ನವದೆಹಲಿ(ಸೆ.14): ಇತ್ತ ಭಾರತದ ಲಡಾಖ್‌ ಪ್ರದೇಶದಲ್ಲಿ ಅತಿಕ್ರಮಣ ಮಾಡಲು ಯತ್ನಿಸಿ ವಿಫಲವಾಗಿರುವ ಚೀನಾ, ಅತ್ತ ಭಾರತದ ನೆರೆ ದೇಶ ಭೂತಾನ್‌ನಲ್ಲಿ ತನ್ನ ‘ಸಾಮ್ರಾಜ್ಯ’ ವಿಸ್ತರಣೆಗೆ ಸಂಚು ರೂಪಿಸಿದೆ.

ಭೂತಾನ್‌-ಚೀನಾ ನಡುವೆ ಗಡಿ ವಿಚಾರಕ್ಕೆ ಸಂಬಂಧಿಸಿದ 25ನೇ ಸುತ್ತಿನ ಮಾತುಕತೆ ಇನ್ನೇನು ನಡೆಯಬೇಕಿದೆ. ಅಷ್ಟರ ನಡುವೆಯೇ ಭೂತಾನ್‌ ಗಡಿಯಲ್ಲಿ ತನ್ನ ಅಧಿಪತ್ಯ ಸ್ಥಾಪನೆಗೆ ಚೀನಾ ಸೇನೆ ಮುಂದಾಗಿದೆ. ಅತಿಕ್ರಮಿತ ಭಾಗವು ಚೀನಾಗೆ ಸೇರಿದ್ದು ಎಂದು ಒಪ್ಪಿಕೊಳ್ಳಬೇಕು ಎಂದು ಮಾತುಕತೆ ವೇಳೆ ಭೂತಾನ್‌ ಮೇಲೆ ಒತ್ತಡ ಹೇರಲು ತಂತ್ರ ರೂಪಿಸಿದೆ ಎಂದು ಪತ್ರಿಕಾ ವರದಿಯೊಂದು ಹೇಳಿದೆ. ಇದನ್ನು ಅರಿತಿರುವ ಭಾರತವು ಚೀನಾದ ಸಂಚಿನ ಬಗ್ಗೆ ಎಚ್ಚರಿಕೆ ವಹಿಸುವಂತೆ ಭೂತಾನ್‌ಗೆ ಸಂದೇಶ ರವಾನಿಸಿದೆ ಎಂದು ಮೂಲಗಳು ಹೇಳಿವೆ.

ಭೂತಾನ್‌ ದೇಶವು ಭಾರತದ ಸಿಲಿಗುರಿ ಕಾರಿಡಾರ್‌ಗೆ ಹೊಂದಿಕೊಂಡಿದೆ. ಒಂದು ವೇಳೆ ತನ್ನ ಗಡಿ ವಿಚಾರದಲ್ಲಿ ರಾಜಿ ಆದರೆ ಭಾರತದ ಗಡಿ ಭದ್ರತೆಗೆ ಅಪಾಯಕಾರಿ ಆಗಬಲ್ಲದಾಗಿದೆ.

2017ರಲ್ಲಿ ಡೋಕ್ಲಾಂ ಗಡಿ ವಿವಾದ ತೋರಿದಾಗ ಭಾರತವು ಭೂತಾನ್‌ ಪರ ನಿಂತಿತ್ತು. 73 ದಿನ ಬಳಿಕ ಚೀನಾ ಸೇನೆ ತಣ್ಣಗಾಗಿತ್ತಾದರೂ, ಮತ್ತೆ ಅದು ತನ್ನ ಉದ್ಧಟತನ ಪ್ರದರ್ಶಿಸುತ್ತಲೇ ಇದೆ. ಉತ್ತರ ಡೋಕ್ಲಾಂನಲ್ಲಿ ಚೀನಾ ಸರ್ವೇಕ್ಷಣಾ ಕ್ಯಾಮರಾಗಳನ್ನು ಇರಿಸಿದೆ ಎಂದು ಭಾರತದ ವಿದೇಶಾಂಗ ಹಾಗೂ ರಕ್ಷಣಾ ಅಧಿಕಾರಿಗಳು ಹೇಳಿದ್ದಾರೆ.

ಪಶ್ಚಿಮ ಭೂತಾನ್‌ನ 318 ಚದರ ಕಿ.ಮೀ. ಹಾಗೂ ಮಧ್ಯ ಭೂತಾನ್‌ನ 495 ಚದರ ಕಿ.ಮೀ. ಭಾಗವನ್ನು ತನ್ನದು ಎಂದು ಚೀನಾ ಹೇಳಿಕೊಳ್ಳುತ್ತಿದೆ. ಈ ವಲಯದಲ್ಲಿ ಚೀನಾ ರಸ್ತೆ ನಿರ್ಮಾಣ ಮಾಡುತ್ತಿದೆ ಹಾಗೂ ಇತರ ಸೇನಾ ಮೂಲಸೌಕರ್ಯಗಳನ್ನು ವಿಸ್ತರಿಸಿಕೊಳ್ಳುತ್ತಲೇ ಇದೆ.

ಪಶ್ಚಿಮ ಭೂತಾನ್‌ನ 5 ಪ್ರದೇಶಗಳಲ್ಲಿ ಚೀನಾ ಅತಿಕ್ರಮಿಸಿಕೊಂಡು ತನ್ನದೇ ಆದ ಗಡಿ ನಿರ್ಮಿಸಿದೆ. ಸುಮಾರು 40 ಕಿ.ಮೀ.ನಷ್ಟುಭೂತಾನ್‌ ಒಳಗೆ ಬಂದು ಚೀನಾ ಈ ಗಡಿ ನಿರ್ಮಾಣ ಮಾಡಿದೆ. ಇನ್ನೂ ಇಂಥದ್ದೇ ಅನೇಕ ಅತಿಕ್ರಮಣ ಮಾಡಿಕೊಂಡಿದೆ. ಈಗ ಇದೇ ನಿಜವಾದ ಗಡಿ ಎಂದು ಒಪ್ಪಿಕೊಳ್ಳಬೇಕು ಎಂದು ಭೂತಾನ್‌ ಹಾಗೂ ಭಾರತದ ಮೇಲೆ ಒತ್ತಡ ಹೇರಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.