Asianet Suvarna News Asianet Suvarna News

ಅಮೆರಿಕದಿಂದ ಭಾರತಕ್ಕೆ ಸಹಾಯ ಹಸ್ತ: ಹರಿದು ಬಂದ ನೆರವುಗಳಿವು

COVID-19 ಪ್ರಕರಣಗಳು ಉಲ್ಬಣ ಆಗುತ್ತಿರುವಾಗ ಅಮೆರಿಕ ಭಾರತದೊಂದಿಗೆ ಹೆಗಲು ಕೊಟ್ಟು ನಿಂತಿದೆ. ಬೈಡೆನ್-ಹ್ಯಾರಿಸ್ ಆಡಳಿತ ಭಾರತಕ್ಕೆ COVID-19 ನಿರ್ವಹಿಸಲು ಅನುಕೂಲವಾಗುವಂತೆ ನೆರವಿನ ಹಸ್ತ ಚಾಚಿದೆ.

America provide assistance to India in fighting against covid19 dpl
Author
Bangalore, First Published Apr 30, 2021, 10:07 AM IST

ನ್ಯೂಯಾರ್ಕ್(ಏ.30): COVID-19 ಪ್ರಕರಣಗಳು ಉಲ್ಬಣ ಆಗುತ್ತಿರುವಾಗ ಅಮೆರಿಕ ಭಾರತದೊಂದಿಗೆ ಹೆಗಲು ಕೊಟ್ಟು ನಿಂತಿದೆ. ಭಾರತಕ್ಕೆ 100 ದಶ ಲಕ್ಷ ಡಾಲರ್ ಗಿಂತ ಹೆಚ್ಚಿನ ಮೌಲ್ಯದ ಸಾಮಗ್ರಿಗಳನ್ನು ಅಮೆರಿಕ ಸರಬರಾಜು ಮಾಡುತ್ತಿದೆ.  ಇದಲ್ಲದೆ ಅಮೆರಿಕದ ವಿವಿಧ ಖಾಸಗಿ ಕಂಪನಿಗಳು, ಸರ್ಕಾರೇತರ ಸಂಸ್ಥೆಗಳು, ದೇಶಾದ್ಯಂತ ಸಾವಿರಾರು ಅಮೆರಿಕನ್ನರು ಭಾರತದಲ್ಲಿ ಈ ಆರೋಗ್ಯ ಬಿಕ್ಕಟ್ಟಿನ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರು ಮತ್ತು ಭಾರತದ ಜನರನ್ನು ಬೆಂಬಲಿಸುತ್ತಿದ್ದಾರೆ.

ಭಾರತೀಯ ಆಸ್ಪತ್ರೆಗಳಿಗೆ ಅಗತ್ಯವಾದ ಆಮ್ಲಜನಕ, ಅದಕ್ಕೆ ಬೇಕಾದ ಉಪಕರಣಗಳು ಮತ್ತು ಅಗತ್ಯ ಸಾಮಗ್ರಿಗಳನ್ನು ತಲುಪಿಸುವತ್ತ ಸಕಲ ಪ್ರಯತ್ನಗಳು ನಡೆದಿವೆ. ಅಮೆರಿಕದಿಂದ ಅಗತ್ಯ ಸಾಮಾಗ್ರಿಗಳನ್ನು ಹೊತ್ತ ವಿಮಾನಗಳು ಏಪ್ರಿಲ್ 29ರಿಂದ ಭಾರತವನ್ನು ತಲುಪುತ್ತಿವೆ. 

ಅಮೆರಿಕದ COVID-19ತುರ್ತು ಸಹಾಯ, ಅಮೆರಿಕ ಒದಗಿಸುತ್ತಿರುವ ಸಾಮಗ್ರಿಗಳ ವಿವರಗಳು:

ಆಮ್ಲಜನಕದ ಬೆಂಬಲ: ಭಾರತದಲ್ಲಿ 1,100 ಆಕ್ಸಿಜನ್ ಸಿಲಿಂಡರ್‌ಗಳ ಆರಂಭಿಕ ವಿತರಣೆ. ಈ ಸಿಲಿಂಡರ್ಗಳನ್ನು ಭಾರತದಲ್ಲೇ ಉಳಿಸಲಾಗುತ್ತದೆ. ಸ್ಥಳೀಯ ಪೂರೈಕೆ ಕೇಂದ್ರಗಳಲ್ಲಿ ಈ ಸಿಲಿಂಡರ್ ಗಳ ಮರುಪೂರಣ ಮಾಡಬಹುದು. ಇನ್ನೂ ಹೆಚ್ಚಿನ ಸಿಲಿಂಡರ್ ಗಳನ್ನು ಹೊತ್ತ ವಿಮಾನಗಳು ಮುಂದಿನ ದಿನಗಳಲ್ಲಿ ಬರಲಿವೆ. ಯು.ಎಸ್. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಅಮೆರಿಕದಲ್ಲಿ ಸ್ಥಳೀಯವಾಗಿ ಆಮ್ಲಜನಕ ಸಿಲಿಂಡರ್‌ಗಳನ್ನು ಸಂಗ್ರಹಿಸಿದ್ದು ಅವುಗಳನ್ನು ಭಾರತ ಸರ್ಕಾರದ ಸಮನ್ವಯದೊಂದಿಗೆ ಆರೋಗ್ಯ ಕೇಂದ್ರಗಳಿಗೆ ತಲುಪಿಸುತ್ತದೆ.

• ಆಮ್ಲಜನಕ ಕಾನ್ಸ್‌ನ್‌ಟ್ರೇಟರ್‌: ವಾತಾವರಣದ ಗಾಳಿಯಿಂದ ಆಮ್ಲಜನಕವನ್ನು ಉತ್ಪಾದಿಸಿಕೊಳ್ಳಲು 1700 ಆಮ್ಲಜನಕ ಸಾಂದ್ರಕಗಳು ಸಹಾಯಕವಾಗಲಿವೆ.

ಆಮ್ಲಜನಕ ಉತ್ಪಾದನಾ ಘಟಕಗಳು (ಪಿಎಸ್‌ಎ ಸಿಸ್ಟಮ್ಸ್): ತಲಾ 20 ರೋಗಿಗಳಿಗೆ ಸಹಾಯಕವಾಗಬಲ್ಲವು. ಅಮೆರಿಕದ ತಜ್ಞರ ತಂಡವು ಭಾರತದ ವೈದ್ಯಕೀಯ ಸಿಬ್ಬಂದಿಯೊಂದಿಗೆ ಕೂಡಿ ಕೆಲಸ ಮಾಡುತ್ತಾ ಈ ಘಟಕಗಳನ್ನು ಕಾರ್ಯತತ್ಪರತೆ ಉತ್ತಮವಾಗಿರುವಂತೆ ನೋಡಿಕೊಳ್ಳುತ್ತಾರೆ.

ವೈಯಕ್ತಿಕ ರಕ್ಷಣಾ ಸಾಧನಗಳು: ರೋಗಿಗಳು ಮತ್ತು ಭಾರತೀಯ ಆರೋಗ್ಯ ಸಿಬ್ಬಂದಿಯನ್ನು ರಕ್ಷಿಸಲು 15 ದಶಲಕ್ಷ ಎನ್ 95 ಮಾಸ್ಕ್‌ ಪೂರೈಕೆ.
• ಲಸಿಕೆ-ಉತ್ಪಾದನಾ ಸಾಮಗ್ರಿ ಸರಬರಾಜು: ಅಮೆರಿಕ ತನಗಾಗಿ ಬಳಕೆಗಾಗಿ ಆರ್ಡರ್ ಮಾಡಿದ್ದ ಅಸ್ಟ್ರಾ ಜೆನೆಕಾ ಲಸಿಕೆಯ ಸರಬರಾಜುಗಳನ್ನು ಭಾರತಕ್ಕೆ ನೀಡುತ್ತಿದೆ. ಇದರಿಂದ ಭಾರತಕ್ಕೆ 20 ಮಿಲಿಯನ್ ಡೋಸ್ COVID-19 ಲಸಿಕೆ ತಯಾರಿಸಲು ಸಾಧ್ಯವಾಗಲಿದೆ

ಕ್ಷಿಪ್ರ ರೋಗನಿರ್ಣಯ ಪರೀಕ್ಷೆಗಳು (ಆರ್‌ಡಿಟಿಗಳು): 1 ಮಿಲಿಯನ್ ಕ್ಷಿಪ್ರ ರೋಗನಿರ್ಣಯ ಪರೀಕ್ಷೆಗಳು - ಶ್ವೇತಭವನದಲ್ಲಿ ಬಳಸುವ ಮಾದರಿಯನ್ನೇ ಭಾರತಕ್ಕೂ ನೀಡಲಾಗುತ್ತಿದೆ. ಈ ಪರೀಕ್ಷೆಗಳು 15 ನಿಮಿಷದಲ್ಲೇ ವಿಶ್ವಾಸಾರ್ಹ ಫಲಿತಾಂಶಗಳನ್ನು ನೀಡಬಲ್ಲವಾಗಿದ್ದು,  ಸಮುದಾಯ ಹರಡುವಿಕೆಯನ್ನು ಗುರುತಿಸಿ, ತಡೆಯಲು ಸಹಾಯಕವಾಗುತ್ತವೆ. 

ಚಿಕಿತ್ಸಕಗಳು: ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುವ ಆಂಟಿವೈರಲ್ ಡ್ರಗ್ ರಿಮೆಡೆಸಿವಿರ್‌ನ 20,000 ಚಿಕಿತ್ಸಾ ಕೋರ್ಸ್‌ಗಳ ಮೊದಲ ಕಂತು ಸರಬರಾಜು ಮಾಡಲಾಗಿದೆ.

* ಸಾರ್ವಜನಿಕ ಆರೋಗ್ಯ ನೆರವು: ಅಮೆರಿಕದ ಸಿಡಿಸಿ ತಜ್ಞರು ಈ ಕೆಳಗಿನ ಕ್ಷೇತ್ರಗಳಲ್ಲಿ ಭಾರತದ ತಜ್ಞರೊಂದಿಗೆ ಕೈ ಜೋಡಿಸುತ್ತಾರೆ: ಪ್ರಯೋಗಾಲಯ, ಕಣ್ಗಾವಲು ಮತ್ತು ಸಾಂಕ್ರಾಮಿಕ ರೋಗಶಾಸ್ತ್ರ, ಜೀನೋಮಿಕ್ ಸೀಕ್ವೆನ್ಸಿಂಗ್ ಮತ್ತು ಮಾಡೆಲಿಂಗ್‌ಗಾಗಿ ಬಯೋಇನ್ಫರ್ಮ್ಯಾಟಿಕ್ಸ್, ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣ, ಲಸಿಕೆ ವಿತರಣೆ ಪ್ರಕ್ರಿಯೆ, ಹಾಗೂ ಅಪಾಯಗಳ ಕುರಿತ ಸಂವಹನ ಕ್ಷೇತ್ರಗಳಲ್ಲಿ ನೆರವು.

ಕೋವ್ಯಾಕ್ಸಿನ್‌ ದರ 200 ರು. ಇಳಿಕೆ : ಒಂದು ಡೋಸ್‌ಗೆಷ್ಟು?

ಕೊರೋನಾ ಆರಂಭದ ದಿನಗಳಿಂದಲೂ ಭಾರತಕ್ಕೆ ಅಮೆರಿಕದ ಬೆಂಬಲ:

COVID-19 ರೋಗದ ವಿರುದ್ಧ ಅಮೆರಿಕ ಮತ್ತು ಭಾರತ ಒಟ್ಟಾಗಿ ಕೆಲಸ ಮಾಡಿವೆ. ಅಮೆರಿಕದ ಕೋವಿಡ್ -19 ನೆರವು 20 ಕ್ಕೂ ಹೆಚ್ಚು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 9.7 ದಶಲಕ್ಷಕ್ಕೂ ಹೆಚ್ಚು ಭಾರತೀಯರನ್ನು ತಲುಪಿ ಜೀವ ರಕ್ಷಕ ಚಿಕಿತ್ಸೆ ಒದಗಿಸಿದೆ.

•    ಕೊರೋನಾ ಹೋರಾಟ ಬಲಪಡಿಸಲು 1,000 ಕ್ಕೂ ಹೆಚ್ಚು ಭಾರತೀಯ ಆರೋಗ್ಯ ಸೌಲಭ್ಯಗಳೊಂದಿಗೆ ಪಾಲುದಾರಿಕೆ. ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣದ ಕುರಿತು 14,000 ಕ್ಕೂ ಹೆಚ್ಚು ಜನರಿಗೆ ತರಬೇತಿ.
•    ಭಾರತದಲ್ಲಿ COVID-19 ಗೆ ಸಕ್ರಿಯವಾಗಿ ಸ್ಪಂದಿಸುತ್ತಿರುವ ವೈದ್ಯರು, ದಾದಿಯರು, ಶುಶ್ರೂಷಕಿಯರು, ಸಮುದಾಯ ಸ್ವಯಂಸೇವಕರು, ನೈರ್ಮಲ್ಯ ಕಾರ್ಮಿಕರು ಮತ್ತು ಇತರರಿಗೆ ಅಪಾಯವನ್ನು ತಗ್ಗಿಸುವ ಕ್ರಮಗಳ ತರಬೇತಿಯ ಮೂಲಕ 213,000 ಕ್ಕೂ ಹೆಚ್ಚು ಮುಂಚೂಣಿ ಕಾರ್ಮಿಕರನ್ನು ಸುರಕ್ಷಿತವಾಗಿಡಲು ಸಹಾಯ ಮಾಡಿದೆ. 
•    ಯುನಿಸೆಫ್ ನೀಡಿದ ಕೋವಿಡ್ ಮುನ್ನೆಚ್ಚರಿಕೆಯ ಸಂದೇಶವನ್ನು 84 ದಶಲಕ್ಷಕ್ಕೂ ಹೆಚ್ಚು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸಿದೆ 
•    ಹದಿನೈದು ರಾಜ್ಯಗಳಲ್ಲಿ 29 ಆರೋಗ್ಯ ಸೌಲಭ್ಯಗಳಿಗೆ 200 ಅತ್ಯಾಧುನಿಕ ವೆಂಟಿಲೇಟರ್‌ಗಳನ್ನು ತೀವ್ರ ಅನಾರೋಗ್ಯಕ್ಕೆ ತುತ್ತಾಗಿರುವ COVID-19 ರೋಗಿಗಳನ್ನು ಉಪಚರಿಸಲು ಮತ್ತು ಅವರ ಆರೈಕೆಗಾಗಿ ಒದಗಿಸಲಾಗಿದೆ.
 
ಅಮೆರಿಕ-ಭಾರತ ಆರೋಗ್ಯ ಸಹಭಾಗಿತ್ವ: ಏಳು ದಶಕಗಳ ಪ್ರಬಲ ನಂಟು :

ಕಳೆದ ಎಪ್ಪತ್ತು ವರ್ಷಗಳಿಂದ, USAID, HHS, CDC, FDA, ಮತ್ತು NIH ಸೇರಿದಂತೆ ಅಮೆರಿಕ ಸರ್ಕಾರದ ಸಾರ್ವಜನಿಕ ಆರೋಗ್ಯ ತಜ್ಞರು ಭಾರತದ ಆರೋಗ್ಯ ವ್ಯವಸ್ಥೆಯಲ್ಲಿ ಅತ್ಯಂತ ದುರ್ಬಲ ಸಮುದಾಯಗಳ ಆರೋಗ್ಯ ಮತ್ತು ಅದರ ಜನರ ಯೋಗಕ್ಷೇಮಕ್ಕಾಗಿ ಸ್ಥಳೀಯ ಅಧಿಕಾರಿಗಳ ಸಹಭಾಗಿತ್ವದಲ್ಲಿ ಕೆಲಸ ಮಾಡಿದ್ದಾರೆ. ಕಳೆದ 20 ವರ್ಷಗಳಲ್ಲಿ, ಭಾರತಕ್ಕೆ ಅಮೆರಿಕವು ನೀಡಿದ ವಿದೇಶಿ ನೆರವು 2.8 ಬಿಲಿಯನ್ ಡಾಲರ್ ಮೀರಿದೆ. ಇದರಲ್ಲಿ ಆರೋಗ್ಯ ಸೇವೆಗಾಗಿ 1.4 ಬಿಲಿಯನ್ ಡಾಲರ್ ಗಿಂತಲೂ ಹೆಚ್ಚು ವ್ಯಯವಾಗಿದೆ.

2010 ಮತ್ತು 2019 ರ ನಡುವೆ ಎಚ್‌ಐವಿ ಹೊಸ ಸೋಂಕನ್ನು ಶೇಕಡಾ 37 ರಷ್ಟು ಕಡಿಮೆ ಮಾಡಲು ಅಮೆರಿಕ, ಭಾರತ ಮತ್ತು ಇತರ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಿವೆ. 1998 ರಿಂದೀಚೆಗೆ ಅಮೆರಿಕ ಮತ್ತು ಭಾರತ ಒಟ್ಟಾಗಿ ಕ್ಷಯರೋಗವನ್ನು (ಟಿಬಿ) ಎದುರಿಸಲು ರೋಗಿ-ಕೇಂದ್ರಿತ ರೋಗನಿರ್ಣಯ, ಚಿಕಿತ್ಸೆ ಮತ್ತು ತಡೆಗಟ್ಟುವಿಕೆಯ ಕ್ರಮಗಳ ಮೂಲಕ ಒಟ್ಟಾಗಿ ಕೆಲಸ ಮಾಡಿದ್ದು, 15 ದಶಲಕ್ಷ ಜನರಿಗೆ ರೋಗದಿಂದ ಚಿಕಿತ್ಸೆ, ರೋಗ ಮುಕ್ತಿ ಹೊಂದಲು ಸಹಾಯ ಆಗಿದೆ.

ಕೊರೋನಾ ಸ್ಫೋಟ; ಕೇಂದ್ರ ಮಂತ್ರಿ ಮಂಡಲ ಸಭೆ ಕರೆದ ಪ್ರಧಾನಿ ಮೋದಿ!

ಕಳೆದ ಐದು ವರ್ಷಗಳಲ್ಲಿ, 40 ದಶಲಕ್ಷ ಗರ್ಭಿಣಿಯರಿಗೆ ಆರೋಗ್ಯ ಮಾಹಿತಿ ಮತ್ತು ಸೇವೆ ಪಡೆಯಲು ಅಮೆರಿಕ ಸಹಾಯ ಮಾಡಿದೆ. ಅಮೆರಿಕ ಸರ್ಕಾರ ಹಾಗೂ ಭಾರತ ಸರ್ಕಾರ ವಿಶ್ವ ಆರೋಗ್ಯ ಸಂಸ್ಥೆಯ ಸಹಭಾಗಿತ್ವದಲ್ಲಿ, ಮುಂಚೂಣಿಯ ರೋಗ ಪತ್ತೆ ಸಾಮರ್ಥ್ಯವನ್ನು ಹೆಚ್ಚಿಸಲು ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಕ್ರಮಗಳನ್ನು ತೆಗೆದುಕೊಂಡಿವೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios