾಲ್ಟಿಸ್ತಾನವನ್ನು ಆತನ ತೆಕ್ಕೆಗೆ ಒಪ್ಪಿಸಿಬಿಡುತ್ತಾನೆ. ಒಂದೇ ಒಂದು ಗುಂಡು ಹಾರಿಸದೇ ಗಿಲ್ಗಿಟ್‌-ಬಾಲ್ಟಿಸ್ತಾನವನ್ನು ಪಾಕಿಸ್ತಾನ ಆಕ್ರಮಿಸಿಕೊಂಡಿದ್ದು ಇಂಥದೊಂದು ಬ್ರಿಟಿಷ್‌ ದ್ರೋಹದಿಂದ.

ಜಗತ್ತಿಗೇ ಚೀನಾ ವೈರಸ್‌

ಸ್ವಾತಂತ್ರ್ಯಾನಂತರ ಭಾರತವು ಸೋವಿಯತ್‌ ಒಕ್ಕೂಟಕ್ಕೆ ಹೆಚ್ಚು ಹತ್ತಿರವಾಗಿದ್ದು, ಹಾಗೂ ಅಮೆರಿಕವು ಪಾಕಿಸ್ತಾನದ ನೆರವಿಗೆ ನಿಂತಿದ್ದು ತಿಳಿದಿರುವ ಕತೆ. ಆದರೆ ಇವತ್ತೇನಾಗಿದೆ? ಜಗತ್ತಿಗೆ, ವಿಶೇಷವಾಗಿ ಪಾಶ್ಚಾತ್ಯ ಶಕ್ತಿಗಳಿಗೆ ವೈರಸ್ಸಾಗಿ ಕಾಡುತ್ತಿರುವುದು ಅವತ್ತಿನ ಸೋವಿಯತ್‌ ವಾರಸುದಾರ ರಷ್ಯಾ ಅಲ್ಲ; ಬದಲಿಗೆ ಚೈನೀಸ್‌ ಕಮ್ಯುನಿಸ್ಟ್‌ ಪಾರ್ಟಿ! ರಷ್ಯಾವು ಕೆಲ ಅನಿವಾರ್ಯ ಕಾರಣಗಳಿಗೆ ಚೀನಾದ ಸ್ನೇಹಿತನೇ ಆಗಿದ್ದರೂ ಭಾರತದ ಜತೆಗಿನ ಸ್ನೇಹಕ್ಕೆ ಕುಂದು ಬಂದಿಲ್ಲ. ವುಹಾನ್‌ ವೈರಸ್ಸಿನ ಭೀಕರತೆಯ ನಂತರ ತಮ್ಮ ಪೂರೈಕೆ ಸರಪಳಿಯನ್ನು ಬದಲಿಸಲೇಬೇಕಿರುವ ಒತ್ತಡಕ್ಕೆ ಸಿಲುಕಿರುವ ರಾಷ್ಟ್ರಗಳಿಗೆಲ್ಲ ಸದ್ಯಕ್ಕೆ ಆ ಜಾಗವನ್ನು ಸ್ವಲ್ಪಮಟ್ಟಿಗಾದರೂ ತುಂಬುವ ದೇಶವಾಗಿ ಭಾರತ ಕಾಣುತ್ತಿದೆ.

ಹಾಗೆಂದೇ ಪಾಶ್ಚಾತ್ಯ ಮತ್ತು ಏಷ್ಯಾದ ಹಲವಾರು ಶಕ್ತಿಶಾಲಿ ರಾಷ್ಟ್ರಗಳು ಈಗ ಕಿಡಿ ಕಾಣಿಸಿಕೊಂಡಿರುವ ಹಿಮಾಲಯ ಸಂಘರ್ಷದಲ್ಲಿ ಬಹುಪಾಲು ಭಾರತದ ಬೆನ್ನಿಗೆ ನಿಂತಿವೆ. ಪರ್ವತದ ನೆತ್ತಿಯ ಮೇಲಿನ ಹೊಯ್ದಾಟದಲ್ಲಿ ಭಾರತಕ್ಕೆ ಬಲ ತುಂಬುವುದಕ್ಕೆ ಹಿಂಜರಿಕೆಯನ್ನೇನೂ ಇಟ್ಟುಕೊಳ್ಳದ ರಾಷ್ಟ್ರಗಳು ಅದಕ್ಕೆ ಪ್ರತಿಯಾಗಿ ಇತ್ತ ನೀಲಿ ನೀರ ಅಲೆಗಳ ಮೇಲಿನ ಸಮರದಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿ, ಆ ಮೂಲಕ ಚೀನಾವನ್ನು ತಹಬಂದಿಯಲ್ಲಿಡುವ ಆಟಕ್ಕೆ ಕಳೆ ಕಟ್ಟಲೆಂದು ಬಯಸುತ್ತಿವೆ.

- ಚೈತನ್ಯ ಹೆಗಡೆ