ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ 125 ವರ್ಷಗಳಷ್ಟು ಹಳೆಯ 'ಗುರುದ್ವಾರ ಶ್ರೀ ಗುರು ಸಿಂಗ್ ಸಭಾ ಸಾಹಿಬ್' ಅನ್ನು ಸ್ಥಳೀಯ ಉದ್ಯಮಿಯೊಬ್ಬ ನೆಲಸಮಗೊಳಿಸಿದ್ದಾನೆ. ಈ ಕೃತ್ಯವನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದ್ದು, ತನಿಖೆಗೆ ಆಗ್ರಹಿಸಿದೆ. ಸಿಖ್ ಸಮುದಾಯದ ಪ್ರತಿಭಟನೆಯ ನಂತರ, ಪಾಕಿಸ್ತಾನ ಸರ್ಕಾರವು ಗುರುದ್ವಾರವನ್ನು ಪುನರ್ ಸ್ಥಾಪಿಸುವುದಾಗಿ ಭರವಸೆ ನೀಡಿದೆ.
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಮೇಲಿನ ದೌರ್ಜನ್ಯ ಮುಂದುವರಿದಿದೆ. ಪಂಜಾಬ್ ಪ್ರಾಂತ್ಯದ ಫಾರೂಕಾಬಾದ್‌ನಲ್ಲಿರುವ 125 ವರ್ಷಗಳ ಹಳೆಯ ಐತಿಹಾಸಿಕ 'ಗುರುದ್ವಾರ ಶ್ರೀ ಗುರು ಸಿಂಗ್ ಸಭಾ ಸಾಹಿಬ್' (Gurdwara Sri Guru Singh Sabha Sahib) ಅನ್ನು ಸ್ಥಳೀಯ ಉದ್ಯಮಿಯೊಬ್ಬ ನೆಲಸಮಗೊಳಿಸಿದ್ದಾನೆ. ಈ ದುಷ್ಕೃತ್ಯವನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದ್ದು ಕೂಡಲೇ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನಕ್ಕೆ ಆಗ್ರಹಿಸಿದೆ.
ಭಾರತದ ಖಂಡನೆ, ಖಡಕ್ ಎಚ್ಚರಿಕೆ
ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ (Randhir Jaiswal), ಇದೊಂದು ಅತ್ಯಂತ ಖಂಡನೀಯ ಮತ್ತು ವಿಧ್ವಂಸಕ ಕೃತ್ಯ ಎಂದು ಕಿಡಿಕಾರಿದ್ದಾರೆ.
ಐತಿಹಾಸಿಕ ಗುರುದ್ವಾರ ಧ್ವಂಸಗೊಳಿಸಿರುವುದು ನಮಗೆ ತೀವ್ರ ಆಘಾತ ತಂದಿದೆ. ಘಟನೆಯ ಬಗ್ಗೆ ಪಾಕಿಸ್ತಾನ ಸರ್ಕಾರ ಕೂಡಲೇ ತನಿಖೆ ನಡೆಸಬೇಕು ಮತ್ತು ಧ್ವಂಸಗೊಂಡ ಭಾಗಗಳನ್ನು ಮರುನಿರ್ಮಾಣ ಮಾಡಬೇಕು. ಅಲ್ಪಸಂಖ್ಯಾತ ಸಿಖ್ ಸಮುದಾಯದ ಸುರಕ್ಷತೆ ಮತ್ತು ಅವರ ಧಾರ್ಮಿಕ ಸ್ಥಳಗಳ ರಕ್ಷಣೆಯನ್ನು ಖಚಿತಪಡಿಸುವುದು ಪಾಕಿಸ್ತಾನದ ಜವಾಬ್ದಾರಿ ಎಂದು ಜೈಸ್ವಾಲ್ ಹೇಳಿದ್ದಾರೆ. ಪಾಕಿಸ್ತಾನದಲ್ಲಿ ವ್ಯವಸ್ಥಿತವಾಗಿ ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಏನಿದು ಕೃತ್ಯ..?
ವರದಿಗಳ ಪ್ರಕಾರ, ಜೂನ್ 24ರ ರಾತ್ರಿ ಸ್ಥಳೀಯ ಉದ್ಯಮಿಯೊಬ್ಬರು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಅನುಮತಿ (NOC) ಪಡೆಯದೆ ಪುರಾತನ ಗುರುದ್ವಾರವನ್ನು ಏಕಾಏಕಿ ಕೆಡವಿದ್ದಾರೆ. ಈ ಘಟನೆಯಿಂದ ರೊಚ್ಚಿಗೆದ್ದ ಸ್ಥಳೀಯ ಸಿಖ್ ಸಮುದಾಯ ಬೃಹತ್ ಪ್ರತಿಭಟನೆ ನಡೆಸಿದೆ. ಆರಂಭದಲ್ಲಿ ಸ್ಥಳೀಯ ಆಡಳಿತ ಮತ್ತು ಎವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ETPB) ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎನ್ನಲಾಗಿದೆ.
ಪಾಕಿಸ್ತಾನ ಸರ್ಕಾರ ಹೇಳ್ತಿರೋದೇನು?
ಸಿಖ್ ಸಮುದಾಯದ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಪಾಕಿಸ್ತಾನದ ಪಂಜಾಬ್ ಮುಖ್ಯಮಂತ್ರಿ ಮರ್ಯಮ್ ನವಾಜ್ ಅವರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಪಂಜಾಬ್ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ರಮೇಶ್ ಸಿಂಗ್ ಅರೋರಾ ಅವರು ಸ್ಥಳಕ್ಕೆ ಭೇಟಿ ನೀಡಿ, ಗುರುದ್ವಾರವನ್ನು ತಕ್ಷಣವೇ ಪುನರ್ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ.ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ಜಾಗದ ಮಾಲೀಕತ್ವದ ಬಗ್ಗೆ ತನಿಖೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅರೋರಾ ತಿಳಿಸಿದ್ದಾರೆ.
ಸ್ಥಳೀಯರ ಆಕ್ಷೇಪ
ಗುರುದ್ವಾರದ ಸುತ್ತಮುತ್ತ ವ್ಯಾಪಾರ ಮಾಡುತ್ತಿರುವ ಸ್ಥಳೀಯರು ಸರ್ಕಾರದ ಈ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕಟ್ಟಡವು ಕಳೆದ 80 ವರ್ಷಗಳಿಂದ ಪಾಳುಬಿದ್ದಿತ್ತು. ಇಲ್ಲಿ ಅನೇಕ ಕುಟುಂಬಗಳು ಮತ್ತು ಅಂಗಡಿಗಳು ನೆಲೆಗೊಂಡಿವೆ. ಈಗ ಮರುಸ್ಥಾಪನೆ ಕಾರ್ಯದಿಂದ ನೂರಾರು ಕುಟುಂಬಗಳು ಬೀದಿಪಾಲಾಗಲಿವೆ ಎಂದು ಅಳಲು ತೋಡಿಕೊಂಡಿದ್ದಾರೆ. ಪಾಕಿಸ್ತಾನದಲ್ಲಿ ಧಾರ್ಮಿಕ ಅಸಹಿಷ್ಣುತೆ ಹೆಚ್ಚಾಗುತ್ತಿರುವುದಕ್ಕೆ ಘಟನೆ ಸಾಕ್ಷಿಯಾಗಿದ್ದು, ಭಾರತವು ಈ ವಿಚಾರವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗಂಭೀರವಾಗಿ ಪರಿಗಣಿಸಿದೆ.


