ಕ್ಯಾನ್ಸರ್ ಚಿಕಿತ್ಸೆಗಾಗಿ ಕೂದಲು ಕಳೆದುಕೊಂಡು ಖಿನ್ನತೆಗೊಳಗಾದ ಬಾಲಕಿಗೆ, ಜೋಧ್‌ಪುರದ ಶಾಲೆಯೊಂದರ ಸಹಪಾಠಿಗಳು ಮತ್ತು ಶಿಕ್ಷಕರು ಬೆಂಬಲ ಸೂಚಿಸಿದ್ದಾರೆ. ಅವಳ ನೋವಿನಲ್ಲಿ ಭಾಗಿಯಾಗಲು, ಅವರೆಲ್ಲರೂ ತಮ್ಮ ತಲೆಗೂದಲನ್ನು ಬೋಳಿಸಿಕೊಂಡು ಮಾನವೀಯತೆ ಮೆರೆದಿದ್ದು, ಈ ಭಾವುಕ ಘಟನೆ ವೈರಲ್ ಆಗಿದೆ.
ಜೋಧ್‌ಪುರ: ರಾಜಸ್ಥಾನದ ಜೋಧ್‌ಪುರದ ಶಾಲೆಯೊಂದರಲ್ಲಿ ನಡೆದ ಭಾವುಕ ಹಾಗೂ ಮಾನವೀಯ ಘಟನೆಯೊಂದು ಈಗ ಎಲ್ಲರ ಗಮನ ಸೆಳೆಯುತ್ತಿದ್ದು, ಇಂಟರ್‌ನೆಟ್‌ನಲ್ಲಿ ಭಾರಿ ವೈರಲ್ ಆಗ್ತಿದೆ. ಕ್ಯಾನ್ಸರ್ ಎಂಬ ಮಹಾಮಾರಿ ಒಮ್ಮೆ ವಕ್ಕರಿಸಿದರೆ ಕಿಮೋಥೆರಪಿ ಕಡ್ಡಾಯ. ಈ ಕಿಮೋಥೆರಪಿ ಅತ್ಯಂತ ನೋವಿನಿಂದ ಕೂಡಿದ ಚಿಕಿತ್ಸೆ ಈ ಸಮಯದಲ್ಲಿ ಕ್ಸಾನ್ಸರ್ ಪೀಡಿತ ವ್ಯಕ್ತಿಯ ಕೂದಲು ಸಂಪೂರ್ಣವಾಗಿ ಉದುರುತ್ತದೆ. ದೇಹದ ಸ್ಥಿತಿ ಯಾತನಾಮಯವಾಗಿರುತ್ತದೆ. ವ್ಯಕ್ತಿ ಖಿನ್ನತೆಗೆ ಜಾರುತ್ತಾನೆ. ಈ ಸಮಯದಲ್ಲಿ ಅವರ ಜೊತೆಗಿರುವವರು ಅವರನ್ನು ಹೇಗೆ ನೋಡುತ್ತಾರೆ ಎಂಬುದರ ಮೇಲೆ ಅವರ ಮನಸ್ಥಿತಿ ನಿರ್ಧಾರವಾಗಿರುತ್ತದೆ. ಹೀಗೆಯೇ ಇಲ್ಲೊಂದು ಕಡೆ ಶಾಲೆಗೆ ಹೋಗುವ ಪುಟ್ಟ ಬಾಲಕಿಗೆ ಕ್ಯಾನ್ಸರ್ ಎಂಬ ಮಾರಿ ವಕ್ಕರಿಸಿಕೊಂಡಿದೆ. ಆಕೆ ಸಂಪೂರ್ಣವಾಗಿ ಗುಣಮುಖವಾಗುವುದಕ್ಕೆ ಕಿಮೋಥೆರಪಿಗೆ ಒಳಗಾಗಬೇಕಿತ್ತು. ಈ ಕಿಮೋಥೆರಪಿಗೆ ಒಳಗಾದ ನಂತರ ಆ ಪುಟ್ಟ ಬಾಲಕಿಯ ಕೂದಲೆಲ್ಲಾ ಉದುರಿ ಆಕೆ ಖಿನ್ನತೆಗೆ ಜಾರಿದ್ದಳು ಶಾಲೆಗೆ ಹೋಗುವುದಕ್ಕೂ ಹಿಂಜರಿದಳು. ಆದರೆ ಆಕೆಯ ಈ ನೋವಿನ ಪಯಣದಲ್ಲಿ ಜೊತೆಯಾಗುವುದಕ್ಕೆ ಆಕೆಯ ತರಗತಿಯ ಮಕ್ಕಳ ಜೊತೆಗೆ ಆಕೆಯ ಶಿಕ್ಷಕರು ಕೂಡ ರೆಡಿಯಾಗಿದ್ದು, ಆಕೆಗಾಗಿ ಎಲ್ಲರೂ ತಮ್ಮ ತಲೆಕೂದಲನ್ನು ಬೋಳಿಸಿಕೊಂಡಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದರ ಜೊತೆಗೆ ಆ ಬಾಲಕಿಯ ತರಗತಿಯ ಮಕ್ಕಳ ಕರುಣೆಗೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿರುವ ಮಾಹಿತಿ ಪ್ರಕಾರ ಇದು ಜೋಧ್‌ಪುರದ ಶಾಲೆಯೊಂದರ ವೈರಲ್ ವೀಡಿಯೋ. ಮಾಹಿತಿಯ ಪ್ರಕಾರ ಶಾಲೆಯ ಒಬ್ಬಳು ಬಾಲಕಿ ಕ್ಯಾನ್ಸರ್ ಕಾರಣಕ್ಕೆ ಕಿಮೋಥೆರಪಿಗೆ ಒಳಗಾಗುತ್ತಿದ್ದಿದ್ದರಿಂದ ಆಕೆಯ ತಲೆಕೂದಲೆಲ್ಲಾ ಉದುರಿ ಆಕೆ ಖಿನ್ನತೆಗೆ ಜಾರಿದ್ದಳು. ಹೀಗಾಗಿ ಆಕೆಯನ್ನು ಖಿನ್ನತೆಯಿಂದ ಮೇಲೆತ್ತಲು ಹಾಗೂ ಆಕೆಗೆ ಬೆಂಬಲವಾಗಿ ನಿಲ್ಲಲು ಆಕೆಯ ಶಿಕ್ಷಕರು ಹಾಗೂ ತರಗತಿಯ ಮಕ್ಕಳು ಎಲ್ಲರೂ ತಮ್ಮ ತಲೆಕೂದಲನ್ನು ಶೇವ್ ಮಾಡಿದ್ದಾರೆ. ಕೆಲ ಮೂಲಗಳ ಮಾಹಿತಿಯ ಪ್ರಕಾರ ಚಿಕಿತ್ಸೆ ವೇಳೆ ತಲೆಕೂದಲು ಉದುರಿದ್ದರಿಂದ ಬಾಲಕಿ ಖಿನ್ನತೆಗೆ ಜಾರಿದ್ದಳು. ಹೀಗಾಗಿ ಶಾಲೆಯ ಎಲ್ಲಾ ಮಕ್ಕಳು ಹಾಗೂ ಶಿಕ್ಷಕರು ತಮ್ಮ ತಲೆಕೂದಲನ್ನು ಶೇವ್ ಮಾಡಿದರು ಎಂಬ ಮಾಹಿತಿ ಇದೆ. ಈ ವೀಡಿಯೋ ನೋಡಿದ ಅನೇಕರು ಶಾಲೆಯ ಮಕ್ಕಳು ಹಾಗೂ ಶಿಕ್ಷಕರ ಕರುಣೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಉಡುಪಿ ಪರ್ಯಾಯ ವೇಳೆ ಕೇಸರಿ ಧ್ವಜ ಹಿಡಿದ ಮಹಿಳಾ ಅಧಿಕಾರಿಯ ವಿರುದ್ಧ ಕಾಂಗ್ರೆಸ್ ದೂರು
ಕ್ಯಾನ್ಸರ್ ಎಂಬ ಮಾಹಮಾರಿ ಇತ್ತೀಚೆಗೆ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಬಹುತೇಕರನ್ನು ಕಾಡುತ್ತಿದೆ. ಒಮ್ಮೆ ಬಂದರೆ ಮನುಷ್ಯನನ್ನು ಸಂಪೂರ್ಣವಾಗಿ ಇದು ಹಿಂಡಿ ಹಿಪ್ಪೆ ಮಾಡಿ ಬಿಡುತ್ತದೆ. ಆರಂಭಿಕ ಹಂತದಲ್ಲಿ ಮಾತ್ರ ಕ್ಯಾನ್ಸರ್‌ನ್ನು ತಡೆಗಟ್ಟುವುದಕ್ಕೆ ಸಾಧ್ಯವಾಗುತ್ತದೆ. ಕೊನೆಹಂತದಲ್ಲಿ ಈ ಬಗ್ಗೆ ತಿಳಿದರೆ ಅಂತಹ ರೋಗಿಗಳನ್ನು ರಕ್ಷಿಸುವುದು ಕಷ್ಟವಾಗುತ್ತದೆ. ಅಲೋಪತಿ ಅಥವಾ ಇಂಗ್ಲೀಷ್ ಮೆಡಿಸಿನ್‌ನಲ್ಲಿ ಕ್ಯಾನ್ಸರ್‌ಗೆ ಕಿಮೋಥೆರಪಿ ಕಡ್ಡಾಯವಾಗಿದೆ. ಈ ಸಂದರ್ಭದಲ್ಲಿ ಎದುರಾಗುವ ಮಾನಸಿಕ ಖಿನ್ನತೆ ದೈಹಿಕ ಯಾತನೆಯನ್ನು ನಿಭಾಯಿಸುವುದು ಬಹಳ ಕಷ್ಟಕರವಾಗಿದೆ.
ಇತ್ತ ಜೋಧ್‌ಪುರದ ಶಾಲೆಯ ವೀಡಿಯೋ ನೋಡಿದ ಅನೇಕರು ಭಾವುಕರಾಗಿದ್ದಾರೆ. ಎಲ್ಲರನ್ನು ದೇವರು ಆಶೀರ್ವಾದಿಸಲಿ ಇದೊಂದು ಅತೀ ಅಪರೂಪದ ಮಾನವೀಯ ಘಟನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಸೀರೆಯುಟ್ಟು ಮೋಡಿ ಮಾಡಿದ ಜರ್ಮನ್ ಬೆಡಗಿ: ಈಕೆ ಈಗ ಹೊಸ ನ್ಯಾಷನಲ್ ಕ್ರಶ್..!
ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ: ಅಸಭ್ಯವಾಗಿ ಟಚ್ ಮಾಡಿ ತಬ್ಬಿಕೊಂಡು ಥ್ಯಾಂಕ್ಸ್ ಹೇಳಿದ..!


