ಪ್ರಿಯಾ ಕೆರ್ವಾಶೆ

ಹೀಗೆ ಬಾಲ್ಯವಿವಾಹವಾದ 600ಕ್ಕೂ ಹೆಚ್ಚು ಹುಡುಗಿಯರು ಬಾಗೇಪಲ್ಲಿಯ ವಿವಿಧ ಗ್ರಾಮಗಳಲ್ಲಿದ್ದಾರೆ. ಬೆಂಗಳೂರಿನ ಮಕ್ಕಳ ಹಕ್ಕುಗಳಿಗಾಗಿನ ಎನ್‌ಜಿಓಗಳಾದ ಸಿಆರ್‌ಟಿ (ಚೈಲ್ಡ್‌ ರೈಟ್ಸ್‌ ಟ್ರಸ್ಟ್‌) ಮತ್ತು ಅರ್ಪಣಂ ಸಹಯೋಗದಲ್ಲಿ ಇಂಥಾ ‘ರಾಜ ಕುಮಾರಿ’ಯರ ಭೇಟಿ ನಡೆಯಿತು. ಇನ್ನೂ ಚಿಕ್ಕವಯಸ್ಸಿನ ಈ ಹುಡುಗಿಯರಿಗೆ ಎನ್‌ಜಿಓದವರು ರಾಜಕುಮಾರಿಯರು ಎಂದೇ ಕರೆಯುತ್ತಾರೆ. ಅವರಿಗೆ ಟೈಲರಿಂಗ್‌, ಬ್ಯೂಟಿಷಿಯನ್‌, ಎಕ್ಸಾಂ ಫೀಸ್‌, ಓದಲು ಉಚಿತ ಪುಸ್ತಕ, ಟ್ಯೂಶನ್‌ ವ್ಯವಸ್ಥೆಯನ್ನೂ ಮಾಡಿ ಇವರ ಸ್ವಾವಲಂಬನೆಗೆ ಪ್ರೋತ್ಸಾಹಿಸುತ್ತಾರೆ. ಬಾಗೇಪಲ್ಲಿ ಸುತ್ತಲಿನ ನಾಲ್ವರು ರಾಜಕುಮಾರಿಯರ ಕತೆ ಇಲ್ಲಿದೆ.

ಕನಸಿನ ಕುದುರೆಯೇರಿ ಗುರಿ ಸೇರಿದ ಸಾಧಕಿಯರು!

1. ರಮ್ಯಾ (ಹೆಸರು ಬದಲಿಸಿದೆ)

‘ನಂಗೆ ಮದುವೆ ಆದಾಗ ಏಳನೇ ಕ್ಲಾಸ್‌ ಓದುತ್ತಿದೆ. ಆಗ ನಂಗೆ 14 ವರ್ಷ ಇರಬೇಕು ಅನಿಸುತ್ತೆ’ ಅನ್ನುವ ಈ ಹುಡುಗಿ ರಮ್ಯಾ(ಹೆಸರು ಬದಲಿಸಿದೆ) ಈಗ ತನ್ನ ವಯಸ್ಸು ಹತ್ತೊಂಬತ್ತು ಅನ್ನುತ್ತಾಳೆ. ನೋಡೋದಕ್ಕೂ ಹತ್ತೊಂಬತ್ತು ವರ್ಷದವಳಂತೆ ಕಾಣುತ್ತಾಳೆ. ಆದರೆ ಇವಳ ಕಂಕುಳಲ್ಲಿ ಒಬ್ಬ ಮಗನಿದ್ದಾನೆ. ಆ ಹುಡುಗನಿಗೆ 8 ವರ್ಷವಂತೆ. ವಯಸ್ಸಿಗೆ ತಕ್ಕ ಮಾನಸಿಕ ಬೆಳವಣಿಗೆ ಇಲ್ಲ. ದೈಹಿಕ ನ್ಯೂನತೆಯೂ ಇದೆ. ಗರ್ಭಕೋಶ ಇನ್ನೂ ಬೆಳವಣಿಗೆಯಾಗದ ವಯಸ್ಸಲ್ಲಿ ಮದುವೆಯಾದುದರ ಫಲ ಇದು. ಇನ್ನೊಂದು ಆಟವಾಡುವ ಮಗುವಿಗೆ ಆರು ವರ್ಷ. ಮದುವೆಯಾಗಿ ಒಂಬತ್ತು ವರ್ಷವಾಗಿದೆಯಂತೆ. ಆಧಾರ್‌ ಕಾರ್ಡ್‌ನಲ್ಲಿ ಈ ಹುಡುಗಿ ವಯಸ್ಸು 27 ವರ್ಷ ಅಂತಿದೆ. ಒಂದಕ್ಕೊಂದು ತಾಳೆಯಾಗದ ವಯಸ್ಸು. ಇದೆಲ್ಲ ಏನು ಅಂತ ಹುಡುಕಿದರೆ ತಿಳಿದದ್ದು ಇವರಿಗ್ಯಾರಿಗೂ ಜನನ ಪ್ರಮಾಣ ಪತ್ರ ಇಲ್ಲ. ಹೆತ್ತವರಿಗೆ ಮಕ್ಕಳ ವರ್ಷವೇನೋ ಗೊತ್ತಿದೆ. ಆದರೆ ಬಾಲ್ಯವಿವಾಹ ಮಾಡಿರುವ ಕಾರಣ ನಾಳೆ ಕಾನೂನಿನ ತೊಡಕು ಆಗಬಾರದು ಅನ್ನುವ ಮುನ್ನೆಚ್ಚರಿಕೆ. 18 ವರ್ಷಕ್ಕೆ ಮದುವೆಯಾಗಿದೆ ಅನ್ನುವ ಲೆಕ್ಕದಲ್ಲಿ ವಯಸ್ಸು ಹೇಳಿ ಆಧಾರ್‌ ಕಾರ್ಡ್‌ ಮಾಡಿಸಿಕೊಂಡಿದ್ದಾರೆ.

ಈ ರಮ್ಯಾಳದ್ದು ದುರಂತ ಕತೆ. ಆಕ್ಸಿಡೆಂಟ್‌ನಲ್ಲಿ ಇವಳ ಗಂಡನ ಕಾಲು ಮುರಿದಿದೆ. ರಾಡ್‌ ಹಾಕಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಮನೆ, ಗಂಡ, ಮಕ್ಕಳ ಜವಾಬ್ದಾರಿ ಎಲ್ಲ ಈ ಹುಡುಗಿಯದೇ. ಇವಳು ಕೂಲಿ ಮಾಡಿ ತಂದ ಹಣದಲ್ಲಿ ಇಷ್ಟೂಜನರ ಜೀವನ ನಡೆಯಬೇಕು. ಮನೆ, ಮಕ್ಕಳ ಕೆಲಸ ಮಾಡಿ, ನಂತರ ಕೂಲಿಗೆ ಹೋಗಿ ಕುಟುಂಬ ಪೊರೆಯುವ ಈ ಹತ್ತೊಂಬತ್ತರ ಬಾಲೆಗೆ ನಮ್ಮ ಮನೆಮಕ್ಕಳನ್ನು ಹೋಲಿಸಲು ಸಾಧ್ಯವಿಲ್ಲ.

2. ಶಶಿಕಲಾ

ಇವಳ ವಯಸ್ಸೂ ಹತ್ತೊಂಬತ್ತು. ವಿಧವೆ. ಈಕೆ ಮದುವೆಯಾದದ್ದು ತನ್ನ ಸೋದರತ್ತೆಯ ಮಗನನ್ನೇ. ಮದುವೆಯಾದ ಕೆಲವೇ ವರ್ಷಕ್ಕೆ ಕ್ಷುಲ್ಲಕ ಕಾರಣಕ್ಕೆ ಗಂಡ ನೇಣುಹಾಕಿ ಆತ್ಮಹತ್ಯೆ ಮಾಡಿಕೊಂಡ. ಹದಿನಾರರ ವಯಸ್ಸಿನ ಹುಡುಗಿ ಬಾಲ ವಿಧವೆಯಾಗ್ತಾಳೆ. ಹೀಗೇ ಮೂರು ವರ್ಷ ಕಳೆದಿವೆ. ತಂಗಿಗೂ ಮದುವೆಯಾಗಿದೆ. ಅವಳ ಮಗುವನ್ನೇ ತಂದು ತನ್ನ ಮಗುವಿನಂತೆ ಸಾಕುತ್ತಿದ್ದಾಳೆ. ಕೂಲಿ ಮಾಡಿ ಈ ಮಗುವನ್ನು ಪೊರೆಯುತ್ತಾಳೆ. ಜೊತೆಗೆ ತನ್ನ ಅಪ್ಪ, ಅಮ್ಮನನ್ನೂ ನೋಡಿಕೊಳ್ಳುತ್ತಾಳೆ. ‘ಮತ್ತೊಂದು ಮದುವೆ ಆಗಬಹುದಲ್ಲಾ..’ ಅಂದರೆ, ‘ನಮ್ಮೂರಲ್ಲಿ ಆ ಪದ್ದತಿ ಇಲ್ಲ’ ಅಂತಾಳೆ. ‘ನಿನಗೆ ಮದುವೆ ಆಗ್ಬೇಕು ಅಂತ ಅನಿಸಲ್ವಾ?’ ಅಂತ ಕೇಳಿದರೆ, ‘ಮತ್ತೆ ಸಿಗುವವನೂ ತೀರಿದ ಗಂಡನ ಹಾಗೇ ಕಷ್ಟಕೊಟ್ಟರೆ..ಬೇಡ, ಈಗಲೇ ನೆಮ್ಮದಿ’ ಅನ್ನುವ ಅವಳ ಮಾತಲ್ಲಿ ದೃಢತೆ ಇದೆ. ತಾನೇ ದುಡಿಯುವ ಕಾರಣ ಒಂದಿಷ್ಟುಹಣ ಕೈಸೇರಿ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದಾಳೆ.

3. ಪದ್ಮಿನಿ

ಬಾಗೇಪಲ್ಲಿಯಿಂದ ಹತ್ತಾರು ಕಿಮೀ ದೂರದಲ್ಲಿರುವ ಗೆರಿಗಿರೆಡ್ಡಿ ಪಾಳ್ಯದಲ್ಲಿ ‘ಹರ್ಷಿಣಿ ಟೈಲರಿಂಗ್‌ ಟ್ರೈನಿಂಗ್‌ ಸೆಂಟರ್‌’ ಅಂತ ಚಿಕ್ಕ ಶೆಡ್‌ನಂಥಾ ಕಟ್ಟಡ. ಅಲ್ಲಿಗೊಬ್ಬ ಹೈಸ್ಕೂಲ್‌ ಓದೋ ವಯಸ್ಸಿನ ಹುಡುಗಿ ಓಡೋಡಿ ಬಂದಳು. ತನ್ನ ಪರಿಚಯ ಮಾಡಿಕೊಂಡು ಮನೆಗೆ ಕರೆದಳು. ಅಲ್ಲಿದ್ದ ಚಿಕ್ಕ ಗುಡಿಸಲುಗಳಿಗಿಂತ ಭಿನ್ನವಾಗಿ ಸ್ವಲ್ಪ ಆಧುನಿಕತೆಯ ಲೇಪವಿದ್ದ ಮನೆ ಅವಳದು. ದಿವಾನ್‌ನಲ್ಲಿ ಪುಸ್ತಕ, ಸೀರೆಗಳು ಹರಡಿದ್ದವು. ಈ ಹುಡುಗಿಯೂ ವಿವಾಹಿತೆ. ಮೂರೂವರೆ ವರ್ಷದ ಮಗುವಿನ ತಾಯಿ. ಹತ್ತನೇ ಕ್ಲಾಸ್‌ ಓದುತ್ತಿರುವಾಗ ಮದುವೆ ಮಾಡಿದ್ದಾರೆ. ಎಕ್ಸಾಂಗೆ ಮೂರು ದಿನ ಇರುವಾಗಲೇ ಮದುವೆ. ತಾನು ಎಸ್‌ಎಸ್‌ಎಲ್‌ಸಿ ಫೈನಲ್‌ ಎಕ್ಸಾಂ ಬರೀತೀನಿ ಅಂದಾಗ ಮನೆಯವರು ಸುತಾರಾಂ ಒಪ್ಪಲಿಲ್ಲ. ಈ ಹುಡುಗಿ ತನ್ನ ಹಠ ಬಿಡಲಿಲ್ಲ.ಊಟ, ತಿಂಡಿ ಬಿಟ್ಟು ಉಪವಾಸ ಮಾಡಿದಳು. ಕೊನೆಗೆ ತಂದೆಯೇ ಅವಳನ್ನು ಎಕ್ಸಾಂ ಸೆಂಟರ್‌ಗೆ ಕರೆದುಕೊಂಡು ಹೋಗಿ ಪರೀಕ್ಷೆ ಬರೆಸಿದರು. ಅಷ್ಟುಕಷ್ಟದಲ್ಲೂ ಶೇ.70 ಪರ್ಸೆಂಟ್‌ ಮಾರ್ಕ್ ತೆಗೆದಳು. ಈಗಲೂ ಮಗುವಿನ ಹಾಗಿರುವ ಈ ಹುಡುಗಿಗೆ ಆಗ ಮದುವೆ ಅಂದರೆ ಚೆಂದದ ಬಟ್ಟೆತರ್ತಾರೆ, ಬಳೆ ಕೊಡಿಸ್ತಾರೆ ಅನ್ನೋದಷ್ಟೇ ಗೊತ್ತು. ಮದುವೆಯಾದ ಒಂದೇ ವರ್ಷಕ್ಕೆ ಮಗು. ಗರ್ಭಕೋಶ ಸರಿಯಾಗಿ ಬೆಳೆಯದ್ದಕ್ಕೋ ಏನೋ ಹೆರಿಗೆಯಲ್ಲಿ ತೀರಾ ಕಷ್ಟಅನುಭವಿಸಿದಳು. ಈಗ ಮಗುವಿಗೆ ಮೂರೂವರೆ ವರ್ಷ.

ಈ ಹುಡುಗಿಗೆ ಈಗ ತನಗಾದ ಅನ್ಯಾಯದ ಅರಿವಿದೆ. ಇದರ ವಿರುದ್ಧ ದನಿ ಎತ್ತುತ್ತಾಳೆ. ಸುತ್ತಮುತ್ತ ಎಲ್ಲೇ ಬಾಲ್ಯ ವಿವಾಹ ಮಾಡುವ ಸುದ್ದಿ ಕಿವಿಗೆ ಬಿದ್ದರೂ ಅಲ್ಲಿಯವರ ಜೊತೆಗೆ ಮಾತನಾಡಿ ಮದುವೆ ನಿಲ್ಲಿಸುವ ಪ್ರಯತ್ನ ಮಾಡುತ್ತಾಳೆ. ಅವರು ಒಪ್ಪದಿದ್ದರೆ ಪೊಲೀಸರಿಗೆ ಫೋನ್‌ ಮಾಡುವುದಾಗಿ ಬೆದರಿಸುತ್ತಾಳೆ. ಈ ನಡುವೆ ಟೈಲರಿಂಗ್‌ ಕಲಿತು, ಸೀರೆಗಳಿಗೆ ಕುಚ್ಚು, ಫಾಲ್ಸ್‌ ಹಾಕುತ್ತಲೇ ಓದಿನತ್ತ ಗಮನಹರಿಸಿದ್ದಾಳೆ. ಈಗ ಸೆಕೆಂಡ್‌ ಪಿಯುಸಿಗೆ ಎಕ್ಸಾಂ ಕಟ್ಟಿದ್ದಾಳೆ. ತಾನು ಓದಿ ಕಲಿತು ಪತ್ರಕರ್ತೆಯಾಗಬೇಕು ಅನ್ನುವುದು ಇವಳ ಕನಸು.

4. ಸುಜಾತಾ

ಸುಜಾತಾ ನಮಗೆ ಸಿಕ್ಕ ಸಕ್ಸಸ್‌ ಮಾದರಿ. ಸಿನಿಮಾ ಸೀರಿಯಲ್‌ಗಳ ನಾಯಕಿಯ ಹಾಗೆ ಇವಳ ಕತೆ. ಬಹಳ ಚಿಕ್ಕ ವಯಸ್ಸಿಗೆ, ಮದುವೆ ವಯಸ್ಸಿಗೆ ಬಾರದ ಹುಡುಗನ ಜೊತೆ ಮದುವೆಯಾಯ್ತು. ಆ ಹುಡುಗನಿಗೆ ಜೂಜಾಟದ ಚಟ. ಹೆಂಡತಿಯ ಒಡವೆಯನ್ನು ಅಡವಿಟ್ಟು ಜೂಜಾಡಿದಾಗ ಈ ಹುಡುಗಿ ಸಿಟ್ಟಿಗೆದ್ದಿದ್ದಳು. ಈ ನಡುವೆ ಬೆಂಗಳೂರಿನಲ್ಲಿ ಹೆಚ್ಚೆಚ್ಚು ಅವಕಾಶವಿದೆ ಅಂತ ಗಂಡ ಇವಳನ್ನು ಬೆಂಗಳೂರಿಗೆ ಕರೆತಂದ. ಗಾರ್ಮೆಂಟ್‌ಗೆ ಸೇರುತ್ತೇನೆ ಅಂದ. ಆದರೆ ಇಲ್ಲೂ ಬಂದ ದುಡ್ಡನ್ನು ಜೂಜಾಡುತ್ತಲೇ ಕಳೆದ. ಎಳೆಯ ಹುಡುಗಿ ಮನೆ ಕೆಲಸಕ್ಕೆ ಹೋಗಿ ಅಷ್ಟೋ ಇಷ್ಟೋ ಸಂಪಾದಿಸಿ ಮನೆ ನಡೆಸುತ್ತಿದ್ದಳು. ಅಷ್ಟೊತ್ತಿಗೆ ಗರ್ಭವೂ ತುಂಬಿತ್ತು. ತವರಿಗೆ ಹಿಂತಿರುಗಿದ ಸುಜಾತಾ ಆಮೇಲೆ ಗಂಡನ ಮನೆಗೆ ಮರಳಲಿಲ್ಲ. ಮಗುವನ್ನು ನೋಡಿಕೊಳ್ಳುತ್ತಾ ತವರಲ್ಲೇ ಇದ್ದು ಟೈಲರಿಂಗ್‌ ಕಲಿತಳು. ಕ್ರಮೇಣ ಟೈಲರಿಂಗ್‌ ತರಬೇತಿ ನೀಡಲಾರಂಭಿಸಿದಳು. ಒಂದಿಷ್ಟುಹಣ ಕೂಡತೊಡಗಿತು. ಸುಜಾತ ಸ್ವಾವಲಂಬಿಯಾದಳು. ಈ ಹುಡುಗಿಯ ಛಲ ನೋಡಿ ಅವಳಿದ್ದ ಮನೆಯ ಅಕ್ಕಪಕ್ಕದವರು ತಮ್ಮ ಜಾಗವನ್ನೇ ಅಡ್ಜೆಸ್ಟ್‌ ಮಾಡಿ ಅವಳಿಗೆ ಮನೆ ಕಟ್ಟಿಕೊಳ್ಳಲು ಜಾಗ ಕೊಟ್ಟಳು. ಈಕೆ ಭೂಮಿ ಪೂಜೆ ಮಾಡಿ ಮನೆ ಕಟ್ಟಲು ಆರಂಭಿಸುವ ಹೊತ್ತಿಗೆ ಗಂಡ ಮರಳಿ ಬಂದ. ಎಲ್ಲಾ ಚಟಗಳನ್ನೂ ತೊರೆದು ಜೊತೆಗಿರುವುದಾಗಿ ಕೇಳಿಕೊಂಡ. ಅವತ್ತಿಂದ ಅವರಿಬ್ಬರೂ ಮತ್ತೆ ಜೊತೆಯಾದರು. ಮನೆ ಕಟ್ಟಿಕೊಂಡರು. ಇಬ್ಬರೂ ದುಡಿಯುವ ಕಾರಣ ಬದುಕು ಹಸನಾಗಿದೆ.