ತಬ್ಬಲಿ ಹುಲಿಮರಿಗಳಿಗೆ ತಾಯಿ ಪ್ರೀತಿ ತೋರುವ ಶ್ವಾನ: ವಿಡಿಯೋ ವೈರಲ್
- ಮೂರು ಮರಿಗಳನ್ನು ತೊರೆದು ಹೋದ ತಾಯಿ ಹುಲಿ
- ತನ್ನ ಮಕ್ಕಳಂತೆ ಸಲಹುವ ಶ್ವಾನ
- ಶ್ವಾನ ಪ್ರೀತಿಯ ಮುದ್ದಾದ ವಿಡಿಯೋ ವೈರಲ್
ಪ್ರೀತಿ ಕರುಣೆ ಕಾಳಜಿ ತೋರಿಸುವುದಕ್ಕೆ ಯಾವುದೇ ಮಿತಿಗಳಿರುವುದಿಲ್ಲ. ಪ್ರೀತಿ (love) ಕಾಳಜಿಯ ಭಾವನೆ ಕೇವಲ ಮನುಷ್ಯರಲ್ಲಿ ಮಾತ್ರ ಇಲ್ಲ ಪ್ರಾಣಿಗಳಿಗೂ ಭಾವನೆಗಳಿದೆ. ಅದೂ ಹಲವು ಬಾರಿ ಸಾಬೀತಾಗಿದೆ. ತಾಯಿ ಇಲ್ಲದ ತಬ್ಬಲಿ ಮಕ್ಕಳಿಗೆ ಶ್ವಾನವೊಂದು ತೋರಿಸುತ್ತಿರುವ ಪ್ರೀತಿ ವೈರಲ್ ಆಗಿದೆ. ತಾಯಿಯಿಂದ ದೂರದ ಮೂರು ಹುಲಿಮರಿಗಳನ್ನು ಶ್ವಾನವೊಂದು ತನ್ನ ಮಕ್ಕಳಂತೆ ಸಲಹುತ್ತಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಲಾಬ್ರಡಾರ್ ತಳಿಯ ಶ್ವಾನವೊಂದು ಮೂರು ಹುಲಿ ಮರಿಗಳನ್ನು ತನ್ನ ಮಕ್ಕಳಂತೆ ಮುದ್ದಾಡುತ್ತಿದೆ. ಈ ತಾಯಿ ಶ್ವಾನ (Dog) ಹಾಗೂ ಪುಟ್ಟ ಹುಲಿ ಮರಿಗಳ (Tiger cube) ನಡುವಿನ ಪ್ರೀತಿಯ ಬಂಧಕ್ಕೆ ನೆಟ್ಟಿಗರು ಕೂಡ ಭಾವುಕರಾಗಿ ಶಹಭಾಷ್ ಅಂದಿದ್ದಾರೆ. ಇದು ಚೀನಾದ ವಿಡಿಯೋ ಆಗಿದ್ದು, ಹುಲಿ ಮರಿಗಳು ನಾಯಿಯ ಸುತ್ತ ಸುತ್ತ ಸುತ್ತುತ್ತ ಆಟವಾಡುತ್ತಿವೆ. ಈ ವಿಡಿಯೋದ ಮೂಲದ ಪ್ರಕಾರ ಈ ಮರಿಗಳಿಗೆ ಜನ್ಮ ನೀಡಿದ ತಾಯಿ ಹುಲಿ ನಂತರ ಇವುಗಳಿಗೆ ಹಾಲುಡಿಸಲು ನಿರಾಕರಿಸಿತ್ತು ಎಂದು ತಿಳಿದು ಬಂದಿದೆ.
ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ A Piece of Nature ಎಂಬ ಖಾತೆಯಿಂದ ಭಾನುವಾರ ಪೋಸ್ಟ್ ಮಾಡಲಾಗಿದೆ. 16,000 ಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಈ ಮೂಲ ವಿಡಿಯೋವನ್ನು ಏಪ್ರಿಲ್ 27 ರಂದೇ ಪೋಸ್ಟ್ ಮಾಡಲಾಗಿತ್ತು. ಈ ವಿಡಿಯೋ ನೋಡಿದ ಹಲವು ಶ್ವಾನ ಪ್ರಿಯರು ಶ್ವಾನದ ಈ ತಾಯಿ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಲ್ಯಾಬ್ ಶ್ವಾನಗಳನ್ನು ಹೊಂದಿರುವುದು ನಿಜವಾದ ಆಶೀರ್ವಾದ ಎಂದು ಓರ್ವ ಕಾಮೆಂಟ್ ಮಾಡಿದ್ದಾರೆ. ಬಹುಶಃ ಈ ಮರಿಗಳು ತಮ್ಮ ಹೊಸ ತಾಯಿಯನ್ನು ಇಷ್ಟಪಡಬಹುದು ಅವುಗಳನ್ನು ಬೆಳೆಯಲು ಬಿಡೋಣ. ಹುಲಿ ಹಾಗೂ ಶ್ವಾನ ಬೇರೆಯದೇ ಪ್ರಬೇಧಗಳು ಆದರೆ ಪ್ರೀತಿ ಮಾತ್ರ ಒಂದೇ ಎಂದು ಕಾಮೆಂಟ್ ಮಾಡಿದ್ದಾರೆ.
ಆಲೂಗಡ್ಡೆ ಬಿತ್ತನೆಗೆ ಸಹಾಯ ಮಾಡುವ ಶ್ವಾನ : ವಿಡಿಯೋ ವೈರಲ್
ಹೆಣ್ಣು ಹುಲಿ ತನ್ನ ಮರಿಗಳನ್ನು ತ್ಯಜಿಸುವುದು ಕೇಳರಿಯದ ಸಂಗತಿಯೇನಲ್ಲ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಎಲ್ಲಾ ಹುಲಿ ಸಂರಕ್ಷಿತ ಪ್ರದೇಶಗಳಿಗೆ ಅದರ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ಕಿರುಪುಸ್ತಕದಲ್ಲಿ ಪಟ್ಟಿ ಮಾಡಿರುವಂತೆ ಇದಕ್ಕೆ ಹಲವು ಕಾರಣಗಳಿವೆಯಂತೆ. ತಾಯಿ ಹುಲಿಯ ಸಾವಿನ ಹೊರತಾಗಿಯೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (National Tiger Conservation Authority) ಮಾರ್ಗಸೂಚಿಗಳ ಪ್ರಕಾರ, ಮರಿಗಳು ದುರ್ಬಲವಾಗಿದ್ದರೆ, ಅಸಮರ್ಥವಾಗಿದ್ದರೆ, ಗಾಯಗೊಂಡರೆ ಅಥವಾ ಅನಾರೋಗ್ಯದಿಂದ ಕೂಡಿದ್ದರೆ ಕೂಡ ತಾಯಿ ಹುಲಿಗಳು ಅವುಗಳನ್ನು ಬಿಟ್ಟು ಹೊರಟು ಹೋಗುವುದಂತೆ. ಕೆಲವು ಹೆಣ್ಣು ಹುಲಿಗಳು ಗಾಯದಿಂದಾಗಿ ಮರಿಗಳಿಗೆ ಆಹಾರ ನೀಡಲು ತಮ್ಮ ಅಸಮರ್ಥತೆಯಿಂದಾಗಿ ತಮ್ಮ ಮರಿಗಳನ್ನು ಬಿಡುತ್ತವೆಯಂತೆ.
ತನ್ನ ಮರಿಗಳೊಂದಿಗೆ ಬೆಕ್ಕಿಗೂ ಹಾಲುಣಿಸುವ ತಾಯಿ ಶ್ವಾನ
ಒಟ್ಟಿನಲ್ಲಿ ತಾಯಿ ಪ್ರೀತಿಗೆ ಮಿತಿ ಇರುವುದಿಲ್ಲ. ಆದಾಗ್ಯೂ ತನ್ನ ಮಕ್ಕಳಂತೆ ಬೇರೆಯವರ ಮಕ್ಕಳನ್ನು ಅಷ್ಟೇ ಚೆನ್ನಾಗಿ ನೋಡಿಕೊಳ್ಳುವವರು ಸಿಗುವುದು ವಿರಳ. ಆದರೆ ಈ ಶ್ವಾನ ತನ್ನದು ಮತ್ತೊಬ್ಬರದು ಎಂಬ ಬೇಧವಿಲ್ಲದೇ ಈ ಮರಿಗಳನ್ನು ನೋಡಿಕೊಳ್ಳುತ್ತಿದೆ. ತಾನು ತನ್ನದು ಎಂದು ಕಿತ್ತಾಡುವ ಮನುಷ್ಯರಿಗೆ ನಮ್ಮನ್ನು ನೋಡಿ ಬುದ್ಧಿ ಕಲಿಯಿರಿ ಎಂದು ಹೇಳುವಂತಿದೆ ಈ ವಿಡಿಯೋ.