Celebrity Parenting: ಒಬ್ಬಳಿಗೆ ಫೀಡ್ ಮಾಡುವಾಗ ಇನ್ನೊಬ್ಬಳು ಅಳ್ತಿದ್ಲು, ಹುಚ್ಚಿಯಂತಾಗ್ತಿದ್ದೆ ಒಮ್ಮೊಮ್ಮೆ
ಅವಳಿ ಮಕ್ಕಳನ್ನು ನೋಡೋಕೆ ಚೆಂದ. ಸಾಕೋದು ಸವಾಲಿನ ಕೆಲಸ. ಅವಳಿ ಮಕ್ಕಳ ಪಾಲಕರಿಗೆ ಮಾತ್ರ ಈ ಕಷ್ಟಗೊತ್ತು. ಮಕ್ಕಳನ್ನು ಬೆಳೆಸೋದು ಸೆಲೆಬ್ರಿಟಿ ಅಮ್ಮಂದಿರಿಗೂ ಸುಲಭವಲ್ಲ. ನಟಿ ರುಬಿನಾ ಕಥೆಯನ್ನು ನೀವೇ ಕೇಳಿ.
ಆರತಿಗೊಬ್ಬ ಮಗಳು… ಕೀರ್ತಿಗೊಬ್ಬ ಮಗ ಸಾಕು ಎನ್ನುವ ಜನರು ನಮ್ಮಲ್ಲಿ ಸಾಕಷ್ಟು ಮಂದಿ. ಒಂದು ಮಕ್ಕಳಿಗಿಂತ ಇಬ್ಬರು ಮಕ್ಕಳಿದ್ರೆ ಒಬ್ಬರಿಗೊಬ್ಬರು ಆಗ್ತಾರೆ ಎನ್ನುವ ಕಾರಣಕ್ಕೆ ಬಹುತೇಕ ದಂಪತಿ ಇಬ್ಬರು ಮಕ್ಕಳನ್ನು ಪಡೆಯುತ್ತಾರೆ. ಒಂದೇ ಬಾರಿ ಆರೋಗ್ಯವಂತ ಅವಳಿ ಮಕ್ಕಳು ಜನಿಸಿದ್ರೆ ಎಷ್ಟು ಒಳ್ಳೆಯದಲ್ಲ ಎಂದುಕೊಳ್ಳುವವರಿದ್ದಾರೆ. ಮತ್ತೆ ಮಕ್ಕಳನ್ನು ಪಡೆಯುವ ತಾಪತ್ರಯ ಇಲ್ಲ. ಒಂದೇ ಬಾರಿ ಇಬ್ಬರು ಮಕ್ಕಳು ಅದ್ರಲ್ಲೂ ಒಂದು ಹೆಣ್ಣು, ಒಂದು ಗಂಡಾದ್ರೆ ಅವರನ್ನು ಅದೃಷ್ಟವಂತರು ಎಂದೇ ಅನೇಕರು ಭಾವಿಸ್ತಾರೆ. ಬಯಸಿದಂತೆ ಒಂದೇ ಬಾರಿ ಅವಳಿ ಮಕ್ಕಳು ಹುಟ್ಟಿದ್ರೆ ಕುಟುಂಬಸ್ಥರಿಂದ ಹಿಡಿದು ಪಾಲಕರವರೆಗೆ ಎಲ್ಲರಿಗೂ ಸಂತೋಷವಾಗೋದು ಸತ್ಯ. ಆದ್ರೆ ಮಕ್ಕಳನ್ನು ಬೆಳೆಸುವ ದಾರಿ ಸುಲಭವಲ್ಲ. ಒಂದು ಮಗುವನ್ನು ಬೆಳೆಸಲು ಪಾಲಕರು ಹಗಲು – ರಾತ್ರಿ ನಿದ್ರೆಗೆಡುತ್ತಾರೆ. ಇನ್ನು ಒಂದೇ ಬಾರಿ ಇಬ್ಬರು ಮಕ್ಕಳ ಅಳು, ಕಿಲಾಡಿ, ಗಲಾಟೆ ಸಹಿಸೋದು ಸುಲಭವಲ್ಲ. ಅದಕ್ಕೆ ತಾಳ್ಮೆ ಬೇಕು. ಸಹಾಯಕ್ಕೆ ಜನ ಬೇಕು. ಅಮ್ಮನ ಸಮಸ್ಯೆ ಒಂದೆರಡಲ್ಲ. ಮಕ್ಕಳು ದೊಡ್ಡವರಾದ್ಮೇಲೆ ಎಷ್ಟು ಸಂತೋಷವಿರುತ್ತೋ ಅಷ್ಟೇ ಪ್ರಮಾಣದ ಕಷ್ಟವನ್ನು ಮಕ್ಕಳು ಚಿಕ್ಕವರಿರುವಾಗ ಎದುರಿಸಬೇಕಾಗುತ್ತದೆ.
ಜನಪ್ರಿಯ ಕಿರುತೆರೆ (Television) ನಟಿ ರುಬಿನಾ ದಿಲಾಯಿಕ್ (Rubina Dilaik ) ಪರಿಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿರಲಿಲ್ಲ. ಟಿವಿ ಶೋ ಛೋಟಿಬಹುದಲ್ಲಿ ನಟಿಸಿ ಹೆಸರುವಾಸಿಯಾಗಿರುವ ರುಬಿನಾ ದಿಲಾಯಿಕ್ ಅವಳಿ (twins) ಮಕ್ಕಳ ತಾಯಿ. ರುಬಿನಾ ದಿಲಾಯಿಕ್ ಮತ್ತು ಅಭಿನವ್ ಶುಕ್ಲಾ ಕಳೆದ ವರ್ಷ ನವೆಂಬರ್ 27ರಲ್ಲಿ ಅವಳಿ ಮಕ್ಕಳ ಪಾಲಕರಾಗಿದ್ದಾರೆ. ಇವರಿಗೆ ಇಬ್ಬರೂ ಹೆಣ್ಣು ಮಕ್ಕಳು. ತಮ್ಮ ಸಂಪೂರ್ಣ ಸಮಯವನ್ನು ಅವರಿಬ್ಬರಿಗೆ ನೀಡ್ತಿದ್ದಾರೆ ಈ ಜೋಡಿ. ಕಿಸಿ ನೆ ಬತಾ ನಹಿ ಎರಡನೇ ಸೀಸನ್ ನಲ್ಲಿ ರುಬಿನಾ ದಿಲಾಯಿಕ್, ತಾಯಂದಿರ ಜೊತೆ ಕುಳಿತು ತಾಯ್ತನ (Motherhood) ದ ಬಗ್ಗೆ ಚರ್ಚೆ ನಡೆಸುತ್ತಾರೆ.
ಮಗಳ ಹುಟ್ಟಿದಬ್ಬಕ್ಕೆ ಗಿಫ್ಟ್ ತರ್ಬೇಡಿ, ದುಡ್ಡು ತನ್ನಿ ಎಂದ ಅಮ್ಮನ ಡಿಮ್ಯಾಂಡಿಗೆ ಗೆಸ್ಟ್ ಕಂಗಾಲು!
ಮಕ್ಕಳನ್ನು ಬೆಳೆಸುವ ತಾಯಂದಿರ ಸಮಸ್ಯೆ ರುಬಿನಾ ದಿಲಾಯಿಕ್ ಗೆ ತಾವು ತಾಯಿ ಆದ್ಮೇಲೆ ಗೊತ್ತಾಗಿದೆ. ಮಕ್ಕಳು ಜನಿಸಿದ ಆರಂಭದ ದಿನಗಳಲ್ಲಿ ರುಬಿನಾ ಮಾನಸಿಕ ತೊಂದರೆ ಅನುಭವಿಸಿದ್ದರು. ಎಷ್ಟೆಂದ್ರೆ ಮಕ್ಕಳಿಗೆ ಹಾಲುಣಿಸೋದನ್ನು ಬಿಟ್ಟಿದ್ದರು. ತಮ್ಮ ಶೋದಲ್ಲಿ ಆ ದಿನವನ್ನು ರುಬಿನಾ ನೆನಪು ಮಾಡಿಕೊಂಡಿದ್ದಾರೆ.
ಒಂದು ರಾತ್ರಿ 2.30ರ ಸುಮಾರಿಗೆ ಇಧಾಗೆ ಹಾಲುಣಿಸುತ್ತಿದ್ದರು. ಈ ವೇಳೆ ಝಿವಾ ಅಳಲು ಶುರು ಮಾಡಿದಳು. ಒಂದು ಮಗುವಿಗೆ ಹಾಲುಣಿಸುತ್ತಿದ್ದೇನೆ, ಇನ್ನೊಬ್ಬಳು ಅಳ್ತಿದ್ದಾಳೆ. ಏನು ಮಾಡ್ಬೇಕು ಗೊತ್ತಾಗಲಿಲ್ಲ. ನನಗೆ ಕೋಪ ಬಂದಿತ್ತು. ಇದು ಮಕ್ಕಳ ಮೇಲೆ ಬಂದ ಕೋಪವಲ್ಲ, ನನ್ನ ಮೇಲೆ ನನಗೆ ಬಂದ ಕೋಪ. ಮಕ್ಕಳನ್ನು ಪಡೆಯುವ ಖುಷಿಯಲ್ಲಿದ್ದ ನನಗೆ ಹೀಗೆಲ್ಲ ಆಗುತ್ತೆ ಎನ್ನುವ ಕಲ್ಪನೆ ಇರಲಿಲ್ಲ. ಅದನ್ನು ಯಾರೂ ಹೇಳಿರಲಿಲ್ಲ. ನಿದ್ರೆ ಮಂಪರಿನಲ್ಲಿದ್ದ ನಾನು ಮುಂದಿನ ದಿನ ನೆನೆದು ಭಯಗೊಂಡಿದ್ದೆ. ಆ ಕ್ಷಣ ನಾನು ಇಧಾಳನ್ನು ನೆಲಕ್ಕೆ ಮಲಗಿಸಿದೆ. ಈ ನನ್ನ ವರ್ತನೆ ನೋಡಿದ ನನ್ನ ತಾಯಿ, ಏನಾಯ್ತು? ಹುಚ್ಚು ಹಿಡಿದಿದ್ಯಾ ಎಂದು ಕೇಳಿದ್ದರು ಎನ್ನುತ್ತಾರೆ ರುಬಿನಾ.
ಮಹಿಳೆಯರ ಸೌಂದರ್ಯ ಅಡಗಿರುವುದು ಇಲ್ಲಂತೆ! ಐಶ್ವರ್ಯ ರೈ ಹೇಳ್ತಾರೆ
ತಾಯಿಗೆ ಪ್ರಶ್ನೆಗೆ ನಾನು, ಇರಬಹುದು, ಯಾರಿಗೂ ಅರ್ಥವಾಗಲ್ಲ ಎಂದಿದ್ದಲ್ಲದೆ ಈ ವಿಷ್ಯವನ್ನು ಪತಿ ಅಭಿನವ್ ಶುಕ್ಲಾಗೆ ತಿಳಿಸಿದ್ದರು. ಈ ವೇಳೆ ರುಬಿನಾರನ್ನು ಹೊರಗೆ ಕರೆದುಕೊಂಡು ಹೋಗಿದ್ದ ಅಭಿನವ್, ರುಬಿನಾ ಆಸೆಯಂತೆ ಸಿಹಿ ತಿನ್ನಿಸಿದ್ದರು. ತುಪ್ಪ ಬೆರೆಸಿದ ಹಲ್ವಾ ತಿಂದಿದ್ದ ರುಬಿನಾ, ಅಂದೇ ಸಲಹೆಗಾರರ ಸಹಾಯ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದೆ ಎನ್ನುತ್ತಾರೆ ರುಬಿನಾ.