ಪಾನ್ ಕಾರ್ಡ್ 2.0 ಟಾರ್ಗೆಟ್ ಮಾಡಿದ ಸೈಬರ್ ವಂಚಕರು, ಮೋಸ ಹೋಗುವ ಮುನ್ನ ಇರಲಿ ಎಚ್ಚರ!

ಕೇಂದ್ರ ಸರ್ಕಾರ ಇದೀಗ ಪಾನ್ ಕಾರ್ಡ್ 2.0 ಯೋಜನೆಗೆ ಅನುಮೋದನೆ ನೀಡಿದೆ. ಕ್ಯೂಆರ್ ಕೋಡ್ ಸೇರಿದಂತೆ ಹೊಸ ತಂತ್ರಜ್ಞಾನದ ಪಾನ್ ಕಾರ್ಡ್ ಜಾರಿಗೆ ಬರುತ್ತಿದೆ. ಇದೀಗ ಸೈಬರ್ ವಂಚಕರು ಇದೇ 2.0 ಪಾನ್ ಕಾರ್ಡ್ ಮೇಲೆ ದಾಳಿ ಆರಂಭಿಸಿದ್ದಾರೆ.  ಹೊಸ ಪಾನ್ ಕಾರ್ಡ್ ಮಾಡಬೇಕೆಂಬ ಧಾವಂತದಲ್ಲಿ ಸೈಬರ್ ದಾಳಿಗೆ ತುತ್ತಾಗಬೇಡಿ.

Beware cyber criminals may target you by saying that issuing new pan card 2 ckm

ನವದಹಲಿ(ನ.26) ಕೇಂದ್ರ ಸರ್ಕಾರ ಹೊಸ ಪಾನ್ ಕಾರ್ಡ್ 2.0 ಯೋಜನೆಗೆ ಅನುಮೋದನೆ ನೀಡಿದೆ. ಹೆಚ್ಚುವರಿ ಸುರಕ್ಷತೆ, ಕ್ಯೂಆರ್ ಕೋಡ್ ಸೇರಿದಂತೆ ಹೊಸ ತಂತ್ರಜ್ಞಾನವನ್ನು ಪಾನ್ ಕಾರ್ಡ್‌ನಲ್ಲಿ ಬಳಸಲಾಗುತ್ತಿದೆ. ಹೊಸ ಪಾನ್ ಕಾರ್ಡ್ ಮತ್ತಷ್ಟು ಡಿಜಿಟಲೀಕರಣ ಮಾಡಲಾಗಿದೆ. ಸುಲಭ ಹಾಗೂ ವೇಗವಾಗಿ ತೆರಿಗೆದಾರರು ತಮ್ಮ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತದೆ. ಆದರೆ ಪಾನ್ ಕಾರ್ಡ್ 2.0 ಯೋಜನೆಗೆ ಅನುಮೋದನೆ ನೀಡಿದ ಬೆನ್ನಲ್ಲೇ ಸೈಬರ್ ವಂಚಕರು ಹೊಸ ಯೋಜನೆ ಟಾರ್ಗೆಟ್ ಮಾಡಿದ್ದಾರೆ. ಹೊಸ ಪಾನ್ ಕಾರ್ಡ್ ಧಾವಂತದಲ್ಲಿ ಮೋಸ ಹೋಗಬೇಡಿ.ಕೇಂದ್ರ ಸರ್ಕಾರದ ಪಾನ್ 2.0 ಕಾರ್ಡ್ ಮಾಡಿಕೊಡುತ್ತೇವೆ, ಅರ್ಜಿ ಸಲ್ಲಿಕೆ ಮಾಡಿ ಎಂದು ಸೈಬರ್ ವಂಚಕರು ತಮ್ಮ ಮೋಸದಾಟ ಆರಂಭಿಸಿರುವುದು ವರದಿಯಾಗಿದೆ.

ಈ ಕುರಿತು ಸೈಬರ್ ಸೆಕ್ಯೂರಿಟಿ, ಫೊರೆನ್ಸಿಕ್ ಹಾಗೂ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಗ್ಲೋಬಲ್ ಎಕ್ಸಪರ್ಟೈಸ್ ಉದಯ್ ಶಂಕರ್ ಪುರಾಣಿಕ್ ಮಹತ್ವದ ಸೂಚನೆ ನೀಡಿದ್ದಾರೆ.  ಕೇಂದ್ರ ಸರ್ಕಾರ PAN 2.0 ಯೋಜನೆಯನ್ನು ಘೋಷಿಸಿದೆ. PAN ಕಾರ್ಡ್‌ ಮತ್ತು ಕಾರ್ಡ್‌ದಾರರ ಮಾಹಿತಿಯ ಸುರಕ್ಷತೆಯನ್ನು ಹೆಚ್ಚಿಸಲು ಹಲವಾರು ಸೈಬರ್‌ ಸುರಕ್ಷತೆ ಮತ್ತು ಅಧುನಿಕ ತಂತ್ರಜ್ಞಾನಗಳನ್ನು ಈ ಯೋಜನೆಯಲ್ಲಿ ಬಳಸಲಾಗುತ್ತಿದೆ.ನಿಮ್ಮ PAN ಕಾರ್ಡ್‌ ಕೆಲಸ ಮಾಡುವುದಿಲ್ಲ, ಹೊಸ  PAN 2.0 ಕಾರ್ಡ್‌ಗೆ ಅರ್ಜಿ ಸಲ್ಲಿಸಿ, ಹಣ ಕೊಡಿ, ನಾವು ಹೊಸ  PAN 2.0 ಕಾರ್ಡ್‌ ಕೊಡುತ್ತೇವೆ ಎಂದು ಸೈಬರ್‌ ಅಪರಾಧಿಗಳು ನಿಮಗೆ ಮೋಸ ಮಾಡಬಹುದು. ಆದಾಯ ತೆರಿಗೆ ಅಧಿಕಾರಿ ಅಥವಾ ಬೇರೆ ಸರ್ಕಾರಿ ಇಲಾಖೆಗಳ ಹಿರಿಯ ಅಧಿಕಾರಿ ಎಂದು ಹೇಳಿಕೊಂಡು ಸೈಬರ್‌ ಅಪರಾಧಿಗಳು ಕರೆ ಮಾಡಬಹುದು, ಇ-ಮೇಲ್‌ ಅಥವಾ ಎಸ್‌ಎಮ್‌ಎಸ್‌ ಕಳುಹಿಸಬಹುದು. ಸೈಬರ್ ವಂಚಕರಿಂದ ಎಚ್ಚರವಾಗಿರುವಂತೆ ಸೂಚಿಸಿದ್ದಾರೆ. 

ಪಾನ್ 2.0ಗೆ ಕೇಂದ್ರ ಸರ್ಕಾರ ಒಪ್ಪಿಗೆ, ಹಳೇ ಕಾರ್ಡ್ ಇರುತ್ತಾ? ಹೊಸದಾಗಿ ಮಾಡಿಸಬೇಕಾ?

ಸೈಬರ್‌ ಅಪರಾಧಿಗಳನ್ನು ನಂಬಿ ಮೋಸ ಹೋಗಬೇಡಿ. ಇಂತಹ ಘಟನೆ ನಡೆದರೆ ತಕ್ಷಣ 1930ಗೆ ಕರೆ ಮಾಡಿ ದೂರು ನೀಡಿ ಅಥವಾ https://cybercrime.gov.in/ ನಲ್ಲಿ ದೂರು ದಾಖಲಿಸಿ. ನೀವು PAN ಕಾರ್ಡ್‌ ಹೊಂದಿದ್ದರೆ,  PAN 2.0 ಕಾರ್ಡಿಗಾಗಿ ಹೊಸದಾಗಿ ಅರ್ಜಿ ಸಲ್ಲಿಸಬೇಕಾಗಿಲ್ಲ ಮತ್ತು ಯಾವುದೇ ಶುಲ್ಕ ಕಟ್ಟಬೇಕಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟ ಪಡಿಸಿದೆ ಎಂದು ಉದಯ್ ಶಂಕರ್ ಪುರಾಣಿಕ್ ಹೇಳಿದ್ದಾರೆ.

ಹೊಸ ಪಾನ್ ಕಾರ್ಡ್ 2.0ಗೆ ಸದ್ಯ ಪಾನ್ ಕಾರ್ಡ್ ಇರುವವರು ಅರ್ಜಿ ಸಲ್ಲಿಸಬೇಕಿಲ್ಲ,ಏನೂ ಮಾಡಬೇಕಿಲ್ಲ. ಇದಕ್ಕಾಗಿ ಯಾರ ಬಳಿಯೂ ಹಣ ನೀಡಬೇಕಿಲ್ಲ. ಹಳೆ ಪಾನ್ ಕಾರ್ಡ್‌ದಾರರಿಗೆ ಕೇಂದ್ರ ಸರ್ಕಾರ ಉಚಿತವಾಗಿ ಹೊಸ ಪಾನ್ 2.0 ಕಾರ್ಡ್ ನೀಡಲಿದೆ. ಪಾನ್ ಕಾರ್ಡ್‌ನಲ್ಲಿರುವ ವಿಳಾಸಕ್ಕೆ ಹೊಸ ಕಾರ್ಡ್ ತಲುಪಲಲಿದೆ. ಯೋಜನೆಗೆ ಅನುಮೋದನೆ ಸಿಕ್ಕಿದೆ. ಹಾಗಂತ ಹಳೇ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳುವುದಿಲ್ಲ. ಈ ಕುರಿತು ಯಾರು ಆತಂಕಪಡುವು ಅಗತ್ಯವಿಲ್ಲ.
 

Latest Videos
Follow Us:
Download App:
  • android
  • ios