ರಿಯಲ್​ ಲೈಫ್​ನಲ್ಲಿಯೂ ಇಂಥ ಹೆಂಗಸರು ಇರ್ತಾರಾ? ಇಷ್ಟು ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಿಸ್ತಾರಾ ಅಂತಿರೋದು ಯಾಕೆ ಶ್ರೀರಸ್ತು ಶುಭಮಸ್ತು ಅಭಿಮಾನಿಗಳು? 

ಹೆಣ್ಣಿಗೆ ಸಹನಾಮೂರ್ತಿ, ಭೂಮಿತಾಯಿ, ತಾಳ್ಮೆಯ ಪ್ರತೀಕ... ಹೀಗೆ ನೂರೊಂದು ಹೆಸರಿನಲ್ಲಿ ಹಾಡಿ ಹೊಗಳಿ ಕೊಂಡಾಡುತ್ತಾರೆ, ಅದೇ ಇನ್ನೊಂದೆಡೆ ಮತ್ಸರಕ್ಕೂ ಹೆಣ್ಣಿಗೂ ಹೋಲಿಕೆ ಮಾಡುವುದು ಇದೆ. ಗಂಡಸರಿಗೆ ಹೋಲಿಸಿದರೆ ಹೆಣ್ಣಿಗೇ ಹೆಚ್ಚು ಹೊಟ್ಟೆಕಿಚ್ಚು ಎನ್ನುವ ಮಾತೂ ಇದೆ. ಸಾಮಾನ್ಯವಾಗಿ ಕಚೇರಿಗಳಲ್ಲಿ ಕೆಲಸ ಮಾಡುವವರಿಗೆ ಇದರ ಅನುಭವವೂ ಆಗಿರಲಿಕ್ಕೆ ಸಾಕು. ಒಬ್ಬ ಹೆಣ್ಣು ಉನ್ನತ ಹುದ್ದೆಗೆ ಹೋದಾಗ, ಪ್ರಮೋಷನ್​ ಸಿಕ್ಕಾಗ ಇಲ್ಲವೇ ಯಾವುದಾದರೂ ಅವಾರ್ಡ್​ ಗೆದ್ದಾಗ ಅದೇ ಕಚೇರಿಯಲ್ಲಿ ಇರುವ ಹೆಣ್ಣಿನಷ್ಟು ಹೊಟ್ಟೆಕಿಚ್ಚು ಪಡುವವರು ಇನ್ನೊಬ್ಬರಿಲ್ಲ ಎನ್ನುವುದು ಬಲ್ಲವರ ಮಾತು. ಇದು ಕಚೇರಿಯ ಮಾತಾದರೆ, ಇನ್ನು ಸಂಸಾರದಲ್ಲಿಯೂ ಇದಕ್ಕೇನೂ ಹೊರತಲ್ಲ. ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಸೊಸೆಯಂದಿರು ಇರುವ ಹಲವು ಮನೆಗಳಲ್ಲಿ ಇಂಥ ವೈಮಸ್ಸು ಕಾಣಸಿಗುತ್ತದೆ ಎನ್ನುವುದು ಕೇವಲ ಸೀರಿಯಲ್​ಗಳಲ್ಲಿ ಮಾತ್ರವಲ್ಲ ರಿಯಲ್​ ಲೈಫ್​ನಲ್ಲಿಯೂ ಉದಾಹರಣೆಗಳಿವೆ. ಹಾಗೆಂದು ಕೊಲೆ ಮಾಡಿಸುವ ಮಟ್ಟಿಗೆ ಹೆಣ್ಣು ಹೋಗುತ್ತಾಳಾ?

ರಿಯಲ್​ ಲೈಫ್​ನ ವಿಷಯ ಅಂತೂ ಗೊತ್ತಿಲ್ಲ. ಆದರೆ ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ, ಕೊನೆಗೂ ಶಾರ್ವರಿಯ ರಹಸ್ಯ ಬಯಲಾಗಿದೆ. ಗಂಡನ ಅಣ್ಣ ಮಾಧವ್​, ಆತನ ಮೊದಲ ಪತ್ನಿ ಸುಮತಿ ಮತ್ತು ಮಕ್ಕಳನ್ನು ಸರ್ವನಾಶ ಮಾಡಲು ಭೀಕರ ಆ್ಯಕ್ಸಿಡೆಂಟ್​ ಮಾಡಿರುವ ವಿಷಯ ಇದೀಗ ಗಂಡ ಮಹೇಶ್​ ಮುಂದೆ ಶಾರ್ವರಿ ಒಪ್ಪಿಕೊಂಡಿದ್ದಾಳೆ. ಆದರೆ ಅಚ್ಚರಿಯ ವಿಷಯ ಏನೆಂದರೆ, ಈಕೆ ಆ್ಯಕ್ಸಿಡೆಂಟ್​ ಮಾಡಿಸಿದ್ದು, ಮಾಧವ್​ ಪತ್ನಿ ಸುಮತಿಗೆ ಮನೆಯಲ್ಲಿ ಎಲ್ಲರೂ ರಿಸ್​ಪೆಕ್ಟ್​ ಕೊಡುತ್ತಾರೆ ಎನ್ನುವ ಕಾರಣಕ್ಕಂತೆ! ಅವಳ ಮುಂದೆಯೇ ತಲೆಬಾಗಿ ಎಲ್ಲರೂ ಮರ್ಯಾದೆ ಕೊಡುತ್ತಾರೆ, ನಾನೂ ಆ ಮನೆಯ ಸೊಸೆ. ಆದರೆ ನನಗೆ ಯಾರೂ ಮರ್ಯಾದೆ ಕೊಡುತ್ತಿರಲಿಲ್ಲ. ಅದಕ್ಕಾಗಿ ಕೊಲೆ ಮಾಡಿಸಿದೆ ಎಂದು ಎಷ್ಟು ಸಲೀಸಾಗಿ ಹೇಳಿದ್ದಾಳೆ!

ಅಲ್ಲಿ ಡ್ರೈವರ್​, ಇಲ್ಲಿ ಡೆಲವರಿ ಬಾಯ್​: ಕೆಲಸ ಕಳಕೊಂಡವರಿಗೆ ಸೀರಿಯಲ್​ಗಳು ಹುರಿದುಂಬಿಸಲಿ ಅಂತಿದ್ದಾರೆ ಫ್ಯಾನ್ಸ್​

ಇದನ್ನು ಕೇಳಿ ಮಹೇಶ್​ಗೆ ಶಾಕ್​ ಆಗಿ, ಈ ವಿಷಯವನ್ನು ಈ ಕೂಡಲೇ ಎಲ್ಲರಿಗೂ ಹೇಳುವುದಾಗಿ ಹೇಳಿ ಹೋಗಿದ್ದಾನೆ. ಆದರೆ ಶಾರ್ವರಿ ಕುಹಕದಿಂದ ನಗು ಬೀರಿದ್ದಾಳೆ. ಈಗಷ್ಟೇ ಭೀಕರ ಅಪಘಾತದಿಂದ ಚೇತರಿಸಿಕೊಂಡಿರೋ ಮಹೇಶ್​ಗೆ ಮತ್ತೇನಾದರೂ ಅನಾಹುತ ಮಾಡ್ತಾಳಾ ಶಾರ್ವರಿ ಎನ್ನುವುದು ಅಭಿಮಾನಿಗಳ ಆತಂಕ. ಇದು ಒಂದೆಡೆಯಾದರೆ, ಇಷ್ಟು ಕೀಳು ಮಟ್ಟಕ್ಕೆ ಇಳಿಯುವ ಮಹಿಳೆಯರು ನಿಜ ಜೀವನದಲ್ಲಿಯೂ ಕಾಣಲು ಸಿಗುತ್ತಾರಾ ಎನ್ನುವುದು ಇನ್ನು ಕೆಲವರ ಪ್ರಶ್ನೆ. ಪ್ರಿಯಕರನ ಜೊತೆಗೂಡಿ ಪತಿಯನ್ನೇ ಕೊಲೆ ಮಾಡಿಸಿರುವ ಎಷ್ಟೋ ಮಹಿಳೆಯರ ಸುದ್ದಿ ದಿನನಿತ್ಯವೂ ಓದುತ್ತಿರುವಾಗ, ಆಸ್ತಿಗಾಗಿ ಕೊಲೆ ಮಾಡಿರುವ, ಮಾಡಿಸಿರುವ ಹೆಣ್ಣು ಮಕ್ಕಳ ಸುದ್ದಿಯೂ ಆಗಾಗ್ಗೆ ಕಿವಿಗೆ ಬೀಳುತ್ತಿರುವಾಗ, ಇಂಥ ಹೆಂಗಸರು ನಿಜ ಜೀವನದಲ್ಲಿ ಇದ್ದರೂ ಅಚ್ಚರಿಯೇನಿಲ್ಲ ಎನ್ನುವುದು ಇನ್ನು ಕೆಲವ ಅಭಿಮತ. 

ಅಷ್ಟಕ್ಕೂ ಶಾರ್ವರಿ ಇದಾಗಲೇ ಇಡೀ ಮನೆ ಸ್ಮಶಾನ ಮಾಡುವುದೇ ನನ್ನ ಗುರಿ ಎಂದಿದ್ದಾಳೆ. ಅದೇ ಇನ್ನೊಂದೆಡೆ, ಇಷ್ಟು ದಿನಗಳಿಂದ ಮಹೇಶ್​ಗೆ ಕಾಡುತ್ತಿದ್ದ ಖರ್ಜೂರ ವಿಷಯ ಕೊನೆಗೂ ಬಹಿರಂಗಗೊಂಡಿದೆ. ಅಪಘಾತಕ್ಕೂ, ಮಹೇಶ್​ ಹಾಸಿಗೆ ಮೇಲಿದ್ದಾಗ ಖರ್ಜೂರ ಖರ್ಜೂರ ಎಂದು ಕನವರಿಸುತ್ತಿದ್ದುದಕ್ಕೂ ಸಂಬಂಧ ಏನು ಎಂದು ತಿಳಿದಿದೆ. ತುಳಸಿ, ಪೂರ್ಣಿ ಮತ್ತು ಮಾಧವ್​ ಮೇಲೆ ಸದಾ ಕಿಡಿ ಕಾರುತ್ತಾ, ಅವರನ್ನು ತುಳಿಯಲು ನೋಡುತ್ತಾ, ಇನ್ನಿಲ್ಲದ ಮಸಲತ್ತು ಮಾಡುತ್ತಿರುವ ಶಾರ್ವರಿ ಈಗ ಗಂಡನ ಪ್ರಾಣಕ್ಕೇ ಸಂಚಕಾರ ತರುವಳೇ ಎನ್ನುವುದು ಅಭಿಮಾನಿಗಳ ಆತಂಕ. ಮಾಧವ್​ ತನ್ನ ಮೊದಲ ಪತ್ನಿಯ ಅಪಘಾತಕ್ಕೆ ತಾನೇ ಕಾರಣ ಎಂದುಕೊಂಡಿದ್ದಾನೆ. ಆದರೆ ಅಸಲಿಗೆ ಅದನ್ನು ಮಾಡಿಸಿದ್ದು, ಶಾರ್ವರಿ ಎನ್ನುವ ಸತ್ಯ ಶಾರ್ವರಿಗೆ ಬಿಟ್ಟರೆ ಗೊತ್ತಾಗಿದ್ದು, ಅದನ್ನು ಮನೆಯವರ ಎದುರು ಹೇಳಲು ಮಹೇಶ್​ ಶಕ್ಯನಾಗುತ್ತಾನಾ ಎನ್ನುವುದು ಈಗಿರುವ ಪ್ರಶ್ನೆ.

ಸತ್ತೆನೆಂದು ಸುದ್ದಿ ಮಾಡಿದ ಬಳಿಕ ಈ ಅವತಾರದಲ್ಲಿ ಕಾಣಿಸಿಕೊಂಡ ಪೂನಂ ಪಾಂಡೆ: ವಿಡಿಯೋ ನೋಡಿ ತರಾಟೆ