ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಉಬರ್ ಕ್ಯಾಬ್ ಚಾಲಕನಾಗಿ ಕೆಲಸ ಮಾಡುವ ಯುವಕನೋರ್ವ, ತನ್ನ ಒಂದು ದಿನದ ಗಳಿಕೆಯ ವಿವರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಸುಮಾರು 10 ಗಂಟೆಗಳ ಕಾಲ ಕೆಲಸ ಮಾಡಿ ಆತ ಗಳಿಸಿದ ಹಣದ ಮೊತ್ತವನ್ನು ತಿಳಿದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ತಲೆ ಇದ್ರೆ ಎಲೆ ಮಾರಿ ಬದುಕಬಹುದು ಎಂಬ ಗಾದೆ ಮಾತಿದೆ. ಬುದ್ಧಿವಂತಿಕೆ ಎಲ್ಲಿಯಾದರೂ ದುಡಿಮೆ ಮಾಡಿ ಬದುಕಬಹುದು. ದುಡಿಯುವ ಮನಸ್ಸಿದರೆ ಬದುಕು ಸಾವಿರ ಮಾರ್ಗಗಳನ್ನು ತೋರಿಸುತ್ತದೆ. ಅದೇ ರೀತಿ ಈಗ ಯುವಕನೋರ್ವ ಕ್ಯಾಬ್ ಚಾಲಕನಾಗಿ ಕೆಲಸ ಮಾಡಿದ್ದು, ಕೇವಲ ಒಂದೇ ದಿನದಲ್ಲಿ ತಾನು ಎಷ್ಟು ಹಣ ಗಳಿಸಿದ್ದೇನೆ ಎಂಬ ವಿಚಾರವನ್ನು ಆತ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಆತನ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. tusharbareja ಎಂಬುವವರು ಈ ವೀಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಉಬರ್ ಕ್ಯಾಬ್ ಓಡಿಸಿ ಸಂಪಾದಿಸಿದ ಹಣದ ಬಗ್ಗೆ ಹೇಳಿಕೊಂಡಿದ್ದಾರೆ.

ಮೆಲ್ಬೋರ್ನ್‌ನಲ್ಲಿ 10 ಗಂಟೆಗಳ UberX ಚಾಲನೆ, ಇದು ನಿಜವಾದ ಅನುಭವ ಹಾಗೂ ನಿಜವಾದ ಆದಾಯ ಇಡೀ ದಿನ ಡ್ರೈವಿಂಗ್ ಮಾಡುವುದು ಹೇಗಿರುತ್ತದೆ ಎಂಬುದನ್ನು ಇಲ್ಲಿ ತೋರಿಸುತ್ತಿದ್ದೇನೆ ಇದು ಯೋಗ್ಯವಾಗಿದೆಯೇ ಅಥವಾ ಇಲ್ಲವೇ? ಕೊನೆಯವರೆಗೂ ವೀಕ್ಷಿಸಿ ಎಂದು ಬರೆದು ಅವರು ವಿಡಿಯೋವನ್ನು ಪೋಸ್ಟ್ ಮಾಡಿದ್ದು, ವೀಡಿಯೋದಲ್ಲಿ ಅವರಿಗೆ ದಿನವಿಡೀ ಸಿಕ್ಕ ಬಾಡಿಗೆಯ ವಿವರವಿದೆ. ಅವರು ನೀಡಿದ ಮಾಹಿತಿಯ ಪ್ರಕಾರ ಅವರು ತಮ್ಮ ದಿನವನ್ನು ಬೆಳಗ್ಗೆ 4 ಗಂಟೆಗೆ ಪ್ರಾರಂಭಿಸಿದ್ದಾರೆ. ಆ ಸಮಯದಲ್ಲಿ ತಮ್ಮ ಸ್ಥಳೀಯ ಪ್ರದೇಶದಲ್ಲಿ ಪ್ರಯಾಣ ಮಾಡುವುದು ಕಷ್ಟವಾಗಿದ್ದರಿಂದ ಅವರು ಮೊದಲು ನಗರದ ಕಡೆಗೆ ಕಾರು ಚಲಾಯಿಸಿದರು.

ನಗರದಿಂದ ಬರೇಜಾ ವಿಮಾನ ನಿಲ್ದಾಣಕ್ಕೆ ಕಾರು ಚಲಾಯಿಸಿದರು. ಅಲ್ಲಿ ಅವರು 47 ಆಸ್ಟ್ರೇಲಿಯಾ ಡಾಲರ್ ಹಣ (ಸುಮಾರು 2,600 ರೂ.) ಗಳಿಸಿದರು. ಬೆಳಗ್ಗೆ 7 ಗಂಟೆಯ ಹೊತ್ತಿಗೆ, ಅವರ ಒಟ್ಟು ಗಳಿಕೆ 98 ಆಸ್ಟ್ರೇಲಿಯಾ ಡಾಲರ್ ಆಗಿತ್ತು(ಸುಮಾರು 5,400 ರೂ.). ನಂತರ ತಮ್ಮ ಕಾರಿಗೆ ಇಂಧನ ತುಂಬಿಸಿದ ನಂತರ, ಅವರು ರಸ್ತೆಗಿಳಿಯುವ ಮೊದಲು ಸ್ಯಾಂಡ್‌ವಿಚ್ ಸೇರಿದಂತೆ ಉಪಾಹಾರ ಸೇವಿಸಲು ಸ್ವಲ್ಪ ವಿರಾಮ ತೆಗೆದುಕೊಂಡಿದ್ದಾರೆ.

ಇದಾದ ನಂತರ ಅವರಿಗೆ 25 ಆಸ್ಟ್ರೇಲಿಯಾ ಡಾಲರ್ (ಸುಮಾರು 1,400 ರೂ.) ಮೌಲ್ಯದ ಮತ್ತೊಂದು ಬಾಡಿಗೆ(ಟ್ರಿಪ್) ಸಿಕ್ಕಿದೆ. ಹೀಗಾಗಿ ಅವರು ದಿನವಿಡೀ ಕಾರು ಚಲಾಯಿಸುವುದನ್ನು ಮುಂದುವರೆಸಿದ್ದು, ಸುಮಾರು 10 ಗಂಟೆಗಳ ಕೆಲಸದ ನಂತರ ಬರೇಜಾ ಅವರು ದಿನಸಿ ಶಾಪಿಂಗ್‌ಗೆ ಹೋಗಿ ತನ್ನ ಅಂದಿನ ಕೆಲಸದ ಪಾಳಿಯನ್ನು ಮುಗಿಸಿದ್ದು, ಆ ಒಂದು ದಿನದಲ್ಲಿ ಅವರ ಒಟ್ಟು ಗಳಿಕೆ 330 ಆಸ್ಟ್ರೇಲಿಯಾ ಡಾಲರ್ ಅಂದರೆ ಸುಮಾರು 18,200 ರೂ. ರೂಪಾಯಿ ಎಂದು ಅವರು ವೀಡಿಯೋದಲ್ಲಿ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: ತನ್ನ ನಾಯಿಗೆ ವಾಕ್ ಮಾಡಿಸಲು ಇಡೀ ಸ್ಟೇಡಿಯಂನ್ನೇ ಖಾಲಿ ಮಾಡಿಸಿದ IASಅಧಿಕಾರಿ ಈಗ ಪಾಲಿಕೆ ಕಮೀಷನರ್

ಮೆಲ್ಬೋರ್ನ್‌ನಲ್ಲಿ 12 ಗಂಟೆಗಳ ಕಾಲ ಉಬರ್‌ಎಕ್ಸ್ ಚಾಲನೆ. ನಿಜವಾದ ಅನುಭವ. ನಿಜವಾದ ಆದಾಯ. ಚಕ್ರದ ಹಿಂದಿರುವ ಪೂರ್ಣ ದಿನವು ನಿಜವಾಗಿ ಹೇಗೆ ಕಾಣುತ್ತದೆ ಎಂಬುದನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ. ಬರೇಜಾ ತಮಗೆ ತಾವೇ ಹಾಕಿಕೊಂಡಿದ್ದ 12 ಗಂಟೆಗಳ ಸವಾಲನ್ನು ಪೂರ್ಣಗೊಳಿಸಲು ಯೋಚಿಸಿದ್ದರೂ ಕೂಡ ಅವರು ಸಾಕಷ್ಟು ದಣಿದಿದ್ದರಿಂದ ಕೇವಲ 10 ಗಂಟೆಗಳಿಗೆ ಆ ದಿನದ ಕೆಲಸವನ್ನು ಮುಗಿಸಿದ್ದಾಗಿ ಹೇಳಿಕೊಂಡಿದ್ದಾರೆ. ಕಂಟೆಂಟ್ ಕ್ರಿಯೇಟರ್‌ ಕೂಡ ಆಗಿರುವ ತುಷಾರ ಬರೇಜಾ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ನೆಲೆಸಿದ್ದು, ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಆಗಾಗ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಹಾಗೆಯೇ ಇವರು ಹಂಚಿಕೊಂಡ ಈ ವೀಡಿಯೋ ಈಗ ಭಾರಿ ವೈರಲ್ ಆಗಿದ್ದು, ನೋಡುಗರು ಹಲವು ಕಾಮೆಂಟ್ ಮಾಡಿದ್ದಾರೆ. ಅನೇಕರು ನಾವು ಕೂಡ ಆಸ್ಟ್ರೇಲಿಯಾಗೆ ಬರಬೇಕು ಅಂತಿದ್ದೀವಿ ಎಂದು ಕಾಮೆಂಟ್ ಮಾಡಿದ್ದಾರೆ. ಭಾರತದಲ್ಲಿ ಒಂದು ತಿಂಗಳ ಸಂಬಳವೂ ಇಷ್ಟು ಸಿಗುವುದಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.

ಇದನ್ನೂ ಓದಿ: ಕ್ಯಾನ್ಸರ್ ಪೀಡಿತ ಬಾಲಕಿಯನ್ನು ಬೆಂಬಲಿಸಿ ತಲೆ ಬೋಳಿಸಿಕೊಂಡ ತರಗತಿಯ ಎಲ್ಲಾ ಮಕ್ಕಳು, ಟೀಚರ್

View post on Instagram